ಲಿಂಗಾಯತ ಮಠಗಳು ಕರ್ನಾಟಕದಲ್ಲಿ ಒಂದು ಉದಾತ್ ಉದ್ದೇಶದಿಂದ ಹುಟ್ಟಿಕೊಂಡಿವೆ. ೧೯೦೪ ಕ್ಕಿಂತ ಮೊದಲು ಮಠಾಧೀಶರಾಗುವ ವಟುಗಳನ್ನು ತಯ್ಯಾರಿಸುವ ಯಾವುದೇ ತರಬೇತಿ ಸಂಸ್ಥೆಗಳು ಅಸ್ಥಿತ್ವದಲ್ಲಿ ಇರಲಿಲ್ಲ. ಆಗ ಮಠಾಧೀಶರಾದವರಲ್ಲಿ ಹಲವರು ಬಸವ ತತ್ವ ಪ್ರಚಾರ ಕಾರ್ಯವನ್ನು ಸೂಕ್ತ ರೀತಿಯಲ್ಲೇ ಮಾಡಿದ್ದಾರೆ. ಆದರೆ ೧೯೦೪ ರ ನಂತರ ತರಬೇತಿ ಸಂಸ್ಥೆಯಲ್ಲಿ ಹುಟ್ಟಿಕೊಂಡ ಮಠಾಧೀಶರಲ್ಲಿ ಬಹುತೇಕರು ತತ್ವಹೀನರುˌ ಅಂತರಂಗದಲ್ಲಿ ಬಸವ ದ್ರೋಹಿಗಳುˌ ಜಾತಿವಾದಿಗಳು ಆಗಿರುವುದು ದುರಂತದ ಸಂಗತಿ. ಲಿಂಗಾಯತ ಮಠಗಳಿಗೆ ಮಠಾಧೀಶನಾಗುವವನಿಗೆ ಸಂಸ್ಕೃತದ ಜ್ಞಾನ ಇರಲೇಬೇಕೆಂದೇನಿಲ್ಲ. ಆತ ಕನ್ನಡ ಭಾಷೆಯನ್ನು ಬಲ್ಲವ ˌ ವಚನ ಸಾಹಿತ್ಯವನ್ನು ತಿಳಿದವˌ ಲಿಂಗಾಯತ ಧರ್ಮದ ಆಚರಣೆಗಳು ಜನರಿಗೆ ಭೋದಿಸುವ ಬಸವ ನಿಷ್ಟನಾಗಿದ್ದರೆ ಸಾಕು. ಆದರೆ ಬಸವ ಪರಂಪರೆಯ ಮಠಗಳು ಬಸವನಿಷ್ಟೆ ಮರೆತಿರುವುದರಿದಲೇ ಇಂದು ಕರ್ನಾಟಕದಲ್ಲಿ ಬಸವದ್ರೋಹಿ ವೈದಿಕ ಪರಂಪರೆ ಅಟ್ಟಹಾಸ ಮೆರೆಯುತ್ತಿದೆ.
ಕರ್ನಾಕಟದ ಬಸವ ಪರಂಪರೆಯಲ್ಲಿ ಮಠೀಯ ಸಂಸ್ಕೃತಿಗೆ ಜಾಗವಿಲ್ಲ. ಆದರೆ ೧೫ ನೇ ಶತಮಾನದ ನಂತರ ಹುಟ್ಟಿಕೊಂಡ ಈ ಮಠ ಸಂಸ್ಕೃತಿ ಬಸವಣ್ಣ ಸ್ಥಾಪಿಸಿದ ಧರ್ಮವನ್ನು ಜನರಿಗೆ ಪ್ರಚಾರ ಮಾಡುವ ಚರ (ಸಂಚಾರಿ) ಜಂಗಮರ ತಂಡವನ್ನೊಳಗೊಂಡಿತ್ತು. ಧರ್ಮ ಪ್ರಚಾರದ ಸಮಯದಲ್ಲಿ ತಾತ್ಕಾಲಿಕ ವಸತಿಗಳು ಏರ್ಪಟ್ಟು ಅವು ಕಾಲಾನಂತರದಲ್ಲಿ ಸ್ಥಾವರ ಗದ್ದುಗೆಗಳಾಗಿ (ಮಠ) ಮಾರ್ಪಾಟಾಗಿ ತಮ್ಮ ಮೂಲ ಉದ್ದೇಶ ಮತ್ತು ಚಲನಶೀಲತೆಯನ್ನು ಕಳೆದುಕೊಂಡು ಜಾತಿಕೂಪಗಳಾದವು. ಪೂರ್ವಾಶ್ರಮದ ಹಂಗು ಹರಿದುಕೊಳ್ಳದ ಮಠಾಧೀಶರು ಲಿಂಗಾಯತ ಮಠಗಳನ್ನು ತಮ್ಮ ರಕ್ತ ಸಂಬಂಧಿಗಳು ಹಾಗು ಜಾತಿ ಬಾಂಧವರ ಕಾರೋಬಾರು ಕೇಂದ್ರಗಳಾಗಿಸಿದರು. ಅದಷ್ಟೆ ಅಲ್ಲದೆ ಬಸವ ಪರಂಪರೆಗೆ ವಿದಾಯ ಹೇಳಿ ವೈದಿಕ ಕಂದಾಚಾರಳನ್ನು ಮತ್ತು ಮೌಢ್ಯಗಳು ಬಿತ್ತುತ್ತ ಲಿಂಗಾಯತ ಮಠಗಳನ್ನು ವೈದಿಕ ಮೌಢ್ಯಗಳ ಕೇಂದ್ರಗಳನ್ನಾಗಿ ಮಾರ್ಪಡಿಸಿದರು. ಅಂದಿನಿಂದ ಮಠಗಳು ತಮ್ಮ ಜಾತಿ ಉಪಜಾತಿಯ ರಾಜಕಾರಣಿಗಳ ಅಕ್ರಮ ಸಂಪತ್ತಿನ ರಕ್ಷಣಾ ಕೇಂದ್ರಗಳಾದವು. ಈಗ ಈ ಮಠಗಳೆಲ್ಲವೂ ಮಹಾಮನೆ ಅಥವಾ ಅನುಭವ ಮಂಟಪಗಳಾಗಿ ಬದಲಾಗಬೇಕಾದ ತುರ್ತು ಅಗತ್ಯವಿದೆ.
