ಬೆಂಗಳೂರು : 54 ಕೋಟಿ ಮೌಲ್ಯದ ಸರ್ಕಾರಿ ಸ್ವತ್ತನ್ನು ಮಾಗಡಿಯ ಕಾಂಗ್ರೆಸ್ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರ ಧರ್ಮಪತ್ನಿ “ಭೂ ಪರಿವರ್ತನೆ ಮಾಡಿಕೊಡುವಂತೆ ಸಲ್ಲಿಸಿರುವ ಕಾನೂನುಬಾಹಿರ ಅರ್ಜಿಯನ್ನು ತಿರಸ್ಕರಿಸಬೇಕೆಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ
ಹಾಗೂ ಜಿಬಿಎ ಆಡಳಿತ ಪಕ್ಷದ ಮಾಜಿ ನಾಯಕ ಎನ್. ಆರ್. ರಮೇಶ್ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಮಾಗಡಿ ಕ್ಷೇತ್ರದ ಶಾಸಕ ಹೆಚ್.ಸಿ. ಬಾಲಕೃಷ್ಣ ಧರ್ಮಪತ್ನಿ ರಾಧಾ ಬಾಲಕೃಷ್ಣ ಅವರು ಬೆಂಗಳೂರು ದಕ್ಷಿಣ ತಾಲ್ಲೂಕು, ತಾವರೆಕೆರೆ ಹೋಬಳಿ, ಕುರುಬರ ಹಳ್ಳಿ ಗ್ರಾಮದ ಸರ್ವೆ ನಂ: 233, 234, 235 ಮತ್ತು 236 ರಲ್ಲಿರುವ ಸುಮಾರು 54 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಮೂಲ್ಯ ಸರ್ಕಾರಿ ಸ್ವತ್ತನ್ನು ನರಸಿಂಹಯ್ಯ, ಗಂಗೂಬಾಯಿ, ನಾಗಮ್ಮ ಮತ್ತು ನೀಲಮ್ಮ ಎಂಬುವವರ ಕುಟುಂಬಸ್ಥರಿಂದ ಕೆಂಗೇರಿ ಉಪ ನೊಂದಣಾಧಿಕಾರಿಗಳ ಕಛೇರಿಯಲ್ಲಿ “ಕ್ರಯ ಪತ್ರ”ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ದಿನಾಂಕ 31/07/2025 ರಂದು ಸಂಪೂರ್ಣ ದಾಖಲೆಗಳ ಸಹಿತ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮತ್ತು ಲೋಕಾಯುಕ್ತ ಕಛೇರಿಯಲ್ಲಿ ದೂರುಗಳನ್ನು ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.
ನರಸಿಂಹಯ್ಯ, ಗಂಗೂಬಾಯಿ, ನಾಗಮ್ಮ ಮತ್ತು ನೀಲಮ್ಮ ಎಂಬುವವರ ಹೆಸರುಗಳಿಗೆ ಕುರುಬರಹಳ್ಳಿ ಗ್ರಾಮದ “ಸರ್ಕಾರಿ ಗೋಮಾಳ”ಪ್ರದೇಶವನ್ನು ಸರ್ಕಾರದಿಂದ “ಮಂಜೂರು” ಆಗಿರುವಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ವೆ ನಂಬರುಗಳನ್ನು ಪೋಡಿ ಮಾಡಲಾಗಿತ್ತು. ಅಲ್ಲದೆ ಅವರುಗಳಿಂದ . ರಾಧಾ ಬಾಲಕೃಷ್ಣ ಹೆಸರಿಗೆ ದಿನಾಂಕ 03/04/2025 ರಂದು, ನೀಲಮ್ಮ ಮತ್ತು ಆಕೆಯ ಮಗ ಅರುಣ್ ಬಸವರಾಜ್ ಅವರಿಂದ ಸರ್ವೆ ನಂ: 233 ರ 3:00 ಎಕರೆ, ನಾಗಮ್ಮ ಮತ್ತು ಆಕೆಯ ಮಗ ಸಿದ್ಧರಾಜು ಅವರಿಂದ ಸರ್ವೆ ನಂ: 234 ರ 1:00 ಎಕರೆ, ಗಂಗೂಬಾಯಿ ಮತ್ತು ಆಕೆಯ ಮಕ್ಕಳಾದ ಜಗದೀಶ್ ಕೆ., ನಾಗೇಶ್ ಕೆ. ಮತ್ತು ಕಸ್ತೂರಿ ಕೆ. ಅವರಿಂದ ಸರ್ವೆ ನಂ: 235 ರ 1:00 ಎಕರೆ ವಿಸ್ತೀರ್ಣದ ಸ್ವತ್ತುಗಳನ್ನು ಹಾಗೂ ದಿನಾಂಕ 15/05/2025 ರಂದು ದಿವಂಗತ ನರಸಿಂಹಯ್ಯನವರ ಮಗ ಎನ್. ಶಿವಣ್ಣ ಅವರಿಂದ ಸರ್ವೆ ನಂ: 236 ರ 3:00 ಎಕರೆ ವಿಸ್ತೀರ್ಣದ ಸ್ವತ್ತು ಸೇರಿದಂತೆ ಒಟ್ಟು 8:00 ಎಕರೆ ವಿಸ್ತೀರ್ಣದ “ಸರ್ಕಾರಿ ಸ್ವತ್ತು”ಗಳನ್ನು ಕೆಂಗೇರಿ ಉಪ ನೊಂದಣಾಧಿಕಾರಿಗಳ ಕಛೇರಿಯಲ್ಲಿ ನೊಂದಣಿ ಮಾಡಲಾಗಿದೆ ಎಂದು ಭೂಗಳ್ಳತನದ ಬಾಂಬ್ ಸಿಡಿಸಿದ್ದಾರೆ.
