ಬಾಗಲಕೋಟೆ: ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯುವುದು ನಮ್ಮ ನಿಮ್ಮೆಲ್ಲರ ಏಕಮಾತ್ರ ಗುರಿಯಾಗಿರಲಿ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ತಿಳಿಸಿದರು.
ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆಯ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ 16 ಜನ ನಮ್ಮ ಪಕ್ಷದ ಟಿಕೇಟ್ ಆಕಾಂಕ್ಷಿಗಳು ಇದ್ದಾರೆ. ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲು ಯಾವ ರೀತಿ ಒಗ್ಗಟ್ಟಾಗಿ ಕೆಲಸ ಮಾಡಿದ್ದೀರಿ, ಚುನಾವಣೆಯಲ್ಲಿ ಕೂಡ ಇದೇ ಒಗ್ಗಟ್ಟನ್ನು ತೋರಿ ಟಿಕೇಟ್ ಸಿಕ್ಕ ನಮ್ಮ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.
ದೇಶ ಮತ್ತು ರಾಜ್ಯ ಉಳಿಸಲು ಕಾಂಗ್ರೆಸ್ ನಿಂದ ಮಾತ್ರ, ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ. ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಜನ ಕಾಂಗ್ರೆಸ್ ನವರು ಪ್ರಾಣತ್ಯಾಗ ಮಾಡಿದ್ದಾರೆ, ಲಕ್ಷಾಂತರ ಜನ ಜೈಲು ಸೇರಿದ್ದರು, ಆಸ್ತಿಪಾಸ್ತಿ ಕಳೆದುಕೊಂಡಿದ್ದರು. ಇಂಥಾ ಐತಿಹಾಸಿಕ ಹಿನ್ನೆಲೆಯಿರುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿರುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ನಾನು ಇಲ್ಲಿನ ಯಾವುದೇ ಒಬ್ಬ ಅಭ್ಯರ್ಥಿಯ ಪರ ಇಲ್ಲ, ಪಕ್ಷ ನಡೆಸುವ ಸಮೀಕ್ಷೆ, ಸ್ಥಳೀಯ ನಾಯಕರ ಮತ್ತು ಕಾರ್ಯಕರ್ತರ ಅಭಿಪ್ರಾಯ. ಮತದಾರರ ಒಲವು ಮತ್ತು ಚುನಾವಣಾ ವೀಕ್ಷಕರ ಒಟ್ಟು ಅಭಿಪ್ರಾಯವನ್ನು ಸಂಗ್ರಹಿಸಿ ಹೈಕಮಾಂಡ್ ಒಬ್ಬ ಗೆಲ್ಲುವ ಅಭ್ಯರ್ಥಿಗೆ ಟಿಕೇಟ್ ನೀಡಲಿದೆ. ಈ ಟಿಕೇಟ್ ಸಿಕ್ಕ ಅಭ್ಯರ್ಥಿಯ ಗೆಲುವಿಗೆ ನಾವೆಲ್ಲರೂ ಒಂದಾಗಿ ಕೆಲಸ ಮಾಡೋಣ. ಈ ಚುನಾವಣೆಯಲ್ಲಿ ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸುವ ಅವಕಾಶ ಇದೆ. ಅದನ್ನು ನಾವು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.
