ಬಣ್ಣದ ಲೋಕದ ಮಿನುಗು ತಾರೆಯಂತಿದ್ದ ಅಪ್ಪು ಮತ್ತೆ ಇಂದು ಬಣ್ಣ ಬಣ್ಣದ ಹೂವುಗಳ ಮಧ್ಯೆ ಜೀವಪಡೆದುಕೊಂಡಿದ್ದರು. ಸಸ್ಯಕಾಶಿಯಲ್ಲಿ ನಗುಮುಖದ ಯುವರತ್ನ ಮತ್ತೊಮ್ಮೆ ಹುಟ್ಟಿ ಬಂದಂತೆ ಭಾಸವಾಗಿತ್ತು. ಹೌದು, ಲಾಲ್ ಬಾಗ್ ಫ್ಲವರ್ ಶೋ ದಿವಂಗತ ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಸಮರ್ಪಿಸಲಾಗಿದ್ದು, ಇಂದು ಅಭೂತಪೂರ್ವ ಚಾಲನೆ ಸಿಕ್ಕಿದೆ.
ಫ್ಲವರ್ ಶೋನಲ್ಲಿ ಎಲ್ಲರ ಕಣ್ಮನ ಸೆಳೆಯುತ್ತಿದೆ ಪುನೀತ್ ರಾಜ್ ಕುಮಾರ್ ಪ್ರತಿಮೆ
ಆ ನಗುವ ಮುಖ ಇನ್ನೆಷ್ಟು ಕಾಲ ಉರುಳಿದರೂ ಕನ್ನಡಿಗರು ಮರೆಯಲು ಸಾಧ್ಯವಿಲ್ಲ. ಅಂಥದೊಂದು ಸೆಳೆತವಿದೆ ಆ ಕಲೆಗಾರನಲ್ಲಿ. ಅಭಿಮಾನಿಗಳೇ ದೇವರು ಎಂದ ಅಣ್ಣಾವ್ರ ಪಥದಲ್ಲಿದ್ದ ಪುನೀತ್ ರಾಜ್‍ಕುಮಾರ್ ಇಂದು ನೆನೆಪು ಮಾತ್ರ. ಅಂದಿನ ಗಳಿಗೆಯನ್ನು ನೆನೆಪಿಸಿಕೊಂಡರೂ ಈ ಕ್ಷಣವೂ ಕಣ್ಣಾಲಿ ಕಂಪಿಸ ತೊಡಗುತ್ತವೆ. ಅದು ಆ ಮಹಾ ವ್ಯಕ್ತಿತ್ವ ಧಕ್ಕಿಸಿಕೊಂಡ ಗೆಲುವು. ಈಗ ಅಂಥಾ ಮಹಾನ್ ನಟನಿಗೆ ತೋಟಗಾರಿಕೆ ಇಲಾಖೆ ಗೌರವಪೂರ್ವಕವಾಗಿ ಹೂವುಗಳ ನಮನ ಸಲ್ಲಿಸಿದೆ. ತೋಟಗಾರಿಕೆ ಇಲಾಖೆ ಸ್ವಾತಂತ್ರ್ಯ ದಿನದ ಭಾಗವಾಗಿ ಹಮ್ಮಿಕೊಂಡಿರುವ ಫ್ಲವರ್ ಶೋಗೆ ಇಂದು ಅದ್ದೂರಿ ಚಾಲನೆ ಸಿಕ್ಕಿದೆ. ಸಿಎಂ ಬೊಮ್ಮಾಯಿ, ತೋಟಗಾರಿಕೆ ಸಚಿವ ಮುನಿರತ್ನ, ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್‌ಕುಮಾರ್ ಸಮ್ಮುಖದಲ್ಲಿ ಫ್ಲವರ್ ಶೋ ಉದ್ಘಾಟನೆಗೊಂಡಿದೆ.