ಬಸವ ಧರ್ಮದಲ್ಲಿ ಮಠೀಯ ವ್ಯವಸ್ಥೆ ಇಲ್ಲವಾದರೂ ಅವು ಈಗ ಅಸ್ಥಿತ್ವಕ್ಕೆ ಬಂದಿವೆ. ಸಮಾಜದ ಶ್ರಮ ಸಂಸ್ಕೃತಿಯ ಜನರ ಬೆವರಿನಿಂದ ಬೃಹತ್ ಪ್ರಮಾಣದಲ್ಲಿ ಬೆಳೆದು ನಿಂತಿವೆ. ಸಮಾಜದ ಸ್ವತ್ತಾಗಿರುವ ಮಠಗಳನ್ನು ಸಮಾಜವೇ ನಿಯಂತ್ರಿಸಬೇಕಾದ ಅಗತ್ಯವಿದೆ. ಬಸವ ಪರಂಪರೆಯ ಲಿಂಗಾಯತ ಮಠಗಳು ಹೇಗಿರಬೇಕು ಮತ್ತು ಏನನ್ನು ಮಾಡಬೇಕು ಎನ್ನುವ ಕುರಿತು ಚಿಂತಿಸುವ ಕಾಲವಿದು. ಬಸವ ಪರಂಪರೆಯ ಲಿಂಗಾಯತ ಮಠಗಳು ಏನನ್ನು ಮಾಡಬೇಕು ಎನ್ನುವ ಕುರಿತು ನಾನು ಈ ಕೆಳಗೆ ಒಂದಷ್ಟು ಸಲಹೆಗಳನ್ನು ನೀಡಿದ್ದೇನೆ. ಈ ಸಲಹೆಗಳು ಕಾರ್ಯಸಾದು ಅಲ್ಲದ್ದವೇನಲ್ಲ. ಆದರೆ ಮಠಾಧೀಶರು ಬಸವ ಮಾರ್ಗ ಬಿಟ್ಟು ಬಹಳಷ್ಟು ದೂರಕ್ಕೆ ಸಾಗಿದ್ದಾರೆ. ಅವರಿಗೆ ಈ ಸಲಹೆಗಳು ಪತ್ಯವಾಗಲಾರವು ಎನ್ನುವುದನ್ನೂ ನಾನು ಬಲ್ಲೆ. ಈ ಲೇಖನ ಪ್ರಕಟವಾದ ಮೇಲೆ ಸಾವಿರಾರು ಮಠಾಧೀಶರಲ್ಲಿ ಕನಿಷ್ಟ ಒಬ್ಬ ಮಠಾಧೀಶನಾದರೂ ನನ್ನ ಈ ಸಲಹೆಗಳನ್ನು ಒಪ್ಪಿಕೊಂಡು ಪ್ರಾಮಾಣಿಕವಾಗಿ ಅನುಷ್ಟಾನಗೊಳಿಸಲು ಪ್ರಯತ್ನಿಸುವೆ ಎಂದು ಬಹಿರಂಗವಾಗಿ ಮುಂದೆ ಬರಲಾರನೆಂದು ನಾನು ಆತ್ಮವಿಶ್ವಾಸದಿಂದ ಹೇಳಬಲ್ಲೆ.
ಒಂದು ವೇಳೆ ಮಠಗಳು ಬದಲಾಗದಿದ್ದರೆ ಬಸವತತ್ವನಿಷ್ಟ ಲಿಂಗಾಯತರು ಮಠೀಯ ವ್ಯವಸ್ಥೆಯಿಂದ ಹೊರಬರುವ ಅಥವಾ ಅದಕ್ಕೆ ಪರ್ಯಾಯ ವ್ಯವಸ್ಥೆ ನಿರ್ಮಿಸುವ ಅಗತ್ಯತೆ ಲಿಂಗಾಯತ ಸಮುದಾಯ ಮನಗಾಣಬೇಕಿದೆ. ಅದು ಕಠಿಣವಾದ ಸವಾಲೇನಲ್ಲ. ಈಗಾಗಲೇ ಹಲವು ಲಿಂಗಾಯತರು ಮಠೀಯ ವ್ಯವಸ್ಥೆಯಿಂದ ನಿರಾಶೆಗೊಂಡಿದ್ದಾರೆ. ಮುಂದೊಂದು ದಿನ ಇದು ಇನ್ನೂ ಹದಗೆಡುವ ಮೊದಲು ಲಿಂಗಾಯತರು ಮತ್ತು ಮಠಾಧೀಶರು ಈರ್ವರೂ ಬದಲಾಗುವ ಅನಿವಾರ್ಯತೆ ಇದೆ. ಅಲ್ಲಲ್ಲಿ ಅನೇಕ ಸಣ್ಣ ಪುಟ್ಟ ಸಂಘ ಸಂಸ್ಥೆಗಳು ಹುಟ್ಟಿಕೊಂಡಿವೆ. ಅವು ಲಿಂಗಾಯತ ಧರ್ಮದ ನಿಜಾಚರಣೆಗಳು ಮತ್ತು ತತ್ವ ಸಿದ್ದಾಂತಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ.
ಬಸವ ಪರಂಪರೆಯ ಲಿಂಗಾಯತ ಮಠಗಳು ಹೀಗಿರಬೇಕು:
೧. ಮೊಟ್ಟ ಮೊದಲಿಗೆ ತಮ್ಮತಮ್ಮ ಮಠಗಳ ಭಕ್ತ ಸಮೂಹದಲ್ಲಿ ಬೇರೂರಿರುವ ಜಾತಿˌ ಉಪಜಾತಿಯ ಭಾವನೆಯನ್ನು ಹೋಗಲಾಡಿಸಿˌ ಕೊಡುಕೊಳ್ಳುವˌ ಸಂಬಂಧ ಬೆಸೆಯುವ ಮೂಲಕ ಭಕ್ತರೆಲ್ಲರಲ್ಲಿ ಲಿಂಗಾಯತರೆಲ್ಲ ಒಂದೇ ಎನ್ನುವ ಮನೋಭೂಮಿಕೆ ಸ್ಥಿರಗೊಳಿಸಲು ಮಠಗಳು ಸೂಕ್ತವಾದ ಕಾರ್ಯಯೋಜನೆ ಜಾರಿಗೆಗೊಳಿಸುವುದು.
೨. ತಮ್ಮ ತಮ್ಮ ಮಠಗಳಲ್ಲಿ ಭಕ್ತರು ಕಾಲು ಮುಗಿಯುವˌ ಗದ್ದುಗೆ ಪೂಜಿಸುವˌ ಪಾದಪೂಜೆ ಮಾಡುವ ಮುಂತಾದ ಅನಿಷ್ಟ ಪದ್ದತಿಗಳನ್ನು ಎಲ್ಲ ಮಠಾಧೀಶರು ಹಂತಹಂತವಾಗಿ ನಿಲ್ಲಿಸುವುದು ಮತ್ತು ಭಕ್ತರೇ ಸ್ವತಃ ಆಗ್ರಹಿಸಿದರೂ ಕೂಡ ಅವರಿಗೆ ವಚನ ಸಾಹಿತ್ಯದ ಆಧಾರದಲ್ಲಿ ತಿಳಿ ಹೇಳುವುದು. ಹಾಗೆ ಮಾಡುವುದರಿಂದ ಭಕ್ತ ಸಮೂಹ ಇಂತಹ ಅನಿಷ್ಟ ಪರಂಪರೆಗಳಿಂದ ಹೊರಬರಲು ಪ್ರೇರೇಪಿಸಿದಂತಾಗುತ್ತದೆ. ಬಸವ ಪರಂಪರೆಯ ಜಗದ್ಗುರು ಹಾಗು ಸಾಮಾನ್ಯ ಭಕ್ತರ ನಡುವೆ ಪರಸ್ಪರ ಬಾಗಿದ ತಲೆ ಮುಗಿದ ಕೈಯ ಗೌರವ ವಂದನೆ ಕಡ್ಡಾಯವಾಗಿ ಅನುಷ್ಟಾನಗೊಳಿಸುವುದು.
೩. ತಮ್ಮ ಮಠದ ಭಕ್ತ ಸಮೂಹದಲ್ಲಿ ವಿಧವಾ ವಿವಾಹ ಮಾಡಿಸುವ ಮೂಲಕ ಸಾಮಾಜಿಕ ಸುಧಾರಣೆಗೆ ಮುನ್ನುಡಿ ಬರೆಯುವುದು ಮತ್ತು ಆಡಂಭರದ ಮದುವೆಗಳು ಮಾಡುವ ಭಕ್ತರ ಅವ್ಹಾನವನ್ನು ತಿರಸ್ಕರಿಸುವ ಮೂಲಕ ದುಬಾರಿ ಮದುವೆಗಳು ಆಗದಂತೆ ನೋಡಿಕೊಳ್ಳುವುದು. ಪ್ರತಿ ವರ್ಷ ಮಠಗಳಲ್ಲಿ ಸಾಮೂಹಿಕ ವಿವಾಹಗಳೇರ್ಪಡಿಸಿ ಮಠದ ಶ್ರೀಮಂತ ಭಕ್ತರ ಮಕ್ಕಳ ಮದುವೆ ಮಾಡಿಸುವುದು. ಇದು ಬಡ ಮತ್ತು ಮಧ್ಯಮವರ್ಗದವರವರಲ್ಲಿ ಮಾನಸಿಕ ಪರಿವರ್ತನೆಗೆ ಕಾರಣವಾಗಬಲ್ಲುದು.
