ಕರ್ನಾಟಕದಲ್ಲಿ ಬಿಜೆಪಿ ನಿಧಾನವಾಗಿ ಸ್ಟ್ರಾಟಜಿ ಮಾಡುತ್ತಾ ಇಡೀ ಕಾಂಗ್ರೆಸ್ ಪಕ್ಷಕ್ಕೆ ಡೇಂಜರಸ್ ಆಗ್ತಿದೆ. ನರೇಂದ್ರ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಲೋಕಸಭಾ ವಿರೋಧ ಪಕ್ಷದ ನಾಯಕನಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಮೋದಿ ಸರ್ಕಾರದ ವಿರುದ್ಧ ಅಬ್ಬರಿಸಿದ್ದರು. ಆ ಬಳಿಕ 2019ರ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಿಂದ ಅಖಾಡಕ್ಕೆ ಇಳಿದಿದ್ದ ಮಲ್ಲಿಕಾರ್ಜುನ ಖರ್ಗೆ(Mallikarjun Karge) ವಿರುದ್ಧ ಸ್ಟ್ರಾಟಜಿ ಮಾಡಿದ್ದ ಕೇಂದ್ರದ ಬಿಜೆಪಿ ನಾಯಕರು ಉಮೇಶ್ ಜಾಧವ್ ಅವರನ್ನೇ ಕಾಂಗ್ರೆಸ್ನಿಂದ ಸೆಳೆದು ಖರ್ಗೆ ವಿರುದ್ಧ ಅಖಾಡಕ್ಕೆ ಇಳಿಸಿದ್ದರು. ಆ ಬಳಿಕ ಖರ್ಗೆಯನ್ನು ಕ್ಷೇತ್ರದಲ್ಲೇ ಕಟ್ಟಿ ಹಾಕಿದ್ದೂ ಅಲ್ಲದೆ ಸೋಲಿಸುವ ಮೂಲಕ ಘಟಾನುಘಟಿ ನಾಯಕನ ರಾಜಕೀಯಕ್ಕೆ ಕೊಡಲಿ ಪೆಟ್ಟು ಹಾಕಿದ್ದರು.
ಲೋಕಸಭಾ ಚುನಾವಣೆಯಲ್ಲಿ ಸೋಲುಂಡ ಬಳಿಕ ಕಾಂಗ್ರೆಸ್ ಪಕ್ಷ ಖರ್ಗೆ ಅವರಿಗೆ AICC ಅಧ್ಯಕ್ಷರನ್ನಾಗಿ ಮಾಡಿತು. ಜೊತೆಗೆ ರಾಜ್ಯಸಭಾ ಸದಸ್ಯರು ಹಾಗು ರಾಜ್ಯಸಭಾ ವಿರೋಧ ಪಕ್ಷದ ನಾಯಕರನ್ನಾಗಿಯೂ ಆಯ್ಕೆಯಾಗಿದ್ದಾರೆ. ಆದರೂ ಈ ಬಾರಿ ಲೋಕಸಭಾ ಚುನಾವಣೆಯಿಂದ ಮಲ್ಲಿಕಾರ್ಜುನ ಖರ್ಗೆ ಹೊರಗುಳಿದಿದ್ದಾರೆ. ಅದಕ್ಕೆ ಕಾರಣ ಮತ್ತೆ ಸೋಲುಂಡರೆ ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಮುಜುಗರ ಅನ್ನೋದು ಒಂದು ಕಡೆ ಆದರೆ, ಇನ್ನೊಂದು ಕಡೆ ಇಡೀ ದೇಶಾದ್ಯಂತ ಪ್ರಚಾರಕ್ಕೆ ಓಡಾಡಲು ಸಾಧ್ಯವಿಲ್ಲ ಎನ್ನುವುದೇ ಆಗಿದೆ. ಅದೇ ರೀತಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕ್ಷೇತ್ರಕ್ಕೆ ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡಿದೆ ಎನ್ನಲಾಗ್ತಿದೆ.
ಕರ್ನಾಟಕಕ್ಕೆ ಸರಿಯಾದ ರೀತಿಯಲ್ಲಿ ತೆರಿಗೆ (Tax)ಪಾಲು ನೀಡದಿದ್ದರೆ ಪ್ರತ್ಯೇಕ ರಾಷ್ಟ್ರವನ್ನು ಕೇಳಬೇಕಾಗುತ್ತದೆ ಎಂದು ಲೋಕಸಭಾ ಅಧಿವೇಶನದ ವೇಳೆ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಹೇಳಿದ್ದರು. ಈ ಮಾತು ಭಾರೀ ಪ್ರಚಾರ ಹಾಗು ವಿರೋಧಕ್ಕೂ ಕಾರಣವಾಗಿತ್ತು. ಆ ಬಳಿಕ ಸುರೇಶ್ ಮಾತನ್ನು ಪ್ರಧಾನಿ ಮೋದಿ ಹಾಗು ಮಲ್ಲಿಕಾರ್ಜುನ ಖರ್ಗೆಯೂ ವಿರೋಧ ಮಾಡಿದ್ದರು. ಆ ಬಳಿಕ ಸುರೇಶ್ ಮಣಿಸುವ ಮಾಸ್ಟರ್ ಪ್ಲ್ಯಾನ್ ಸಜ್ಜಾಗಿತ್ತು. ಬೆಂಗಳೂರು ಗ್ರಾಮಾಂತರದಲ್ಲಿ ಭ್ರಹ್ಮಾಂಡ ರೀತಿಯಲ್ಲಿ ರಾಜಕೀಯ ಶಕ್ತಿ ಹೊಂದಿರುವ ಸುರೇಶ್ ಸೋಲಿಸುವುದು ಅಷ್ಟಯ ಸುಲಭದ ಮಾತಲ್ಲ ಎನ್ನುವುದು ಬಿಜೆಪಿ ಹಾಗು ಜೆಡಿಎಸ್ ನಾಯಕರಿಗೆ ಗೊತ್ತಿರುವ ಸಂಗತಿಯಾಗಿದೆ. ಅದೇ ಕಾರಣಕ್ಕೆ ಡಿ.ಕೆ ಸುರೇಶ್ ಎದುರಾಳಿಯಾಗಿ ನಿವೃತ್ತ ಜಯದೇವ ಆಸ್ಪತ್ರೆ ನಿರ್ದೇಶಕ ಡಾ ಮಂಜುನಾಥ್ ಅವರನ್ನು ಕಣಕ್ಕೆ ಇಳಿಸಲಾಗಿದೆ.
