ಸಂಕ್ರಾಂತಿ ಬಂದ್ರೆ ಸಾಕು ಉತ್ತರ ಕರ್ನಾಟಕದಲ್ಲಿ ಸಾಲು ಸಾಲು ಹಬ್ಬಗಳು ನಡೆಯುತ್ತವೆ. ವಿಜಯಪುರದ ಸಿದ್ದೇಶ್ವರ ಜಾತ್ರೆ, ಬಾದಾಮಿಯ ಬನಶಂಕರಿ ಜಾತ್ರೆ, ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ ಸೇರಿದಂತೆ ಹಲವು ಪ್ರಸಿದ್ದ ಹಾಗೂ ಐತಿಹಾಸಿಕ ಜಾತ್ರೆಗಳು ನಡೆಯುತ್ತವೆ. ಈ ಜಾತ್ರೆಗಳು ತನ್ನದೆಯಾದ ಧಾರ್ಮಿಕ, ಪೌರಾಣಿಕ ಹಿನ್ನೆಲೆಗಳನ್ನ ಹೊಂದಿವೆ. ಒಂದೊಂದು ಜಾತ್ರೆ ಆಯಾ ಭಾಗದಲ್ಲಿ ಸಾಮಾಜಿಕವಾಗಿ ಧಾರ್ಮಿಕವಾಗಿ ಹಾಗೂ ಆರ್ಥಿಕವಾಗಿ ಜನರಿಗೆ ಅನುಕೂಲಗಳನ್ನು ಮಾಡಿಕೊಟ್ಟಿದೆ. ಆದರೆ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಜಾತ್ರೆಗಳು ನಿಂತು ಹೋಗಿವೆ. ಕೇವಲ ಸಾಂಪ್ರದಾಯಿಕ ಆಚರಣೆಗೆ ಮಾತ್ರ ಅವಕಾಶ ನೀಡಲಾಗಿದೆ. ಹೀಗಾಗಿ ಜಾತ್ರೆಗಳನ್ನೇ ನಂಬಿದ್ದ ನೂರಾರು ಕುಟುಂಬಗಳು ಆರ್ಥಿಕವಾಗಿ ಸಂಕಷ್ಟ ಅನುಭವಿಸುವಂತಾಗಿದೆ.
ಜಾತ್ರೆಗಳು ಅಂದ್ರೆ ಅವು ಧಾರ್ಮಿಕ ಕಾರ್ಯದ ಜೊತೆಗೆ ಆರ್ಥಿಕವಾಗಿ ವ್ಯಾಪಾರಿಗಳಿಗೆ, ಸರ್ಕಾರದ ಸ್ಥಳೀಯ ಆಡಳಿತಕ್ಕೆ ಹಾಗೂ ರೈತಾಪಿ ವರ್ಗಕ್ಕೆ ಆದಾಯದ ಮೂಲಗಳಾಗಿವೆ. ದೊಡ್ಡ ಜಾತ್ರೆಗಳಲ್ಲಿ ತಾತ್ಕಾಲಿಕ ಟೆಂಟ್ ಹಾಕಲು ಸ್ಥಳಿಯ ಆಡಳಿತ ಪರವಾನಿಗೆ ಹೆಸರಲ್ಲಿ ಶುಲ್ಕ ಪಡೆಯುತ್ತೆ. ವ್ಯಾಪಾರಿಗಳು ಭರ್ಜರಿ ವ್ಯಾಪಾರದ ಮೂಲಕ ಲಾಭ ಪಡೆಯುತ್ತಾರೆ. ಆದರೆ ಕೋವಿಡ್ ಇದೆಲ್ಲವನ್ನು ಬಂದ್ ಮಾಡಿದೆ.
ವಿಜಯಪುರ ಜಿಲ್ಲೆಯ ಐತಿಹಾಸಿಕ ಸಂಕ್ರಾಂತಿ ಸಿದ್ದರಾಮೇಶ್ವರ ಜಾತ್ರೆ ಶತಮಾನ ಕಂಡ ಜಾತ್ರೆಯಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದ ವ್ಯಾಪಾರಿಗಳು ಹಾಗೂ ರೈತಾಪಿ ವರ್ಗಕ್ಕೆ ಇದು ಆದಾಯದ ಕೇಂದ್ರವಾಗಿತ್ತು. ಅಲ್ಲದೆ ಪ್ರತಿವರ್ಷ ಹಬ್ಬದ ಅಂಗವಾಗಿ ಬೃಹತ್ ಖಾದಿಮೇಳ ಹಾಗೂ ಕೈಮಗ್ಗದ ವಸ್ತುಗಳ ಮಾರಾಟ ಮಳಿಗೆ ತರೆಯಲಾಗುತ್ತಿತ್ತು. ಪ್ರತಿವರ್ಷ ಅಂದಾಜು 1 ಕೋಟಿ ಮೌಲ್ಯದ ಖಾದಿ ಹಾಗೂ ಕೈಮಗ್ಗದ ಬಟ್ಟೆ ಮಾರಾಟ ಮಾಡಲಾಗುತ್ತಿತ್ತು. ಇದರಿಂದಾಗಿ ಅನೇಕ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದರು. ಆದರೆ ಕೋವಿಡ್ ಅದೆಲ್ಲವನ್ನು ಬಂದ್ ಮಾಡಿದೆ.