೪. ಮೇಲ್ಕಾಣಿಸಿದ ಮದುವೆಗಳನ್ನು ಕಡ್ಡಾಯವಾಗಿ ವಚನ ಮಾಂಗಲ್ಯ ಪದ್ದತಿಯಂತೆ ನೆರವೇರುಸುವುದು. ಹಾಗೆ ಮಾಡದೆ ಭಕ್ತರು ವೈದಿಕ ಪದ್ದತಿಯಂತೆ ಮದುವೆ ಮಾಡುವುದಾದಲ್ಲಿ ಅಂತವರ ಮದುವೆಯ ಅವ್ಹಾನವನ್ನು ನಯವಾಗಿ ತಿರಸ್ಕರಿಸುವುದು.
೫. ಹೊಸ ಮನೆಯ ಪ್ರವೇಶˌ ನಾಮಕರಣˌ ಕಲ್ಯಾಣಮಹೋತ್ಸವˌ ಸೀಮಂತˌ ನಾಮಕರಣˌ ಮತ್ತಿತರ ಶುಭ ಸಮಾರಂಭಗಳು ವೈದಿಕ ಪದ್ದತಿಯಂತೆ ನಡೆಸದೆ ಸಂಪೂರ್ಣ ಬಸವತತ್ವಾನುಸಾರ ನೆರವೇರುವಂತೆ ನೋಡಿಕೊಳ್ಳುವುದು.
೬. ಲಿಂಗಾಯತ ವ್ಯಕ್ತಿಗಳು ಲಿಂಗೈಕ್ಯರಾದಲ್ಲಿ ವೈದಿಕ ಕ್ರೀಯಾವಿಧಿಗಳನ್ನು ಮಾಡದೆ ಸರಳ ಲಿಂಗಾಯತ ತತ್ವಾನುಸಾರ ವಿಧಿವಿಧಾನಗಳನ್ನು ಪೂರೈಸುವಂತೆ ನೋಡಿಕೊಳ್ಳುವುದು.
೭. ಲಿಂಗಾಯತರ ಮನೆಗಳಲ್ಲಿ ಲಿಂಗಸಂಸ್ಕಾರˌ ಲಿಂಗದೀಕ್ಷೆ ಮುಂತಾದ ಧಾರ್ಮಿಕ ಸಂಸ್ಕಾರದ ವಿಧಿಗಳನ್ನು ಕಡ್ಡಾಯವಾಗಿ ಸೂಕ್ತ ಸಮಯದಲ್ಲಿ ನೆರವೇರುವಂತೆ ಭಕ್ತವರ್ಗಕ್ಕೆ ಮಾರ್ಗಸೂಚಿಗಳನ್ನಿತ್ತು ಅನುಷ್ಟಾನಗೊಳಿಸುವುದು. ಬಹುತೇಕ ಲಿಂಗಾಯತರು ತಮ್ಮ ಮಕ್ಕಳಿಗೆ ಲಿಂಗದೀಕ್ಷೆಯನ್ನೆ ಮಾಡಿಸುವುದಿಲ್ಲ.
೮. ಮಠದ ಭಕ್ತವರ್ಗದವರು ತಿರುಪತಿˌ ಮಂತ್ರಾಲಯˌ ಸಿರಡಿˌ ಧರ್ಮಸ್ಥಳˌ ಶ್ರೀಶೈಲ ಮುಂತಾದ ಧಾರ್ಮಿಕ ಕ್ಷೇತ್ರಗಳಿಗೆ ಹರಕೆ ಹೊರುವುವನ್ನು ˌ ನಿಯಮಿತ ಭೇಟಿ ಕೊಡುವ ಕಾರ್ಯಗಳನ್ನು ತಡೆಯುವುದು. ಬ್ರಹ್ಮಕುಮಾರಿˌ ಮುಂತಾದ ಪರಂಪರೆಗಳಿಗೆ ಮಾರು ಹೋಗದಂತೆ ಮಾಡುವುದು. ಹಾಗೆ ಲಿಂಗಾಯತ ಧರ್ಮಕ್ಕೆ ಹೊರಗಾದ ಆಚರಣೆಗಳನ್ನು ಅನುಸರಿಸುವ ಭಕ್ತವರ್ಗಗಳಿಗೆ ಮಠ ಪ್ರವೇಶ ನಿಷೇಧಿಸುವುದು.
೯. ಲಿಂಗಾಯತ ಧರ್ಮಿಯರು ತಮ್ಮ ಮದುವೆ ಮುಂತಾದ ಶುಭಕಾರ್ಯಗಳಿಗೆ ಮೂಹೂರ್ತ ಮತ್ತು ಶುಭಘಳಿಗೆಗಳನ್ನು ಗುರುತಿಸಲು ಪಂಚಾಂಗದ ಮೊರೆ ಮೋಗುವುದನ್ನು ನಿಷೇಧಿಸುವುದು.
೧೦. ಲಿಂಗಾಯತ ಯುವಕರಲ್ಲಿ ವಚನ ಪ್ರಜ್ಞೆˌ ಲಿಂಗಾಯತ ಧಾರ್ಮಿಕ ಸಂಸ್ಕಾರಗಳ ಅರಿವು ಮುಂತಾದ ತಿಳುವಳಿಯನ್ನು ಮೂಡಿಸಲು ಮಠಗಳಲ್ಲಿ ನಿಯಮಿತವಾಗಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದು.
