75 ವರ್ಷಗಳ ಪ್ರಜಾಸತ್ತಾತ್ಮಕ ಆಡಳಿತದ ನಂತರ ಭಾರತದ ಶಾಸಕಾಂಗ ಮತ್ತು ಕಾನೂನು ವ್ಯವಸ್ಥೆ ಇತರ ದೇಶಗಳಿಗೆ ಮಾದರಿಯಾಗುವಂತಹ ಪ್ರೌಢಿಮೆ ಮತ್ತು ಪ್ರಬುದ್ಧತೆಯನ್ನು ಪಡೆಯಬೇಕಿತ್ತು. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆ ಇರುವ ಭಾರತ ಇಂದಿಗೂ ತನ್ನ ಪ್ರಜಾತಂತ್ರ ಮೌಲ್ಯಗಳಿಗಾಗಿಯೇ ವಿಶ್ವದ ಭೂಪಟದಲ್ಲಿ ಪ್ರತಿಷ್ಠಿತ ಸ್ಥಾನ ಗಳಿಸಿದೆ. ಇದಕ್ಕೆ ಸರ್ಕಾರಗಳಿಗಿಂತಲೂ ಹೆಚ್ಚಾಗಿ ಭಾರತದ ಸಾಮಾನ್ಯ ಜನತೆಯೇ ಕಾರಣರಾಗಿದ್ದಾರೆ. ತಮ್ಮ ಜೀವನ ಮತ್ತು ಜೀವನೋಪಾಯದ ಮಾರ್ಗಗಳೆಲ್ಲವೂ ದುರ್ಭರವಾಗುತ್ತಿರುವ ಸಂದರ್ಭದಲ್ಲೂ ಈ ದೇಶದ ಜನತೆ ಪ್ರಜಾಸತ್ತಾತ್ಮಕ ಹಾದಿಯಲ್ಲೇ ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸುತ್ತಾ, ಪ್ರತಿರೋಧದ ಅಲೆಗಳನ್ನು ಸೃಷ್ಟಿಸುತ್ತಾ, ಆಡಳಿತಾರೂಢ ಸರ್ಕಾರಗಳಿಂದ ಸಾಮಾಜಿಕ ನ್ಯಾಯ ಅಪೇಕ್ಷಿಸುತ್ತಿದ್ದಾರೆ. ಜಾತಿ, ಮತ, ಮತಧರ್ಮಗಳ ಉನ್ಮಾದಕ್ಕೊಳಗಾಗಿ ಕೆಲವು ಗುಂಪುಗಳು ಎಷ್ಟೇ ಕ್ಷೋಭೆಯನ್ನುಂಟುಮಾಡುತ್ತಿದ್ದರೂ, ಈ ನೆಲದ ಮಕ್ಕಳು ತಮ್ಮ ನೆಲಮೂಲ ಸಂಸ್ಕೃತಿಯ ಸಹಿಷ್ಣುತೆಯೊಂದಿಗೇ ಸವಾಲುಗಳನ್ನು ಎದುರಿಸುತ್ತಿದ್ದಾರೆ.
ಭ್ರಷ್ಟಾತಿಭ್ರಷ್ಟರನ್ನು ಸಹಿಸಿಕೊಳ್ಳುವ ಕ್ಷಮತೆ ಹೊಂದಿರುವ ಭಾರತದ ಜನತೆ, ನರಮೇಧವನ್ನು ಪ್ರಚೋದಿಸುವ ವಿಚ್ಛಿದ್ರಕಾರಿ ಶಕ್ತಿಗಳನ್ನೂ ಸಹಿಸಿಕೊಂಡು, ಸಂವಿಧಾನ ನಿಷ್ಠೆಯೊಂದಿಗೆ ಪ್ರಜಾಪ್ರಭುತ್ವವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ವಿರೋಧ, ಪ್ರತಿರೋಧ, ಟೀಕೆ, ವಿಮರ್ಶೆಗಳನ್ನೇ ಮಹಾಪರಾಧವೆಂದು ಪರಿಗಣಿಸುವಂತಹ ಒಂದು ಆಡಳಿತ ವ್ಯವಸ್ಥೆ ತಾತ್ವಿಕವಾಗಿ ನೆಲೆಗಾಣುತ್ತಿದ್ದರೂ, ಸಾಂವಿಧಾನಿಕ ಮೌಲ್ಯಗಳಲ್ಲಿರುವ ಗಾಢ ವಿಶ್ವಾಸದೊಂದಿಗೆ ಶೋಷಣೆಗೊಳಗಾದ, ದಮನಿತ ಸಮುದಾಯಗಳು ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆಗಾಗಿ ಅನೇಕ ಸಂದರ್ಭಗಳಲ್ಲಿ ನ್ಯಾಯಾಂಗದ ಬಾಗಿಲು ಬಡಿಯುತ್ತಿವೆ. ಆಳುವ ವ್ಯವಸ್ಥೆಯ ಕ್ರೌರ್ಯ ಮತ್ತು ದಬ್ಬಾಳಿಕೆಯ ಮಾದರಿಗಳು ಹೊಸ ವಿನ್ಯಾಸಗಳೊಂದಿಗೆ ಪ್ರತಿರೋಧದ ದನಿಗಳನ್ನು ಅಡಗಿಸಲು ಯತ್ನಿಸುತ್ತಿದ್ದರೂ, ಅಂತಿಮ ನ್ಯಾಯಕ್ಕಾಗಿ ಸಂವಿಧಾನವನ್ನೇ ಆಶ್ರಯಿಸುತ್ತಿರುವ ಸಾಮಾನ್ಯ ಜನತೆಗೆ ನ್ಯಾಯಾಂಗವೇ ಸಾಂತ್ವನವನ್ನೂ ನೀಡುತ್ತಿದೆ.
