ಪುಟ್ಟ ಗಿರಿ ಕಂದರಗಳ ಜಿಲ್ಲೆ ಕೊಡಗು ತನ್ನ ಪ್ರಕೃತಿ ಸೌಂದರ್ಯದಿಂದಲೇ ಹೆಸರುವಾಸಿ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮದಿಂದಲೇ ಜಿಲ್ಲೆಯ ಕಾಫಿ ಬೆಳೆಗಾರರು ಒಂದಷ್ಟು ಕಾಸು ಮಾಡಿಕೊಂಡಿದ್ದಾರೆ. ಆದರೆ ದೇಶದಲ್ಲಿ ಕರೋನಾ ಎಂಬ ಸಾಂಕ್ರಮಿಕ ಖಾಯಿಲೆಯು ಮಾಡಿರುವ ಅನಾಹುತಗಳನ್ನು ಗಮನಿಸಿದಾಗ ಒಂದು ಕಾಲದಲ್ಲಿ ಜನರ ಕೈ ಹಿಡಿದಿದ್ದ ಪ್ರವಾಸೋದ್ಯಮವೇ ಇಂದು ಈ ಜಿಲ್ಲೆಗೆ ಮಾರಕವಾಗಿ ಪರಿಣಮಿಸಿದೆ. 2020 ರಲ್ಲಿ ಕಾಣಿಸಿಕೊಂಡ ಕೋವಿಡ್ 19 ಪ್ರಕರಣಗಳಲ್ಲಿ ರಾಜ್ಯದಲ್ಲೇ ಜಿಲ್ಲೆಯು ಅತ್ಯಂತ ಕಡಿಮೆ ಪ್ರಕರಣಗಳನ್ನು ಸಾವಿನ ಸಂಖ್ಯೆಯನ್ನೂ ಹೊಂದಿತ್ತು. ಆದರೆ ಎರಡನೇ ಅಲೆಯ ರೂಪಾಂತರೀ ವೈರಸ್ ಸೋಂಕು ಈ ಪುಟ್ಟ ಜಿಲ್ಲೆಯಲ್ಲಿ ಗಮನಾರ್ಹ ಹಾನಿ ಮಾಡುತ್ತಿದೆ. ಜಿಲ್ಲೆಯಲ್ಲಿ ಕರೋನಾ ಅಟ್ಟಹಾಸ ಮುಂದುವರಿದಿದ್ದು ಕೊವೀಡ್-19 ಸೋಂಕಿತರ ಸಂಖ್ಯೆ ಹತ್ತು ಸಾವಿರದ ಗಡಿ ದಾಟಿದೆ. ಒಂದು ಸಮಯದಲ್ಲಿ ಕರೋನಾ ಮುಕ್ತವಾಗಿ ಹಸಿರು ವಲಯದಲ್ಲಿ ಗುರುತ್ತಿಸಿಕೊಂಡಿದ್ದ ಕೊಡಗು ಜಿಲ್ಲೆ ಇದೀಗ ಕರೋನಾ ಪಾಸಿಟಿವಿಟಿ ದರ ಶೇ.15ಕ್ಕಿಂತ ಅಧಿಕವಿರುವ ಟಾಪ್ ಟೆನ್ ಜಿಲ್ಲೆಗಳ ಪೈಕಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಜಿಲ್ಲೆಯ ಪರಿಸ್ಥಿತಿ ಹೀಗೆ ಮುಂದುವರಿದರೆ ಏನಾಗುತ್ತೆ ಎಂದು ಊಹಿಸಲು ಅಸಾಧ್ಯ ಎನ್ನಬಹುದು. ಕೂಡಲೇ ಜಿಲ್ಲೆಯ ಪ್ರವಾಸೋದ್ಯಮವನ್ನು ಸಂಪೂರ್ಣ ಒಂದು ತಿಂಗಳು ಬಂದ್ ಮಾಡಿ, ರೆಸಾರ್ಟ್, ಹೋಂಸ್ಟೇ ಸೇರಿದಂತೆ ವಸತಿ ಗೃಹಗಳನ್ನು ಸಂಪೂರ್ಣ ಒಂದು ತಿಂಗಳ ಕಾಲ ಮುಚ್ಚಬೇಕೆಂದು ಅಖಿಲ ಕೊಡವ ಸಮಾಜ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಜಿಲ್ಲಾಡಳಿತವನ್ನು ಆಗ್ರಹಿಸಿವೆ.
ಈಗ ಕೊಡಗಿನಲ್ಲಿ ಏರಿಕೆ ಆಗಿರುವ ಪ್ರಕರಣಗಳ ಸಂಖ್ಯೆಗೆ ಹೊರಗಿನಿಂದ ಬರುತ್ತಿರುವವರೇ ಕಾರಣ ಎಂದು ಹೇಳಲಾಗಿದೆ. ಜಿಲ್ಲೆಯಿಂದ ಸಾವಿರಾರು ಜನರು ಉದ್ಯೋಗ ಅರಸಿಕೊಂಡು ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದು ಇದೀಗ ಲಾಕ್ ಡೌನ್ ನಂತರ ಇವರ ವಲಸೆ ಹೆಚ್ಚೇ ಅಗಿದೆ. ಇದಲ್ಲದೆ ಲಾಕ್ ಡೌನ್ ಅವಧಿಯಾದ 14 ದಿನಗಳು ಮುಗಿದ ಕೂಡಲೇ ಮತ್ತೊಮ್ಮೆ ಪ್ರವಾಸಿಗರು ಜಿಲ್ಲೆಗೆ ಲಗ್ಗೆ ಇಡುತ್ತಾರೆ. ಅಗಲೂ ಮತ್ತೆ ಕರೋನಾ ಸ್ಪೋಟಗೊಳ್ಳಲಿದೆ ಎಂದು ಜನರು ಆತಂಕ ವ್ಯಕ್ತಪಡಿಸುತಿದ್ದಾರೆ. ಈ ಕುರಿತು ಮಾತನಾಡಿದ ಕೊಡವ ಯೂತ್ ವಿಂಗ್ ಅದ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಅವರು ಸರ್ಕಾರ ಈಗಲೇ ಮುನ್ನೆಚ್ಚರಿಕೆ ವಹಿಸದಿದ್ದಲ್ಲಿ ದಕ್ಷಿಣ ಕಾಶ್ಮೀರ ಎಂದು ಹೆಸರಾಗಿರುವ ಕೊಡಗು ಮೇ ತಿಂಗಳ ಮಧ್ಯ ಭಾಗದಲ್ಲಿ ದೆಹಲಿಯ ಪರಿಸ್ಥಿತಿಯನ್ನೂ ಮೀರಿಸಲಿದೆ ಎಂದು ಹೇಳಿದರು.
ದೇಶದಲ್ಲಿ ಸೋಂಕಿತರ ಪ್ರಮಾಣ ದಿನೇ ದಿನೆ ಅಧಿಕವಾಗುತ್ತಿದ್ದು. ಬರೋಬರಿ 150 ಜಿಲ್ಲೆಗಳು ಅಪಾಯದ ಸ್ಥಿತಿಯಲ್ಲಿದೆ, ಇದರಲ್ಲಿ ಕೊಡಗು ಕೂಡ ಒಂದು ಎನ್ನುವುದು ಯೋಚಿಸಬೇಕಾದ ವಿಷಯವಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ಕೊವೀಡ್-19 ಸೋಂಕಿತರ ಹಾಗೂ ಕೊವೀಡ್ ಸೋಂಕು ಅಧಿಕವಾಗುತ್ತಿರುವ ಜಿಲ್ಲೆಗಳಲ್ಲಿ ಕೊಡಗು ಜಿಲ್ಲೆ ಅಗ್ರಸ್ಥಾನವನ್ನು ಪಡೆದುಕೊಂಡಿದ್ದು, ಬೆಂಗಳೂರಿನಂತಹ ಮಹಾನಗರಗಳ ಪರಿಸ್ಥಿತಿ ಅದೋಗತಿಯಾದರೆ, ಅತ್ಯಂತ ಪುಟ್ಟ ಜಿಲ್ಲೆಯಾದ ಕೊಡಗಿನ ಪರಿಸ್ಥಿತಿ ಇದೀಗ ದಿನದಿಂದ ದಿನಕ್ಕೆ ಹದಗೆಡುತ್ತಿದೆ.
ರಾಜ್ಯದಲ್ಲಿಯೇ ಕರೋನಾ ಹರಡುತ್ತಿರುವ ಟಾಪ್ ಟೆನ್ ಜಿಲ್ಲೆಗಳಲ್ಲಿ ಕೊಡಗು ಜಿಲ್ಲೆ ಮೊದಲ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಜನರಲ್ಲಿ ಆತಂಕ ಮನೆ ಮಾಡಿದೆ ಎಂದೂ ಅವರು ಹೇಳಿದರು.