ಸಂಕ್ರಮಣ ಜಾತ್ರೆಯ ಅಂಗವಾಗಿ ವಿಜಯಪುರದಲ್ಲಿ ಉತ್ತರ ಕರ್ನಾಟಕದಲ್ಲೇ ಅತ್ಯಂತ ದೊಡ್ಡ ಜಾನುವಾರು ಜಾತ್ರೆ ನಡೆಯುತ್ತಿತ್ತು. ಮೂರು ರಾಜ್ಯಗಳ ಸಾವಿರಾರು ರೈತರು ಇಲ್ಲಿಗೆ ಆಗಮಿಸುತ್ತಿದ್ದರು. ಜಾನುವಾರು ಖರೀದಿ ಹಾಗೂ ಮಾರಾಟ ಮಾಡುತ್ತಿದ್ದರು. ಅಂದಾಜು ಪ್ರತಿ ವರ್ಷ ಜಾನುವಾರು ಜಾತ್ರೆಯಲ್ಲಿ 5 ಕೋಟಿ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಆದರೆ ಕೋವಿಡ್ ಹಾಗೂ ರಾಜ್ಯ ಸರಕಾರದ ಕಾನೂನೂ ರೈತರನ್ನು ಹೈರಾಣಾಗಿಸಿದೆ. ಜಾನುವಾರು ಮಾರಾಟ ಮಾಡಲು ಬೇರೆ ಸಮಯದಲ್ಲಿ ಆಗದ ಕಾರಣ ಜಾತ್ರೆಯ ಸಮಯದಲ್ಲಾದರೂ ಖರೀದಿ ಹಾಗೂ ಮಾರಾಟ ಮಾಡಬಹುದು ಎಂದಿದ್ದ ರೈತರು ಇದೀಗ ಸಂಕಷ್ಟ ಪಡುವಂತಾಗಿದೆ. ಜಾತ್ರೆಯಲ್ಲಿ ಮಕ್ಕಳ ಆಟಿಕೆ ಮಾರಾಟ, ಮಹಿಳೆಯರ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡಿ ಅಲೇಮಾರಿ ವ್ಯಾಪಾರಿಗಳು ಜೀವನೋಪಾಯಕ್ಕಾಗಿ ಅಲ್ಪ ಸ್ವಲ್ಪ ಹಣ ಗಳಿಸುತ್ತಿದ್ದರು. ಆದರೆ ಈ ಸಲ ಕೋವಿಡ್ ಆತಂಕದಿಂದಾಗಿ ಸರ್ಕಾರ ಜಾತ್ರೆಗೆ ನಿರ್ಭಂಯ ಹೇರಿರುವ ಕಾರಣ ವ್ಯಾಪಾರ ವಹಿವಾಟು ಮಾಡಲಾಗಿದೆ. ಮುಂದೇನೂ ಅನ್ನೋ ಚಿಂತೆಯಲ್ಲಿದ್ದಾರೆ.
ಇದು ಕೇವಲ ವಿಜಯಪುರ ಸಂಕ್ರಮಣ ಜಾತ್ರೆಯ ಉದಾಹರಣೆ. ಹೀಗೆ ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಬಡ ಹಾಗೂ ಮಧ್ಯಮ ವರ್ಗದ ಸಾವಿರಾರು ವ್ಯಾಪಾರಿಗಳು ಜೀವನ ಕಂಡುಕೊಂಡಿದ್ದರು. ಆದರೆ ಕೋವಿಡ್ ಎನ್ನುವುದು ಎಲ್ಲವನ್ನೂ ಬಂದ್ ಮಾಡಿದೆ. ಸರ್ಕಾರ ಸಹ ಮಾಲ್ ಸೇರಿದಂತೆ ದೊಡ್ಡ ದೊಡ್ಡ ವ್ಯಾಪಾರಿ ಕೇಂದ್ರಗಳಲ್ಲಿ ಮಾರಾಟಕ್ಕೆ ಅವಕಾಶ ನೀಡಿದಂತೆ ಸಣ್ಣ ವ್ಯಾಪರಿಗಳಿಗೂ ಬೇರೆ ಮಾರ್ಗಗಳನ್ನು ಮಾಡಿ ಬದುಕಲು ದಾರಿ ಮಾಡಿಕೊಡಬೇಕಾಗಿದೆ.