ಒಂದು ಪ್ರಾಮಾಣಿಕ-ಪಾರದರ್ಶಕ ಆಡಳಿತ ವ್ಯವಸ್ಥೆಯಲ್ಲಿ ಸಾರ್ವಜನಿಕ ಸೌಲಭ್ಯಗಳನ್ನು ಒದಗಿಸುವ ಕಾಮಗಾರಿಗಳು ಮೂಲತಃ ಜನೋಪಯೋಗಿಯಾಗಿರಬೇಕು ಮತ್ತು ಬಹುಮುಖ್ಯವಾಗಿ ಬಳಕೆಗೆ ಯೋಗ್ಯವಾಗಿರಬೇಕು. ಬಳಕೆ ಯೋಗ್ಯ ಎಂದ ಕೂಡಲೇ ಥಳುಕುಬಳುಕಿನ ನವಿರಾದ ಸುಂದರವಾಗಿ ಕಾಣುವ ನಿರ್ಮಾಣಗಳೇ ಎಂದು ಭಾವಿಸಬೇಕಿಲ್ಲ. ಜನಸಾಮಾನ್ಯರ ಬಳಕೆಗೆ ಯೋಗ್ಯವಾಗಿರಬೇಕಾದರೆ ಈ ಕಾಮಗಾರಿಗಳ ಮೂಲಕ ನಿರ್ಮಾಣವಾಗುವ ಸೇತುವೆಗಳು, ರಸ್ತೆಗಳು, ಹೆದ್ದಾರಿಗಳು, ಮೇಲ್ಸೇತುವೆಗಳು ಹಾಗೂ ಆಧುನಿಕ ಟ್ರೆಂಡ್ ಆಗಿರುವ ದಶಪಥ ಎಕ್ಸ್‌ಪ್ರೆಸ್ ಹೆದ್ದಾರಿಗಳು ಅವುಗಳನ್ನು ಬಳಸುವ ಸಾಮಾನ್ಯ ಜನತೆಗೆ ಸುರಕ್ಷೆಯನ್ನು ನೀಡುವಂತಿರಬೇಕು. ಸುರಕ್ಷತೆ ಎಂದರೆ ಅಪಘಾತಗಳಿಗೆ ಅವಕಾಶವಿಲ್ಲದಂತೆ ತಿರುವುಗಳನ್ನು, ರಸ್ತೆ ಡುಬ್ಬಗಳನ್ನು, ವಿಭಜಕಗಳನ್ನು ನಿರ್ಮಿಸಬೇಕು. ಪ್ರತಿಯೊಂದು ತಿರುವಿಗೂ ಮುನ್ನ ಎಚ್ಚರಿಕೆಯ ಫಲಕಗಳು ಕಣ್ಣಿಗೆ ಕಾಣುವಂತೆ ಇರಬೇಕು.

ಬಂಡವಾಳಶಾಹಿ ಆರ್ಥಿಕತೆಯಲ್ಲಿ ಸರ್ಕಾರಗಳು ಈ ಹೊಣೆಯನ್ನು ಹೊರುವುದಿಲ್ಲ. ಹಾಗಾಗಿ ಉತ್ತರದಾಯಿತ್ವದಿಂದಲೂ ಪಾರಾಗುತ್ತವೆ. ಈ ರೀತಿಯ ಸಾರ್ವಜನಿಕ ಕಾಮಗಾರಿಗಳೆಲ್ಲವೂ ಖಾಸಗಿ ಗುತ್ತಿಗೆದಾರರ ಮೂಲಕ, ಟೆಂಡರ್‌ಗಳ ಮೂಲಕ ಬಿಕರಿಯಾಗುವುದರಿಂದ, ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಮಾಡುವ ಗುತ್ತಿಗೆದಾರರು ಇದರ ನಿರ್ಮಾತೃಗಳಾಗುತ್ತಾರೆ. ಆದರೆ ಟೆಂಡರ್‌ಗಳಿಗೆ ಬಿಡ್ ಮಾಡುವ ಪ್ರಕ್ರಿಯೆಯಲ್ಲೇ ಅಡಗಿರುವ ಒಳಪಾವತಿಗಳ ಒಂದು ನಿಯಮ ಮಾರುಕಟ್ಟೆ ಪ್ರಕ್ರಿಯೆಯ ಒಂದು ಭಾಗವಾಗಿಯೇ ರೂಪುಗೊಂಡಿರುತ್ತದೆ. ಗುತ್ತಿಗೆಯನ್ನು ತಮ್ಮ ಪಾಲಿಗೆ ಪಡೆದುಕೊಳ್ಳಲು ಈ ಒಳಪಾವತಿಗಳು ಭ್ರಷ್ಟ ಅಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ. ಈ ಅಕ್ರಮ ಹಣದ ಹರಿವು ಆಡಳಿತ ಕೇಂದ್ರಗಳಿಗೂ ವಿಸ್ತರಿಸುವುದರಿಂದಲೇ ಇಡೀ ಆಡಳಿತ ವ್ಯವಸ್ಥೆಯೇ ಭ್ರಷ್ಟಾಚಾರದ ಕೂಪವಾಗಿ ಕಾಣುತ್ತದೆ. ಪಶ್ಚಿಮ ಬಂಗಾಲ-ನೊಯ್ಡಾದಿಂದ ಬೆಂಗಳೂರಿನವರೆಗೂ ಕಂಡುಬರುವ ಸೇತುವೆ-ಮೆಟ್ರೋ ಪಿಲ್ಲರ್-ರಸ್ತೆ ಕುಸಿತಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಭ್ರಷ್ಟತೆಯ ವಿರಾಟ್ ಸ್ವರೂಪವೇ ತೆರೆದುಕೊಳ್ಳುತ್ತದೆ.
ಆಳುವ ಸರ್ಕಾರಗಳ ಬಾಧ್ಯತೆ
ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಸಹ ಆಡಳಿತ ಕೇಂದ್ರಗಳು ಮುಖ್ಯವಾಗಿ ಗುತ್ತಿಗೆದಾರರ ರಕ್ಷಣೆಗೆ ನಿಲ್ಲುವುದರಿಂದ, ಈ ಕುಸಿದ ಸೇತುವೆಗಳ ಭಗ್ನಾವಶೇಷಳಂತೆಯೇ ಅದರ ಹಿಂದಿನ ಭ್ರಷ್ಟತೆಯ ಮೂಲಗಳೂ ಮರೆಯಾಗುತ್ತವೆ. ಗುಜರಾತ್‌ನ ಮೋರ್ಬಿ ಸೇತುವೆ, ಬಿಹಾರದ ಸುಲ್ತಂಗಂಜ್-ಅಗುವಾನಿ ಘಾಟ್ ಸೇತುವೆ, ದಕ್ಷಿಣ ಕೋಲ್ಕತ್ತಾದ ಮಜೆರ್‌ಹತ್ ಮತ್ತು ವಿವೇಕಾನಂದ ಸೇತುವೆ ಈ ಎಲ್ಲ ಅವಘಡಗಳೂ ಮಾನವ ನಿರ್ಮಿತ ಅನಾಹುತ ಅಥವಾ ದುರಂತಗಳು. ವಿವೇಕಾನಂದ ಸೇತುವೆ ಕುಸಿದಾಗ ಅದರ ನಿರ್ಮಾಣದ ಗುತ್ತಿಗೆ ಪಡೆದಿದ್ದ ಮಹಾನುಭಾವರೊಬ್ಬರು ʼಅದು ದೇವರ ಕೃತ್ಯʼ ಎಂದು ಹೇಳುವ ಮೂಲಕ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿದ್ದರು. ಕೇದಾರನಾಥದಲ್ಲಿ ಸಂಭವಿಸಿದ ಅನಾಹುತದ ಬಗ್ಗೆಯೂ ಇದೇ ರೀತಿಯ ಅಭಿಪ್ರಾಯ ಪಂಡಿತೋತ್ತಮರಿಂದ ಕೇಳಿಬಂದಿತ್ತು. ಏತನ್ಮಧ್ಯೆ ಈ ಸಾವುಗಳ ನಡುವೆಯೂ ಧರ್ಮರಾಜಕಾರಣದ ಸುಳಿವುಗಳನ್ನು ಶೋಧಿಸುವ ವಾಟ್ಸಾಪ್ ವಿಶ್ವವಿದ್ಯಾಲಯದ ಚಿಂತನಕಟ್ಟೆಗಳು ಅಪರಾಧಿಗಳನ್ನು ಘೋಷಿಸಲು ಸದಾ ಸನ್ನದ್ಧವಾಗಿರುತ್ತವೆ. ಈ ಗೊಂದಲಗಳ ನಡುವೆಯೇ ನಾವು ಅಮಾಯಕರಿಗೆ ಜೀವಕಂಟಕವಾಗುವ ಕಾಮಗಾರಿಗಳ ಬಗ್ಗೆ ಗಂಭೀರ ಆಲೋಚನೆ ಮಾಡಬೇಕಿದೆ.

