ಪ್ರಜಾಸತ್ತಾತ್ಮಕ ಚುನಾವಣೆಗಳು ಸದಾ ಆಳುವವರಿಗೆ ಮುನ್ನೆಚ್ಚರಿಕೆಯ ಸಂಕೇತಗಳೇ ಆಗಿರುತ್ತವೆ
ಮೇ 10ರಂದು ನಡೆದ ರಾಜ್ಯ ವಿಧಾನಸಭಾ ಚುನಾವಣೆಗಳು ಕರ್ನಾಟಕದ ಜನತೆಯ ಮಟ್ಟಿಗೆ ಸಂಭ್ರಮಿಸುವ ಅವಕಾಶವನ್ನೇ ನೀಡಿವೆ. ಕಳೆದ ಐದು ವರ್ಷಗಳ ಸಮ್ಮಿಶ್ರ ಸರ್ಕಾರದ ಗೊಂದಲಗಳು ಮತ್ತು ಬಿಜೆಪಿಯ ದುರಾಡಳಿತಕ್ಕೆ ಪ್ರತಿಕ್ರಿಯೆಯಾಗಿ ಕರ್ನಾಟಕದ ಮತದಾರರು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡುವ ಮೂಲಕ ರಾಜ್ಯವನ್ನು ಸುಸ್ಥಿರ ಮಾರ್ಗದಲ್ಲಿ ಕರೆದೊಯ್ಯಲು ಅವಕಾಶವನ್ನು ಕಲ್ಪಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಬಯಸುವ ಯಾವುದೇ ರಾಜಕೀಯ ಪಕ್ಷವೂ ಸಹ ತನ್ನ ಅಧಿಕಾರದ ನೆಲೆಯನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಅಹಮಿಕೆಯನ್ನು ಹೊಂದಿರಬಾರದು ಎಂಬ ಅಮೂಲ್ಯ ಸಂದೇಶವನ್ನು ಈ ಚುನಾವಣೆಗಳು ನೀಡಿವೆ. ಇದು ಪ್ರಜಾತಂತ್ರದ ಒಂದು ವಿಶಿಷ್ಟ ಗುಣವೂ ಹೌದು. ತಾವೇ ಸದಾಕಾಲಕ್ಕೂ ಅಧಿಕಾರದಲ್ಲಿರುತ್ತೇವೆ ಎಂದು ಬೀಗುವ ಪಕ್ಷಗಳಿಗೆ ಮತದಾರರೇ ಒಂದು ಸಂದರ್ಭದಲ್ಲಿ ಪಾಠ ಕಲಿಸುವುದನ್ನು ಸಮಕಾಲೀನ ರಾಜಕಾರಣದಲ್ಲೇ ಅನೇಕ ಸಂದರ್ಭದಲ್ಲಿ ಕಂಡಿದ್ದೇವೆ.

2019ರಲ್ಲಿ ಆಪರೇಷನ್ ಕಮಲ ಎಂಬ ಅಕ್ರಮ ಮಾರ್ಗದ ಮೂಲಕ ಸರ್ಕಾರ ರಚಿಸಿದ ಬಿಜೆಪಿ ತನ್ನ ನಾಲ್ಕು ವರ್ಷಗಳ ಆಡಳಿತದಲ್ಲಿ ನಡೆದು ಕೊಂಡ ರೀತಿಯನ್ನು ಗಮದಲ್ಲಿಟ್ಟು ಪ್ರಸ್ತುತ ಚುನಾವಣೆಗಳನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ. ಭಾರತವನ್ನು ಕಾಂಗ್ರೆಸ್ ಮುಕ್ತವಾಗಿ ಮಾಡುವ ಬಿಜೆಪಿಯ ಮಹತ್ವಾಕಾಂಕ್ಷಿ ಯೋಜನೆಯನ್ನು ರಾಜ್ಯಮಟ್ಟದಲ್ಲೂ ಜಾರಿಗೊಳಿಸಲು ಸಜ್ಜಾಗಿದ್ದ ಬಿಜೆಪಿ ನಾಯಕರಿಗೆ, ಪ್ರಜಾತಂತ್ರ ವ್ಯವಸ್ಥೆಯ ನಾಡಿ ಮಿಡಿತವೇ ಅರ್ಥವಾಗಿಲ್ಲ ಎನ್ನುವುದು ಪ್ರಸ್ತುತ ಚುನಾವಣೆಗಳಲ್ಲಿ ಸಾಬೀತಾಗಿದೆ. ಅನ್ನ, ನೀರು, ಬಟ್ಟೆ ಮತ್ತು ಸೂರಿಗಾಗಿ ತಮ್ಮ ಜೀವನವಿಡೀ ಬೆವರು ಸುರಿಸುವ ಕೋಟ್ಯಂತರ ಜನರಿಗೆ ತಮ್ಮ ಜೀವನ ಹಾಗೂ ಜೀವನೋಪಾಯದ ಹಾದಿ ಸುಗಮವಾಗುವುದೊಂದೇ ಮಹತ್ವಾಕಾಂಕ್ಷೆಯಾಗಿರುತ್ತದೆ. ತಮ್ಮ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಮತ್ತು ಜೀವನಾಂಶದ ಆದಾಯವನ್ನು ಗಳಿಸುವ ಸುಗಮ ಮಾರ್ಗಗಳಷ್ಟೇ ಶ್ರೀಸಾಮಾನ್ಯನ ಕನಸೂ ಆಗಿರುತ್ತದೆ. ಈ ಮೂಲಭೂತ ಸೌಕರ್ಯಗಳನ್ನು ಈಡೇರಿಸುತ್ತವೆ ಎಂಬ ಭರವಸೆಯೊಂದಿಗೇ ಜನರು ತಮ್ಮ ಅಮೂಲ್ಯ ಮತ ಚಲಾವಣೆ ಮಾಡುತ್ತಾರೆ.
