• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಆಳ್ವಿಕೆಯ ಜವಾಬ್ದಾರಿಯೂ, ಅಧಿಕಾರ ವ್ಯಸನವೂ : ನಾ ದಿವಾಕರ ಅವರ ಬರಹ

Any Mind by Any Mind
November 8, 2023
in Top Story, ಅಂಕಣ, ಕರ್ನಾಟಕ
0
ಆಳ್ವಿಕೆಯ ಜವಾಬ್ದಾರಿಯೂ, ಅಧಿಕಾರ ವ್ಯಸನವೂ : ನಾ ದಿವಾಕರ ಅವರ ಬರಹ
Share on WhatsAppShare on FacebookShare on Telegram


ರಾಜಕಾರಣಿಗಳು ಜನಸಾಮಾನ್ಯರು ನೀಡಿರುವ ಅಮೂಲ್ಯ ಮತಗಳ ಆಂತರಿಕ ಮೌಲ್ಯ ಅರಿತಿರಬೇಕು – ನಾ ದಿವಾಕರ

ADVERTISEMENT

ಮೇ13ರಂದು ನಡೆದ ಚುನಾವಣೆಗಳಲ್ಲಿ ಕರ್ನಾಟಕದ ಜನತೆ ಆಯ್ಕೆ ಮಾಡಿದ್ದು ಹಾಗೂ ಅಪೇಕ್ಷಿಸಿದ್ದು ಕೇವಲ ಹೊಸ ಸರ್ಕಾರವನ್ನಲ್ಲ, ಒಂದು ವಿಭಿನ್ನ ವ್ಯವಸ್ಥೆಯನ್ನು. ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಆದರ್ಶಗಳನ್ನು ಜನತೆಯ ಮುಂದಿರಿಸಿ, ಸೆಕ್ಯುಲರ್‌ ಆಡಳಿತ ನೀತಿಗಳ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದ ಮುಂದೆ ದೊಡ್ಡ ಸವಾಲುಗಳಿವೆ. ರಾಜ್ಯದ ಜನತೆ ಕಳೆದ ಐದು ವರ್ಷಗಳಲ್ಲಿ, ಮೂವರು ಮುಖ್ಯಮಂತ್ರಿಗಳನ್ನು ಕಾಣಬೇಕಾದುದೇ ರಾಜ್ಯ ರಾಜಕಾರಣದ ಅಸ್ಥಿರತೆ ಮತ್ತು ಆಡಳಿತ ನೀತಿಗಳ ಅಸಮಪರ್ಕತೆಗೆ ಸಾಕ್ಷಿಯಾಗಿತ್ತು. ಇದರೊಂದಿಗೆ 2019-23ರ ಅವಧಿಯಲ್ಲಿ, ಬಿಜೆಪಿ ಆಳ್ವಿಕೆಯಲ್ಲಿ ತೀವ್ರಗೊಂಡ ಮತಾಂಧತೆ, ಕೋಮುದ್ವೇಷದ ರಾಜಕಾರಣ ಹಾಗೂ ಕರಾವಳಿಯಲ್ಲಿ ಸೃಷ್ಟಿಸಲಾದ ದ್ವೇಷಾಸೂಯೆಗಳ ವಾತಾವರಣವು ಕರ್ನಾಟಕದ ಪಾರಂಪರಿಕ ಸಮನ್ವಯ ಸಂಸ್ಕೃತಿಗೇ ಧಕ್ಕೆ ತರುವಂತಾಗಿತ್ತು. ಒಂದು ಭಾಷಿಕ ರಾಜ್ಯವಾದರೂ ಕರ್ನಾಟಕ ಮೂಲತಃ ಸಾಂಸ್ಕೃತಿಕವಾಗಿ, ಭಾಷಿಕ ನೆಲೆಯಲ್ಲಿ ತನ್ನದೇ ಆದ ವೈವಿಧ್ಯತೆಗಳೊಂದಿಗೆ ಒಂದು ವಿಶಿಷ್ಟ ಸ್ಥಾನವನ್ನು ಗಳಿಸಿದೆ.

ಈ ಶತಮಾನಗಳ ಪರಂಪರೆಯನ್ನು ಪಲ್ಲಟಗೊಳಿಸುವ ಯಾವುದೇ ರೀತಿಯ ತಾತ್ವಿಕ-ಸೈದ್ಧಾಂತಿಕ ದುರಾಡಳಿತಗಳು ಜನಸಾಮಾನ್ಯರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ. ಬಿಜೆಪಿ ಸರ್ಕಾರದ ಎರಡನೆ ಪಾಳಿಯಲ್ಲಿ ಸೃಷ್ಟಿಸಲಾದ ಹಿಜಾಬ್. ಹಲಾಲ್‌, ಅಝಾನ್‌ ಮುಂತಾದ ಅನಗತ್ಯ ವಿವಾದಗಳು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಮತಾಂತರ ನಿಷೇಧ, ಗೋಹತ್ಯೆ ನಿಷೇಧ ಕಾಯ್ದೆಗಳ ಮೂಲಕ ಸೃಷ್ಟಿಸಲಾದ ಅಭದ್ರತೆ ಮತ್ತು ಭೀತಿ ಕರ್ನಾಟಕದ ಸಂಸ್ಕೃತಿಗೆ ತದ್ವಿರುದ್ಧವಾದದ್ದು ಹೆಚ್ಚಿನ ಮಟ್ಟಿಗೆ ಉತ್ತರ ಭಾರತದ ವಿದ್ಯಮಾನಗಳಾಗಿದ್ದ ಸಾಮಾಜಿಕ ಬಹಿಷ್ಕಾರ, ಅಸ್ಪೃಶ್ಯತೆಯ ಆಚರಣೆ ಹಾಗೂ ಲೈಂಗಿಕ ದೌರ್ಜನ್ಯಗಳು ರಾಜ್ಯದಲ್ಲಿ ಹೆಚ್ಚಾಗಲು ಕಾರಣ ಇದೇ ದ್ವೇಷ ರಾಜಕಾರಣವಾಗಿತ್ತು. ಧಾರ್ಮಿಕ ನೆಲೆಯಲ್ಲಿ ಸೃಷ್ಟಿಯಾಗುವ ದ್ವೇಷದ ಹಿಂದೆ ಇರುವ ಶ್ರೇಷ್ಠತೆ ಮತ್ತು ಪಾರಮ್ಯದ ಭಾವನೆಗಳೇ ತಳಮಟ್ಟದಲ್ಲಿ ಜಾತಿ ವ್ಯವಸ್ಥೆಯೊಳಗೂ ನುಸುಳುತ್ತದೆ. ಹಾಗಾಗಿಯೇ ಕರಾವಳಿಯ ಕೋಮು ದ್ವೇಷಕ್ಕೆ ಸಮಾನಾಂತರವಾಗಿ ಇತರ ಜಿಲ್ಲೆಗಳಲ್ಲಿ ಜಾತಿ ದೌರ್ಜನ್ಯ, ಮಹಿಳಾ ದೌರ್ಜನ್ಯಗಳೂ ಹೆಚ್ಚಾಗಿದ್ದುದನ್ನು ಗಮನಿಸಬಹುದು.

