ಭಾರೀ ಮಳೆಯಿಂದಾಗಿ ಬೆಂಗಳೂರು ಹೊರವಲಯದಲ್ಲಿರುವ ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ(NandiHills) ಮತ್ತೊಮ್ಮೆ ಗುಡ್ಡ ಕುಸಿತ ಉಂಟಾಗಿದ್ದು, ಮಾರ್ಗ ಮಧ್ಯೆ ಬೃಹತ್ ಬಂಡೆ ಬಿದ್ದಿದೆ.
ಮಿರ್ಜಾ ಸರ್ಕಲ್ ಮುಂಭಾಗದ ತಿರುವಿನಲ್ಲಿ ಈ ಗುರುವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದು, ಯಾವುದೇ ಅಪಾಯ ಆಗಿಲ್ಲ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಂದಿಬೆಟ್ಟದಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಎರಡು ಕಡೆ ಗುಡ್ಡ ಕುಸಿತ ಸಂಭವಿಸಿತ್ತು. ಇದೀಗ ಮತ್ತೆ ಗುಡ್ಡ ಕುಸಿದಿದ್ದು, ರಸ್ತೆ ಬಂದು ಬಂಡೆ ಬಿದ್ದಿದ್ದರಿಂದ ಜನರು ಆತಂಕಕ್ಕೀಡಾಗಿದ್ಧಾರೆ.
ಮಣ್ಣು ಹಾಗೂ ಬಂಡೆಗಳು ರಸ್ತೆಯ ಮುಕ್ಕಾಲು ಭಾಗ ಆವರಿಸಿವೆ. ಇದೀಗ ಮತ್ತೊಂದು ಬೃಹದಾಕಾರದ ಬಂಡೆ ಸಹ ಉರುಳುವ ಆತಂಕ ಎದುರಾಗಿದೆ. ಗುಡ್ಡ ಕುಸಿಯುವ ಆತಂಕದಲ್ಲೇ ನಂದಿಬೆಟ್ಟಕ್ಕೆ ಪ್ರವಾಸಿಗರು ಭೇಟಿ ನೀಡುವುದು ಮುಂದುವರಿದಿದ್ದು, ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.
ಕಳೆದ ಜೂನ್ ತಿಂಗಳಿನಲ್ಲಿಯೂ ಭಾರೀ ಮಳೆಗೆ ಎರಡು ಕಡೆಗಳಲ್ಲಿ ಗುಡ್ಡಕುಸಿತ (Landslide) ವಾಗಿತ್ತು. ಸುಲ್ತಾನಪೇಟೆ ಗ್ರಾಮದ ಕಡೆ ಎರಡು ಕಡೆ ಗುಡ್ಡಗಳು ಕುಸಿದಿದೆ. ಸುಲ್ತಾನಪೇಟೆಯಿಂದ ನಂದಿಬೆಟ್ಟಕ್ಕೆ ತೆರಳುವ ಮೆಟ್ಟಿಲು ಮಾರ್ಗದ ಕಡೆ ವೀರಭದ್ರ ಸ್ವಾಮಿ ದೇಗುಲದ ಭಾಗದಲ್ಲಿ ಭೂ ಕುಸಿತವಾಗಿತ್ತು.
ಸುಲ್ತಾನಪೇಟೆ ಗ್ರಾಮದ ಮತ್ತೊಂದು ಭಾಗದಲ್ಲಿ ಕೂಡ ಭೂ ಕುಸಿತವಾಗಿತ್ತು. ಬೃಹತ್ ಗಾತ್ರದ ಕಲ್ಲು ಬಂಡೆಗಳು ಮರಗಳು ಮಣ್ಣು ಸಮೇತ ಕೊಚ್ಚಿಕೊಂಡು ಬಂದಿದ್ದವು. ಈ ಗುಡ್ಡ ಕುಸಿತ ಉಂಟಾದ ಭಾಗದಿಂದ ಝರಿಯಂತೆ ನೀರು ಹರಿದುಬಂದಿತ್ತು.