ಎಫ್‌ಐಆರ್ ಎನ್ನುವುದು ಬೇಕಾಬಿಟ್ಟಿ ಬಳಕೆಯಾಗುತ್ತಿರುವ ಸಂದರ್ಭದಲ್ಲಿ ದೇಶದ ಕಾನೂನು ವ್ಯವಸ್ಥೆಯೂ ಇಂದು ಪ್ರಶ್ನೆಗೊಳಗಾಗಿದೆ. ಒಬ್ಬ ವ್ಯಕ್ತಿಯ ಭಾವನೆಯನ್ನು ಇಡೀ ಸಮುದಾಯದ ಭಾವನೆ ಎಂದು ಭಾವಿಸುವ ವಿಕೃತ ಸನ್ನಿವೇಶವನ್ನು ಎದುರಿಸುತ್ತಿದ್ದೇವೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವ ನೂರಾರು ಪ್ರಕರಣಗಳು ಇಂದು ಪ್ರವಾದಿಯ ನೆಪದಲ್ಲಿ, ರಾಮಕೃಷ್ಣರ ನೆಪದಲ್ಲಿ, ಹಿಂದೂ-ಮುಸ್ಲಿಂ-ಕ್ರೈಸ್ತ ಧರ್ಮಗಳ ಹೆಸರಿನಲ್ಲಿ ದಾಖಲಾಗುತ್ತಿವೆ. ವ್ಯಕ್ತಿಗತ ಭಾವನೆಯನ್ನು ಸಾಮುದಾಯಿಕ ಭಾವನೆಯೊಡನೆ ಸಮೀಕರಿಸುವ ಮೂಲಕ ವ್ಯಕ್ತಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಖ್ಯಾನವನ್ನೇ ವಿರೂಪಗೊಳಿಸುವ ಮಟ್ಟಿಗೆ ಎಫ್‌ಐಆರ್ ರಾಜಕಾರಣ ವ್ಯಾಪಕವಾಗುತ್ತಿದೆ. ತಮ್ಮ ಸಾಂಘಿಕ ಅಸ್ತಿತ್ವ ಮತ್ತು ಅಸ್ಮಿತೆಗಳನ್ನು ಉಳಿಸಿಕೊಳ್ಳಲು ಮತೀಯ ಸಂಘಟನೆಗಳು ಈ ಸ್ವಾತಂತ್ರ್ಯ ಹರಣದ ಕಾಲಾಳುಗಳಾಗಿವೆ. ಮುಸ್ಲಿಮರ ಪ್ರವಾದಿಯ ಬಗ್ಗೆ, ಹಿಂದೂಗಳ ದೇವರ ಬಗ್ಗೆ , ಕ್ರೈಸ್ತರ ಕ್ರಿಸ್ತನ ಬಗ್ಗೆ ಒಂದು ಸಣ್ಣ ಟೀಕೆ, ಒಬ್ಬ ವ್ಯಕ್ತಿಯ ಬದುಕನ್ನೇ ಅಸ್ತವ್ಯಸ್ತಗೊಳಿಸುವಂತಹ ಪರಿಸ್ಥಿತಿಯನ್ನು ನಾವೇ ನಿರ್ಮಿಸಿಕೊಂಡಿದ್ದೇವೆ. ಸಾಮಾನ್ಯ ಜನರ ಸಹಿಷ್ಣುತೆಯ ನಡುವೆಯೇ ಈ ಸಾಂಘಿಕ ಮತ್ತು ಸಾಂಸ್ಥಿಕ ಅಸಹಿಷ್ಣುತೆಯನ್ನೂ ಪೋಷಿಸುತ್ತಿರುವ ರಾಜಕೀಯ ಶಕ್ತಿಗಳು, ದೇಶದ ಕಾನೂನು ವ್ಯವಸ್ಥೆಯ ಸುತ್ತ ಮತ್ತಷ್ಟು ಸರಳುಗಳನ್ನು ನೆಟ್ಟು ಜನತೆಯ ಮಾತುಗಳನ್ನು ನಿರ್ಬಂಧಿಸುತ್ತಿವೆ.