ಈ ಅಪೇಕ್ಷೆಗಳಿಂದಾಚೆಗೆ ರಾಜಕೀಯ ಪಕ್ಷಗಳು ಜನತೆಯ ಮುಂದಿಡುವ ಭಾವನಾತ್ಮಕ ವಿಚಾರಗಳು ಕೆಲವು ಸಂದರ್ಭಗಳಲ್ಲಿ ಮಾತ್ರ ಅಧಿಕಾರ ರಾಜಕಾರಣದ ಕಚ್ಚಾವಸ್ತುಗಳಾಗಿ ಪರಿಣಮಿಸುತ್ತವೆ. ತಮ್ಮ ಸುಸ್ಥಿರ ಹಾಗೂ ಸ್ವಸ್ಥ ಬದುಕಿಗೆ ನಿಲುಕದ ಯಾವುದೇ ಭಾವಾತಿರೇಕದ ವಿಚಾರಗಳು ಶ್ರೀಸಾಮಾನ್ಯನಿಗೆ ಅನವಶ್ಯಕವಾಗಿಯೇ ಕಾಣುತ್ತವೆ. ರಾಜಕೀಯ ಪಕ್ಷಗಳು ಹಾಗೂ ಈ ಪಕ್ಷಗಳಿಗೆ ಬೆಂಗಾವಲಾಗಿ ನಿಲ್ಲುವ ಸರ್ಕಾರೇತರ ಸಾಂಸ್ಕೃತಿಕ ಸಂಘಟನೆಗಳು ತಮ್ಮದೇ ಆದ ಸ್ವಾರ್ಥ ಹಿತಾಸಕ್ತಿಗಾಗಿ ಜಾತಿ, ಮತ, ಧರ್ಮ ಮತ್ತಿತರ ವಿಚಾರಗಳನ್ನು ರಂಜನೀಯವಾಗಿ ಬಿತ್ತರಿಸುವ ಮೂಲಕ ಸಾಮಾನ್ಯ ಜನತೆಯ ಧಾರ್ಮಿಕ-ಭಾಷಿಕ-ಜಾತಿ ಕೇಂದ್ರಿತ ಭಾವನೆಗಳನ್ನು ಅಧಿಕಾರ ರಾಜಕಾರಣದ ಮೆಟ್ಟಿಲುಗಳಂತೆ ಬಳಸಲು ಯತ್ನಿಸುತ್ತವೆ. ಭಾರತದ ರಾಜಕಾರಣ ಕಳೆದ ಮೂರು ದಶಕಗಳಿಂದಲೂ ಈ ಧೋರಣೆಯನ್ನು ಎದುರಿಸುತ್ತಲೇ ಬಂದಿದೆ. ಸಮಾಜದ ತಳಮಟ್ಟದಲ್ಲಿ ಸದಾ ಸೌಹಾರ್ದತೆ, ಭ್ರಾತೃತ್ವ ಹಾಗೂ ಸಹಭಾಗಿತ್ವದ ಉದಾತ್ತ ಲಕ್ಷಣಗಳೊಡನೆ ಬದುಕಲು ಬಯಸುವ ಶ್ರೀಸಾಮಾನ್ಯರನ್ನು ಜಾತಿ ಮತಗಳ ಅಸ್ಮಿತೆಯ ಚೌಕಟ್ಟುಗಳಲ್ಲಿ ಬಂಧಿಸಿ, ಅಧಿಕಾರ ರಾಜಕಾರಣದ ಕಾಲಾಳುಗಳಂತೆ ಬಳಸುವ ಸ್ವಾರ್ಥ ರಾಜಕಾರಣವನ್ನೂ ಈ ಮೂರು ದಶಕಗಳಲ್ಲಿ ಕಂಡಿದ್ದೇವೆ.
ಕೋಮುದ್ವೇಷದ ವಿಶಾಲ ಬಾಹುಗಳು
ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುವಾಗ ಇಂತಹುದೇ ಪ್ರಸಂಗಗಳುನ್ನು ಗುರುತಿಸಬಹುದು. ಹಿಂದುತ್ವ ಸಂಘಟನೆಗಳು, ಮತಾಂಧ ಶಕ್ತಿಗಳು, ದ್ವೇಷಾಸೂಯೆಯ ಸಾಂಸ್ಕೃತಿಕ ಸಂಸ್ಥೆಗಳು ದಕ್ಷಿಣ ಕನ್ನಡ ಹಾಗೂ ಕರಾವಳಿ ಕರ್ನಾಟಕದಲ್ಲಿ ಉಂಟುಮಾಡಿದ ಕ್ಷೋಭೆ ಅಲ್ಲಿನ ಜನಸಾಮಾನ್ಯರ ನಡುವೆ ಶಾಶ್ವತವಾದ ಗೋಡೆಗಳನ್ನು ನಿರ್ಮಿಸಿಬಿಟ್ಟಿವೆ. ಅಕ್ಷರ ಕಲಿಕೆಯ ಪಯಣದಲ್ಲಿ ಮಕ್ಕಳು ಧರಿಸುವ ಉಡುಪು ಸಹ ನಿರ್ಣಾಯಕವಾಗುತ್ತದೆ ಎಂಬ ವಿಕೃತ ಚಿಂತನೆಗೆ ಎಡೆಮಾಡಿಕೊಟ್ಟ ಹಿಜಾಬ್ ವಿವಾದ ಒಂದು ಸ್ಪಷ್ಟ ಉದಾಹರಣೆ. ತಮ್ಮ ಧಾರ್ಮಿಕ ನಂಬಿಕೆಗಳನ್ನು ಸಾರ್ವತ್ರೀಕರಿಸಲು ಇಡೀ ಸಮಾಜಕ್ಕೇ ನೀತಿ ಸಂಹಿತೆಗಳನ್ನು ರೂಪಿಸುವ ಮತಾಂಧ ಶಕ್ತಿಗಳ ಮಹತ್ವಾಕಾಂಕ್ಷೆಗೆ ಬಲಿಯಾದದ್ದು, ಅಸಂಖ್ಯಾತ ಮುಸ್ಲಿಂ ಹೆಣ್ಣುಮಕ್ಕಳ ವಿದ್ಯಾಭ್ಯಾಸ ಮತ್ತು ಭವಿಷ್ಯ. ಶತಮಾನಗಳಿಂದಲೂ ಜ್ಞಾನಾರ್ಜನೆಗೆ, ಅಮಾಯಕ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗದ ಉಡುಪುಗಳು ಇಂದು ಅವರ ಶೈಕ್ಷಣಿಕ ಮುನ್ನಡೆಗೇ ಮಾರಕವಾಗಿ ಪರಿಣಮಿಸಿವೆ. ಈ ಸಮಸ್ಯೆಯನ್ನು ಬಗೆಹರಿಸಲು ನ್ಯಾಯಾಲಯದ ಮೊರೆ ಹೋಗಬೇಕಾದ್ದು ನಮ್ಮ ಸಾಮಾಜಿಕ ಜೀವನದ ಬೌದ್ಧಿಕ ದೀವಾಳಿತನದ ಸಾಕ್ಷಿಯಾಗಿದೆ.
