2026ರ ಫೇಮ್ ಇಂಡಿಯಾ–ಏಷ್ಯಾ ಪೋಸ್ಟ್ ಸಮೀಕ್ಷೆಯ ಪ್ರಕಾರ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೇಶದ ಅತ್ಯುತ್ತಮ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಮತ್ತೊಂದೆಡೆ, ‘ಮುಖ್ಯಮಂತ್ರಿ ಪಂಚರತ್ನ’ ಎಂಬ ವಿಶೇಷ ವಿಭಾಗದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಅಗ್ರಸ್ಥಾನ ಗಳಿಸಿದ್ದಾರೆ.ಫೇಮ್ ಇಂಡಿಯಾ ಮ್ಯಾಗಜೀನ್ ಮತ್ತು ಏಷ್ಯಾ ಪೋಸ್ಟ್ ಜಂಟಿಯಾಗಿ ಈ ಸಮೀಕ್ಷೆ ನಡೆಸಿದ್ದು, ಮುಖ್ಯಮಂತ್ರಿಗಳ ನಾಯಕತ್ವ, ಆಡಳಿತದ ಕಾರ್ಯವೈಖರಿ, ಜನಪ್ರಿಯತೆ ಹಾಗೂ ಆಡಳಿತಾತ್ಮಕ ಸಾಮರ್ಥ್ಯ ಸೇರಿದಂತೆ ವಿವಿಧ ಮಾನದಂಡಗಳ ಆಧಾರದ ಮೇಲೆ ಶ್ರೇಯಾಂಕ ನೀಡಲಾಗಿದೆ.
ಸಮೀಕ್ಷೆಯಲ್ಲಿ ಯೋಗಿ ಆದಿತ್ಯನಾಥ್ ಅವರು ಒಟ್ಟು 1,000 ಅಂಕಗಳಲ್ಲಿ 897 ಅಂಕಗಳನ್ನು ಗಳಿಸಿ ಮೊದಲ ಸ್ಥಾನ ಪಡೆದಿದ್ದಾರೆ. ಉತ್ತಮ ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ, ವ್ಯಕ್ತಿತ್ವ, ಸಾರ್ವಜನಿಕ ವರ್ಚಸ್ಸು, ಕಾರ್ಯಕ್ಷಮತೆ, ಇಲಾಖೆಗಳ ಕುರಿತ ತಿಳುವಳಿಕೆ, ಜನಪ್ರಿಯತೆ, ದೂರದೃಷ್ಟಿ ಮತ್ತು ಕಾರ್ಯಶೈಲಿಯಂತಹ ಅಂಶಗಳನ್ನು ಪರಿಗಣಿಸಿ ಈ ಮೌಲ್ಯಮಾಪನ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ, ಸಾರ್ವಜನಿಕರಿಗೆ ಸೇವೆ ಒದಗಿಸುವ ವ್ಯವಸ್ಥೆ ಹಾಗೂ ಆಡಳಿತದ ಗುಣಮಟ್ಟಕ್ಕೂ ಮಹತ್ವ ನೀಡಲಾಗಿದೆ. ಇದರೊಂದಿಗೆ ಕಾನೂನಿನ ಆಳ್ವಿಕೆ, ಅಪರಾಧ ನಿಯಂತ್ರಣ, ನಾಯಕತ್ವದ ಗುಣಗಳು, ಸಂವಹನ ಕೌಶಲ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಸಾರ್ವಜನಿಕರೊಂದಿಗಿನ ನಡವಳಿಕೆಯನ್ನೂ ಪರಿಗಣಿಸಲಾಗಿದೆ.ಸರ್ಕಾರದ ಯೋಜನೆಗಳ ಅನುಷ್ಠಾನ, ಜನರ ಒಪ್ಪಿಗೆ, ಭವಿಷ್ಯದ ಸಿದ್ಧತೆ ಹಾಗೂ ನೀತಿ ನಿರೂಪಣೆಯಲ್ಲಿನ ನಿರ್ಧಾರಗಳ ಪರಿಣಾಮಗಳನ್ನೂ ಸಮೀಕ್ಷೆಯ ಮಾನದಂಡಗಳಲ್ಲಿ ಸೇರಿಸಲಾಗಿದೆ.

ಸಮೀಕ್ಷೆಯ ಪ್ರಕಾರ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 897 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು 881 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು 874 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು 856 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು 844 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದರೆ, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು 842 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ.ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು 838 ಅಂಕಗಳೊಂದಿಗೆ ಏಳನೇ ಸ್ಥಾನ ಪಡೆದಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು 827 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು 803 ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದ್ದರೆ, ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು 802 ಅಂಕಗಳೊಂದಿಗೆ ಹತ್ತನೇ ಸ್ಥಾನ ಪಡೆದಿದ್ದಾರೆ.
ಸಮೀಕ್ಷೆಯ ಮತ್ತೊಂದು ವಿಭಾಗದಲ್ಲಿ ಐವರು ಮುಖ್ಯಮಂತ್ರಿಗಳನ್ನು ‘ಮುಖ್ಯಮಂತ್ರಿ ಪಂಚರತ್ನ’ ಎಂದು ಗುರುತಿಸಲಾಗಿದೆ. ಈ ವಿಭಾಗದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು 788 ಅಂಕಗಳನ್ನು ಗಳಿಸಿ ಮೊದಲ ಸ್ಥಾನ ಪಡೆದಿದ್ದಾರೆ.
ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು 768 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು 766 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು 760 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರು 746 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.






