ರಾಜ್ಯದಲ್ಲಿ ದಿನ ಕಳೆದಂತೆ ಅಪರಾಧ ಪ್ರಕರಣಗಳು ಅಧಿಕವಾಗುತ್ತಿವೆ. ಹಾಡಹಗಲೇ ಕೊಲೆ, ಸುಲಿಗೆ ಹಾಗೂ ಅತ್ಯಾಚಾರದಂತಹ ಘನ ಘೋರ ಕೃತ್ಯಗಳಿಗೆ ಕರ್ನಾಟಕ ಅದರಲ್ಲೂ ಬೆಂಗಳೂರು ಸಾಕ್ಷಿಯಾಗುತ್ತಿರುವುದು ದುರಂತ. ಆದರೆ ಗೃಹ ಇಲಾಖೆ(Home Ministry) ಮಾತ್ರ ಕ್ರೈಂಗಳ ಸಂಖ್ಯೆ, ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಹೇಳಿಕೊಳ್ಳುತ್ತಿದೆ.

ಈ ನಡುವೆಯೇ ಕಳೆದೆರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಉದ್ಯಮಿಯೊಬ್ಬರ ಮೇಲೆ ಏರ್ ಗನ್‌ನಿಂದ ಫೈಯರಿಂಗ್ ಮಾಡಲಾಗಿದೆ. ಬಸವನಗುಡಿಯ ಕೃಷ್ಣರಾವ್ ಪಾರ್ಕ್‌ನಲ್ಲಿ ಈ ಘಟನೆ ನಡೆದಿದ್ದು, ನರ್ತಕಿ ಹಾಗೂ ಕಾರ್ಗಿಲ್ ಬಾರ್ ಮಾಲೀಕ ರಾಜಗೋಪಾಲ್ ಕತ್ತಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ.

ಡಿಸೆಂಬರ್ 10ರ ರಾತ್ರಿ 8:30ರ ಸುಮಾರಿನಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡ ಉದ್ಯಮಿ ರಾಜಗೋಪಾಲ್ ರನ್ನ ತಕ್ಷಣ ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ವಿಚಾರಣೆ ನಡೆಸಿದ ಬಸವನಗುಡಿ ಪೊಲೀಸರಿಗೆ ಯಾವುದೇ ವ್ಯಕ್ತಿಗಳ ಮೇಲೆ ಅನುಮಾನ ಬಂದಿಲ್ಲ. ಅಲ್ಲದೆ ನನಗೆ ಯಾವ ಬೆದರಿಕೆ ಕರೆಯೂ ಬಂದಿಲ್ಲ. ಯಾಕಾಗಿ ಫೈರಿಂಗ್ ಆಯ್ತು..? ಯಾವ ಕಾರಣಕ್ಕೆ ಗುಂಡು ಹಾರಿಸಿದ್ರು..? ಇದರ ಬಗ್ಗೆ ಗೊತ್ತಿಲ್ಲಾ ಎಂದು ಉದ್ಯಮಿ ರಾಜಗೋಪಾಲ್ ಹೇಳಿದ್ದಾರಂತೆ. ಘಟನೆ ಸಂಬಂಧ ನಿನ್ನೆ ಎಫ್‌ಐಆರ್ ದಾಖಲಿಸಲಾಗಿದೆ. ಸದ್ಯ ಬಸವನಗುಡಿ ಪೊಲೀಸರು ಏರ್ ಗನ್ ಶೂಟರ್‌ನ ಹುಡುಕಾಟ ನಡೆದಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.

ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿದೆ. ಫೈರಿಂಗ್, ಕೊಲೆ ಹಾಗೂ ದರೋಡೆ ಹೀಗೆ ಅಪರಾಧಗಳು ನಡೆಯುತ್ತಿರುವುದು ನಿಜಕ್ಕೂ ಕಳವಳಕಾರಿ ವಿಚಾರವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ಇಲಾಖೆಯ ಸಚಿವರು, ಅಧಿಕಾರಿಗಳ ವಿಫಲತೆಯನ್ನು ತಳ್ಳಿ ಹಾಕುವಂತಿಲ್ಲ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿನ ಅಪರಾಧಗಳನ್ನು ತಡೆಯಲು ಮುಂದಾಗಬೇಕಿದೆ.