ಈ ವಿವಾದದ ಪರಿಣಾಮವಾಗಿಯೇ ತಮ್ಮ ವಿದ್ಯಾಭ್ಯಾಸದಿಂದ ವಂಚಿತವಾಗಿರುವ ಸಾವಿರಾರು ಹೆಣ್ಣುಮಕ್ಕಳ ಭವಿಷ್ಯದ ಬಗ್ಗೆ ನಮ್ಮಲ್ಲಿ ಕಳಕಳಿ ಇರಬೇಕಲ್ಲವೇ ? ಹಾಗೊಮ್ಮೆ ಇದ್ದಿದ್ದಲ್ಲಿ, ಸಮಾಜದಲ್ಲಿ ಇಂದಿಗೂ ಜೀವಂತಿಕೆಯಿಂದಿರುವ ಸಂವೇದನಾಶೀಲ ಮನಸುಗಳೊಡನೆ ಸಮಾಲೋಚನೆ ನಡೆಸಿ, ಹಿಜಾಬ್ ಪರ ಮತ್ತು ವಿರೋಧ ವಹಿಸುವ ಮತೀಯ ಶಕ್ತಿಗಳನ್ನು ಬದಿಗೊತ್ತಿ ಸೌಹಾರ್ದ ವಾತಾವರಣವನ್ನು ಸೃಷ್ಟಿಸಬಹುದಿತ್ತು. ಹಾಗೆಯೇ ಸಮಾಜದಲ್ಲಿ ಸಹಜವಾಗಿಯೇ ಇರಬಹುದಾದ ಒಳಬಿರುಕುಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡು, ಶಾಶ್ವತ ಬೇಲಿಗಳನ್ನು ನಿರ್ಮಿಸುವ ಮತಾಂಧ ಶಕ್ತಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಬಿಜೆಪಿ ಸರ್ಕಾರದ ಆದ್ಯತೆಯಾಗಬೇಕಿತ್ತು. ವ್ಯತಿರಿಕ್ತವಾಗಿ ಇಂತಹ ಶಕ್ತಿಗಳ ಬಲವರ್ಧನೆಯಾಗಿರುವುದನ್ನು ಗಮನಿಸಬಹುದು.
ಕರಾವಳಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ಸುಶಿಕ್ಷಿತರ, ಬುದ್ಧಿವಂತರ ತವರು ಎಂದು ಭಾವಿಸುತ್ತಿದ್ದ ಕಾಲವೂ ಒಂದಿತ್ತು. ಆದರೆ ಇದೇ ಜಿಲ್ಲೆಗಳು ದ್ವೇಷಾಸೂಯೆಗಳ ಆಶ್ರಯತಾಣಗಳಾಗಿವೆ. ರಾಜಕೀಯ ಆಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ಒಂದು ಇಡೀ ಸಮಾಜದ ಹಿತಾಸಕ್ತಿಯನ್ನೇ ಬಲಿಕೊಡುವುದು ಅಕ್ಷಮ್ಯ. ಜ್ಞಾನ ಸಂಪತ್ತಿಗೆ ಹೆಸರಾಗಿದ್ದ ಜಿಲ್ಲೆಗಳನ್ನು ಕೋಮು ದ್ವೇಷ, ಮತದ್ವೇಷ ಮತ್ತು ದ್ವೇಷ ರಾಜಕಾರಣದ ಪ್ರಯೋಗಶಾಲೆಯನ್ನಾಗಿ ಮಾಡುವುದು ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿಯಾಗುತ್ತದೆ. ಇದು ರಾಜ್ಯದ ಸಾಮಾಜಿಕ ಚೌಕಟ್ಟನ್ನು ಭಂಗಗೊಳಿಸುವುದೇ ಅಲ್ಲದೆ ಆರ್ಥಿಕವಾಗಿಯೂ ಸಹ ಅನಾಹುತಕಾರಿಯಾಗಿ ಪರಿಣಮಿಸುತ್ತದೆ ಎಂಬ ಪರಿವೆ ರಾಜಕೀಯ ನಾಯಕರಿಗೆ ಇರಬೇಕಾಗುತ್ತದೆ. ಕೆಲವೇ ಬೆರಳೆಣಿಕೆಯಷ್ಟು ಸಂಘಟನೆಗಳು ಹುಟ್ಟುಹಾಕಿದ ಲವ್ ಜಿಹಾದ್ ಎಂಬ ಕಲ್ಪನೆ ಹೇಗೆ ಈ ಜಿಲ್ಲೆಗಳ ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳಲ್ಲಿ ತಲ್ಲಣಗಳನ್ನು ಸೃಷ್ಟಿಸಿವೆ ಎನ್ನುವುದನ್ನು ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಗಮನಿಸುತ್ತಲೇ ಬಂದಿದ್ದೇವೆ. ಇಂದು ಈ ಜಿಲ್ಲೆಗಳಲ್ಲಿ ಯೌವ್ವನದ ಆನಂದ ಅನುಭವಿಸುವ ಸ್ವಾತಂತ್ರ್ಯವನ್ನೇ ಹಿಂದೂ-ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳು ( ಕೆಲವೊಮ್ಮೆ ಗಂಡುಮಕ್ಕಳೂ ) ಕಳೆದುಕೊಂಡಿದ್ದಾರೆ.