ಆದರೆ, “ಎ. ಟಿ. ರಾಮಸ್ವಾಮಿ ಆಯೋಗ”ವು 2006 ರಲ್ಲಿ ನೀಡಿರುವ ವರದಿಯಲ್ಲಿರುವಂತೆ ತಾವರೆಕೆರೆ ಹೋಬಳಿಯ ಕುರುಬರಹಳ್ಳಿ ಗ್ರಾಮದ ಈ ಸ್ವತ್ತುಗಳು “ಸರ್ಕಾರಿ ಗೋಮಾಳ”ಪ್ರದೇಶವೆಂಬುದು ಅತ್ಯಂತ ಸ್ಪಷ್ಟವಾಗಿದೆ. ಈ ಸಂಬಂಧ ಸಂಪೂರ್ಣ ದಾಖಲೆಗಳ ಸಹಿತ ದೂರುಗಳನ್ನು ನೀಡಿದ್ದು, ಕೂಡಲೇ ಈ ಅತ್ಯಮೂಲ್ಯ ಸರ್ಕಾರಿ ಸ್ವತ್ತನ್ನು “ಸರ್ಕಾರದ ವಶ”ಕ್ಕೆ ಪಡೆದುಕೊಳ್ಳುವಂತೆ ಹಾಗೂ ಶ್ರೀಮತಿ. ರಾಧ ಬಾಲಕೃಷ್ಣ ಸೇರಿದಂತೆ ಇನ್ನಿತರರ ವಿರುದ್ಧ “ಸರ್ಕಾರಿ ಭೂ ಕಬಳಿಕೆ”ಪ್ರಕರಣಗಳನ್ನು ದಾಖಲಿಸುವಂತೆ ಮತ್ತು ಈ “ಸರ್ಕಾರಿ ಭೂ ಕಬಳಿಕೆ”ಗೆ ಎಲ್ಲ ರೀತಿಯ ಸಹಕಾರ ನೀಡಿರುವ ಎಲ್ಲ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಗ್ರಹಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಹೀಗಿದ್ದಾಗ್ಯೂ ಸಹ,ರಾಧ ಬಾಲಕೃಷ್ಣ 54 ಕೋಟಿಗೂ ಹೆಚ್ಚು ಮೌಲ್ಯದ 8:00 ಎಕರೆ ವಿಸ್ತೀರ್ಣದ ಅತ್ಯಮೂಲ್ಯ ಸರ್ಕಾರಿ ಸ್ವತ್ತಿಗೆ “ಭೂ ಪರಿವರ್ತನೆ”ಮಾಡಿಕೊಡುವಂತೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿರುವ ವಿಷಯ ಬೆಳಕಿಗೆ ಬಂದಿದೆ. ಆದುದರಿಂದ, ಆಡಳಿತ ಪಕ್ಷದ ಅತ್ಯಂತ ಪ್ರಭಾವೀ ಶಾಸಕರಾಗಿರುವ ಬಾಲಕೃಷ್ಣ ಅವರ ರಾಜಕೀಯ ಪ್ರಭಾವಗಳಿಗೆ ಒಳಗಾಗಿ ಈ ಅತ್ಯಮೂಲ್ಯ ಸರ್ಕಾರಿ ಸ್ವತ್ತಿಗೆ “ಭೂ ಪರಿವರ್ತನೆ”ಮಾಡುವ ಕಾನೂನು ಬಾಹಿರ ಕಾರ್ಯಕ್ಕೆ ಮುಂದಾಗಬಾರದು ಎಂದು ಒತ್ತಾಯಿಸಿದ್ದಾರೆ.
ಈ ಕೂಡಲೇ ಅವರ ಅರ್ಜಿಯನ್ನು ಕೂಡಲೇ ತಿರಸ್ಕರಿಸಿ ಅರ್ಜಿಯಲ್ಲಿ ಉಲ್ಲೇಖಿಸಿರುವ ಎಲ್ಲ ಸರ್ಕಾರಿ ನೆಲಗಳ್ಳರ ವಿರುದ್ಧ ಮತ್ತು ಅದಕ್ಕೆ ಸಹಕಾರ ನೀಡಿರುವ ಎಲ್ಲ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಪತ್ರದಲ್ಲಿ ಎನ್.ಆರ್. ರಮೇಶ್ ಒತ್ತಾಯಿಸಿದ್ದಾರೆ.