ಈ ಸಂದರ್ಭದಲ್ಲಿ, ಗುಜರಾತ್‌ನ ಪಕ್ಷೇತರ ಶಾಸಕ ಜಿಗ್ನೇಶ್ ಮೆವಾನಿಯವರ ಜಾಮೀನು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಅಸ್ಸಾಂನ ಬರ್ಪೇಟಾ ಜಿಲ್ಲಾ ನ್ಯಾಯಾಧೀಶರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಆಡಳಿತ ವ್ಯವಸ್ಥೆಯ ಕಣ್ತೆರೆಸಬೇಕಿದೆ. “ ಸಾಕಷ್ಟು ಪರಿಶ್ರಮದಿಂದ ನಾವು ಸಂಪಾದಿಸಿರುವ ಪ್ರಜಾಪ್ರಭುತ್ವವನ್ನು ಪೊಲೀಸ್ ರಾಜ್ಯವನ್ನಾಗಿ ಮಾಡುವುದು ಊಹಿಸಲಸಾಧ್ಯ, ಅಸ್ಸಾಂ ಪೊಲೀಸರ ಈ ನಡೆ ವಿಕೃತಿಯಿಂದ ಕೂಡಿದೆ,,, ” ಎಂದು ಆಕ್ಷೇಪ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಅಪರೇಶ್ ಚಕ್ರವರ್ತಿ, “ಆರೋಪಿಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಪ್ರವೃತ್ತಿ ನಿತ್ಯವೂ ನಡೆಯುತ್ತಿದ್ದು ಇಂತಹುವನ್ನು ತಡೆಯಲು ಪೊಲೀಸ್ ಇಲಾಖೆಗೆ ಆದೇಶ ನೀಡಬೇಕು ” ಎಂದು ಗುವಹಾಟಿ ಹೈಕೋರ್ಟಿಗೆ ಮನವಿ ಮಾಡಿದ್ದಾರೆ. ಕೆಳಹಂತದ ನ್ಯಾಯಾಧೀಶರ ಈ ಹೇಳಿಕೆಗೆ ಗುವಹಾಟಿ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ನ್ಯಾಯಾಲಯದ ವ್ಯಾಪ್ತಿಯನ್ನೂ ಮೀರುವಂತಿದ್ದು, ಪೊಲೀಸ್ ಪಡೆಯನ್ನು ನಿರುತ್ಸಾಹಗೊಳಿಸುವಂತಿದೆ ಎಂದು ಬೇಸರ ವ್ಯಕ್ತಪಡಿಸಿದೆ. ಆದಾಗ್ಯೂ ನ್ಯಾ ಅಪರೇಶ್ ಚಕ್ರವರ್ತಿ ಅವರ ಮಾತುಗಳ ಹಿಂದಿನ ತಾರ್ಕಿಕತೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ಸುಳ್ಳು ಮೊಕದ್ದಮೆಗಳು ತತ್ಸಂಬಂಧಿ ಎಫ್‌ಐಆರ್‌ಗಳು ಏಕೆ ಸೃಷ್ಟಿಯಾಗುತ್ತಿವೆ ಎಂಬ ಪ್ರಶ್ನೆ ನಾಗರಿಕರನ್ನು ಕಾಡಬೇಕಿದೆ. ಕಾನೂನು ಪಾಲನೆ ಮಾಡಬೇಕಾದ ಪೊಲೀಸ್ ವ್ಯವಸ್ಥೆಗೆ ಸ್ವಾಯತ್ತತೆ ಇರುವುದಿಲ್ಲವಾದರೂ, ವಿವೇಚನಾಧಿಕಾರವನ್ನೂ ನೀಡದಂತೆ ರಾಜಕೀಯ ಪಕ್ಷಗಳು, ಅಧಿಕಾರಾರೂಢ ಸರ್ಕಾರಗಳು ಒತ್ತಡದಲ್ಲಿರಿಸುತ್ತವೆ. ರಾಜಕೀಯ ವಿರೋಧಿಗಳನ್ನು ಮಣಿಸಲು, ಪ್ರತಿರೋಧದ ದನಿಗಳನ್ನು ಅಡಗಿಸಲು ಮತ್ತು ಸರ್ಕಾರದ ಆಡಳಿತ ನೀತಿಯ ಟೀಕಾಕಾರರನ್ನು ತೆಪ್ಪಗಾಗಿಸಲು ಎಫ್‌ಐಆರ್‌ಗಳು ಒಂದು ಪ್ರಬಲ ಅಸ್ತ್ರವಾಗಿ ರೂಪುಗೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದರೂ, ಭಾರತದ ಆಡಳಿತ ವ್ಯವಸ್ಥೆಯಲ್ಲಿ ದಶಕಗಳಿಂದಲೂ ಇದು ಚಾಲ್ತಿಯಲ್ಲಿರುವುದನ್ನೂ ಅಲ್ಲಗಳೆಯಲಾಗುವುದಿಲ್ಲ. ರಾಜಕೀಯ ವೈರಿಗಳನ್ನು ತಾತ್ವಿಕವಾಗಿ, ಸೈದ್ಧಾಂತಿಕವಾಗಿ, ಸಾಂವಿಧಾನಿಕವಾಗಿ ಎದುರಿಸುವುದಕ್ಕಿಂತಲೂ ಹೆಚ್ಚಾಗಿ, ಕಾನೂನು ನಿಯಮಗಳ ಮೂಲಕ, ಮೊಕದ್ದಮೆಗಳ ಮೂಲಕ ಎದುರಿಸುವ ಒಂದು ಪರಂಪರೆಯನ್ನು ಎಲ್ಲ ಸರ್ಕಾರಗಳೂ ಪೋಷಿಸಿಕೊಂಡೇ ಬಂದಿವೆ. ನ್ಯಾ ಅಪರೇಶ್ ಚಕ್ರವರ್ತಿ ಅವರ ಕಳಕಳಿಯ ಮಾತುಗಳನ್ನು ಈ ಹಿನ್ನೆಲೆಯಲ್ಲೇ ನೋಡಬೇಕಿದೆ.
ಇದೇ ಸಂದರ್ಭದಲ್ಲೇ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಎನ್ ವಿ ರಮಣ ಅವರ ಸಂಯಮಪೂರ್ಣ ಮಾತುಗಳನ್ನೂ ನಾವಾದರೂ ಆಲಿಸಬೇಕಿದೆ. ನ್ಯಾಯಾಂಗದ ತೀರ್ಪುಗಳನ್ನು ಸರ್ಕಾರಗಳು ಅಲಕ್ಷಿಸುತ್ತಿರುವುದು, ಅಂತಿಮ ನಿರ್ಣಯದ ಹೊಣೆಯನ್ನು ನ್ಯಾಯಾಂಗದ ಮೇಲೆ ಹೊರಿಸುತ್ತಿರುವುದು, ಹೊಸ ಕಾನೂನುಗಳನ್ನು ಅಥವಾ ತಿದ್ದುಪಡಿಗಳನ್ನು ಜಾರಿಗೊಳಿಸುವಾಗ ಸಾರ್ವಜನಿಕ ಸಹಮತ ಪಡೆಯದೆ, ದೂರದೃಷ್ಟಿಯಿಲ್ಲದೆ ಕಾಯ್ದೆಗಳನ್ನು ಜಾರಿಗೊಳಿಸುವುದು, ಶಾಸಕಾಂಗದ ಈ ಪ್ರವೃತ್ತಿ ಹೆಚ್ಚಾಗುತ್ತಿರುವುದರಿಂದಲೇ ಸಾಮಾನ್ಯ ಜನರು ಅಂತಿಮ ನ್ಯಾಯಕ್ಕಾಗಿ ನ್ಯಾಯಾಂಗದ ಮೊರೆ ಹೋಗುತ್ತಿದ್ದಾರೆ ಇದು ನ್ಯಾಯಾಂಗದ ಹೊರೆಯನ್ನು ಹೆಚ್ಚಿಸಿದೆ ಎಂದು ನ್ಯಾ. ಎನ್ ವಿ ರಮಣ ವಿಷಾದ ವ್ಯಕ್ತಪಡಿಸಿದ್ದಾರೆ. ಸರ್ಕಾರಗಳು ನ್ಯಾಯಾಂಗದ ನಿರ್ದೇಶನಗಳನ್ನು ಸಮರ್ಪಕವಾಗಿ ಪಾಲಿಸದೆ ಹೋದಾಗ ಪ್ರಜೆಗಳು ಅನಿವಾರ್ಯವಾಗಿ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆಯ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಇಂತಹ ಪ್ರಕರಣಗಳು ಹೆಚ್ಚಾಗಿರುವುದನ್ನೂ ನ್ಯಾ ರಮಣ ವಿಷಾದದೊಂದಿಗೆ ಆಕ್ಷೇಪಿಸಿದ್ದಾರೆ.