ಜಾತಿ-ಮತದ್ವೇಷದ ವಿಷವೃಕ್ಷ
ಎರಡೂ ಮತಾನುಯಾಯಿಗಳಲ್ಲಿರುವ ಕೆಲವೇ ಮತಾಂಧರ ದಾಳಿಗೆ ಹೆದರಿ ಒಟ್ಟಿಗೆ ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುವುದೂ ದುಸ್ತರವಾಗಿರುವ ಒಂದು ಕರಾಳ ಸನ್ನಿವೇಶವನ್ನು ಈ ಜಿಲ್ಲೆಗಳು ಎದುರಿಸುತ್ತಿವೆ. ಮತಾಂತರ ನಿಷೇಧ ಹಾಗೂ ಜಾನುವಾರು ಹತ್ಯೆ ನಿಷೇಧ ಕಾಯ್ದೆಗಳು ಜಾರಿಯಾದ ನಂತರ ಖಾಸಗಿ ಪಡೆಗಳು ತಮ್ಮ ಅನೈತಿಕ ಪೊಲೀಸ್‌ಗಿರಿಯನ್ನು ವಿಸ್ತರಿಸಿದ್ದು ಅದು ಕರಾವಳಿಯ ಪ್ರವೀಣ್ ನೆಟ್ಟಾರ್‌ನಿಂದ ಮಂಡ್ಯದ ಇದ್ರೀಸ್ ಪಾಷಾವರೆಗೂ ಹರಡಿದೆ. ಕೆಲವೇ ಮತಾಂಧ ಪಡೆಗಳ ದಾಳಿಗೆ ಹಿಂದೂ ಮುಸ್ಲಿಂ ಯುವಕ ಯುವತಿಯರು ತಮ್ಮ ಸ್ನೇಹದ ಸಂಕೋಲೆಗಳನ್ನೂ ಕಳೆದುಕೊಳ್ಳುವ ಪರಿಸ್ಥಿತಿಯನ್ನು ಕರ್ನಾಟಕ ಎದುರಿಸುತ್ತಿದೆ. ಈ ದ್ವೇಷಾಸೂಯೆಯ ಪಯಣದಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವುದು ಪ್ರವೀಣ್ ನೆಟ್ಟಾರ್, ಹರ್ಷ ಅವರಂತಹ ಅಮಾಯಕ ಹಿಂದೂ ಯುವಕರು, ಇದ್ರೀಸ್ ಪಾಷಾ, ಫಾಜಿಲ್, ಅಶ್ರಾಫ್ ಅವರಂತಹ ಅಮಾಯಕ ಮುಸ್ಲಿಂ ಯುವಕರು. ಈ ಯುವ ಜೀವಗಳಿಗೆ ಒಂದು ಸುಖಿ ಸಮಾಜವನ್ನು ರೂಪಿಸಿಕೊಡುವ ಜವಾಬ್ದಾರಿ ಚುನಾಯಿತ ಸರ್ಕಾರಗಳ ಮೇಲಿರುತ್ತದೆ. ಈ ಜವಾಬ್ದಾರಿಯನ್ನು ಮರೆತು ಕ್ರಿಯೆ-ಪ್ರತಿಕ್ರಿಯೆಯ ಪ್ರಮೇಯವನ್ನು ಬಳಸಿದ್ದು ಇಂತಹ ದುಷ್ಟ ಕೃತ್ಯಗಳು ಹೆಚ್ಚಾಗಲು ಹೆಚ್ಚಾಗಿತ್ತು.
ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕವಿವರೇಣ್ಯರು ಬಣ್ಣಿಸಿದ್ದು ಕೇವಲ ಅಕ್ಷರಗಳ ಅಭಿವ್ಯಕ್ತಿಯಾಗಿ ಅಲ್ಲ. ಈ ನಾಡಿನ ಚರಿತ್ರೆಯೂ ಹಾಗೆಯೇ ನಡೆದುಬಂದಿದೆ. ಇಲ್ಲಿ ಎಲ್ಲ ಜಾತಿ ಸಮುದಾಯಗಳು, ಮತಧರ್ಮಗಳ ಜನತೆ ಒಗ್ಗಟ್ಟಿನಿಂದಿರುವುದರಿಂದಲೇ ಕರ್ನಾಟಕವು ಜಾತಿ ದ್ವೇಷ, ಮತದ್ವೇಷದ ಪ್ರಯೋಗಶಾಲೆಗಳಾಗಿ ರೂಪುಗೊಳ್ಳಲಿಲ್ಲ. ಆದಾಗ್ಯೂ ಕಳೆದ ಮೂರು ದಶಕಗಳಲ್ಲಿ ರಾಜ್ಯದ ಜನತೆ ಕಂಬಾಲಪಲ್ಲಿಯಂತಹ ದುರಂತಗಳನ್ನು ಅನುಭವಿಸಿದ್ದಾರೆ. ಕಂಬಾಲಪಲ್ಲಿಯಲ್ಲಿ ಆಹುತಿಯಾದ ಅಮಾಯಕರ ಅಸ್ಥಿ ಇನ್ನೂ ಜನಮಾನಸದ ನಡುವೆ ಜೀವಂತವಾಗಿರುವಾಗಲೇ ರಾಜ್ಯದಲ್ಲಿ ಅಸ್ಪೃಶ್ಯತೆಯ ಪ್ರಕರಣಗಳು ಸಾಲುಸಾಲಾಗಿ ಘಟಿಸಿವೆ. ಅಂತರ್ಜಾತಿ ವಿವಾಹವಾದ ಯುವ ಜೀವಗಳನ್ನು ಮರ್ಯಾದೆ ಅಥವಾ ಗೌರವದ ಹೆಸರಿನಲ್ಲಿ ಹತ್ಯೆ ಮಾಡುವ ಹೀನ ಮನಸ್ಥಿತಿಗೆ ಕರ್ನಾಟಕ ಸಾಕ್ಷಿಯಾಗಿದೆ. ಇದರೊಂದಿಗೆ ಪ್ರಬಲ ಜಾತಿಗಳಿಂದ ವಿಧಿಸಲಾಗುವ ಸಾಮಾಜಿಕ ಬಹಿಷ್ಕಾರದ ಶಿಕ್ಷೆಗೆ ಯುವ ಜೀವಗಳು, ಬಡ ಕುಟುಂಬಗಳು ನಲುಗಿಹೋಗುತ್ತಿವೆ. ಮಹಿಳಾ ದೌರ್ಜನ್ಯಗಳೂ ಹೆಚ್ಚಾಗುತ್ತಿದ್ದು ಅತ್ಯಾಚಾರದ ಪ್ರಕರಣಗಳು ಏರುಗತಿಯಲ್ಲಿವೆ. ಅಪ್ರಾಪ್ತ ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಅತ್ಯಾಚಾರ ದೌರ್ಜನ್ಯಕ್ಕೊಳಗಾಗುತ್ತಿರುವುದು ಅಧಿಕೃತ ಅಂಕಿ ಅಂಶಗಳಿಂದಲೇ ತಿಳಿದುಬರುತ್ತದೆ. ಈ ಸಾಮಾಜಿಕ ತಾರತಮ್ಯ ಮತ್ತು ಅಸಮಾನತೆಯನ್ನು ಹೋಗಲಾಡಿಸಲು ಕೇವಲ ಕಾಯ್ದೆ ಕಾನೂನುಗಳು ಸಾಕಾಗುವುದಿಲ್ಲ. ಆಡಳಿತಾರೂಢ ಸರ್ಕಾರಗಳು ನಾಗರಿಕ ಸಮಾಜದಲ್ಲಿರುವ ಸೌಹಾರ್ದತೆಯ ನೆಲೆಗಳನ್ನು, ಸಮನ್ವಯದ ಮನಸ್ಥಿತಿಯುಳ್ಳ ವ್ಯಕ್ತಿ-ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸಮಾಜದಲ್ಲಿ ಬೇರೂರಿರಬಹುದಾದ ದ್ವೇಷ, ತಾರತಮ್ಯ ಮತ್ತು ವಿಷಬೀಜಗಳನ್ನು ಕಿತ್ತೊಗೆಯಬೇಕಾಗುತ್ತದೆ. ಇದು ಪ್ರಜಾಪ್ರಭುತ್ವದ ಒಳಗುಟ್ಟು ಹಾಗೂ ಮೂಲ ಲಕ್ಷಣ. ಆದರೆ ಇಂತಹ ಅಮಾನುಷ ಪ್ರಸಂಗಗಳನ್ನೂ ಕಾನೂನು ಸುವ್ಯವಸ್ಥೆಯ ಮಸೂರದಿಂದಲೇ ನೋಡುವ ಮೂಲಕ ಬಿಜೆಪಿ ಸರ್ಕಾರ ತನ್ನ ಸಾಂವಿಧಾನಿಕ ಜವಾಬ್ದಾರಿ ನಿಭಾಯಿಸುವಲ್ಲಿ ಸೋತಿದೆ.
ತಿನ್ನುವ ಅನ್ನ, ಉಡುವ ಬಟ್ಟೆ ಮತ್ತು ಪೂಜಿಸುವ ದೇವರು ಇವು ಮೂರೂ ಸಹ ವ್ಯಕ್ತಿಗತ ಆಯ್ಕೆಗೆ ಬಿಟ್ಟ ವಿಚಾರಗಳು. ಯಾವುದೇ ಧರ್ಮವಾದರೂ ಒಪ್ಪುವಂತಹ ಈ ಉದಾತ್ತ ಸಂಹಿತೆಯನ್ನು ಅಳವಡಿಸಿಕೊಂಡಾಗಲೇ ಒಂದು ಸಮಾಜ ತನ್ನ ಸ್ವಾಸ್ಥ್ಯವನ್ನು ಕಾಪಾಡಿಕೊಂಡುಬರಲು ಸಾಧ್ಯ. ಆದರೆ ರಾಜ್ಯದ ಕೆಲವು ಮತಾಂಧ ಪಡೆಗಳು ಸೃಷ್ಟಿಸಿದ ಹಲಾಲ್ ವಿವಾದ ಈ ಉದಾತ್ತತೆಯನ್ನೇ ಭಂಗಗೊಳಿಸುವ ರೀತಿಯಲ್ಲಿ ರಾಜ್ಯಾದ್ಯಂತ ಪ್ರಕ್ಷುಬ್ಧತೆಯನ್ನು ಸೃಷ್ಟಿಸಿತ್ತು. ಜನಪದ ಪರಂಪರೆ, ಸೂಫಿ ತತ್ವಗಳು ಹಾಗೂ ವಚನ ಪರಂಪರೆಯಿಂದ ಶ್ರೀಮಂತವಾಗಿರುವ ಕರ್ನಾಟಕವನ್ನು ಈ ಕಾರಣಕ್ಕಾಗಿಯೇ ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆಯಲಾಗುತ್ತದೆ. ನಾವು ನಾಡಗೀತೆ ಎಂದು ಸ್ವೀಕರಿಸಿರುವ ಜೈ ಭಾರತ ಜನನಿಯ ತನುಜಾತೆ ಹಾಡಿನಲ್ಲಿರುವ ಪ್ರತಿಯೊಂದು ಸಾಲು ಈ ಮಣ್ಣಿನ ಸಮನ್ವಯತೆಯನ್ನು ಸಾರುವಂತಿದೆ. ಕನ್ನಡಿಗರ ಸಹೃದಯತೆ ಮತ್ತು ನಾಡಿನ ಜನತೆಯ ಮೃದು ಧೋರಣೆಗೂ ಈ ಸಮನ್ವಯ ಸಂಸ್ಕೃತಿಯೇ ಕಾರಣವಾಗಿದೆ. ಇಂತಹ ಒಂದು ಸಮಾಜದಲ್ಲೂ ಒಂದು ಸಮುದಾಯವನ್ನು ಬಹಿಷ್ಕರಿಸುವ, ಅವರ ಮೂಲ ಆದಾಯ ಮತ್ತು ಜೀವನೋಪಾಯದ ಮಾರ್ಗಗಳನ್ನೇ ಭಂಗಗೊಳಿಸುವ ಪ್ರಯತ್ನಗಳನ್ನು ಹಲಾಲ್ ವಿವಾದದಲ್ಲಿ, ಜಾತ್ರೆ-ಉತ್ಸವಗಳಲ್ಲಿ ಮುಸ್ಲಿಂ ವರ್ತಕರ ಬಹಿಷ್ಕಾರದಲ್ಲಿ, ಮುಸ್ಲಿಮರ ಚಿನ್ನದಂಗಡಿಗಳ ಬಹಿಷ್ಕಾರದಲ್ಲಿ ಕಂಡಿದ್ದೇವೆ.
