ಕೆಂಪುಕೋಟೆಯಲ್ಲಿ (Red fort) ರಾಷ್ಟ್ರಧ್ವಜದ ಬದಲು ಭಗವಾಧ್ವಜ (bhagwa flag) ಹಾರಿಸಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ (KS Eashwarappa) ಅವರು ರಾಜೀನಾಮೆ ನೀಡಬೇಕು ಅಥವಾ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ (Congress) ನಡೆಸುತ್ತಿರುವ ಅಹೋರಾತ್ರಿ ಧರಣಿ ನಡೆಸುತ್ತಿದೆ ಮತ್ತಿದು ಅನಿರ್ದಿಷ್ಠಾವಧಿ ಮುಂದುವರೆಯು ಸಾಧ್ಯತೆ ಇದ್ದು ಈ ಹಿನ್ನೆಲೆಯಲ್ಲಿ ಉಭಯ ಸದನವನ್ನು ಅನಿರ್ದಿಷ್ಠಾವಧಿ ಕಾಲ ಮುಂದೂಡುವ ಸಾಧ್ಯತೆ ಇದೆ. ಹಾಗಾಗಿ ಈ ಕುರಿತು ಟ್ವೀಟ್ (Tweet) ಮೂಲಕ ಪ್ರತಿಕ್ರಿಯಿಸಿರುವ ಮಾಜಿ ಸಿಎಂಕುಮಾರಸ್ವಾಮಿ (H D Kumaraswamy) ವಿಧಾನಮಂಡಲ ಕಲಾಪ ʼರಾಜಕೀಯ ಪ್ರತಿಷ್ಠೆʼಗೆ ಆಹುತಿಯಾಗಿದೆ ಎಂದು ಬೇಸರ ವ್ಯಕ್ತಪಿಸಿದ್ದಾರೆ.
ಕಳೆದೆರಡು ದಿನಗಳ ವಿಧಾನಮಂಡಲ ಕಲಾಪ (legislature session) ʼರಾಜಕೀಯ ಪ್ರತಿಷ್ಠೆʼಗೆ ಆಹುತಿಯಾಗಿದೆ. ಬೆಳಗಾವಿ ಕಲಾಪವನ್ನು ಬಲಿ ಪಡೆದ ಮೇಲೂ ರಾಜ್ಯಪಾಲರ ಭಾಷಣದ ಮೇಲೆ ಅಮೂಲ್ಯ ಚರ್ಚೆ ನಡೆಸಬೇಕಿದ್ದ ಈ ಸದನಕ್ಕೂ ಅದೇ ಚಾಳಿ ವಕ್ಕರಿಸಿದೆ. ʼಪ್ರಜಾಪ್ರಭುತ್ವಕ್ಕೆ ಗ್ರಹಣʼ ಹಿಡಿಸುವ ಕೆಲಸ ನಡೆದಿದೆ ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಆಕ್ರೋಸವನ್ನು ಹೊರಹಾಕಿದ್ದಾರೆ.
“ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವುದೇ ಪ್ರಜಾಪ್ರಭುತ್ವ.” ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಾಹಂ ಲಿಂಕನ್ (abraham lincoln) ಹೇಳಿದ ಈ ಮಾತು ಪ್ರಜಾಸತ್ತೆಯನ್ನು ಗೌರವಿಸುವ ಪ್ರತಿ ವ್ಯಕ್ತಿಗೂ ದಾರಿದೀಪ. ಆದರೆ, ಇವತ್ತು ಪ್ರಜಾಪ್ರಭುತ್ವವೆಂದರೆ; “ರಾಜಕೀಯದಿಂದ, ರಾಜಕೀಯಕ್ಕಾಗಿ, ರಾಜಕೀಯಕ್ಕೊಸ್ಕರವೇ” ಎನ್ನುವಂತಾಗಿದೆ ಎಂದು ಹೇಳಿದ್ದಾರೆ.
ಹತ್ತು ನಿಮಿಷ ಧರಣಿ, ಆಮೇಲೆ ಕಲಾಪ ಮುಂದೂಡುವುದು; ಸದನ ನಡೆಯುವ ರೀತಿ ಇದೇನಾ? ಯಾವ ಪುರುಷಾರ್ಥಕ್ಕೆ ಈ ಅಧಿವೇಶನ? ದಿನಕ್ಕೆ1.5-2 ಕೋಟಿ ರೂ.ನಷ್ಟು ಪೋಲಾಗುವ ಜನರ ತೆರಿಗೆ ಹಣಕ್ಕೆ ಉತ್ತರದಾಯಿತ್ವ ಯಾರದ್ದು? ಅವರ ನಿರೀಕ್ಷೆಗಳನ್ನು ʼಕಾಲ ಕಸʼ ಮಾಡಿಕೊಂಡ ರಾಜಕೀಯ ಪ್ರತಿಷ್ಠೆಗೆ ಕೊನೆ ಇಲ್ಲವೆ? ಎಂದು ಪ್ರಶ್ನಿಸಿದ್ದಾರೆ.
ಕೋವಿಡ್ʼನಿಂದ (Covid) ಎರಡು ವರ್ಷ ಮಕ್ಕಳ ಶಿಕ್ಷಣ ಹಾಳಾಯಿತು. ಈಗ ಹಿಜಾಬ್ (Hijab), ಕೇಸರಿ ಶಾಲು ಗಲಾಟೆಯಿಂದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆಯೇ ಸಂಘರ್ಷದ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಹೊಣೆ ಯಾರು? ಸಮಾಜಘಾತುಕ ಶಕ್ತಿಗಳನ್ನು ಹತ್ತಿಕ್ಕುವ ಜವಾಬ್ದಾರಿ ರಾಜಕೀಯ ಪಕ್ಷಗಳಿಗೆ ಇಲ್ಲವೇ? ಎಂದು ಸರಣಿ ಪ್ರಸ್ನೆಗಳನ್ನು ಸರ್ಕಾರದ ಮುಂದಿರಿಸಿದ್ದಾರೆ.
ಕಲಾಪಕ್ಕೆ ʼಜನಪರ ಅಜೆಂಡಾʼ ಇರಬೇಕೆ ವಿನಾ ʼಚುನಾವಣೆ ಅಜೆಂಡಾʼ (election agenda) ಅಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಅಧಿವೇಶನವು ʼಮತ ಗಳಿಕೆಗೆ ಗುರಾಣಿʼ ಆಗಿರುವುದು ದುರದೃಷ್ಟಕರ. ತಮ್ಮ ಪ್ರತಿಷ್ಠೆಗೆ ಕಲಾಪವನ್ನು ಹಳಿತಪ್ಪಿಸಿ ಜನರ ನಿರೀಕ್ಷೆಗಳನ್ನು ಹೊಸಕಿ ಹಾಕುವುದು ʼರಾಷ್ಟ್ರೀಯ ಪಕ್ಷಗಳ ರಕ್ಕಸ ರಾಜಕಾರಣʼಕ್ಕೆ ನಿದರ್ಶನ ಎನ್ನುವುದು ನನ್ನ ಅಭಿಪ್ರಾಯ ಎಂದಿದ್ದಾರೆ.
ಜನರು ಕಷ್ಟದಲ್ಲಿದ್ದಾರೆ. ಕೋವಿಡ್ʼನಿಂದ ಅವರ ಬದಕಿನ ಬವಣೆ ಹೆಚ್ಚಿ ರೋಸಿ ಹೋಗಿದ್ದಾರೆ. ಅವರು ರೊಚ್ಚಿಗೇಳುವ ಮುನ್ನ ಆಡಳಿತಾರೂಢ ಬಿಜೆಪಿ (BJP) & ಅಧಿಕೃತ ಪ್ರತಿಪಕ್ಷ ಕಾಂಗ್ರೆಸ್ ಎಚ್ಚೆತ್ತುಕೊಂಡು ತಮ್ಮ ಜನವಿರೋಧಿ ನೀತಿ ಬದಲಿಸಿಕೊಳ್ಳಬೇಕು. ವಿಧಾನ ಕಲಾಪಕ್ಕೆ ಕುಣಿಕೆ ಬಿಗಿಯುವ ಹೀನ ರಾಜಕಾರಣ ನಿಲ್ಲಲಿ ಎಂದು ಆಗ್ರಹಿಸಿದ್ದಾರೆ.