ಎನ್ಡಿಎ ಅಭ್ಯರ್ಥಿ ಡಾ ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ಗೆ( D.K Suresh)ಯಾವುದೇ ರೂಪದಲ್ಲೂ ರಾಜಕೀಯ ಎದುರಾಳಿ ಆಗುವುದಕ್ಕೆ ಸಾಧ್ಯವಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ ಇತ್ತೀಚಿಗೆ ಪಕ್ಷ, ಜಾತಿ ಎಲ್ಲವನ್ನೂ ಮರೆತು ಜನರು ಡಾ ಮಂಜುನಾಥ್ (Dr Manjunath)ವೈದ್ಯಕೀಯ ಸೇವೆಯಲ್ಲಿ ಮಾಡಿರುವ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜಯದೇವ ಅನ್ನೋ ಅರೆ ಸರ್ಕಾರಿ ಸಂಸ್ಥೆಯನ್ನು ಖಾಸಗಿ ಆಸ್ಪತ್ರೆಯನ್ನು ಮೀರಿಸುವಂತೆ ಕಟ್ಟಿದ ಹಾಗು ಬಡವರಿಗೂ ಉತ್ತಮ ಚಿಕಿತ್ಸೆ ಸಿಗುವಂತೆ ಮಾಡಿರುವ ಕೆಲಸಗಳ ಬಗ್ಗೆ ಮಾತನಾಡುತ್ತಿದ್ದಾರೆ. ಜನರಿಗೆ ಸುರೇಶ್ ಎದುರು ಮಂಜುನಾಥ್ ಉತ್ತಮ ವ್ಯಕ್ತಿ ಅನ್ನೋದು ಅರಿವು ಬಂದಂತೆ ಕಾಣಿಸುತ್ತಿದೆ. ಹಣ ಚೆಲ್ಲಿದ ಮಾತ್ರಕ್ಕೆ ಜನ ಮತ ಹಾಕುತ್ತಾರೆ ಎನ್ನುವುದನ್ನು ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನರು ಸುಳ್ಳು ಮಾಡುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಎಲ್ಲೆಡೆ ಡಾ ಮಂಜುನಾಥ್ ಉತ್ತಮ ಅಭ್ಯರ್ಥಿ, ಅಂತವರು ನಮ್ಮ ಕ್ಷೇತ್ರದಿಂದ ಆಯ್ಕೆಯಾಗಿ ಕೇಂದ್ರದಲ್ಲಿ ಆರೋಗ್ಯ ಸಚಿವರಾಗಲಿ ಅನ್ನೋ ಮಾತುಗಳು ಕೇಳಿ ಬರುತ್ತಿವೆ.
ಅಂದ ಮಾತ್ರಕ್ಕೆ ಕೇಂದ್ರದ ಸ್ಟ್ರಾಟಜಿ ಡಿ.ಕೆ ಸುರೇಶ್ ಅಲ್ಲ, ಬದಲಿಗೆ ಡಿ.ಕೆ ಶಿವಕುಮಾರ್.( D.K Shivakumar ) ಕಳೆದ ಬಾರಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿ ಭರ್ಜರಿ ಜಯ ದಾಖಲು ಮಾಡಿದ್ದ ಡಿ.ಕೆ ಶಿವಕುಮಾರ್ ಸಹೋದರ ಡಿ.ಕೆ ಸುರೇಶ್ ಸೋಲಿಸಿದರೆ ಅದು ಡಿ.ಕೆ ಶಿವಕುಮಾರ್ಗೆ ಆದಂತ ಸೋಲು ಎನ್ನುವುದು ಬಿಜೆಪಿ ಲೆಕ್ಕಾಚಾರ. ತನ್ನ ಕ್ಷೇತ್ರದಲ್ಲೇ ಒಮ್ಮೆ ಸೋಲುಣಿಸಿದರೆ ರಾಜ್ಯದಲ್ಲಿ ಪ್ರಭಾವ ಕುಸಿತ ಆಗುವ ಜೊತೆಗೆ ಕಾಂಗ್ರೆಸ್ನಲ್ಲಿ ಇರುವ ಬಲಾಢ್ಯ ವ್ಯಕ್ತಿಯನ್ನು ಬಗ್ಗುಬಡಿದಂತೆಯೇ ಸರಿ. ಜನರ ನಿರ್ಧಾರದ ಮೇಲೆ ಬಿಜೆಪಿ ಲೆಕ್ಕಾಚಾರದ ಭವಿಷ್ಯ ನಿಂತಿದೆ.
ಕೃಷ್ಣಮಣಿ