ಚುನಾಯಿತ ಸರ್ಕಾರದ ಜವಾಬ್ದಾರಿ
ಇಂತಹ ಪ್ರವೃತ್ತಿಯನ್ನು ಮೊಳಕೆಯಲ್ಲೇ ಚಿವುಟಿ ಹಾಕುವುದು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾಗಿರುವ ಸರ್ಕಾರದ ಆದ್ಯತೆ ಮತ್ತು ಕರ್ತವ್ಯವಾಗಿರಬೇಕಲ್ಲವೇ ? ಇಂತಹ ದ್ವೇಷಪೂರಿತ ಕಾರ್ಯಾಚರಣೆಗೆ ಕಾರ್ಪೋರೇಟ್ ಮಾರುಕಟ್ಟೆಯಲ್ಲಿ ಪ್ರತಿಷ್ಠಿತ ಸ್ಥಾನ ಪಡೆದಿರುವ ಮುಸ್ಲಿಂ ಸಮುದಾಯದ ಉದ್ಯಮಿಗಳು ಬಲಿಯಾಗುವುದಿಲ್ಲ ಬದಲಾಗಿ ಕಲ್ಲಂಗಡಿ ಮಾರುತ್ತಲೇ ಹೊಟ್ಟೆ ಹೊರೆಯುವ ಒಬ್ಬ ಅಮಾಯಕ ಮುಸ್ಲಿಂ ಬಲಿಯಾಗುತ್ತಾನೆ. ಮತೀಯ ದ್ವೇಷ ಹಾಗೂ ಮತಾಂಧತೆಯ ವಾತಾವರಣದಲ್ಲೂ ವರ್ಗಹಿತಾಸಕ್ತಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ. ಇಂತಹ ಹಲವು ಘಟನೆಗಳು ರಾಜ್ಯಾದ್ಯಂತ ನಡೆಯುತ್ತಿದ್ದರೂ ರಾಜ್ಯ ಬಿಜೆಪಿ ಸರ್ಕಾರ ಮೌನ ವಹಿಸಿದ್ದೇ ಅಲ್ಲದೆ, ತಪ್ಪಿತಸ್ಥರ ವಿರುದ್ಧ ಕಾನೂನುರೀತ್ಯಾ ಕ್ರಮ ಕೈಗೊಳ್ಳುವುದರಲ್ಲೂ ವಿಳಂಬ ಮಾಡಿತ್ತು. ಇದೇ ದ್ವೇಷಾಸೂಯೆಗಳ ಅಲೆಗಳೇ ಕರ್ನಾಟಕದ ಸಾಂಸ್ಕೃತಿಕ ಲೋಕವನ್ನೂ ಮಲಿನಗೊಳಿಸಿದ್ದನ್ನು ಕನ್ನಡ ಸಾಹಿತ್ಯ ಪರಿಷತ್ತಿನ ವ್ಯವಹಾರಗಳಲ್ಲಿ, ಸಾಹಿತ್ಯ ಸಮ್ಮೇಳನದಲ್ಲಿ, ರಂಗಾಯಣದಂತಹ ಪ್ರತಿಷ್ಠಿತ ರಂಗಭೂಮಿಯ ನೆಲೆಯಲ್ಲಿ ರಾಜ್ಯದ ಜನತೆ ಕಂಡಿದ್ದಾರೆ. ಓರ್ವ ರಂಗಭೂಮಿ ನಿರ್ದೇಶಕ ಸೃಷ್ಟಿಸಿದ ಉರಿಗೌಡ-ನಂಜೇಗೌಡ ಎಂಬ ಕಾಲ್ಪನಿಕ ಪಾತ್ರಗಳನ್ನು ಅಧಿಕೃತ ಚರಿತ್ರೆ ಎನ್ನುವಂತೆ ಅನುಮೋದಿಸಿದ್ದೇ ಅಲ್ಲದೆ, ಟಿಪ್ಪು ವಿರೋಧಿ ಧೋರಣೆಗೆ ಪೂರಕವಾಗಿ ಇದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದು ಬಿಜೆಪಿಯ ಮತ್ತು ಬೊಮ್ಮಾಯಿ ಸರ್ಕಾರದ ಅಕ್ಷಮ್ಯ ಅಪರಾಧ. ಈ ಕಲ್ಪಿತ ಇತಿಹಾಸದ ಸತ್ಯಾಸತ್ಯತೆಗಳನ್ನು ಅರಿಯಲು ಇತಿಹಾಸ ತಜ್ಞರ ಮೊರೆ ಹೋಗದೆ ವಾಟ್ಸಾಪ್ ವಿಶ್ವವಿದ್ಯಾಲಯಗಳ ಮೊರೆ ಹೋಗಿದ್ದು, ಇಡೀ ಪ್ರಸಂಗವನ್ನೇ ನಗೆಪಾಟಲಿಗೀಡುಮಾಡಿತ್ತು. ರಾಜ್ಯ ಸರ್ಕಾರ ಬೌದ್ಧಿಕವಾಗಿ ಕೊಂಚ ಪ್ರಬುದ್ಧತೆಯಿಂದ ವರ್ತಿಸಿದ್ದರೂ, ಕೊನೆಯ ಕ್ಷಣದ ಮುಜುಗರಗಳಿಂದ ತಪ್ಪಿಸಿಕೊಳ್ಳಬಹುದಿತ್ತು.