“ ಆಡಳಿತ ನೀತಿಯನ್ನು ರೂಪಿಸುವುದು ನ್ಯಾಯಾಂಗದ ಹೊಣೆ ಅಲ್ಲವಾದರೂ, ಶಾಸಕಾಂಗವು ಉದ್ದೇಶಪೂರ್ವಕವಾಗಿಯೇ ಈ ಹೊರೆಯನ್ನು ನ್ಯಾಯಾಲಯಗಳಿಗೆ ವರ್ಗಾಯಿಸುತ್ತಿರುವುದರಿಂದ ಪ್ರಜೆಗಳು ತಮ್ಮ ಕುಂದುಕೊರತೆ, ಆಕ್ಷೇಪಗಳ ನಿವಾರಣೆಗಾಗಿ ನ್ಯಾಯಾಲಯಗಳ ಮೊರೆ ಹೋಗುತ್ತಾರೆ, ಈ ಮನವಿಗಳನ್ನು ನಿರಾಕರಿಸಲೂ ಸಾಧ್ಯವಾಗುವುದಿಲ್ಲ,,,,,” ಎಂದು ಹೇಳುವ ಮೂಲಕ ನ್ಯಾ ಎನ್ ವಿ ರಮಣ ಶಾಸಕಾಂಗದ ಕಾರ್ಯವೈಖರಿಯ ಮೇಲೆ ಪ್ರಹಾರ ನಡೆಸಿರುವುದು ಗಮನಾರ್ಹವಾಗಿದೆ. ಸರ್ಕಾರದ ವಿವಿಧ ವಿಭಾಗಗಳು ತಮ್ಮ ಕರ್ತವ್ಯವನ್ನು ನಿಭಾಯಿಸದೆ ಇರುವುದು ಮತ್ತು ಶಾಸಕಾಂಗವು ತನ್ನ ಹೊಣೆಗಾರಿಕೆಯನ್ನು ನಿರ್ವಹಿಸಲು ವಿಫಲವಾಗುತ್ತಿರುವುದು ನ್ಯಾಯಾಲಯಗಳ ಹಸ್ಪಕ್ಷೇಪಕ್ಕೆ ಎಡೆಮಾಡಿಕೊಡುವುದನ್ನು ನ್ಯಾ ರಮಣ ಒತ್ತಿ ಹೇಳಿದ್ದಾರೆ. ಈ ಸಂದರ್ಭದಲ್ಲೇ ಸಂವಿಧಾನದ ಮೂರೂ ಅಂಗಗಳು ತಮ್ಮ ತಮ್ಮ ಲಕ್ಷ್ಮಣರೇಖೆಯನ್ನು ಮೀರದಂತೆ ಜಾಗ್ರತೆ ವಹಿಸಲು ಕರೆ ನೀಡಿದ್ದಾರೆ. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳು ತಮ್ಮ ಸಾಂವಿಧಾನಿಕ ಇತಿಮಿತಿಗಳನ್ನು ಅರಿತು ಕಾರ್ಯ ನಿರ್ವಹಿಸುವುದರ ಮೂಲಕವೇ ಪ್ರಜಾಪ್ರಭುತ್ವವನ್ನು ಸಂರಕ್ಷಿಸಲು ಸಾಧ್ಯ ಎಂಬ ಜಾಣ್ಮೆಯ ಮಾತುಗಳು ಮುಖ್ಯ ನ್ಯಾಯಾಧೀಶರಿಂದ ಬಂದಿರುವುದು ಸಕಾಲಿಕವೂ ಆಗಿದೆ.
