ಮೈಸೂರು : ರೈತರ ಅಭಿವೃದ್ದಿಯ ಹಿತದೃಷ್ಟಿಯಿಂದ ಒಂದು ಎಕರೆಗೆ ತಗಲುವ ವೆಚ್ಚವನ್ನು ಲೆಕ್ಕಾಚಾರ ಮಾಡಿ, ಮೈಸೂರು ಚಾಮರಾಜನಗರ ಜಿಲ್ಲೆಗಳ ರೈತರಿಗೆ 2023-24 ನೇ ಸಾಲಿಗೆ ಶೂನ್ಯ ಬಡ್ಡಿ ದರದಲ್ಲಿ ಕಳೆದ ಸಾಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಿ ಎಂದು ಮೈಸೂರು ಮತ್ತು ಚಾಮರಾಜನಗರದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರರವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ 2023-24 ನೇ ಸಾಲಿನ ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ ಸಭೆ(ಡಿ.ಎಲ್.ಟಿ.ಸಿ)ಯನ್ನು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2023-24 ನೇ ಸಾಲಿಗೆ ವಿವಿಧ ಬೆಳೆಗಳಿಗೆ ಕೃಷಿ ವೆಚ್ಚಗಳ ದರ ಪಟ್ಟಿಯನ್ನು ನಿಗಧಿಪಡಿಸಲು ಕೃಷಿ, ರೇಷ್ಮೆ, ತೋಟಗಾರಿಕೆ, ಮೀನುಗಾರಿಕೆ, ಪಶು ಸಂಗೋಪನಾ ಇಲಾಖೆಯವರ ಶಿಫಾರಸ್ಸಿನ ಮೊತ್ತವನ್ನು ಗಣನೆಗೆ ತೆಗೆದುಕೊಂಡರು. ಸಭೆಯಲ್ಲಿ ಹಾಜರಿದ್ದ ಕೃಷಿ ತಜ್ಞರು ಹಾಗೂ ಪ್ಯಾಕ್ಸ್ಗಳ ಅಧ್ಯಕ್ಷರು ಮತ್ತು ಪ್ರಗತಿಪರ ರೈತರ ಸಲಹೆಗಳನ್ನು ಆಲಿಸಿದರು.
ಸಭೆಯಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಾದ ಜಿ.ಸಿ ಜನಾರ್ಧನ್, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಎಂ.ಟಿ ಶಶಿಧರ್, ಸಾಲದ ವಿಭಾಗದ ಮುಖ್ಯಸ್ಥರಾದ ಕೆ. ರವಿ ರವರು ಯೋಜನೆ ಮತ್ತು ಅಭಿವೃದ್ದಿ ವಿಭಾಗದ ಮುಖ್ಯಸ್ಥರಾದ ಅಜ್ಮತ್ ಪಾಷ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೇ ಇಲಾಖೆ, ಪಶುಪಾಲನೆ ಮತ್ತು ಮೀನುಗಾರಿಕೆ ಇಲಾಖಾಧಿಕಾರಿಗಳು ಹಾಗೂ ಪ್ರಗತಿಪರ ರೈತ ಸದಸ್ಯರು ಸಭೆಯಲ್ಲಿ ಹಾಜರಿದ್ದರು.