ಆರ್ಥಿಕ ನೆಲೆಯಲ್ಲಿ ರಾಜ್ಯದ ಸಾಧನೆಯನ್ನು ಗಮನಿಸುವಾಗ ಮಾರುಕಟ್ಟೆ ಸೂಚ್ಯಂಕಗಳು ಆಶಾದಾಯಕ ಚಿತ್ರಣವನ್ನೇ ನೀಡಿದರೂ ತಳಮಟ್ಟದಲ್ಲಿ ಜನಸಾಮಾನ್ಯರ ನಿತ್ಯ ಜೀವನ ದುರ್ಭರವಾಗಿರುವುದು ಸ್ಪಷ್ಟ. ಕೋವಿದ್ ನಂತರದಲ್ಲಿ ದುಡಿಯುವ ವರ್ಗಗಳಲ್ಲಿ ಉಂಟಾದ ಪಲ್ಲಟಗಳು ಮತ್ತು ಪ್ರಕ್ಷುಬ್ಧತೆಗಳು ಅನೇಕ ಕುಟುಂಬಗಳನ್ನು ಬೀದಿಪಾಲು ಮಾಡಿವೆ. ಆಡಳಿತ ವ್ಯವಸ್ಥೆಯೊಳಗಿನ ವ್ಯಾಪಕ ಭ್ರಷ್ಟಾಚಾರ ಮತ್ತು ಬೇಜವಾಬ್ದಾರಿಯ ಪರಿಣಾಮವಾಗಿಯೇ ಅನೇಕಾನೇಕ ಜೀವಗಳು ಬಲಿಯಾಗಿವೆ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಇಲ್ಲದೆ ಮಡಿದ 35 ಮಂದಿ ಅಮಾಯಕರು ವ್ಯವಸ್ಥೆಯ ನಿಷ್ಕ್ರಿಯತೆಗೆ ಶಾಶ್ವತ ಸ್ಮಾರಕಗಳಾಗಿಯೇ ಕಾಣುತ್ತಾರೆ. ನಿತ್ಯಾವಶ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ, ನಾಳಿನ ಚಿಂತೆಗಳಲ್ಲೇ ಕಾಲ ಕಳೆಯುತ್ತಿರುವ ಅಸಂಖ್ಯಾತ ದುಡಿಯುವ ಜೀವಗಳಿಗೆ ಸುಗಮ ಜೀವನೋಪಾಯ ಮಾರ್ಗಗಳನ್ನು ರೂಪಿಸುವುದು, ಜೀವನಾಂಶದ ಆದಾಯವನ್ನು ಹೆಚ್ಚಿಸುವುದು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರದ ಆದ್ಯತೆಯಾಗಬೇಕಲ್ಲವೇ ? ಆದರೆ ರಾಜ್ಯ ಸರ್ಕಾರದ ಗಮನ ಹರಿದದ್ದು ದಶಪಥ ರಸ್ತೆಗಳ ಕಡೆಗೆ, ವಂದೇಭಾರತ್ ರೈಲುಗಳು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ ರೈಲುಗಳು ಮತ್ತು ಹೆದ್ದಾರಿಗಳ ಕಡೆಗೆ. ಈ ಐಷಾರಾಮಿ ಜಗತ್ತಿನ ಒಳಗೇ ತಮ್ಮ ಬದುಕು ಸವೆಸಲು ಸೆಣಸಾಡುತ್ತಿದ್ದ ಲಕ್ಷಾಂತರ ಶ್ರಮಿಕರ ಬವಣೆಯನ್ನು ನೀಗಿಸುವುದು ಚುನಾಯಿತ ಸರ್ಕಾರದ ಆದ್ಯತೆಯಾಗಬೇಕು. ಇದು ಪ್ರಜಾಪ್ರಭುತ್ವದ ಲಕ್ಷಣ.
ದುರಾದೃಷ್ಟವಶಾತ್ ರಾಜ್ಯ ಬಿಜೆಪಿ ಸರ್ಕಾರ ಈ ಶ್ರಮಿಕರ ಆಗ್ರಹಗಳಿಗೆ ಕಿವಿಗೊಡಲೂ ಮುಂದಾಗಲಿಲ್ಲ. ಸಾವಿರಾರು ಪೌರ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸೇವೆ ಮತ್ತು ಆಶಾ ಕಾರ್ಯಕರ್ತೆಯರು, ಜೀವನವಿಡೀ ಹಂಗಾಮಿ/ತಾತ್ಕಾಲಿಕ ನೌಕರಿಯಲ್ಲೇ ಕಳೆಯುವ ಅತಿಥಿ ಶಿಕ್ಷಕರು, ಉಪನ್ಯಾಸಕರು ಹಾಗೂ ನಿತ್ಯ ದುಡಿಮೆಯನ್ನೇ ಅವಲಂಭಿಸಿ ಬದುಕುವ ಲಕ್ಷಾಂತರ ವಲಸೆ ಕಾರ್ಮಿಕರು ಸರ್ಕಾರದ ಆರ್ಥಿಕ ನೀತಿಗಳ ಕೇಂದ್ರ ಬಿಂದುಗಳಾಗಬೇಕಿತ್ತು. ಬದಲಾಗಿ ಕಾರ್ಪೋರೇಟ್ ಮಾರುಕಟ್ಟೆಯ ಹಿತಾಸಕ್ತಿಗಳನ್ನು ಕಾಪಾಡುವ ದೃಷ್ಟಿಯಿಂದಲೇ ಆರ್ಥಿಕ ನೀತಿಗಳನ್ನು ರೂಪಿಸಲು ಮುಂದಾದ ರಾಜ್ಯ ಸರ್ಕಾರ ಔದ್ಯಮಿಕ ವಲಯದ ನೌಕರರ ದುಡಿಮೆಯ ಅವಧಿಯನ್ನು ನಾಲ್ಕು ಗಂಟೆಗಳ ಕಾಲ ಹೆಚ್ಚಿಸಿ, ಕಾರ್ಮಿಕರನ್ನು ಮತ್ತೊಮ್ಮೆ ಸಂಕೋಲೆಗಳಲ್ಲಿ ಬಂಧಿಸಿದೆ. ಶಾಶ್ವತ ನೌಕರಿಯ ಭರವಸೆಯೇ ಇಲ್ಲದ ಕೋಟ್ಯಂತರ ಯುವ ಜೀವಗಳು ಮಾರುಕಟ್ಟೆಯ ವ್ಯತ್ಯಯಗಳನ್ನೇ ಅವಲಂಬಿಸಿ ಅನಿಶ್ಚಿತ ಜೀವನ ನಡೆಸುವ ಪರಿಸ್ಥಿತಿ ಎದುರಾಗಿದೆ. ಶೈಕ್ಷಣಿಕ ವಲಯದಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಬೋಧಕರಾಗಿಯೇ ನಿವೃತ್ತಿಯ ಅಂಚಿಗೆ ತಲುಪಿರುವ ಸಾವಿರಾರು ಮಂದಿ ತಮ್ಮ ವೃದ್ಧಾಪ್ಯ ಜೀವನದ ಬಗ್ಗೆ ಆತಂಕದಿಂದಿರುವುದನ್ನು ಮೇಲ್ನೋಟಕ್ಕೇ ಗಮನಿಸಬಹುದು. ಈ ಶ್ರಮಿಕ ವರ್ಗಗಳ ಆಗ್ರಹಗಳನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಸೋತಿದೆ. ಕಾರ್ಪೋರೇಟ್ ಆರ್ಥಿಕ ನೀತಿಗಳು ಶ್ರಮಿಕರ ಬದುಕಿಗೆ ಎಷ್ಟರ ಮಟ್ಟಿಗೆ ಮಾರಕವಾಗುತ್ತಿದೆ ಎನ್ನುವುದರ ಪ್ರಾತ್ಯಕ್ಷಿಕೆಯನ್ನು ಕರ್ನಾಟಕದಲ್ಲಿ ಮುಷ್ಕರ ನಿರತ ಶ್ರಮಿಕರ ಕಣ್ಣುಗಳ ಮೂಲಕ ನೋಡಬೇಕಿದೆ. ಹೀಗಿರಬೇಕಾದ್ದು ಪ್ರಜಾಪ್ರಭುತ್ವದ ಮೂಲ ಗುಣಲಕ್ಷಣ.