ಬಹುಮತ ಸರ್ಕಾರದ ಆದ್ಯತೆ

ಈ ವಾತಾವರಣದಲ್ಲಿ ಅಭೂತಪೂರ್ವ ಬಹುಮತದೊಂದಿಗೆ ಆಯ್ಕೆಯಾದ ಕಾಂಗ್ರೆಸ್‌ ಸರ್ಕಾರ ತನ್ನ ಜನಪರ ಆಡಳಿತ ನೀತಿಗಳು, ಗ್ಯಾರಂಟಿ ಯೋಜನೆಗಳು ಹಾಗೂ ಸಂವಿಧಾನದ ಅನುಕರಣೆಯಿಂದಾಚೆಗೂ ಗಂಭೀರವಾಗಿ ಯೋಚಿಸಬೇಕಾದ ಹಲವು ವಿಚಾರಗಳಿವೆ. 135 ಸ್ಥಾನಗಳಲ್ಲಿ ಜಯಶಾಲಿಯಾಗಿ ಸ್ಪಷ್ಟ ಬಹುಮತದ ಅಧಿಕಾರ ಗ್ರಹಣ ಮಾಡಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ. ಹಿಂದಿನ ಸರ್ಕಾರದ ತಪ್ಪು ಹೆಜ್ಜೆಗಳನ್ನು ಸರಿಪಡಿಸುವುದರೊಂದಿಗೇ ರಾಜ್ಯದ ಭೌತಿಕ ಮುನ್ನಡೆ, ಆರ್ಥಿಕ ಪ್ರಗತಿ ಹಾಗೂ ಬೌದ್ಧಿಕ ವಿಕಸನಕ್ಕೆ ಪೂರಕವಾದ ಒಂದು ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸುವ ಜವಾಬ್ದಾರಿ ಹೊತ್ತಿದೆ. ನಾವು ಶಾಶ್ವತವಾಗಿ ಅಧಿಕಾರದಲ್ಲಿರುತ್ತೇವೆ ಎಂಬ ದಾರ್ಷ್ಟ್ಯವೇ ಹಿಂದಿನ ಸರ್ಕಾರದ ಪತನಕ್ಕೆ ಕಾರಣವಾಗಿದ್ದನ್ನು ಈಗಿನ ಕಾಂಗ್ರೆಸ್‌ ಸರ್ಕಾರವೂ ನೆನಪಿನಲ್ಲಿಡಬೇಕಿದೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಶಾಶ್ವತವಲ್ಲ ಎಂಬ ಸುಡು ವಾಸ್ತವವನ್ನು ಅರಿತಿರಬೇಕು. ದುರಂತ ಎಂದರೆ ಇದೇ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಮಿತ್ರರೂ, ವಿರೋಧಿಗಳು, ವೈರಿಗಳೂ ಶಾಶ್ವತವಲ್ಲ ಎನ್ನುವುದನ್ನು ಭಾರತದ ರಾಜಕಾರಣ ನಿರೂಪಿಸಿದೆ.

ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನರು ಎದುರಿಸುತ್ತಿದ್ದ ಆರ್ಥಿಕ ದುಸ್ಥಿತಿಗೆ ಕೊಂಚ ಮಟ್ಟಿಗೆ ಆಮ್ಲಜನಕವನ್ನು ಪೂರೈಸಿರುವ ರಾಜ್ಯ ಸರ್ಕಾರ ಕೆಲವು ಜನಪರ ಎನ್ನಬಹುದಾದ ಆಡಳಿತ ನೀತಿಗಳನ್ನು ಜಾರಿಗೊಳಿಸುತ್ತಿರುವುದು ಸ್ವಾಗತಾರ್ಹ. ಇತ್ತೀಚೆಗಷ್ಟೇ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ಆರಂಭಿಸುವ ಮುಖ್ಯಮಂತ್ರಿಗಳ ಭರವಸೆ ಸ್ತುತ್ಯಾರ್ಹ. ಸಕಾಲಿಕ ಮಳೆಯ ಕೊರತೆ, ಬರಗಾಲ, ಕೇಂದ್ರ ಸರ್ಕಾರದ ಅಸಹಕಾರ ಇವೆಲ್ಲವೂ ರಾಜ್ಯದ ಆಡಳಿತವನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಆದರೆ ಆಳ್ವಿಕೆ ಎಂದರೆ ಕೇವಲ ನಿರ್ದಿಷ್ಟ ಸಮುದಾಯಗಳ ಹಿತಾಸಕ್ತಿಗಳನ್ನು ಕಾಪಾಡುವುದಷ್ಟೇ ಅಲ್ಲ ಅಥವಾ ಮತಬ್ಯಾಂಕುಗಳ ಲೆಕ್ಕಾಚಾರದಲ್ಲಿ ವಿವಿಧ ಕೋಮುಗಳನ್ನು ಸಂತೃಪ್ತಿಪಡಿಸುವುದಷ್ಟೇ ಅಲ್ಲ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಆರ್ಥಿಕ ನೀತಿಗಳು, ಸಾಮಾಜಿಕ-ಸಾಂಸ್ಕೃತಿಕ ಯೋಜನೆಗಳು ಹಾಗೂ ಬೌದ್ಧಿಕ-ಶೈಕ್ಷಣಿಕ ಕಾರ್ಯಕ್ರಮಗಳು ಸರ್ಕಾರದ ಆದ್ಯತೆಯಾಗಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ತನ್ನದೇ ಆದ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲು ಮುಂದಾಗಿರುವುದು, ಹಿಂದಿನ ಸರ್ಕಾರದಿಂದ ಹಲವು ವ್ಯತ್ಯಯಗಳಿಗೀಡಾಗಿದ್ದ ಪಠ್ಯ ಕ್ರಮ ಪರಿಷ್ಕರಣೆಗೆ ಕ್ರಮ ಜರುಗಿಸಿರುವುದು ಸ್ವಾಗತಾರ್ಹ ಕ್ರಮಗಳು. ಆದರೆ ಇವೆಲ್ಲವೂ ಆಡಳಿತ ನಿರ್ವಹಣೆಯ ಕ್ರಮಗಳು. ಮೂಲತಃ ಸರ್ಕಾರದ ಆದ್ಯತೆ ಆಡಳಿತ ಯಂತ್ರವನ್ನು ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ವಶೀಲಿಬಾಜಿಯಿಂದ ಮುಕ್ತಗೊಳಿಸುವುದಾಗಬೇಕಿತ್ತು. ಪ್ರಜಾಪ್ರಭುತ್ವದಲ್ಲಿ ಮತದಾರರು ಬಹುಮತ ನೀಡುವುದು ಜವಾಬ್ದಾರಿಯುತ ಆಡಳಿತ ನಡೆಸುವ ಸಲುವಾಗಿಯೇ ಹೊರತು ವಿವೇಚನಾರಹಿತ ಸ್ವೇಚ್ಚಾಚಾರಕ್ಕಾಗಿ ಅಲ್ಲ ಎನ್ನುವ ವಾಸ್ತವವನ್ನು ಎಲ್ಲ ರಾಜಕೀಯ ಪಕ್ಷಗಳೂ ಅರಿತುಕೊಳ್ಳಬೇಕು. ಈ ದೃಷ್ಟಿಯಿಂದ ನೋಡಿದಾಗ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ಅರಿತು ಕೆಲಸ ಮಾಡುತ್ತಿಲ್ಲ ಎನ್ನುವುದು ಸುಸ್ಪಷ್ಟವಾಗುತ್ತದೆ.