ಏಕೆಂದರೆ ಇಂದು ಜನಪ್ರತಿನಿಧಿಗಳಿಗೇ ತಮ್ಮ ಮುಂದಿರುವ ಸಾಂವಿಧಾನಿಕ ಲಕ್ಷ್ಮಣರೇಖೆಗಳು ಏನು ಎಂಬ ಪರಿಜ್ಞಾನ ಇಲ್ಲವಾಗಿದೆ. ನ್ಯಾಯಮೂರ್ತಿಗಳು ಬಳಸಿರುವ ʼ ಲಕ್ಷ್ಮಣರೇಖೆ ʼ ಎಂಬ ಪದವನ್ನು ನಿಘಂಟಿನ ಅರ್ಥದಲ್ಲಿ ಅಥವಾ ಪೌರಾಣಿಕ ಕಥನದ ಚೌಕಟ್ಟಿನಲ್ಲಿ ಗ್ರಹಿಸದೆ, ಭಾರತದ ಸಂವಿಧಾನ ಕಾರ್ಯಾಂಗ ಮತ್ತು ಶಾಸಕಾಂಗದ ಕಾರ್ಯನಿರ್ವಹಣೆಯಲ್ಲಿ ರೂಪಿಸಿರುವ ನಿರ್ದಿಷ್ಟ ಕಾನೂನಾತ್ಮಕ ಚೌಕಟ್ಟಿನಲ್ಲಿ ಗ್ರಹಿಸಬೇಕಿದೆ. ಚುನಾಯಿತ ಜನಪ್ರತಿನಿಧಿಗಳು ನೀಡುವ ಪ್ರತಿಯೊಂದು ಹೇಳಿಕೆಯೂ, ಸಾರ್ವಜನಿಕವಾಗಿ ಆಡುವ ಪ್ರತಿಯೊಂದು ಮಾತು ಸಹ ಈ ಚೌಕಟ್ಟಿನೊಳಗೇ ಇರಬೇಕಾಗುತ್ತದೆ. ಈ ನಿರ್ಬಂಧಗಳಿಗೆ ಒಂದು ನೈತಿಕ ಆಯಾಮವೂ ಇರುವುದನ್ನು ಶಾಸಕರು, ಸಂಸದರು, ಸಚಿವರು ಅರ್ಥಮಾಡಿಕೊಳ್ಳಬೇಕಿದೆ. ದುರಂತ ಎಂದರೆ ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳು ತಮ್ಮ ನೈತಿಕ ಲಕ್ಷ್ನಣರೇಖೆಯನ್ನು ಸಂಪೂರ್ಣವಾಗಿ ಮರೆತೇ ಹೋಗಿರುವಂತಿದೆ. ಸೌಜನ್ಯ, ಸಂಯಮ ಮತ್ತು ಸಂವೇದನೆಯೊಂದಿಗೇ ಸಾಂವಿಧಾನಿಕ ಮೌಲ್ಯಗಳಿಗೆ ಒಳಪಟ್ಟು ತಮ್ಮ ಹೇಳಿಕೆಗಳನ್ನು ನೀಡುವ ಜವಾಬ್ದಾರಿ ಇರುವ ಜನಪ್ರತಿನಿಧಿಗಳು ಎಲ್ಲ ಮೌಲ್ಯಗಳಿಗೂ ತಿಲಾಂಜಲಿ ನೀಡಿರುವುದರಿಂದಲೇ ರಾಜಕಾರಣ ಎನ್ನುವುದು ಹೊಲಸುಮೇಲೋಗರವಾಗಿದೆ. ಹಾಗಾಗಿಯೇ ದಿನನಿತ್ಯ ಶಾಸಕ-ಸಂಸದರಿಂದ ಹಿಂಸಾಪ್ರಚೋದಕ, ಅಶ್ಲೀಲ, ಅಸಭ್ಯ, ಸೌಜನ್ಯರಹಿತ ಹೇಳಿಕೆಗಳು ಪುಂಖಾನುಪುಂಖವಾಗಿ ಕೇಳಿಬರುತ್ತಲೇ ಇವೆ. ಅಮೂರ್ತ ಧಾರ್ಮಿಕ ನೆಲೆಗಳಲ್ಲಿ ಕಾಣುವ ನೈತಿಕತೆಯನ್ನು ವ್ಯಕ್ತಿಗತ ನೆಲೆಯಲ್ಲಿ ಅನುಸರಿಸಲು ಸಾಧ್ಯವಾಗದೆ ಇರಲು ಅಧಿಕಾರ ರಾಜಕಾರಣದ ಲೋಭ ಮತ್ತು ದ್ವೇಷ ರಾಜಕಾರಣದ ಧೋರಣೆಯೇ ಕಾರಣ ಎಂದು ಹೇಳಬೇಕಿಲ್ಲ. ನ್ಯಾಯಮೂರ್ತಿಗಳು ಉಲ್ಲೇಖಿಸಿರುವ ಲಕ್ಷ್ಮಣರೇಖೆ ಇಲ್ಲಿ ಹೆಚ್ಚು ಅನ್ವಯವಾಗುತ್ತದೆ.