ಏನೇ ಇರಲಿ ಈ ಅವಘಡಗಳಿಗೆ ಮತ್ತು ಅದರಿಂದಾಗುವ ಸಾವು ನೋವುಗಳಿಗೆ ಕಾರಣ ಯಾರು ? ಈ ಪ್ರಶ್ನೆ ಎದುರಾದಾಗ ನಮ್ಮ ಆಡಳಿತ ವ್ಯವಸ್ಥೆಯ ಉತ್ತರ ಕುಸಿದ ಸೇತುವೆಗಳಷ್ಟೇ ದುರ್ಬಲವಾಗಿ ಕಾಣುತ್ತದೆ. ಏಕೆಂದರೆ ಯಾವ ಅವಘಡದಲ್ಲೂ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಕ್ಷೆಯಾಗುವುದಿರಲಿ, ವಿಚಾರಣೆಯೂ ನಡೆಯುವುದಿಲ್ಲ. ರೈಲ್ವೆ ದುರಂತಗಳಲ್ಲಿ ಈ ರೀತಿಯ ವಿಚಾರಣೆ ನಡೆಯುವುದಾದರೂ, ಉತ್ತರದಾಯಿತ್ವವಿಲ್ಲದ ಆಡಳಿತ ವ್ಯವಸ್ಥೆಯಲ್ಲಿ ಇಂತಹ ವಿಚಾರಣೆಗಳು ವಿಳಂಬವಾದಷ್ಟೂ ತಪ್ಪು ಮಾಡಿದವರು ಸುರಕ್ಷಿತವಾಗಲು ಸಾಕಷ್ಟು ಅವಕಾಶಗಳೂ ಲಭ್ಯವಾಗುತ್ತವೆ. ಇಲಾಖೆಗಳಿಗೆ ಸಂಬಂಧಪಟ್ಟ ಸಚಿವರಾಗಲೀ, ಕ್ಷೇತ್ರ ಪಾಲಕ ಶಾಸಕ-ಸಂಸದರಾಗಲೀ ಇಂತಹ ಅವಘಡಗಳಿಗೂ ತಮಗೂ ಸಂಬಂಧವೇ ಇಲ್ಲದವರಂತೆ ಇದ್ದುಬಿಡುತ್ತಾರೆ. ಉತ್ತರದಾಯಿತ್ವ ಇಲ್ಲದ ಯಾವುದೇ ವ್ಯವಸ್ಥೆಯಲ್ಲಿ ಇದು ಸ್ವಾಭಾವಿಕವಾಗಿ ಕಾಣುತ್ತದೆ.