ಆಡಳಿತದ ದುರಸ್ತಿ ಮತ್ತು ಪೀಠದಾಹ

ಐದು ವರ್ಷಗಳ ಅಧಿಕಾರಾವಧಿಯಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸಾಧಿಸುವುದೇ ಅಲ್ಲದೆ ಢಾಳಾಗಿ ಕಾಣುತ್ತಿರುವ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸುವುದು, ಉತ್ತರ ಕರ್ನಾಟಕದ ಅಭಿವೃದ್ಧಿ ಕಾರ್ಯಗಳನ್ನು ತ್ವರಿತಗೊಳಿಸುವುದು ಹಾಗೂ ಕರಾವಳಿ ಕರ್ನಾಟಕದಲ್ಲಿ ಅವ್ಯಾಹತವಾಗಿ ಮುಂದುವರೆದಿರುವ ಮತೀಯ ದ್ವೇಷ ರಾಜಕಾರಣವನ್ನು ನಿಯಂತ್ರಿಸುವುದು ರಾಜ್ಯ ಸರ್ಕಾರದ ಪ್ರಥಮ ಆದ್ಯತೆಯಾಗಬೇಕಿದೆ. ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರವನ್ನು ಅಮೂಲಾಗ್ರವಾಗಿ ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಉಪಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ಬೆಳವಣಿಗೆಗಳಿಗೆ ಮೂಲ ಕಾರಣವಾಗಿರುವ ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕ ನೀತಿ ಮತ್ತು ಬಂಡವಾಳಶಾಹಿ ಔದ್ಯಮಿಕ ನೀತಿಗಳನ್ನು ಪರಾಮರ್ಶೆ ಮಾಡುವುದು ಸರ್ಕಾರದ ಪ್ರಥಮ ಕರ್ತವ್ಯವೂ ಆಗಿದೆ.

ಆಡಳಿತ ವ್ಯವಸ್ಥೆಯಲ್ಲಿ, ಅಧಿಕಾರ ಶಾಹಿಯಲ್ಲಿ, ಕಾನೂನು ನಿರ್ವಹಣೆಯ ಪರಿಧಿಯಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ಆಳವಾಗಿ ಬೇರೂರಿದೆ. ಇದನ್ನು ಹೋಗಲಾಡಿಸುವುದು ಕೇವಲ ಲೋಕಾಯುಕ್ತ ದಾಳಿಗಳಿಂದ ಸಾಧ್ಯವಾಗುವುದಿಲ್ಲ. ತಳಮಟ್ಟದಿಂದಲೇ ಅಧಿಕಾರಶಾಹಿಯ ಪ್ರತಿಯೊಂದು ಹಂತದಲ್ಲೂ ಹಣಕಾಸು ಭ್ರಷ್ಟಾಚಾರ ಮತ್ತು ವಶೀಲಿಬಾಜಿಯನ್ನು ನಿಯಂತ್ರಿಸಬೇಕಾಗುತ್ತದೆ. ಭಾರತದ ವರ್ತಮಾನದ ಸಂದರ್ಭದಲ್ಲಿ ಪಕ್ಷ ರಾಜಕಾರಣದ ಅನಿವಾರ್ಯತೆಗಳು ಸಹಜವಾಗಿ ಇದಕ್ಕೆ ಅಡ್ಡಿಯಾಗುತ್ತದೆ. ಗ್ರಾಮ ಪಂಚಾಯತ್‌ನಿಂದ ಸಂಸತ್ತಿನವರೆಗೂ ಹರಡಿರುವ ಭ್ರಷ್ಟಾಚಾರದ ಬೇರುಗಳು ಹಲವು ಕವಲುಗಳನ್ನು ಕಂಡುಕೊಳ್ಳುತ್ತಾ ಚುನಾವಣಾ ರಾಜಕಾರಣಕ್ಕೆ ನೇರವಾಗಿ ಸಂಪರ್ಕಿಸಿರುತ್ತದೆ. ಹಿಂದಿನ ಸರ್ಕಾರದ 40 ಪರ್ಸೆಂಟ್‌ ವಿವಾದದಲ್ಲಿ ಇದನ್ನು ಗುರುತಿಸಬಹುದಿತ್ತು. ಈ ಸರಪಣಿಯನ್ನು ತುಂಡರಿಸದೆ ಹೋದರೆ ಭ್ರಷ್ಟಾಚಾರವನ್ನು ನಿಯಂತ್ರಿಸಬಹುದೇ ಹೊರತು, ನಿರ್ಮೂಲ ಮಾಡಲಾಗುವುದಿಲ್ಲ. ಆದರೆ ಸರ್ಕಾರ ರಚಿಸಿ ಐದು ತಿಂಗಳು ಪೂರೈಸಿದ್ದರೂ ಕಾಂಗ್ರೆಸ್‌ ಸರ್ಕಾರ ಈ ನಿಟ್ಟಿನಲ್ಲಿ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ.

2023ರ ಚುನಾವಣೆಯಲ್ಲಿ ಕರ್ನಾಟಕದ ಜನತೆ ಆಯ್ಕೆ ಮಾಡಿರುವುದು ಕಾಂಗ್ರೆಸ್‌ ಸರ್ಕಾರವನ್ನೇ ಹೊರತು ಯಾವುದೇ ನಿರ್ದಿಷ್ಟ ವ್ಯಕ್ತಿಯ ನಾಯಕತ್ವವನ್ನಲ್ಲ ಎಂಬ ಕಟು ವಾಸ್ತವವನ್ನು ಕಾಂಗ್ರೆಸ್‌ ಪಕ್ಷ ಅರ್ಥಮಾಡಿಕೊಳ್ಳಬೇಕಿದೆ. ಪಕ್ಷದೊಳಗಿನ ತಮ್ಮ ವರ್ಚಸ್ಸು ಹಾಗೂ ವಿಶಾಲ ಸಮಾಜದಲ್ಲಿರುವ ಮಾನ್ಯತೆಯನ್ನು ಗೌರವಿಸಿ, ಸಮಚಿತ್ತದ, ಸಮಾನತೆಯನ್ನು ಪ್ರತಿಪಾದಿಸುವ ಸಿದ್ಧರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವುದು ಕಾಂಗ್ರೆಸ್‌ ಪಕ್ಷದ ಅನಿವಾರ್ಯತೆಯಾಗಿತ್ತು. ಆದರೆ ಇದು ಪಕ್ಷದ ಆಂತರಿಕ ವಿಚಾರವಾಗಬೇಕೇ ಹೊರತು ಸರ್ಕಾರವನ್ನೇ ಅಸ್ಥಿರಗೊಳಿಸುವ ಸಾರ್ವಜನಿಕ ಬೀದಿ ರಂಪ ಆಗಬಾರದು. ಈ ವ್ಯವಧಾನ ಮತ್ತು ವಿವೇಕ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರಲ್ಲಿ ಇಲ್ಲದೆ ಹೋದರೆ ಅದು ವಿಶ್ವಾಸದ್ರೋಹ ಎನಿಸಿಕೊಳ್ಳುತ್ತದೆ. ರಾಜ್ಯದ ಜನತೆ ಸರ್ಕಾರವನ್ನು ಆಯ್ಕೆ ಮಾಡಿದೆಯೇ ಹೊರತು ಮುಖ್ಯಮಂತ್ರಿಯ ಆಯ್ಕೆ ಮಾಡಿಲ್ಲ ಎನ್ನುವ ವಿವೇಚನೆಯೂ ನಾಯಕರಲ್ಲಿರಬೇಕು. ಆದರೆ ಇವತ್ತಿಗೂ ಸಹ ಅಧಿಕಾರ ಹಂಚಿಕೆ ಮತ್ತು ಅದರ ಸುತ್ತಲಿನ ಹವಣಿಕೆಗಳೇ ಪ್ರಧಾನ ಸುದ್ದಿಯಾಗಿರುವುದು ಕಾಂಗ್ರೆಸ್‌ ಪಕ್ಷದೊಳಗಿನ ಅಶಿಸ್ತನ್ನು ಹೊರಹಾಕಿದೆ.