೧೧. ಮಠಗಳಲ್ಲಿ ನಡೆಯುವ ಗದ್ದುಗೆ ಪೂಜೆˌ ರುದ್ರಾಭಿಷೇಕˌ ಸಾರೋಟ ಮೆರವಣಿಗೆˌ ಪಲ್ಲಕ್ಕಿ ಮೆರವಣಿಗೆˌ ಹೋಮˌ ಹವನ ಮುಂತಾದ ಜೀವವಿರೋಧಿ ಮೌಢ್ಯಾಚರಣೆಗಳನ್ನು ನಿಲ್ಲಿಸುವುದು.
೧೨. ಮಠಗಳು ನಡೆಸುವ ಶಾಲೆˌ ಕಾಲೇಜುಗಳಲ್ಲಿ ಬಡ ಲಿಂಗಾಯತ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು. ಮಠಗಳು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿಲ್ಲವಾದರೆ ಅಂಥ ಮಠಾಧೀಶರು ಬಡ ಲಿಂಗಾಯತ ಮಕ್ಕಳನ್ನು ದತ್ತು ಪಡೆದು ಶಿಕ್ಷಣ ಕೊಡಿಸುವುದು.
೧೩. ಲಿಂಗಾಯತ ಸಮಾಜವನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಸಮಾಜ ಸುಧಾರಣೆˌ ಪರಿಸರ ರಕ್ಷಣೆˌ ನೈಸರ್ಗಿಕ ವಿಕೋಪಗಳ ನಿರ್ವಹಣೆˌ ಗಿಡ ನೆಡುವುದುˌ ಮೌಢ್ಯ ನಿರ್ಮೂಲನಾ ಅಭಿಯಾನಗಳನ್ನು ಹಮ್ಮಿಕೊಳ್ಳುವುದು.
೧೪. ಲಿಂಗಾಯತ ಧರ್ಮಕ್ಕೆ ಉಪಯೋಗವಾಗುವ ಗ್ರಂಥˌ ಪುಸ್ತಕಗಳನ್ನು ಪ್ರಕಟಿಸುವುದು ಅಥವಾ ಪ್ರಕಟಿಸಲು ಸಹಾಯ ಮಾಡುವುದು.
೧೫. ಬಸವ ಸಂಪ್ರದಾಯದ ಲಿಂಗಾಯತ ಮಠಗಳ ಆವರಣದ ಪ್ರಮುಖ ಸ್ಥಳಗಳಲ್ಲಿ ಧರ್ಮಗುರು ಬಸವಣ್ಣನವರ ಭಾವಚಿತ್ರ ಅಥವಾ ಪ್ರತಿಮೆಯನ್ನು ಹೊರತುಪಡಿಸಿ ಮಠದ ಹಿಂದಿನ ಗುರುಗಳ ಅಥವಾ ಇನ್ನಾವುದೊ ಮಠಾಧೀಶರ ಭಾವಚಿತ್ರಗಳು ಇರದಂತೆ ಕಡ್ಡಾಯವಾಗಿ ನೋಡಿಕೊಳ್ಳುವುದು.
೧೬. ಮಠದ ಹಿಂದಿನ ಮಠಾಧೀಶರುಗಳ ಭಾವಚಿತ್ರಗಳಿಗಾಗಿಯೇ ಒಂದು ಪ್ರತ್ಯೇಕ ಹಜಾರವನ್ನು (ಮ್ಯೂಜಿಯಂ) ನಿಗದಿಗೊಳಿಸಿ ಅಲ್ಲಿ ಹಿಂದಿನವರು ಬಳಸುತ್ತಿದ್ದ ವಸ್ತುಗಳುˌ ಅವರ ಸಾಧನೆಗಳ ಪ್ರಾತ್ಯಕ್ಷಿಕೆಯನ್ನು ಕಾಲಮಾನದ ಅನುಕ್ರಮದಲ್ಲಿ ಪ್ರದರ್ಶಿಸುವುದು.
೧೭. ಮಠದಲ್ಲಿ ನಡೆಯುವ ಎಲ್ಲ ಪ್ರಕಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಥಿತಿಗಳಿಗೆ ಹಾಗು ಮಠಕ್ಕೆ ಯಾರಾದರೂ ಗಣ್ಯ ವ್ಯಕ್ತಿಗಳು ಭೇಟಿಕೊಟ್ಟಾಗ ತಮ್ಮ ಅಥವಾ ಹಿಂದಿನ ಮಠಾಧೀಶರ ಭಾವಚಿತ್ರ ನೀಡದೆ ಕೇವಲ ಧರ್ಮಗುರು ಬಸವಣ್ಣನವರ ಭಾವಚಿತ್ರ ಮಾತ್ರ ನೀಡಬೇಕು ಹಾಗು ಲಿಂಗಾಯತ ಧರ್ಮಗ್ರಂಥ ಸಿದ್ದಗೊಳಿಸಿ ನೀಡುವ ಪದ್ದತಿ ಜಾರಿಗೆಗೊಳಿಸುವುದು.
