ಬೆಂಗಳೂರು: ಬೆಳಗಾವಿ ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ಶಾಸಕ ಸವದಿಗೆ ಬೇಕಂತಲೇ ಮಾನಸಿಕವಾಗಿ ತ್ರಾಸ್ ನೀಡುತ್ತಿದ್ದಾರೆ, ಸದ್ಯಕ್ಕೆ ನಡೆಯುತ್ತಿರುವ ಡಿಸಿಸಿ ಬ್ಯಾಂಕ್ ಬೆಳವಣಿಗೆಗಳು ನನ್ನ ಗಮನಕ್ಕೆ ಬಂದಿಲ್ಲ. ಆನೆಗೆ ಉಡಾಳ ಎನ್ನುವವರು ಯಾರು ಎಂದು ಪರೋಕ್ಷವಾಗಿ ಜಾರಕಿಹೊಳಿ ಬ್ರದರ್ಸ್ ವಿರುದ್ಧ ಕಾಂಗ್ರೆಸ್‌ನ ಹಿರಿಯ ಶಾಸಕ ರಾಜು ಕಾಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಈ ಸಂಬಂಧ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಖುರ್ದ್ ಗ್ರಾಮದ ತಮ್ಮ ನಿವಾಸದಲ್ಲಿ ಪಿಕೆಪಿಎಸ್ ಸದಸ್ಯರ ಸಭೆಯಲ್ಲಿ ಮಾತನಾಡಿರುವ ವಿಡಿಯೋ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಮೂಲಕ ಪ್ರತಿಷ್ಠಿತ ಬ್ಯಾಂಕ್‌ನ ಆಡಳಿತದಲ್ಲಿ ಬೇರೆಯವರದ್ದೇ ಹೆಚ್ಚು ಕಾರುಬಾರು ಎನ್ನುವುದನ್ನು ಬಹಿರಂಗವಾಗಿಯೇ ಹೇಳಿದ್ದಾರೆ. ಇನ್ನೂ ಅಥಣಿ ತಾಲೂಕಿನ ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಶಂಕರ ನಂದೇಶ್ವರ ವರ್ಗಾವಣೆ ಖಂಡಿಸಿ ಪಿಕೆಪಿಎಸ್ ಸದಸ್ಯರು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಜು ಕಾಗೆ ಭೇಟಿಯಾಗಿದ್ದರು. ನಂದೇಶ್ವರ ವರ್ಗಾವಣೆ ತಡೆಯುವಂತೆ ಮನವಿ ಸಲ್ಲಿಸಿದ್ದರು.
ಈ ವೇಳೆ, ಶಂಕರ್ ನಂದೆಶ್ವರ ವರ್ಗಾವಣೆ ಪೂರ್ವ ನಿಯೋಜಿತ, ನಮ್ಮ ಡಿಸಿಸಿ ಬ್ಯಾಂಕಿನಲ್ಲಿ ಹತ್ತು ಸಾವಿರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಥಣಿ ಮ್ಯಾನೇಜರ್ ಒಬ್ಬನೇ ಯಾಕೆ ವರ್ಗಾವಣೆ ಆಗುತ್ತಾನೆ..? ಅಂದರೆ ಇದು ಶಾಸಕ ಲಕ್ಷ್ಮಣ ಸವದಿಗೆ ತ್ರಾಸ್ (ತೊಂದರೆ) ಕೊಡುವ ನಿಟ್ಟಿನಲ್ಲಿ ಹಾಗೂ ಮಾನಸಿಕವಾಗಿ ಕುಗ್ಗಿಸಲು ಬೇಕು ಅಂತಲೇ ಇವರ ವರ್ಗಾವಣೆ ಆಗಿದೆ ಎಂದು ಶಾಸಕ ಕಾಗೆ ಹೇಳುವ ಮೂಲಕ ತಮ್ಮ ಅಸಹಾಯಕತೆ ತೋರಿದ್ದರು.