ಮೇ 10ರ ಚುನಾವಣೆಗಳಲ್ಲಿ ಹೀನಾಯವಾಗಿ ಪರಾಭವ ಅನುಭವಿಸಿದ ಬಿಜೆಪಿ ಈ ಎಲ್ಲ ವಿಚಾರಗಳಲ್ಲೂ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತದೆ. ಹಿಂದುತ್ವ ಅಥವಾ ಹಿಂದೂ ರಾಷ್ಟ್ರ ನಿರ್ಮಾಣದ ಬದ್ಧತೆಗೆ ಒಂದು ರಾಜ್ಯದ ಸಾಮಾನ್ಯ ಜನತೆ ಇಷ್ಟೆಲ್ಲಾ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಬೇಕೇ ಎಂಬ ಪ್ರಶ್ನೆ ಶ್ರಿಸಾಮಾನ್ಯನನ್ನು ಕಾಡಿರುವುದರಿಂದಲೇ ರಾಜ್ಯದ ಶೇ 64ರಷ್ಟು ಜನತೆ ಆಡಳಿತಾರೂಢ ಸರ್ಕಾರವನ್ನು ತಿರಸ್ಕರಿಸಿದ್ದಾರೆ. ಈ ಶೇಕಡಾ 64ರ ಪೈಕಿ ಶೇ 90ರಷ್ಟು ಹಿಂದೂಗಳೇ ಇರುವುದನ್ನೂ ಗಮನಿಸಬೇಕಲ್ಲವೇ ? ಅಂದರೆ ಬಿಜೆಪಿ ಅನುಮೋದಿಸುವ ಹಿಂದುತ್ವ ಯೋಜನೆಯನ್ನು ಸಮಸ್ತ ಹಿಂದೂಗಳೂ ಯಥಾವತ್ತಾಗಿ ಸ್ವೀಕರಿಸುವುದಿಲ್ಲ, ಷರತ್ತುಗಳು ಅನ್ವಯಿಸುತ್ತವೆ ಎಂಬ ಸಂದೇಶವನ್ನು ನೀಡಿದ್ದಾರೆ. ಬಿಜೆಪಿಗೆ ಮತ ನೀಡಿರುವ ಶೇ 36ರಷ್ಟು ಜನಸಂಖ್ಯೆಯಲ್ಲೂ ಸಹ ಇಂತಹ ಪ್ರಕ್ಷುಬ್ಧ ವಾತಾವರಣವನ್ನು, ತಾರತಮ್ಯಗಳನ್ನು, ಅನ್ಯಾಯಗಳನ್ನು ವಿರೋಧಿಸುವ ಮನಸುಗಳು ಧಾರಾಳವಾಗಿ ಇರುತ್ತವೆ. ಭಾರತದ ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆ ಇಂತಹ ಮನಸುಗಳಿಗೆ ನೆಲೆ ಒದಗಿಸುತ್ತವೆ.
ಅಂತಿಮವಾಗಿ ಅನ್ನ-ನೀರು –ಸೂರು –ಬಟ್ಟೆ ಈ ನಾಲ್ಕು ಅತ್ಯವಶ್ಯ ವಸ್ತುಗಳನ್ನು ಪೂರೈಸದೆ ಹೋದರೆ ಎಂತಹುದೇ ಭಾವನಾತ್ಮಕ ವಿಚಾರವೂ, ಎಂತಹುದೇ ಭಾವಾವೇಶದ ಘೋಷಣೆಯೂ, ಎಂತಹುದೇ ಅತಿರೇಕಗಳೂ ಶ್ರೀಸಾಮಾನ್ಯನನ್ನು ಪ್ರಭಾವಿಸುವುದಿಲ್ಲ ಎಂಬ ಕಠೋರ ಸತ್ಯವನ್ನು ಕರ್ನಾಟಕದ ಜನತೆ ಅನಾವರಣಗೊಳಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಸೌಂದರ್ಯದ ಒಳಗುಟ್ಟು ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆ ನಮಗೆ ಕಲಿಸುವಂತಹ ಪಾಠ. ಈ ಪಾಠ ಸೋತಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಮಾತ್ರ ಅಲ್ಲದೆ ಅಧಿಕಾರ ವಹಿಸಿಕೊಳ್ಳಲಿರುವ ಕಾಂಗ್ರೆಸ್ ಪಕ್ಷಕ್ಕೂ ಅನ್ವಯಿಸುತ್ತದೆ. ಕಾಂಗ್ರೆಸ್ ಪಾಠ ಕಲಿಯುವುದೇ ? ಉತ್ತರ ಶೋಧಿಸೋಣ.
(ಮುಂದಿನ ಲೇಖನದಲ್ಲಿ)