ಕೊರೊನಾ ಕಾಲದಲ್ಲಿ ಉಚಿತವಾಗಿ ಅಕ್ಕಿ ನೀಡುವ ನಮ್ಮ ಸರ್ಕಾರದ ಅನ್ನಭಾಗ್ಯ ಯೋಜನೆ ಇಲ್ಲದೆ ಹೋಗಿದ್ದರೆ ಸಾವಿರಾರು ಜನ ಹಸಿವಿನಿಂದ ಸಾಯುವಂತಾಗುತ್ತಿತ್ತು. ಇದರ ಜೊತೆಗೆ ಮನಮೋಹನ್ ಸಿಂಗ್ ಅವರ ಸರ್ಕಾರ ಜಾರಿ ಮಾಡಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಗ್ರಾಮೀಣ ಭಾಗದ ಜನರಿಗೆ ಕೊರೊನಾ ಕಾಲದಲ್ಲಿ ಕೂಡ ಉದ್ಯೋಗ ನೀಡಿತ್ತು. ಇವೆರೆಡು ಕಾರ್ಯಕ್ರಮಗಳು ಕೊರೊನಾ ಕಾಲದಲ್ಲಿ ಬಡಜನರ ನೆರವಿಗೆ ನಿಂತಿದ್ದವು ಎಂಬುದನ್ನು ನೀವೆಲ್ಲ ಮರೆಯಬಾರದು. ಮತ್ತೆ ನಾವು ಅಧಿಕಾರಕ್ಕೆ ಬಂದ ಕೂಡಲೇ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ಪ್ರತಿ ಬಡಕುಟುಂಬದ ವ್ಯಕ್ತಿಗೆ ನೀಡುತ್ತೇವೆ. ಇದು ನಮ್ಮ ಗ್ಯಾರೆಂಟಿ, ನಾವು ಈಗ ಕೊಟ್ಟಿರುವ ಮಾತನ್ನು ಅಧಿಕಾರಕ್ಕೆ ಬಂದ ಮೊದಲ ದಿನವೇ ಈಡೇರಿಸುತ್ತೇವೆ ಎಂದು ಹೇಳಿದರು.
ನಾನು ಯಾರ ಬಗ್ಗೆಯೂ ವೈಯಕ್ತಿಕ ಟೀಕೆ ಮಾಡಲ್ಲ. ಸಿದ್ದು ಸವದಿ ಇಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಪತ್ರಿಕೆಗಳಲ್ಲಿ ಬಂದಿದೆ. ಇವರೊಬ್ಬರೇ ಅಲ್ಲ ಇಡೀ ಸರ್ಕಾರವೇ 40% ಕಮಿಷನ್ ಹೊಡೆದು ಕೋಟ್ಯಂತರ ರೂಪಾಯಿ ಬೇನಾಮಿ ಆಸ್ತಿ ಮಾಡಿಕೊಂಡಿದ್ದಾರೆ. ಅವರ ಸುಳ್ಳು ಭರವಸೆಗಳು, ಬಣ್ಣದ ಮಾತುಗಳನ್ನು ನಂಬಿ ಮತ್ತೆ ಮತ ಹಾಕಿ ಮೋಸ ಹೋಗಬೇಡಿ ಎಂದರು.
ಈ ಕ್ಷೇತ್ರದಲ್ಲಿ ನೇಕಾರರು ಬಹಳಷ್ಟು ಮಂದಿ ಇದ್ದಾರೆ, ನೇಕಾರರು ಬಳಕೆ ಮಾಡುವ ವಿದ್ಯುತ್ ಬೆಲೆ ಯುನಿಟ್ ಗೆ 4.50 ರೂ. ಇತ್ತು ಅದನ್ನು ನಾನು ಹಣಕಾಸು ಸಚಿವನಾಗಿರುವಾಗ 1.25 ರೂ. ಗೆ ಕಡಿಮೆ ಮಾಡಿಕೊಟ್ಟಿದ್ದೆ. ಮುಂದೆ ನಾವು ಅಧಿಕಾರಕ್ಕೆ ಬಂದರೆ ನೇಕಾರರಿಗೆ 10 ಹೆಚ್.ಪಿ ವರೆಗೆ ಉಚಿತವಾಗಿ ವಿದ್ಯುತ್ ನೀಡುತ್ತೇವೆ. ನಾನು ಮುಖ್ಯಮಂತ್ರಿಯಾಗಿರುವಾಗ ಎರಡು ಬಾರಿ ನೇಕಾರರ ಸಾಲ ಮನ್ನಾ ಮಾಡಿದ್ದೆ, ಮನೆ ಕಟ್ಟಿಸಿಕೊಟ್ಟಿದ್ದೆ. ಮುಂದೆ ಕೂಡ ನಾವು ಅಧಿಕಾರಕ್ಕೆ ಬಂದ ಕೂಡಲೇ ನೇಕಾರ ಸಮುದಾಯದ ಕೂಲಿಕಾರರಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ಕೊಡುತ್ತೇವೆ ಎಂದು ಭರವಸೆ ನೀಡಿದರು.