ಐದು ವರ್ಷಗಳ ಅವಧಿ ಯಾರು ಮುಖ್ಯಮಂತ್ರಿಯಾಗಿರುತ್ತಾರೆ ಎನ್ನುವುದಕ್ಕಿಂತಲೂ ರಾಜ್ಯದ ಜನತೆಗೆ ಬೇಕಿರುವುದು ಸರ್ಕಾರ ಎಷ್ಟರ ಮಟ್ಟಿಗೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತದೆ ಎಂಬ ಪ್ರಶ್ನೆ. ಅಧಿಕಾರ ರಾಜಕಾರಣದಲ್ಲಿ ಸಾಮಾನ್ಯವಾಗಿರುವ, ಕಳೆದ ಹತ್ತು ವರ್ಷಗಳಲ್ಲಿ ಅಧಿಕೃತತೆಯನ್ನು ಪಡೆದಿರುವ, ರೆಸಾರ್ಟ್‌ ರಾಜಕಾರಣ, ಪಕ್ಷಾಂತರ ಅಥವಾ ಆಪರೇಷನ್‌ಗಳ ನಡುವೆಯೇ ರಾಜ್ಯ ಸರ್ಕಾರವು ತನ್ನ ಸಚಿವ ಸಂಪುಟದ ಕಾರ್ಯಕ್ಷಮತೆ ಹಾಗೂ ದಕ್ಷತೆಯನ್ನು ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ರಾಜ್ಯದ ಜನತೆಯ ಆಯ್ಕೆ ಉತ್ತಮ ಪ್ರಾಮಾಣಿಕ ಸರ್ಕಾರವೇ ಹೊರತು ನಿರ್ದಿಷ್ಟ ವ್ಯಕ್ತಿಯಾಗಲೀ, ವ್ಯಕ್ತಿಕೇಂದ್ರಿತ ಪ್ರತಿಷ್ಠೆಯಾಗಲೀ ಅಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನೂ ಸೇರಿದಂತೆ ಕಾಂಗ್ರೆಸ್‌ ನಾಯಕರ ಸಾರ್ವಜನಿಕ ಹೇಳಿಕೆಗಳು ತಳಮಟ್ಟದ ಸಮಾಜಕ್ಕೆ ನಕಾರಾತ್ಮಕ ಸಂದೇಶವನ್ನು ರವಾನಿಸುವಂತಿದೆ. “ ನಾನೇ ಮುಖ್ಯಮಂತ್ರಿ-ನಾನೂ ಮುಖ್ಯಮಂತ್ರಿ ” ಎಂಬ ಹೇಳಿಕೆಗಳಿಂದ ಪಕ್ಷ ದೂರಸರಿಯಬೇಕಿದೆ. ಇದು ಕಾಂಗ್ರೆಸ್‌ ಪಕ್ಷದ ನೈತಿಕ ಜವಾಬ್ದಾರಿ ಮತ್ತು ಸಾಂವಿಧಾನಿಕ ಹೊಣೆಗಾರಿಕೆ.