ಸೇನೆಯಲ್ಲಿ, ಕ್ರೀಡೆಯಲ್ಲಿ ಯಾವುದಾದರೊಂದು ಸಾಧನೆಯಲ್ಲಿ ಮುಂದಿದ್ದ ಕೊಡಗು ಜಿಲ್ಲೆ ಇದೀಗ ಕರೋನಾ ಹರಡುವಿಕೆಯಲ್ಲಿ ಮುಂದಿದೆ ಎಂದರೆ ಇದಕ್ಕೆ ಪ್ರವಾಸೋದ್ಯಮ ಪ್ರಮುಖ ಕಾರಣವಾಗಿದೆ ಎಂದರೆ ತಪ್ಪಲ್ಲ. ಕೂಡಲೇ ಕನಿಷ್ಟವೆಂದರು ಒಂದು ತಿಂಗಳ ಕಾಲ ಜಿಲ್ಲೆಯ ಎಲ್ಲಾ ಹೋಂಸ್ಟೇ ರೆಸಾರ್ಟ್ ಹಾಗೂ ಇತರ ವಸತಿ ಗೃಹಗಳನ್ನು ಬಂದ್ ಮಾಡಿ ಪ್ರವಾಸೋದ್ಯಮವನ್ನು ಒಂದು ತಿಂಗಳು ಸಂಪೂರ್ಣ ಬಂದ್ ಮಾಡುವ ಮೂಲಕ ಕರೋನಾ ಹರಡದಂತೆ ತಡೆಯಬೇಕಿದೆ. ಈಗಾಗಲೇ ನಿಶ್ಚಯವಾಗಿರುವ ಮದುವೆಗಳು ಅವರವರ ಕುಟುಂಬ ಸೇರಿಕೊಂಡು ಮನೆಯಲ್ಲಿಯೇ ಸರಳವಾಗಿ ನಡೆಸಲಿ ಅದುಬಿಟ್ಟು ಹೋಂಸ್ಟೇ ರೇಸಾರ್ಟ್ಗಳಲ್ಲಿ ಅನುವು ಮಾಡಿ ಕೊಡುವುದು ಬೇಡ. ಹಾಗೇ ಜಿಲ್ಲೆಯ ಎಲ್ಲಾ ಗಡಿ ಭಾಗಗಳನ್ನು ಕೂಡಲೆ ಬಂದ್ ಮಾಡಿ ಜಿಲ್ಲೆಯವರನ್ನು ಹೊರತುಪಡಿಸಿ ಹೊರ ಜಿಲ್ಲೆ ಹೊರ ರಾಜ್ಯದವರಿಗೆ ಕೊವೀಡ್ ಸರ್ಟಿಫಿಕೇಟ್ ಕಡ್ಡಾಯ ಮಾಡುವ ಮೂಲಕ ಕೊವೀಡ್ ಸೋಂಕು ಹರಡದಂತೆ ತಡೆಯಬೇಕಿದೆ.
ಇದೀಗ ಜಿಲ್ಲೆಯ ಗಡಿಗಳಲ್ಲಿ ಬೆಳಿಗ್ಗೆ 10ರ ಒಳಗೆ ಯಾವುದೇ ತಪಾಸಣೆ ಇಲ್ಲದೆ ವಾಹನಗಳನ್ನು ಜಿಲ್ಲೆಯೊಳಗೆ ಬಿಡುತ್ತಿದ್ದು, ಕೂಡಲೇ ಇದನ್ನು ತಡೆಹಿಡಿಯಬೇಕಿದೆ. ಅಗತ್ಯ ವಸ್ತುಗಳ ಸರಬರಾಜು ವಾಹನಗಳಿಗೂ ಕೂಡ ಕೊವೀಡ್ ಟೆಸ್ಟ್ ಕಡ್ಡಾಯ ಎಂದು ಮಾಡಬೇಕಾಗಿದ್ದು ಇವರಿಂದ ಕೂಡ ಜಿಲ್ಲೆಯಲ್ಲಿ ಸೋಂಕು ಹರಡುತ್ತಿದೆ.
ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ವ್ಯಾಪಾರ ವ್ಯವಹಾರ ಕುಸಿತದ ಹಿನ್ನಲೆಯಲ್ಲಿ ಲಾಕ್ ಡೌನ್ ಸಮಯ ಮುಗಿದ ನಂತರ ಹೋಂಸ್ಟೇ ರೇಸಾರ್ಟ್ಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟರೆ ಮತ್ತೆ ಕರೋನಾ ಅಟ್ಟಹಾಸ ಮುಂದುವರಿಯಲಿದೆ. ಈ ಕಾರಣಕ್ಕಾಗಿ ಸಂಪೂರ್ಣ ಒಂದು ತಿಂಗಳು ಪ್ರವಾಸೋದ್ಯಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕಿದೆ.
ಮತ್ತೆ ಪ್ರವಾಸಿಗರು ಜಿಲ್ಲೆಗೆ ಬಂದು ಎಲ್ಲಿ ಕರೋನಾವನ್ನು ಹೊತ್ತು ತರುತ್ತಾರೆ ಎಂಬ ಆತಂಕ ಹೋಂಸ್ಟೇ ರೆಸಾರ್ಟ್ ಮಾಲಿಕರಲ್ಲಿ ಇಲ್ಲದಿದ್ದರು, ಜನಸಾಮಾನ್ಯರಲ್ಲಿ ಮನೆಮಾಡಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕಿದೆ. ಇತರ ಜಿಲ್ಲೆಯಲ್ಲಿ ಅವಕಾಶವಿದೆ ಅಲ್ಲಿ ಹಾಗಿದೆ ಇಲ್ಲಿ ಹೀಗಿದೆ ಎನ್ನುವುದು ಮುಖ್ಯವಲ್ಲ, ಕೊಡಗಿನ ಬಗ್ಗೆ ಕೊಡಗಿನ ಜನತೆಯ ಬಗ್ಗೆ ಕಾಳಜಿ ಮುಖ್ಯ. ಒಂದಷ್ಟು ಸಮಯ ಗಡಿ ತಪಾಸಣೆಯ ಮುದುವರಿಸಿ. ಜಿಲ್ಲೆಯ ಮಂದಿ ಹೊರತುಪಡಿಸಿ ಹೊರ ಜಿಲ್ಲೆ, ಹೊರರಾಜ್ಯದ ಮಂದಿಯ ಬಗ್ಗೆ ನಿಗಾ ವಹಿಸಬೇಕಿದೆ. ಈಗಾಗಲೇ ಕೇಂದ್ರ ಸರಕಾರ ಕೊಡಗು ಸೇರಿದಂತೆ 150 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಸುವ ಚಿಂತನೆ ನಡೆಸಿದ್ದು, ಇದು ಆಗದಿದ್ದರು ಕೂಡ ಕೊಡಗು ಜಿಲ್ಲೆಗೆ ಸೀಮಿತವಾಗಿ ವಿಶೇಷ ಲಾಕ್ ಡೌನ್’ಗೆ ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳು ಚಿಂತಿಸಬೇಕಿದೆ. ಈ ಹಿಂದೆ ಜಿಲ್ಲಾಧಿಕಾರಿ ಕೇರಳ ಗಡಿ ಬಂದ್ ವಿಷಯದಲ್ಲಿ ತೆಗೆದುಕೊಂಡ ಸ್ವಯಂ ನಿರ್ಧಾರದಂತೆ ಜಿಲ್ಲೆಯಲ್ಲಿ ಕರೋನಾ ನಿಯಂತ್ರಣಕ್ಕೆ ಜನಪ್ರತಿನಿಧಿಗಳು, ಸೇರಿದಂತೆ ಸಂಘಸಂಸ್ಥೆಗಳ ಪ್ರತಿನಿಧಿಗಳನ್ನು ಕರೆಸಿ ವಿಶೇಷ ಸಭೆ ನಡೆಸಿ ತಿರ್ಮಾನ ಕೈಗೊಳ್ಳಬೇಕಿದೆ ಇಲ್ಲದಿದ್ದಲ್ಲಿ ಕೊಡಗುಕೋವಿಡ್ ಸಾವುಗಳ ಪಟ್ಟಿಯಲ್ಲಿ ಮೊದಲನೇಯ ಸ್ಥಾನ ಪಡೆಯುವುದು ನಿಶ್ಚಿತವೇ ಆಗಿದೆ.