ಸರ್ಕಾರಗಳು ತಾವೇ ರೂಪಿಸಿರುವ ಕಾನೂನುಗಳನ್ನು, ತಾವೇ ಪ್ರಮಾಣೀಕರಿಸುವ ಸಾಂವಿಧಾನಿಕ ನಿಯಮಗಳನ್ನು ಹೇಗೆ ಉಲ್ಲಂಘಿಸುತ್ತವೆ ಎನ್ನುವುದಕ್ಕೆ ಜಿಗ್ನೇಶ್ ಮೆವಾನಿಯಂತಹ ನೂರಾರು ಮೊಕದ್ದಮೆಗಳು ನಮ್ಮ ಕಣ್ಣೆದುರಿವೆ. ಇದು ಹೊಸ ವಿದ್ಯಮಾನವೂ ಅಲ್ಲ ಎಂಬುದನ್ನು ಗಮನಿಸಬೇಕು. ಕಳೆದ ನಾಲ್ಕೈದು ದಶಕಗಳಿಂದಲೂ ಆಡಳಿತಾರೂಢ ಸರ್ಕಾರಗಳು ರಾಜಕೀಯ ವೈರಿಗಳನ್ನು ಅಡಗಿಸಲು ಈ ತಂತ್ರಗಾರಿಕೆಯನ್ನು ಅನುಸರಿಸುತ್ತಲೇ ಬಂದಿವೆ. ಸರ್ಕಾರದ ವಿರುದ್ಧ ಮಾತನಾಡುವವರನ್ನು ಅಥವಾ ಸರ್ಕಾರದ ಆಡಳಿತ ನೀತಿಗಳ ಟೀಕಿಸುವವರನ್ನು, ಯಾವುದೋ ರಾಜ್ಯದಲ್ಲಿ ಸಲ್ಲಿಸಿದ ದೂರನ್ನು ಆಧರಿಸಿ, ಯಾವುದೇ ಸಂದರ್ಭದಲ್ಲಿ, ಯಾವುದೇ ರಾಜ್ಯದ ಪೊಲೀಸರ ಮೂಲಕ, ಯಾವುದೇ ರಾಜ್ಯದಲ್ಲಿ ಬಂಧಿಸಬಹುದು ಎನ್ನುವುದನ್ನು ಮೆವಾನಿ ಪ್ರಕರಣ ತೋರಿಸಿದೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾದ ವಿದ್ಯಮಾನವಾಗಿದೆ. ಇದನ್ನೇ ನ್ಯಾ ಎನ್ ವಿ ರಮಣ ಸೂಕ್ಷ್ಮವಾಗಿ ʼಲಕ್ಷ್ಮಣರೇಖೆʼಯ ಉದಾಹರಣೆಯೊಂದಿಗೆ ಹೇಳಿದ್ದಾರೆ ಎಂದು ಅರ್ಥೈಸಬಹುದು.
ಸಂವಿಧಾನಬದ್ಧತೆಯಿಂದ ತಮ್ಮ ಕರ್ತವ್ಯ ನಿರ್ವಹಣೆ ಮಾಡಬೇಕಾದ ಚುನಾಯಿತ ಜನಪ್ರತಿನಿಧಿಗಳು ಎಲ್ಲ ನಿಯಮಗಳನ್ನೂ ಉಲ್ಲಂಘಿಸಿ ಸ್ವೇಚ್ಚಾನುಸಾರ ತಮ್ಮ ಅಸಭ್ಯ, ಅಶ್ಲೀಲ ಹೇಳಿಕೆಗಳನ್ನು ನೀಡುತ್ತಿರುವ ಸಂದರ್ಭದಲ್ಲೇ , ಸಂವಿಧಾನದ ಚೌಕಟ್ಟಿನಲ್ಲೇ ತಮ್ಮ ನ್ಯಾಯಯುತ ಹಕ್ಕನ್ನು ಪ್ರತಿಪಾದಿಸುವ ಪ್ರಜೆಗಳು ಶಿಕ್ಷೆಗೊಳಗಾಗುತ್ತಿರುವುದು ಸಂವಿಧಾನದ ವಿಡಂಬನೆಯಷ್ಟೇ ಅಲ್ಲ ಪ್ರಜಾಪ್ರಭುತ್ವದ ವಿಡಂಬನೆಯೂ ಹೌದು. ಸಾರ್ವಭೌಮ ಜನತೆ ತಮಗೆ ಮತದಾನ ವ್ಯವಸ್ಥೆಯ ಮೂಲಕ ನೀಡಿರುವ ಅಧಿಕಾರವನ್ನು ಸ್ವೇಚ್ಚಾನುಸಾರ ಬಳಸಲಾಗುವುದಿಲ್ಲ ಎಂಬ ಪರಿಜ್ಞಾನ, ಪರಿವೆ ಜನಪ್ರತಿನಿಧಿಗಳಲ್ಲಿರಬೇಕಲ್ಲವೇ ? ತಾವು ಅಲಂಕರಿಸುವ ಹುದ್ದೆ, ಗಳಿಸಿರುವ ಸ್ಥಾನಮಾನ ಮತ್ತು ಪಡೆದಿರುವ ಸವಲತ್ತು ಇವೆಲ್ಲವೂ ಸಹ ನ್ಯಾ. ರಮಣ ಅವರು ಹೇಳಿದ ಲಕ್ಷ್ಮಣರೇಖೆಯ ವ್ಯಾಖ್ಯಾನಕ್ಕೊಳಪಡುತ್ತವೆ ಎನ್ನುವ ಅರಿವು ಇರಬೇಕಲ್ಲವೇ ? ಒಂದು ಸೌಹಾರ್ದಯುತ, ಮಾನವೀಯ, ಸಂವೇದನಾಶೀಲ ಸಮಾಜವನ್ನು ಕಟ್ಟುವ ಕನಸಿನೊಂದಿಗೆ ತನ್ನ ಪಯಣ ಆರಂಭಿಸಿದ ಭಾರತ ಇಂದು ʼ ನವ ಭಾರತ ʼದ ಹೆಗ್ಗಳಿಕೆಯೊಂದಿಗೆ ʼ ಅಮೃತಕಾಲ ʼದತ್ತ ದಾಪುಗಾಲು ಹಾಕುತ್ತಿದೆ. ಆದರೆ ಈ ಹಾದಿಯುದ್ದಕ್ಕೂ ದ್ವೇಷ ರಾಜಕಾರಣ, ಮತಾಂಧತೆ, ಜಾತಿಶ್ರೇಷ್ಠತೆ, ಮತೀಯವಾದ, ಅಧಿಕಾರಲೋಭದ ತುಣುಕುಗಳನ್ನೇ ಹರಡುತ್ತಾ ಮುಳ್ಳಿನ ಹಾದಿಗಳನ್ನು ನಿರ್ಮಿಸಲಾಗುತ್ತಿದೆ. ಈ ಮುಳ್ಳುಹಾಸುಗಳ ನಡುವೆಯೇ ನಾವು ದಾಟಬಾರದಾಗಿದ್ದ ಲಕ್ಷ್ಮಣರೇಖೆಗಳು ಹುದುಗಿಹೋಗುತ್ತಿವೆ.
ಸಂವಿಧಾನದ ಮೂರು ಅಂಗಗಳು, ಕಾರ್ಯಾಂಗ, ಶಾಸಕಾಂಗ ಮತ್ತು ಮಾಧ್ಯಮಗಳು, ಈ ಮುಳ್ಳುಹಾಸುಗಳನ್ನೇ ಮೃದು ಹಾಸಿಗೆಗಳೆಂದು ಭಾವಿಸುವಂತೆ ಜನಸಾಮಾನ್ಯರನ್ನು ಭ್ರಮಾಧೀನಗೊಳಿಸುತ್ತಿವೆ. ಈ ಮೂರೂ ಸ್ತಂಭಗಳ ಆಂತರ್ಯದಲ್ಲೇ ಅಡಗಿರುವ ಕೆಲವೇ ಕೆಲವು ಬೆಳಕಿನ ಕಿರಣಗಳು ಕತ್ತಲೆಯ ದಾರಿಯಲ್ಲಿ ಮಿಣುಕು ಹುಳಗಳಂತೆ ಪಥಿಕರಿಗೆ ಹಾದಿ ತೋರಿಸಲು ಯತ್ನಿಸುತ್ತಿವೆ. ಈ ಹಾದಿ ತೋರಿಸುವ ಪ್ರಯತ್ನಗಳಿಗೆ ದಾರಿ ದೀಪವಾಗಿ ನ್ಯಾಯಾಂಗ ತನ್ನ ಹೊಣೆಯನ್ನು ನಿರ್ವಹಿಸುತ್ತಿದೆ. ಸಂವಿಧಾನದ ಇತರ ಮೂರೂ ಅಂಗಗಳು ಕಿವಿ ಕಣ್ಣುಗಳನ್ನು ತೆರೆಯದಂತಾಗಿರುವ ಈ ಹೊತ್ತಿನಲ್ಲಿ, ನೊಂದವರ ಮತ್ತು ಬಾಧಿತರ ನೋವಿನ ದನಿಗಳಿಗೆ ಕಿವಿಯಾಗಿರುವ ನ್ಯಾಯಾಂಗವನ್ನು ಅಭಿನಂದಿಸುತ್ತಲೇ, ನಮ್ಮೊಳಗಿನ ನಾಗರಿಕ ಪ್ರಜ್ಞೆಯನ್ನೂ ಜಾಗೃತಗೊಳಿಸುವ ಪ್ರಯತ್ನಗಳು ನಡೆದರೆ, ಬಹುಶಃ ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವುದು ಸುಲಭವಾದೀತು. ಈ ಜವಾಬ್ದಾರಿ ಪ್ರಗತಿಪರ ಎಂದು ಬೆನ್ನುತಟ್ಟಿಕೊಳ್ಳುವ ಎಲ್ಲ ಸಾಂಘಿಕ ಶಕ್ತಿಗಳ ಮೇಲಿರುವುದನ್ನು ಮನಗಾಣಬೇಕಿದೆ. ಯೋಚಿಸೋಣವೇ ?