ಮೂಲ ಸೌಕರ್ಯಗಳ ನಿರ್ಮಾಣ, ನಿಯಂತ್ರಣ ಹಾಗೂ ಬಳಕೆಯೋಗ್ಯವಾದ ನಿರ್ವಹಣೆ ಈ ಮೂರೂ ಪ್ರಕ್ರಿಯೆಗಳಲ್ಲಿ ಮೂಲತಃ ಪಾರದರ್ಶಕತೆ ಇಲ್ಲದಿರುವುದರಿಂದ, ಆಡಳಿತಾರೂಢ ಸರ್ಕಾರವಾಗಲೀ , ಅಧಿಕಾರಶಾಹಿಯಾಗಲೀ ಅಥವಾ ʼ ಜನ ʼ ಪ್ರತಿನಿಧಿಗಳಾಗಲೀ ಸಾಮಾನ್ಯ ಜನತೆಗೆ ಜೀವಕಂಟಕವಾಗುವ ಇಂತಹ ಕಾಮಗಾರಿಗಳ ಬಗ್ಗೆ ಅಥವಾ ಅಂತಹ ಗುತ್ತಿಗೆದಾರ ಉದ್ದಿಮೆಗಳ ಬಗ್ಗೆ ಜಾಗರೂಕತೆಯಿಂದ ಗಮನ ನೀಡುವುದಿಲ್ಲ. ಅಭಿವೃದ್ಧಿ ಪಥದಲ್ಲಿ ಇಡೀ ಆರ್ಥಿಕತೆಯೇ ಆಧುನಿಕತೆಯತ್ತ ಧಾವಿಸುತ್ತಿರುವಾಗ ಬಂಡವಾಳದ ಹರಿವು ಎಷ್ಟು ಸಹಜವಾಗಿ ಕಾಣುವುದೋ , ಈ ಪ್ರಕ್ರಿಯೆಯೊಳಗಿನ ಭ್ರಷ್ಟಾಚಾರ, ಅದಕ್ಷತೆ, ಅಪ್ರಾಮಾಣಿಕತೆ ಹಾಗೂ ಅಪಾರದರ್ಶಕತೆಯೂ ಅಷ್ಟೇ ಸಹಜವಾಗಿ ಪರಿಗಣಿಸಲ್ಪಡುತ್ತದೆ. ಹಾಗೆಯೇ ಇದರಿಂದ ಸಂಭವಿಸುವ ಸಾವುನೋವುಗಳು ಸಹ. ಯಾವುದೋ ಒಂದು ಘಟ್ಟದಲ್ಲಿ ಇಂತಹ ಅವಘಡಗಳಿಗೆ ಅದನ್ನು ಬಳಸುವ ಜನತೆಯನ್ನೇ ಹೊಣೆ ಮಾಡುವ ಪ್ರಸಂಗಗಳನ್ನೂ ಕಂಡಿದ್ದೇವೆ. ಹೆದ್ದಾರಿ ಅಪಘಾತಗಳಲ್ಲಿ ವೇಗದ ಚಾಲನೆಯೇ ಕಾರಣ ಎನ್ನುವ ಒಂದು ವಾದವನ್ನು ಗಮನಿಸಬಹುದು.
ನಾಗರಿಕರ ಜವಾಬ್ದಾರಿ
ಈ ಆರೋಪವನ್ನು ಭಾಗಶಃ ಒಪ್ಪಬಹುದು. ಏಕೆಂದರೆ ರಸ್ತೆ ನವಿರಾದಷ್ಟೂ ವಾಹನಗಳ ವೇಗ ಹೆಚ್ಚಿಸುವ ಒಂದು ಖಯಾಲಿ ವಾಹನ ಚಾಲಕರಲ್ಲಿರುತ್ತದೆ. ಇದನ್ನು ದೊಡ್ಡ ನಗರಗಳ, ಪಟ್ಟಣಗಳ ಜನನಿಬಿಡ ರಸ್ತೆಗಳಲ್ಲೇ ದಿನನಿತ್ಯ ಗಮನಿಸಬಹುದು. ರಸ್ತೆ ಅಗಲೀಕರಣ ಮಾಡುವುದು ಸುಗಮ ಸಂಚಾರ ವ್ಯವಸ್ಥೆಗೇ ಆದರೂ, ಅಗಲವಾದ ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರಿಗೆ ಈ ರಸ್ತೆಗಳು ಎಲ್ಲರಿಗೂ ಸಲ್ಲುವ ಸೌಕರ್ಯ ಎಂಬ ಭಾವನೆಗಿಂತಲೂ ತಮ್ಮ ಸ್ವೇಚ್ಚಾಚಾರ ಚಾಲನೆಗೆ ನೀಡಿದ ರಹದಾರಿ ಎಂದೇ ಭಾಸವಾಗುತ್ತದೆ. ಅತ್ಯಾಧುನಿಕ ಬೈಕುಗಳನ್ನು ಬಳಸುವ ಯುವ ಪೀಳಿಗೆ ಮತ್ತು ಎಸ್‌ಯುವಿ ಕಾರುಗಳನ್ನು ಬಳಸುವ ಹಣವಂತರಲ್ಲಿ ಈ ಧೋರಣೆಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಆದರೆ ಈ ಮುಕ್ತ-ಬೇಕಾಬಿಟ್ಟಿ-ಐಷಾರಾಮಿ ಸಂಚಾರ ವೀರರನ್ನು ನಿಯಂತ್ರಿಸುವ ಜವಾಬ್ದಾರಿಯೂ ಆಯಾ ನಗರಗಳ ಆಡಳಿತಾಧಿಕಾರಿಗಳ ಮೇಲಿರುತ್ತದೆ. ಆಡಳಿತ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಇದ್ದರೆ, ಅಧಿಕಾರಿ ವರ್ಗಗಳು ತಮ್ಮ ಕರ್ತವ್ಯನಿಷ್ಠೆಯೊಂದಿಗೆ ಸಾರ್ವಜನಿಕ ಹಿತಾಸಕ್ತಿ ಮತ್ತು ಯೋಗಕ್ಷೇಮವನ್ನೂ ಗಮನದಲ್ಲಿಟ್ಟುಕೊಂಡರೆ ಇಂತಹ ಸಂಚಾರ ವಿಕೃತಿಗಳನ್ನು ನಿಯಂತ್ರಿಸುವುದು ಸುಲಭ.

ಆದರೆ ನಮ್ಮ ಆಡಳಿತ ವ್ಯವಸ್ಥೆಯ ದೌರ್ಬಲ್ಯ ಇರುವುದೇ ಅಧಿಕಾರಶಾಹಿಯ ನಿರ್ಲಕ್ಷ್ಯ ಮತ್ತು ಅಪ್ರಾಮಾಣಿಕತೆಯಲ್ಲಿ. ಹಾಗಾಗಿಯೇ ಯಾವುದೇ ಅಪಘಾತ, ಅವಘಡಗಳಾದರೂ ಸತ್ತವರಿಗೊಂದಿಷ್ಟು, ಗಾಯಗೊಂಡವರಿಗೆ ಕೊಂಚ ಕಡಿಮೆ, ಸತ್ತುಬದುಕಿದ ಕುಟುಂಬದವರಿಗೆ ಒಂದಿಷ್ಟು ಪರಿಹಾರ ನೀಡುವ ಮೂಲಕ ಸರ್ಕಾರಗಳೂ ಕೈತೊಳೆದುಕೊಳ್ಳುತ್ತವೆ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಜೀವನಾವಶ್ಯ ಆಮ್ಲಜನಕ ಕೊರತೆಯಿಂದ ಮೂವತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ಘಟನೆಯ ಬಗ್ಗೆ ತನಿಖೆ ನಡೆಸಲು ಸರ್ಕಾರವೇ ಬದಲಾಗಬೇಕಾಯಿತು. ಮೂಲ ಸೌಕರ್ಯಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸುವ ಇಂಜಿನಿಯರುಗಳು, ಇವರನ್ನೇ ಆಶ್ರಯಿಸುವ ಗುತ್ತಿಗೆದಾರರು, ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಅಸಡ್ಡೆ ತೋರುವ ವೈದ್ಯರು, ಈ ವೃತ್ತಿಪರರಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರದ ಬೇರುಗಳೇ ಹಲವಾರು ಅವಘಡಗಳಿಗೆ, ಅಮಾಯಕರ ಸಾವುಗಳಿಗೆ, ಅನಾಥ ಕುಟುಂಬಗಳಿಗೆ ಪರೋಕ್ಷ ಕಾರಣವಾಗುತ್ತಿವೆ.