೧೮. ಮಠದ ದೈನಂದಿನ ಹಾಗು ವಿಶೇಷ ಚಟುವಟಿಕೆಗಳಲ್ಲಿ ಬಲಪಂಥೀಯ ಜೀವವಿರೋಧಿ ಹಾಗು ಫ್ಯಾಸಿಷ್ಟ ಸಂಘಟನೆಗಳಿಗೆ ಹಾಗು ಅಂತಹ ಸಂಸ್ಥೆಗಳಿಗೆ ಸೇರಿದ ವ್ಯಕ್ತಿಗಳನ್ನು ಅವ್ಹಾನಿಸುವ ಅಥವಾ ಅಂತವರೊಂದಿಗೆ ವೇದಿಕೆ ಹಂಚಿಕೊಳ್ಳುವ ಕಾರ್ಯಗಳಿಂದ ಲಿಂಗಾಯತ ಮಠಗಳು ದೂರವಿರುವುದು.
೧೯. ಮಠದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ˌ ರಾಷ್ಟ್ರೀಯತೆಯ ಪಾಠ ಮಾಡುತ್ತೇವೆಂದು ಬರುವ ಫ್ಯಾಸಿಷ್ಟರನ್ನು ಮಠದೊಳಗೆ ಪ್ರವೇಶ ಮಾಡದಂತೆ ನಯವಾಗಿ ತಡೆಯುವುದು. ಏಕೆಂದರೆ ಲಿಂಗಾಯತ ಧರ್ಮ ತತ್ವಕ್ಕಿಂತ ಮಿಗಿಲಾದ ರಾಷ್ಟ್ರೀಯತೆ ಮತ್ತೊಂದಿಲ್ಲ.
೨೦. ಲಿಂಗಾಯತ ಪರಂಪರೆಯ ಮಠಗಳ ಮಠಾಧೀಶರು ತಮ್ಮ ಉತ್ತರಾಧಿಕಾರಿಯಾಗಿ ಬಸವ ತತ್ವನಿಷ್ಟ ಮಹಿಳೆಯರನ್ನು ˌ ಲಿಂಗಾಯತ ಕಾಯಕವರ್ಗದ ಭಕ್ತರನ್ನು ಹಾಗು ಸಾಧ್ಯವಾದಲ್ಲಿ ಉಳಿದ ಶೋಷಿತ ವರ್ಗದವರನ್ನು ಕಡ್ಡಾಯವಾಗಿ ನೇಮಿಸುವ ಪದ್ದತಿ ಜಾರಿಗೆ ತರುವುದು. ಪ್ರಸ್ತುತ ಮಠಾಧೀಶರು ಪ್ರತಿನಿಧಿಸುವ ಉಪವರ್ಗದವರನ್ನು ಹೊರತು ಪಡಿಸಿ ಅನ್ಯ ಉಪವರ್ಗಕ್ಕೆ ಮನ್ನಣೆ ನೀಡುತ್ತಾ ಲಿಂಗಾಯತ ಧರ್ಮದ ಪ್ರತಿಯೊಂದು ಉಪವರ್ಗದವರಿಗೂ ಆವರ್ತನ ರೂಪದಲ್ಲಿ ಅವಕಾಶ ಸಿಗುವಂತೆ ನಿಯಮ ರೂಪಿಸಬೇಕು.
೨೧. ರಾಜರಾರಣಿಗಳನ್ನು ಲಿಂಗಾಯತ ಸಮುದಾಯದ ಅಭ್ಯುದಯಕ್ಕಾಗಿ ಬಳಸಿಕೊಳ್ಳುವುದೇ ಹೊರತು ಮಠಗಳನ್ನು ಹಾಗು ಸಮುದಾಯವನ್ನು ಬಳಸಿಕೊಂಡು ರಾಜಕಾರಣಿಗಳು ಬೆಳೆಯದಂತೆ ನೋಡಿಕೊಳ್ಳುವುದು. ಸಮುದಾಯಕ್ಕೆ ಉಪಕಾರಿಯಾದ ರಾಜಕಾರಣಿಗಳನ್ನು ಮಾತ್ರ ಬೆಂಬಲಿಸುವುದು.
೨೨. ಶ್ರೀಮಂತ ಮಠಗಳು ಲಿಂಗಾಯತ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ಮಾಡುವುದುˌ ವಿದ್ಯಾರ್ಥಿ ವೇತನˌ ಸ್ಕಾಲರಶಿಪ್ ಮುಂತಾದ ಯೋಜನೆಗಳನ್ನು ಜಾರಿಗೆಗೊಳಿಸುವುದು.
೨೩. ನಾಡುˌ ನುಡಿˌ ನೆಲˌ ಜಲˌ ಕೃಷಿˌ ಕಾಯಕˌ ಸಂಸ್ಕೃತಿˌ ಪರಂಪರೆಗಳ ವಿಷಯ ಬಂದಾಗ ಬಸವ ಪರಂಪರೆಯ ಮಠಗಳು ಸಕ್ರಿಯವಾಗಿ ಹೋರಾಟದಲ್ಲಿ ತೊಡಗಿಸಿಕೊಳ್ಳುವುದು.
