ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯಲ್ಲಿ ಚೌಕಿ ಫಾಟಾ ಪ್ರದೇಶದಲ್ಲಿ ನೆಲೆಗೊಂಡಿರುವ ತರ್ಸಾಲಿಯ ಗುಪ್ತಕಾಶಿ-ಗೌರಿಕುಂಡ್ ಹೆದ್ದಾರಿಯಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ಕಾರಿನಲ್ಲಿದ್ದ ಐದು ಮಂದಿ ಯಾತ್ರಾರ್ಥಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಶನಿವಾರ (ಆಗಸ್ಟ್ 12) ತಿಳಿಸಿದ್ದಾರೆ.
ಕೇದರನಾಥಕ್ಕೆ ಹೊರಡುವ ಮಾರ್ಗ ಮಧ್ಯದಲ್ಲಿ ಈ ದುರಂತ ಸಂಭವಿಸಿದೆ. ಗುರುವಾರ (ಆಗಸ್ಟ್ 10) ಸಂಜೆ ದುರಂತ ಸಂಭವಿಸಿದೆ. ಸಂತ್ರಸ್ತರು ಗುಜರಾತ್ ಮೂಲದವರು ಎಂದು ತಿಳಿದು ಬಂದಿದೆ. ಇವರೆಲ್ಲ ಕಾರಿನಲ್ಲಿ ಕೇದಾರನಾಥಕ್ಕೆ ತೆರಳುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಾಖಂಡ ಕೇದಾರನಾಥಕ್ಕೆ ಹೊರಡುವ ಮಾರ್ಗದಲ್ಲಿ ಕಾರೊಂದು ನಾಪತ್ತೆಯಾಗಿರುವ ಬಗ್ಗೆ ಗುರುವಾರ ತಡರಾತ್ರಿ ಮಾಹಿತಿ ಬಂದಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಶುಕ್ರವಾರದಂದು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿ, ಭೂಕುಸಿತದ ಅವಶೇಷಗಳಡಿ ಸಿಲುಕಿ ಹಾಕಿಕೊಂಡಿದ್ದ ಸ್ವಿಫ್ಟ್ ಡಿಜೈರ್ ಕಾರು ಹಾಗೂ ಮೃತದೇಹವನ್ನು ಹೊರ ತೆಗೆಯಲಾಯಿತು ಎಂದು ರುದ್ರಪ್ರಯಾಗ ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ನಂದನ್ ಸಿಂಗ್ ರಾಜ್ವಾರ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ಗುಂಡಿಕ್ಕಿ ಬಿಜೆಪಿ ಮುಖಂಡನ ಹತ್ಯೆ ; ವಿಡಿಯೊ
“ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯಲ್ಲಿ ಭೂಕುಸಿತದ ಪರಿಣಾಮ ತರ್ಸಾಲಿಯ ಗುಪ್ತಕಾಶಿ-ಗೌರಿಕುಂಡ್ ಹೆದ್ದಾರಿಯ 60 ಕಿ.ಮೀ ಉದ್ದದ ರಸ್ತೆ ಮಾರ್ಗ ಕಡಿತಗೊಂಡಿದೆ. ಫಟಾ ಮತ್ತು ಸೋನ್ಪ್ರಯಾಗ್ ನಡುವೆ ರಸ್ತೆ ಸಂಚಾರವೂ ಸ್ಥಗಿತಗೊಂಡಿದೆ. ಭೂಕುಸಿತದಿಂದ ಅವಶೇಷಳಡಿ ವಾಹನ ಹೂತು ಹೋಗಿತ್ತು” ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.
ಭೂಕುಸಿತ ಉಂಟಾದ ಪರಿಣಾಮ ಕೇದಾರನಾಥ ರಸ್ತೆ ಮಾರ್ಗ ಕಡಿತಗೊಂಡಿತ್ತು. ಇದರಿಂದ ವಿವಿಧ ಪ್ರದೇಶಗಳಿಂದ ಬಂದಿದ್ದ ಪ್ರಯಾಣಿಕರು ಹೆದ್ದಾರಿಯಲ್ಲಿ ಸಿಲುಕಿಕೊಂಡಿದ್ದರು. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಮಳೆ ಸುರಿಯುತ್ತಿದೆ.