
ಶಿವಮೊಗ್ಗ: ಭದ್ರಾವತಿ ಶಾಸಕನ ಪುತ್ರನ ವರ್ತನೆ ನಾಗರೀಕ ಸಮಾಜ ತಲೆ ತಗ್ಗಿಸುವಂತಹುದು ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ. ಮೂರು ಜನರ ಮೇಲೆ ಎಫ್ಐಅರ್ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಶಾಸಕನ ಪುತ್ರನ ವಿರುದ್ಧ ಪ್ರಕರಣ ದಾಖಲಿಸಿಲ್ಲ. ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಶಾಸಕರು ಅವಾಚ್ಯ ಮಾತು ಆಡಿದ್ದಾರೆ ಎಂದು ಪ್ರಕರಣ ದಾಖಲಿಸಲಾಯಿತು. ಆದರೆ ಇಲ್ಲಿ ಶಾಸಕರ ಸುಪುತ್ರನ ಧ್ವನಿ ಸ್ಪಷ್ಟವಾಗಿದ್ದರು ಪ್ರಕರಣ ದಾಖಲಾಗಿಲ್ಲ ಎಂದಿದ್ದಾರೆ.
ಜ್ಯೋತಿ ಎಂಬ ಪ್ರಾಮಾಣಿಕ ಮಹಿಳಾ ಅಧಿಕಾರಿಯ ವಿರುದ್ಧ ಅತ್ಯಂತ ಕೆಟ್ಟ ಭಾಷೆಯಲ್ಲಿ ನಿಂದಿಸಿದ್ದಾರೆ. ನನ್ನ ಮೇಲೆ ಲಾರಿ ಹತ್ತಿಸಿ ಸಾಯಿಸುವ ಕೆಲಸ ನಡೆಯಿತು ಎಂದು ಅವರೇ ಹೇಳಿದ್ದಾರೆ ಎಂದಿರುವ ನಿಖಿಲ್ ಕುಮಾರಸ್ವಾಮಿ, ಭದ್ರಾವತಿಯಲ್ಲಿ ಶಾಸಕರ ಮಾತು ನಡೆಯುತ್ತಿಲ್ಲ. ಬದಲಿಗೆ ಅವರ ಮಕ್ಕಳ ದಬ್ಬಾಳಿಕೆ – ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಜನಸಾಮಾನ್ಯರ ಮೇಲೆ ಅಟ್ರಾಸಿಟಿ ಹಾಗೂ ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದೆ ಎಂದಿದ್ದಾರೆ.

ಭದ್ರಾವತಿಯಲ್ಲಿ ಕೀಳು ಮಟ್ಟದ ರಾಜಕಾರಣ ನಡೆಯುತ್ತಿದೆ, ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ಎದುರಿಸುವ ಕೆಲಸ ನಡೆಯುತ್ತಿದೆ. ಭದ್ರಾವತಿಯಲ್ಲಿ ಪೊಲೀಸ್ ಅಧಿಕಾರಿಗಳು ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಆಡಿಯೋದಲ್ಲಿ ಮಾತನಾಡಿದ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿ ಎಂದು ಆಗ್ರಹ ಮಾಡಿದ್ದಾರೆ. ಭದ್ರಾವತಿಯಲ್ಲಿ ಪ್ರಾಮಾಣಿಕ ಅಧಿಕಾರಿ ಕೆಲಸ ಮಾಡುವಂತಹ ಪರಿಸ್ಥಿತಿ ಇಲ್ಲ. ಬೇರೆ ಪ್ರಕರಣದಲ್ಲಿ ಆಡಳಿತ ಪಕ್ಷದ ಸಚಿವೆಯ ಪರವಾಗಿ ಕ್ರಮ ಕೈಗೊಳ್ಳಲಾಯಿತು. ಭದ್ರಾವತಿಯಲ್ಲಿ ಮರಳು, ಇಸ್ಪೀಟ್, ಗಾಂಜಾ ಮತ್ತಿತರ ಮಾಫಿಯಾ ಕೆಲಸ ಮಾಡುತ್ತಿದೆ ಎಂದು ದೂರಿದ್ದಾರೆ.

ಭದ್ರಾವತಿಯಲ್ಲಿ ಮಹಿಳಾ ಅಧಿಕಾರಿಗೆ ನಿಂದಿಸಿ ಬೆದರಿಕೆ ಹಾಕಿದ ಪ್ರಕರಣ ಖಂಡಿಸಿ ಭದ್ರಾವತಿ ತಾಲೂಕು ಜೆಡಿಎಸ್ ಘಟಕದ ವತಿಯಿಂದ ಪ್ರತಿಭಟನೆ ಮಾಡಲಾಯ್ತು. ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಭಾಗಿಯಾಗಿದ್ದರು. ಹೋರಾಟ ಜೆಡಿಎಸ್ ಪಕ್ಷಕ್ಕೆ ಹೊಸದೇನಲ್ಲ, ಈ ಭಾಗದ ಶಾಸಕರ ದೌರ್ಜನ್ಯ ದಬ್ಬಾಳಿಕೆ ಹೆಚ್ಚು ದಿನ ನಡೆಯುವುದಿಲ್ಲ ಎಂದಿದ್ದಾರೆ. ತಾಲೂಕಿನ ಜನರ ಅಭಿವೃದ್ಧಿಗೆ ನೀವು ಯಾವುದೇ ಕೆಲಸ ಮಾಡಿಲ್ಲ. ಬದಲಿಗೆ ಮರಳು, ಮಟ್ಕಾ ಮಾಫಿಯಾ ಪರವಾದ ಕೆಲಸ ಮಾಡಿದ್ದೀರಾ..? ಶಾಸಕರ ಕುಟುಂಬಸ್ಥರಿಗೆ ಅಧಿಕಾರಿಗಳು ತಲೆ ಭಾಗಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಶಾಸಕರ ಕುಟುಂಬಸ್ಥರ ದೌರ್ಜನ್ಯ ಮಿತಿ ಮೀರಿದೆ ಎಂದಿದ್ದಾರೆ.

ತಮ್ಮ ವಿರುದ್ಧ ಮಾತನಾಡುವ ಪ್ರತಿಯೊಬ್ಬರನ್ನು ಸರ್ಕಾರ ಹತ್ತಿಕ್ಕುತ್ತಿದೆ ಎಂದಿರುವ ನಿಖಿಲ್ ಕುಮಾರಸ್ವಾಮಿ, ಸರ್ಕಾರಕ್ಕೆ ತಾಕತ್ತಿದ್ದರೆ ಶಾಸಕರ ಪುತ್ರನ ವಿರುದ್ಧ ದೂರು ದಾಖಲಿಸಿ ತನಿಖೆ ಮಾಡಲಿ, ಆಗ ನಿಮ್ಮ ಬದ್ಧತೆಯನ್ನು ಜನ ಮೆಚ್ಚುತ್ತಾರೆ ಎಂದಿದ್ದಾರೆ. ಅಧಿಕಾರಿಗಳು ಇಂದು ಭದ್ರಾವತಿಯಲ್ಲಿ ಕೆಲಸ ಮಾಡಲು ಹೆದರುತ್ತಿದ್ದಾರೆ. ಭದ್ರಾವತಿಯ ಶಾಸಕರು ಬೀದಿಯಲ್ಲಿ ಹರಾಜು ಹಾಕುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣಾ ಸಂದರ್ಭದಲ್ಲಿ ಜನ ನಿಮಗೆ ಮುಂದೆ ತಕ್ಕ ಪಾಠ ಕಲಿಸಲಿದ್ದಾರೆ. ಭದ್ರಾವತಿಯ ಪೊಲೀಸರು ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲದರ ವಿರುದ್ಧ ಪಕ್ಷದ ಹೋರಾಟ ನಿರಂತರ ಹೋರಾಟ ನಡೆಸಲಿದೆ ಎಂದಿದ್ದಾರೆ.