೨೪. ಯಾವುದೇ ಧರ್ಮದ ಧರ್ಮಾಂಧರು ನಾಡಿನ ಶಾಂತಿ ಕದಡುವ ಇಲ್ಲವೆ ಸೌಹಾರ್ದತೆ ಕೆಡಿಸುವ ಕೃತ್ಯಗಳಿಗೆ ಕೈಹಾಕಿದಾಗ ಲಿಂಗಾಯತ ಮಠಗಳು ಅವುಗಳ ವಿರುದ್ಧ ಸಾಂಘಿಕವಾಗಿ ಹೋರಾಟಕ್ಕೆ ನಿಲ್ಲುವುದು ಹಾಗು ನಾಡಿನ ಸೌಹಾರ್ದತೆ ಕಾಪಾಡುವುದು.
೨೫. ಲಿಂಗಾಯತ ಧರ್ಮಿಯರಿಗೆ ಅದರಲ್ಲೂ ವಿಶೇಷವಾಗಿ ಯುವಕರು ಹಾಗು ಮಹಿಳೆಯರಿಗಾಗಿ ನಿರಂತರವಾಗಿ ಅಧ್ಯನ ಮತ್ತು ತರಬೇತಿ ಶಿಬಿರಗಳನ್ನು ಆಯೋಜಿಸುವುದು. ಅದಕ್ಕಾಗಿ ತಜ್ಞರ ಸಹಾಯದಿಂದ ಪಠ್ಯಕ್ರಮವನ್ನು ಸಿದ್ಧಪಡಿಸಿ ಜಿಲ್ಲಾವಾರು ಅಗತ್ಯ ಸಂಖ್ಯೆಯ ಸಂಪನ್ಮೂಲ ವ್ಯಕ್ತಿಗಳನ್ನು ಅಣಿಗೊಳಿಸುವುದು.
೨೬. ಮೇಲ್ಕಾಣಿಸಿದ ಎಲ್ಲ ವಿಷಯಗಳ ಕುರಿತು ಚಿಂತಿಸಲು ಹಾಗು ಅವುಗಳನ್ನು ಅನುಷ್ಠಾನಗೊಳಿಸಲು ಕಾರ್ಯಯೋಜನೆಯನ್ನು ರೂಪಿಸುವುದು. ತಮ್ಮ ತಮ್ಮ ಮಠಗಳ ಶಕ್ತಿ ˌ ದೌರ್ಬಲ್ಯ ˌ ಅವಕಾಶಗಳು ಹಾಗು ಅಡಚಣಿಗಳ ಕುರಿತು ವಿಶ್ಲೇಷಣೆ ಮಾಡಿ ಸೂಕ್ತ ಕಾರ್ಯಯೋಜನೆ ಸಿದ್ದಗೊಳಿಸಿ ಅನುಷ್ಠಾನಕ್ಕೆ ತರುವುದು.
೨೭. ಲಿಂಗಾಯತ ಮಠಾಧೀಶರು ಪ್ರಕೃತಿ ಸಹಜ ಅಡಿಷಡ್ವರ್ಗಗಳನ್ನು ಮೀರಲು ಸಾಧ್ಯವಾಗದಿದ್ದಲ್ಲಿ ಅಕ್ರಮ ಮಾರ್ಗಗಳನ್ನು ಅನುಸರಿಸದೆ ಯಾವ ಭಯವು ಇಲ್ಲದೆ ಸಂಸಾಸ್ಥರಾಗಬೇಕು. ಏಕೆಂದರೆ ಬಸವ ಧರ್ಮ ಸಂಸಾರಿ ಧರ್ಮವಾಗಿದೆ.
೨೮. ಲಿಂಗಾಯತ ಮಠಾಧೀಶರು ಕಾವಿ ಬಟ್ಟೆಯನ್ನು ತ್ಯಜಿಸಿ ಶ್ವೇತ ವಸ್ತ್ರಧಾರಿಗಳಾದರೆ ಅತ್ಯಂತ ಸಮಂಜಸವೆನ್ನಿಸುವುದು.
೨೯. ಪ್ರತಿ ಲಿಂಗಾಯತ ಮಠಗಳು ವರ್ಷದಲ್ಲಿ ಎರಡು ಬಾರಿಯಾದರೂ ಕಡ್ಡಾಯವಾಗಿ ಭಕ್ತವರ್ಗಕ್ಕೆ ಸಂವಿಧಾನದ ಕುರಿತು ಅರಿವು ಮೂಡಿಸುವ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು.
೩೦. ಲಿಂಗಾಯತ ಮಠಗಳು ನಾಡಿನ ಬಸವ ತತ್ವನಿಷ್ಟ ಚಿಂತಕರನ್ನೊಳಗೊಂಡ ಸಲಹಾ ಮಂಡಳಿಯನ್ನು ರಚಿಸಿಕೊಂಡು ಕಾಲಕಾಲಕ್ಕೆ ಅವರ ಸಲಹೆಯನ್ನು ಪಡೆದು ತಮ್ಮ ಕಾರ್ಯಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಅದರಂತೆ ತಾವು ಹಮ್ಮಿಕೊಂಡ ಕಾರ್ಯಗಳ ವಿಮರ್ಶೆಗೆ ಮತ್ತೊಂದು ವಿಮರ್ಶಾ ಮಂಡಳಿಯನ್ನು ರಚಿಸಿಕೊಳ್ಳಬೇಕು.
