ಕನ್ನಡ ತಾಯಿಯ ಮೂಲಕ ಭಾರತ ಮಾತೆಯನ್ನು ಕಣ್ತುಂಬಿಕೊಳ್ಳೋಣ. ಈ ಮೂಲಕ ಭಾರತದ ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿಸೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಗರದ ಶೇಷಾದ್ರಿಪುರಂ ಬಳಿಯ ಜನತಾದಳ (ಜಾತ್ಯತೀತ) (ಜೆಡಿಎಸ್) ಕಚೇರಿಯಲ್ಲಿ ಮಂಗಳವಾರ (ಆಗಸ್ಟ್ 15) ಹಮ್ಮಿಕೊಂಡಿದ್ದ 77ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಎಚ್.ಡಿ.ಕುಮಾರಸ್ವಾಮಿ ಮಾತನಾತನಾಡಿದರು.

ಸ್ವಾತಂತ್ರ್ಯ ದಿನಾಚರಣೆಯ ಶುಭ ಕೋರಿದ ಎಚ್.ಡಿಕುಮಾರಸ್ವಾಮಿ ಅವರು, ಭಾರತ ಹಾಗೂ ಕರ್ನಾಟಕದ ಹಿರಿಮೆಯ ಬಗ್ಗೆ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಮುಂದಿನ ಶೈಕ್ಷಣಿಕ ವರ್ಷದಿಂದ ಎನ್‌ಇಪಿ ರದ್ದು: ಸಿಎಂ ಸಿದ್ದರಾಮಯ್ಯ
“ಪಂಚಭೂತಗಳ ಸಮತತ್ತ್ವ ಎಷ್ಟು ಆದರ್ಶಪ್ರಾಯವೋ ಭಾರತೀಯ ಸ್ವಾತಂತ್ರ್ಯದ ಪರಿಕಲ್ಪನೆ ಅಷ್ಟೇ ಶ್ರೇಷ್ಠ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು, ಮತ್ತಿತರೆ ಅನೇಕ ಮಹಾಪುರುಷರ ತ್ಯಾಗ, ಬಲಿದಾನದ ಮಹಾಫಲವನ್ನು ಜತನದಿಂದ ಕಾಪಾಡಿಕೊಳ್ಳೋಣ” ಎಂದು ತಿಳಿಸಿದರು.
“ರಾಷ್ಟ್ರಕವಿ ಕುವೆಂಪು ಅವರ ʼಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆʼ ಎನ್ನುವ ಮಹಾನ್ ಆಶಯದಂತೆ ಕನ್ನಡಮ್ಮನ ಕಂಗಳ ಮೂಲಕ ಭಾರತಾಂಬೆಯನ್ನು ಕಣ್ತುಂಬಿಕೊಂಡು ಆರಾಧಿಸೋಣ. ಆರಾಧನೆ, ಸಾಧನೆ ಒಟ್ಟಿಗೆ ನಡೆದಾಗಲೇ ಗಳಿಸಿದ ಸ್ವಾತಂತ್ರ್ಯಕ್ಕೆ ಅರ್ಥ, ಪರಮಾರ್ಥ” ಎಂದು ಎಚ್.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.