ಈ ವರ್ಗಾವಣೆಯ ವಿಚಾರವನ್ನು ಅಧ್ಯಕ್ಷ ಅಣ್ಣಾಸಾಹೇಬ್ ಜೊಲ್ಲೆ ಹಾಗೂ ನನ್ನ ಗಮನಕ್ಕೆ ತರಬೇಕಾಗಿತ್ತು. ಆದರೆ ಅಧ್ಯಕ್ಷರು ರಬ್ಬರ್ ಸ್ಟಾಂಪ್ ಇದ್ದಹಾಗೆ, ಎಲ್ಲವೂ ನಡೆದಿದೆ. ಅದನ್ನು ನಡೆಸೋಕೆ ಹೈಕಮಾಂಡ್ ಬೇರೆಯವರು ಇದ್ದಾರೆ. ಈ ವಿಷಯ ಶಾಸಕ ಲಕ್ಷ್ಮಣ ಸವದಿಗೂ ಗೊತ್ತು, ನನಗೂ, ನಿಮಗೂ ಗೊತ್ತು, ಬೇಕು ಅಂತಲೇ ಟಾರ್ಗೆಟ್ ಮಾಡಿ ಇದೆಲ್ಲ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶಾಸಕ ಲಕ್ಷ್ಮಣ್ ಸವದಿ ಹೆಸರು ಅಪೇಕ್ಸ್ ಬ್ಯಾಂಕಿಗೆ ಈ ಹಿಂದೆ ನಾಮ ನಿರ್ದೇಶನ ಆಗುತ್ತಿತ್ತು. ಆದರೆ ಅಲ್ಲಿ ಬೇರೆದವರು ಬಂದರು, ಇಷ್ಟೆಲ್ಲ ಬೆಳವಣಿಗೆ ಹಿಂದೆ ಯಾರಿದ್ದಾರೆ ಎಂಬುದು ನಿಮಗೆ ಗೊತ್ತಿದೆ. ಆನೆಗೆ ಉಡಾಳ ಎನ್ನುವವರು ಯಾರು?, ಅವರಿಗೆ ಯಾರು ಹೇಳೋರು? ಪ್ರಸ್ತುತ ರಾಜಕಾರಣ ನಿಮಗೆಲ್ಲ ಗೊತ್ತಿದೆ ನನ್ನ ಬಾಯಿಂದ ನೀವು ಕೇಳುತ್ತಿದ್ದೀರಿ. ಸದ್ಯದ ಡಿಸಿಸಿ ಬ್ಯಾಂಕ್ ಬೆಳವಣಿಗೆಗಳು ಪೂರ್ವ ನಿಯೋಜಿತ ಎಂದು ಶಾಸಕ ರಾಜು ಕಾಗೆ ಮಾತಿನ ಉದ್ದಕ್ಕೂ ಜಾರಕಿಹೊಳಿ ಹೆಸರು ಪ್ರಸ್ತಾಪಿಸದೆ ಜನರೆದುರು ಡಿಸಿಸಿ ಬ್ಯಾಂಕ್‌ನ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ವರ್ಗಾವಣೆಯ ಕುರಿತು ತಮ್ಮದೇ ಆದ ಶೈಲಿಯಲ್ಲಿ ಇನ್‌ಸೈಡ್ ಕಥೆ ಬಿಚ್ಚಿಟ್ಟರು.
ಅಲ್ಲದೆ ರಾಜು ಕಾಗೆ ಮಾತನಾಡಿರುವ ಈ ವಿಡಿಯೋ ಇದೀಗ ಜಿಲ್ಲಾ ರಾಜಕಾರಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಡಿಸಿಸಿ ಬ್ಯಾಂಕ್‌ನ ಕಾರ್ಯಚಟುವಟಿಕೆಗಳು ಎಷ್ಟು ಪಾರದರ್ಶಕವಾಗಿವೆ? ಎಂಬ ಪ್ರಶ್ನೆಗಳನ್ನು ಸ್ವತಃ ಉಪಾಧ್ಯಕ್ಷ ರಾಜು ಕಾಗೆಯವರೇ ಎತ್ತಿ ಹಿಡಿದಿದ್ದಾರೆ. ಅಧ್ಯಕ್ಷರೇ ರಬ್ಬರ್ ಸ್ಟಾಂಪ್ ಆದ್ರೆ ಬ್ಯಾಂಕ್ ಆಡಳಿತ ಹೇಗೆ ನಡೆಯುತ್ತದೆ ಎಂಬ ಆತಂಕವೂ ರೈತರಲ್ಲಿ ಮೂಡಲು ರಾಜು ಕಾಗೆ ಮಾತುಗಳು ಕಾರಣವಾಗಿವೆ.