ನೈತಿಕ ಜವಾಬ್ದಾರಿಯ ಅವಶ್ಯಕತೆ

ಅಧಿಕಾರ ಪಡೆದು ಐದು ತಿಂಗಳು ಕಳೆದರೂ ರಾಜ್ಯದ ಒಂದು ಸಾಂಸ್ಕೃತಿಕ ನೀತಿಯನ್ನು ರೂಪಿಸದ ಸರ್ಕಾರ, ಕಾರ್ಮಿಕ-ರೈತ ವಿರೋಧಿ ಕಾನೂನುಗಳನ್ನು ಪರಾಮರ್ಶಿಸುವ ವ್ಯವಧಾನವನ್ನೂ ತೋರದಿರುವುದು ಸರ್ಕಾರದ ಅಲಕ್ಷ್ಯಕ್ಕೆ ಕನ್ನಡಿ ಹಿಡಿದಂತಿದೆ. ಹಿಂದಿನ ಸರ್ಕಾರ ಜಾರಿಗೊಳಿಸಿದ್ದ ಕಾರ್ಮಿಕ ವಿರೋಧಿ ಸಂಹಿತೆಗಳು, 12 ಗಂಟೆ ದುಡಿಮೆಯ ಆದೇಶ, ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳು, ರೈತರಿಗೆ ಮಾರಕವಾದ ಭೂ ಸ್ವಾಧೀನ ಮಸೂದೆ, ದಲಿತರ-ಅಲ್ಪಸಂಖ್ಯಾತರ ಬದುಕಿಗೆ ಮಾರಕವಾಗುವ ಮತಾಂತರ ನಿಷೇಧ ಮತ್ತು ಗೋಹತ್ಯೆ ನಿಷೇಧ ಕಾಯ್ದೆ ಇವೆಲ್ಲವುಗಳನ್ನು ಗಂಭೀರವಾಗಿ ಪರಾಮರ್ಶಿಸಿ ಸಂವಿಧಾನದ ಆಶಯಗಳಿಗನುಗುಣವಾಗಿ ಆಡಳಿತ ನೀತಿಯನ್ನು ಅನುಸರಿಸುವುದು ಸರ್ಕಾರದ ಆದ್ಯತೆಯಾಗಬೇಕಿದೆ. ಮತ್ತೊಂದೆಡೆ ಇಂದಿಗೂ ಕರಾವಳಿಯಲ್ಲಿ, ಇತರ ಜಿಲ್ಲೆಗಳಲ್ಲಿ ತಣ್ಣನೆ ಹರಿಯುತ್ತಿರುವ ಕೋಮುದ್ವೇಷದ ಅಲೆಗಳು, ದ್ವೇಷರಾಜಕಾರಣದ ಭಾವನೆಗಳು ರಾಜ್ಯದ ಸೌಹಾರ್ದ ಸಂಸ್ಕೃತಿಗೆ ಯಾವುದೇ ಹಂತದಲ್ಲಾದರೂ ಧಕ್ಕೆ ಉಂಟುಮಾಡುತ್ತದೆ. ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನೇ ಮರೆತು, ಸರ್ಕಾರದ ಪತನದ ದಿನಗಣನೆ ಮಾಡುವ ಮೂಲಕ ಬಿಜೆಪಿ ತನ್ನ ಸಾಂವಿಧಾನಿಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿರುವುದು ರಾಜ್ಯ ರಾಜಕಾರಣದ ದುರಂತ.

ಭಾರತದ ಸಂವಿಧಾನವನ್ನು ಅನುಕರಣೆಯಲ್ಲಿ, ಅನುಸರಣೆಯಲ್ಲಿ ಹಾಗೂ ಆಚರಣೆಯಲ್ಲಿ ಪಾಲಿಸುವುದು ಆದ್ಯತೆಯಾಗಬೇಕೇ ಹೊರತು, ಕೇವಲ ಮೌಖಿಕ ಪಠಣ ಅಥವಾ ಉತ್ಸವಗಳ ಮೂಲಕ ಅಲ್ಲ. ಈ ವಾಸ್ತವವನ್ನು ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕಿದೆ. ಕರ್ನಾಟಕದ ಜನತೆ ಬದಲಾವಣೆಯನ್ನು ಬಯಸಿದ್ದಾರೆ, ಹೊಸ ಆಡಳಿತ ವ್ಯವಸ್ಥೆಯನ್ನು ಅಪೇಕ್ಷಿಸಿದ್ದಾರೆ, ಸೌಹಾರ್ದಯುತ ಸಮಾಜವನ್ನು ನಿರೀಕ್ಷಿಸಿದ್ದಾರೆ. ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವನ್ನು ಮಾಡುವುದೆಂದರೆ ಆ ತೋಟದಲ್ಲಿರುವ ಪ್ರತಿಯೊಂದು ಗಿಡಬಳ್ಳಿಯೂ ಹಸಿರಾಗಿರಬೇಕೆಂದೇ ಅರ್ಥ ಅಲ್ಲವೇ ? ಈ ಉನ್ನತ ಆದರ್ಶದೊಂದಿಗೆ, ಉದಾತ್ತ ಚಿಂತನೆಗಳೊಂದಿಗೆ ರಾಜ್ಯ ಸರ್ಕಾರ ಕ್ರಿಯಾಶೀಲವಾಗಬೇಕಿದೆ. ಇಲ್ಲವಾದರೆ 2028ರ ವೇಳೆಗೆ ಮತದಾರರು ಮತ್ತೊಮ್ಮೆ ಭ್ರಮನಿರಸನರಾಗುವ ಸಾಧ್ಯತೆಗಳು ನಿಚ್ಚಳವಾಗಿವೆ. ಈ ಗೋಡೆಯ ಮೇಲಿನ ಬರಹವನ್ನು ಸರ್ಕಾರ ಸದಾ ಓದುತ್ತಿರುವುದು ಕ್ಷೇಮ
-೦-೦-೦-

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ತೆರೆಗೆ ಬರಲು ರೆಡಿ ಎಸ್ತರ್ ನರೋನ್ಹಾ ಹೊಸ ಕನಸು.. ನ.17ಕ್ಕೆ ‘ದಿ ವೆಕೆಂಟ್ ಹೌಸ್’ ರಿಲೀಸ್

Next Post

ಲಿಂಗಾಯತ ಮಠಗಳು ಹೀಗಿರಬೇಕು..! : ಡಾ. ಜೆ ಎಸ್ ಪಾಟೀಲ ಅವರ ಬರಹ

Related Posts

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,
Top Story

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

by ಪ್ರತಿಧ್ವನಿ
July 4, 2025
0

ಅಕ್ಕ ಸತ್ತರೆ ಅಮಾಸೆ ನಿಲ್ಲಲ್ಲ ಎಂಬ ನುಡಿಯೂ ಇದೆ.ಇಂದಿನದು ಇಂದಿಗೆ, ನಾಳಿನದು ನಾಳೆಗೆ ಎಂಬುದು ನಿಮ್ಮ ನಿಮ್ಮ ದೃಷ್ಟಿಕೋನಕ್ಕೆ ನಿಲುಕಿದ್ದು;ನಿಮಿಷದಲ್ಲಿ ಬದುಕುವವನಿಗೆ ನಾಳೆ ಹಗಲು ಇದೆ.ನಿಜದಲ್ಲಿ ಜೀವಿಸುವವನಿಗೆ...

Read moreDetails
ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

July 4, 2025
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

July 4, 2025

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

July 3, 2025
Next Post
ಲಿಂಗಾಯತ ಮಠಗಳು ಹೀಗಿರಬೇಕು..! : ಡಾ. ಜೆ ಎಸ್ ಪಾಟೀಲ ಅವರ ಬರಹ

ಲಿಂಗಾಯತ ಮಠಗಳು ಹೀಗಿರಬೇಕು..! : ಡಾ. ಜೆ ಎಸ್ ಪಾಟೀಲ ಅವರ ಬರಹ

Please login to join discussion

Recent News

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,
Top Story

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

by ಪ್ರತಿಧ್ವನಿ
July 4, 2025
ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R
Top Story

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

by Chetan
July 4, 2025
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!
Top Story

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

by Chetan
July 4, 2025
Top Story

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

by ಪ್ರತಿಧ್ವನಿ
July 3, 2025
Top Story

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

by ಪ್ರತಿಧ್ವನಿ
July 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

July 4, 2025
ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada