–ನಾ ದಿವಾಕರ
ಕನ್ನಡದ ಸಾಂಸ್ಕೃತಿಕ ರಾಯಭಾರಿ ಎಂದೇ ಹೇಳಬಹುದಾದ ಹಿರಿಯ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರ ಸುತ್ತ ಸೃಷ್ಟಿಯಾಗಿರುವ ವಿವಾದವನ್ನು ರಾಜ್ಯ ಸರ್ಕಾರ ಶೀಘ್ರವೇ ಕೊನೆಗೊಳಿಸಬೇಕಿದೆ. ತಮ್ಮ 90ರ ಹರೆಯದಲ್ಲೂ ತಾವು ಬದುಕಿಬಂದ ಸಂಗೀತವಾಹಿನಿಯಲ್ಲಿ ಜೀವನವನ್ನು ಆಸ್ವಾದಿಸುತ್ತಿರುವ ಪಂಡಿತ್ ತಾರಾನಾಥ್ ಅವರನ್ನು ಇಂತಹ ಒಂದು ವಿವಾದದಲ್ಲಿ ಎಳೆದು ತಂದಿರುವುದೇ ಅಕ್ಷಮ್ಯ. ನಡೆದ ಘಟನೆಗಳ ಸತ್ಯಾಸತ್ಯತೆಗಳು ಏನೇ ಇದ್ದರೂ, ಪತ್ರಿಕೆಯಲ್ಲಿ ವರದಿಯಾದ ವಿಷಯಗಳು, ನಂತರದಲ್ಲಿ ಸಾಮಾಜಿಕ ತಾಣಗಳಲ್ಲಿ ಹರಿದಾಡಿದ ʼ ಸಂಚಲನ ಮೂಡಿಸುವ ʼ ಸುದ್ದಿಗಳು ಇಡೀ ವಿವಾದವನ್ನು ಮತ್ತಷ್ಟು ಜಟಿಲಗೊಳಿಸಿವೆ.
ಇಲ್ಲಿ ಎರಡು ಪ್ರಶ್ನೆಗಳು ಎದುರಾಗುತ್ತವೆ. ಮೊದಲನೆಯದು ಈ ಸುದ್ದಿಯನ್ನು ನಂಬಲರ್ಹ ಮೂಲಗಳಿಂದ ಖಚಿತಪಡಿಸಿ ಪ್ರಕಟಿಸಿದ ಪತ್ರಕರ್ತ ಮಿತ್ರ ಹಾಗೂ ಆಂದೋಲನದಂತಹ ವಿಶ್ವಾಸಾರ್ಹ ಪತ್ರಿಕೆಯ ವಿಶ್ವಾಸಾರ್ಹತೆ. ಎರಡನೆಯದು ಪಂಡಿತ್ ರಾಜೀವ್ ತಾರಾನಾಥ್ ಅವರ ಪ್ರಾಮಾಣಿಕ ಬದುಕು ಮತ್ತು ಅಭಿವ್ಯಕ್ತಿ. ಎಂದೂ ಯಾರಿಗೂ ರಾಜಿಯಾಗದೆ ತಮ್ಮ ಸಂಗೀತ ಲೋಕದಲ್ಲಿ ಬದುಕು ಸವೆಸಿರುವ ತಾರಾನಾಥ್ ಅವರ ಬರಹಗಳನ್ನು, ಜೀವನದ ಹಾದಿಯನ್ನು ಬಲ್ಲವರಿಗೆ ಅವರ ಬಗ್ಗೆ ಹೆಚ್ಚಿನದಾಗಿ ಏನೂ ಹೇಳಬೇಕಿಲ್ಲ. ಆಂದೋಲನ ಪತ್ರಿಕೆಯ ವಸ್ತುನಿಷ್ಠತೆಯ ಬಗ್ಗೆಯು ಅನುಮಾನ ವ್ಯಕ್ತಪಡಿಸಲಾಗುವುದಿಲ್ಲ. ಈ ಎರಡು ನಿಷ್ಠೆ ಪ್ರಾಮಾಣಿಕತೆಯ ಬಿಂದುಗಳ ನಡುವೆ ಢಾಳಾಗಿ ಕಾಣುವುದು ಕನ್ನಡ ಸಾಂಸ್ಕೃತಿಕ ವಲಯವನ್ನು ಕಾಡುತ್ತಿರುವ ಅಧಿಕಾರಶಾಹಿಯ ಭ್ರಷ್ಟತೆ.
ಕನ್ನಡದ ಸಾಂಸ್ಕೃತಿಕ ವಲಯ ಮತ್ತು ಅದನ್ನು ಪ್ರತಿನಿಧಿಸುವ ಆಡಳಿತ ವ್ಯವಸ್ಥೆಯ ಸಾಂಸ್ಥಿಕ ಚೌಕಟ್ಟು ಭ್ರಷ್ಟಾಚಾರ ಮುಕ್ತವಾಗಿದೆ ಎಂದು ಎದೆತಟ್ಟಿ ಹೇಳುವ ದಾರ್ಷ್ಟ್ಯ ಖಂಡಿತವಾಗಿಯೂ ಸರ್ಕಾರಕ್ಕೆ ಇರಲು ಸಾಧ್ಯವಿಲ್ಲ. ಇದರ ಒಂದು ಝಲಕ್ ಇಡೀ ಪ್ರಹಸನದಲ್ಲಿ ಕಂಡುಬಂದಿದೆ. ಸಾಹಿತ್ಯ, ಕಲೆ, ಸಂಗೀತ, ರಂಗಭೂಮಿ ಹೀಗೆ ಎಲ್ಲ ಸಾಂಸ್ಕೃತಿಕ ವಲಯಗಳಲ್ಲೂ ತಮ್ಮದೇ ಆದ ಆಧಿಪತ್ಯವನ್ನು ಸಾಧಿಸಲು ಎಲ್ಲ ರೀತಿಯ ರಾಜಕೀಯ, ಸಾಮುದಾಯಿಕ ಪ್ರಭಾವಗಳನ್ನು ಬಳಸುವ ಅಧಿಕಾರಶಾಹಿಯು ಕನ್ನಡದ ಸಾಂಸ್ಕೃತಿಕ ಜಗತ್ತನ್ನೇ ಕಲುಷಿತಗೊಳಿಸಿರುವುದು ಗುಟ್ಟಿನ ಮಾತೇನಲ್ಲ. ಇದನ್ನು ಸರಿಪಡಿಸುವ ಕ್ಷಮತೆಯೂ ಸರ್ಕಾರಗಳಿಗೆ ಇಲ್ಲವಾಗಿದೆ. ಕನ್ನಡ ಸಾಂಸ್ಕೃತಿಕ ವಲಯ ಕೇವಲ ಎಡ-ಬಲ-ಮಧ್ಯ ಎನ್ನುವ ಸೈದ್ದಾಂತಿಕ ಬಿರುಕುಗಳಿಂದ ಬಳಲುತ್ತಿಲ್ಲ, ಇದಕ್ಕಿಂತಲೂ ಹೆಚ್ಚಾಗಿ ಅಧಿಕಾರಶಾಹಿಯ ವ್ಯಾಪಕ ಹಿಡಿತದಿಂದ ಬಳಲುತ್ತಿದೆ.
ಇದು ಹೊಸ ವಿದ್ಯಮಾನವೇನೂ ಅಲ್ಲ. ಸರ್ಕಾರಗಳು ಬದಲಾಗುತ್ತಿದ್ದರೂ, ಸಾಂಸ್ಕೃತಿಕ ಸಂಸ್ಥೆಗಳ ಕಾರ್ಯವೈಖರಿಯಾಗಲೀ, ಕಾರ್ಯಶೈಲಿಯಾಗಲೀ ಬದಲಾಗದಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಈಗ ಉದ್ಭವಿಸಿರುವ ವಿವಾದದಿಂದ ಮೈಸೂರಿನ ಸಾಂಸ್ಕೃತಿಕ ಕಣ್ಮಣಿ ಎಂದೇ ಗುರುತಿಸಲ್ಪಡುವ ಹಿರಿಯ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರನ್ನು ಮುಕ್ತಗೊಳಿಸುವುದು ಸಾಂಸ್ಕೃತಿಕ ವಲಯದ ಜವಾಬ್ದಾರಿಯಾಗಿದೆ. ಸರ್ಕಾರದ ನೈತಿಕ ಕರ್ತವ್ಯವೂ ಆಗಿದೆ. ತಮ್ಮ ಇಡೀ ಜೀವನವನ್ನೇ ಸಂಗೀತದ ಮೂಲಕ ನಾಡಿನ ಸಂಸ್ಕೃತಿಗೆ ಮೀಸಲಿರಿಸಿ ಪ್ರಾಮಾಣಿಕ ಬದುಕು ನಡೆಸಿದ ವಯೋವೃದ್ಧ ಕಲಾವಿದರನ್ನು ಇಂತಹ ವಿವಾದಗಳಲ್ಲಿ ಸಿಲುಕಿಸುವುದೇ ಅಕ್ಷಮ್ಯ. ಈ ವಿವಾದದ ಹಿಂದೆ ಮೂಲತಃ ಇರುವುದು ಅಧಿಕಾರಶಾಹಿಯ ಭ್ರಷ್ಟಾಚಾರವೇ ಹೊರತು ಸಾಂಸ್ಕೃತಿಕ ವಲಯದ ಅವಾಂತರಗಳಲ್ಲ. ಸಾಂಸ್ಕೃತಿಕ-ಸಾಹಿತ್ಯಕ ವಲಯಗಳಲ್ಲೂ ಈ ಭ್ರಷ್ಟ ಆಡಳಿತ ವ್ಯವಸ್ಥೆಯೊಡನೆ ರಾಜಿಯಾಗುವ ಕೆಲವು ಮನಸುಗಳು ಇರುವುದನ್ನು ಅಲ್ಲಗಳೆಯಲಾಗದು. ಆದರೆ ಅಂತಹ ಕೆಲವೇ ಮಂದಿಗಾಗಿ ಇಡೀ ಸಾಂಸ್ಕೃತಿಕ ಕ್ಷೇತ್ರವನ್ನೂ ದೂಷಿಸಲಾಗುವುದಿಲ್ಲ.
ಪ್ರಜ್ಞಾವಂತ ಸಮಾಜವಾಗಿ ನಾವು ಕನ್ನಡದ ಸಾಂಸ್ಕೃತಿಕ ವಾತಾವರಣವನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಅಧಿಕಾರಶಾಹಿಯ ಮೂಲಕ, ರಾಜಕೀಯ ಹಸ್ತಕ್ಷೇಪದ ಮುಖಾಂತರ ನುಸುಳಿರುವ ಭ್ರಷ್ಟಾಚಾರದ ನೆರಳನ್ನು ಕೊನೆಗೊಳಿಸುವ ಪ್ರಯತ್ನ ಮಾಡಬೇಕಿದೆ. ಸಾಂಸ್ಕೃತಿಕ ಕ್ಷೇತ್ರವನ್ನು ಸ್ವಾಯತ್ತಗೊಳಿಸಿ, ಸ್ವತಂತ್ರವಾಗಿ ತನ್ನ ಕಾರ್ಯ ನಡೆಸಲು ಸರ್ಕಾರ ಅವಕಾಶ ಮಾಡಿಕೊಡಬೇಕಿದೆ. ಈ ಪ್ರಯತ್ನದ ನಡುವೆಯೇ ಹಿರಿಯ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರನ್ನು ಇಡೀ ವಿವಾದದಿಂದ ಮುಕ್ತಗೊಳಿಸಬೇಕಿದೆ. ಈ ಹಿರಿಯ ಸಂಗೀತ ಭೀಷ್ಮರ ಕ್ಷಮೆ ಕೋರುತ್ತಲೇ ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ತಿಳಿಗೊಳಿಸಬೇಕಿದೆ.
-೦-೦-೦-