೩೧. ಪ್ರತಿ ವರ್ಷ ಬಸವ ಜಯಂತಿಯನ್ನು ತಮ್ಮ ತಮ್ಮ ಮಠಗಳಲ್ಲಿ ಪ್ರತ್ಯೇಕವಾಗಿ ಆಚರಿಸದೆ ಎಲ್ಲಾ ಬಸವಪರ ಮಠಾಧೀಶರು ಸೇರಿ ಪ್ರತಿ ವರ್ಷ ಒಂದೊಂದು ಮಠದಲ್ಲಿ ಅರ್ಥಪೂರ್ಣವಾಗಿ ಆಚರಿಸುವುದು.
೩೨. ರಾಜಕಾರಣಿಗಳನ್ನು ಹಾಗು ರಾಜಕೀಯ ಪಕ್ಷಗಳನ್ನು ಬೆಂಬಲಿಸುವ ಹೇಳಿಕೆಗಳನ್ನು ಯಾವುದೇ ಮಠಾಧೀಶರು ವೈಯಕ್ತಿಕವಾಗಿ ಅಥವಾ ಗುಂಪು ಕಟ್ಟಿಕೊಂಡು ಕೊಡದಂತೆ ಎಚ್ಚರ ವಹಿಸುವುದು. ಅಗತ್ಯ ಬಿದ್ದಾಗ ಅಂತಹ ಹೇಳಿಕೆಗಳನ್ನು ಮಠಾಧೀಶರ ಒಕ್ಕೂಟದ ಪರವಾಗಿ ಅದರ ಅಧಿಕೃತ ವಕ್ತಾರರು ಮಾತ್ರ ಮಾತನಾಡುವ ವ್ಯವಸ್ಥೆ ರೂಪಿಸುವುದು.
ಈ ಸಲಹೆಗಳು ಪ್ರಾಯೋಗಿಕ ನೆಲೆಗಟ್ಟಿನಲ್ಲಿ ಕಾರ್ಯಸಾಧುವಾದವುಗಳೆ ಆಗಿವೆ. ಆದರೆ ಇವನ್ನು ಅನುಷ್ಠಾನಗೊಳಿಸಲು ಮಠಾಧೀಶರಿಗೆ ಆತ್ಮಶಕ್ತಿ ಮತ್ತು ಬಸವ ನಿಷ್ಟೆಯ ಅಗತ್ಯವಿದೆ. ಅದಿದ್ದರೆ ಈ ಸಲಹೆಗಳನ್ನು ಅನುಷ್ಠಾನಗೊಳಿಸುವುದು ಕಠಿಣ ಸವಾಲೇನಲ್ಲ. ಯಾವುದೇ ಹೊಸ ಕಾರ್ಯಗಳು ಬೇಗನೆ ಜನಮನ ತಲುಪಲಾರವು. ಕ್ರಮೇಣವಾಗಿ ಜನರು ಲಿಂಗಾಯತ ಧರ್ಮ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಆದರೆ ಅದನ್ನು ಮಾಡುವ ಇಚ್ಛಾಶಕ್ತಿ ಮಠಾಧೀಶರಿಗೆ ಇರಬೇಕಷ್ಟೆ.
ಇಂದು ಲಿಂಗಾಯತ ಮಠಗಳು ತಮ್ಮನ್ನು ತಾವು ಮೊದಲು ಬಸವತತ್ವನಿಷ್ಟಗೊಳಿಸಿಕೊಂಡು ಅನೇಕ ಜೀವಪರ ಚಿಂತನೆ ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಿದೆ. ಅದನ್ನು ಹೊರತುಪಡಿಸಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಯಾವುದಾದರೂ ಸ್ವಪ್ರತಿಷ್ಟೆಯ ಆಡಂಬರದ ಅಭಿಯಾನಗಳುˌ ಲಕ್ಷ ದೀಪೋತ್ಸವದಂತ ದುಂದು ಹಾಗು ಸಾಂಕ್ರಮಿಕ ಮೌಢ್ಯಗಳನ್ನು ಹಮ್ಮಿಕೊಳ್ಳುವುದರಲ್ಲಿ ಅರ್ಥವಿಲ್ಲ. ಲಿಂಗಾಯತ ಮಠಗಳು ಮಾಡುವ ಕೆಲಸಗಳು ಸಮುದಾಯದವನ್ನು ಸೈದ್ಧಾಂತಿಕವಾಗಿ ಸಜ್ಜುಗೊಳಿಸುವ ದೀರ್ಘಾವಧಿ ಗುರಿ ಹೊಂದಿರಬೇಕು. ಹಾಗೆ ಮಾಡಿದರೆ ಮಾತ್ರ ಮುಂದಿನ ದಿನಗಳಲ್ಲಿ ಮಠಗಳು ಮತ್ತು ಸಮುದಾಯ ಉಳಿಯಬಲ್ಲದು. ಇಲ್ಲವಾದಲ್ಲಿ ಇವರೆಡನ್ನೂ ಏಕಕಾಲಕ್ಕೆ ಮುಗಿಸಲು ಫ್ಯಾಸಿಷ್ಟರು ಮಾಡಿರುವ ಸಂಚಿಗೆ ಬಲಿಯಾಗುವುದು ನಿಶ್ಚಿತ.
~ ಡಾ. ಜೆ ಎಸ್ ಪಾಟೀಲ.