ಲಾಲ್ ಬಾಗ್ ಗಾಜಿನ ಮನೆಯಲ್ಲಿ ಅನಾವರಣಗೊಂಡ ಗಾಜನೂರಿನ ಮನೆ
212ನೇ ಲಾಲ್ ಬಾಗ್ ಫ್ಲವರ್ ಶೋಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ವರ ನಟ ಡಾ. ರಾಜ್ ಕುಮಾರ್ ಥೀಮ್ ಬಳಸಲಾಗಿದೆ. ಲಾಲ್ ಬಾಗ್ ಗಾಜಿನ ಮನೆಯೊಳಗೆ ಬಣ್ಣ ಬಣ್ಣದ ಹೂವುಗಳಿಂದ ಅಲಂಕಾರ ಮಾಡಿ ಪುನೀತ್ ರಾಜ್‍ಕುಮಾರ್ ಹಾಗೂ ಅಣ್ಣಾವ್ರ ಪ್ರತಿಮೆಗಳನ್ನು ಇಡಲಾಗಿದೆ. ಗಾಜಿನ ಮನೆ ಒಳಹೊಕ್ಕ ಕೂಡಲೇ ಅಣ್ಣಾವ್ರು ಹುಟ್ಟಿದ ಗಾಜನೂರಿನ ಮನೆ ಹೂವುಗಳಿಂದ ಲೋಕಾರ್ಪಣೆಗೊಳಿಸಲಾಗಿದೆ. ಗಾಜಿನ ಮನೆಯ ಎಡ ಭಾಗದಲ್ಲಿ ಮಯೂರ ಸಿನಿಮಾದಲ್ಲಿ ಅಣ್ಣಾವ್ರ ಪಾತ್ರವನ್ನೂ ಬಿಂಬಿಸುವ ಪ್ರತಿಮೆ ಹಾಗೂ ಬಲ ಭಾಗದಲ್ಲಿ ಕನ್ನಡಿಗರ ಅಪ್ಪುವಿನ ಕಂಚಿನ ಪ್ರತಿಮೆ ನಿಲ್ಲಿಸಲಾಗಿದೆ. ಇವರೆಡನ್ನೂ ಕಣ್ತುಂಬಿ ಭಾವುಕರಾಗಿ ಮುಂದಕ್ಕೆ ನಡೆಯುವ ಹೊತ್ತಿಗೆ ಕಣ್ಣ ಮುಂದೆ ಮತ್ಯಾವುದೋ ಹೂವಿನ ಜಗತ್ತು ತೆರೆದುಕೊಳ್ಳಲಿದೆ.
ಫ್ಲವರ್ ಶೋನಲ್ಲಿ ಮಂಜಿನ ಹನಿಗಳಿಂದ ನೋಡುಗರಿಗೆ ರೋಮಾಂಚಕಾರಿ ಭಾವನೆ
ಗಾಜಿನ ಮನೆ ದಾಟಿ ಬರುವವರ ಮುಂದೆ ಅಕ್ಷರಶಃ ಹೂವುಗಳ ಜಗತ್ತೊಂದು ಅನಾವರಣಗೊಳ್ಳಲಿದೆ. ಇಂಥಾ ಸುಂದರ ಜಗತ್ತಿನ ಮಧ್ಯೆ ವಿರಾಜಮಾನವಾಗಿ ಅಪ್ಪು ರಾರಾಜಿಸುತ್ತಾರೆ. ಅಪ್ಪ ರಾಜ್ ಕುಮಾರ್ ಅಮ್ಮ ಪಾರ್ವತಮ್ಮ ರಾಜ್ ಕುಮಾರ್ ಜೊತೆಗೆ ಹೂವಿನ ಮಧ್ಯೆ ನಿಂತು ನಗುವ ಪುನೀತ್ ರಾಜ್‍ಕುಮಾರ್ ನೋಡುಗರನ್ನು ಭಾವನಾತ್ಮಕವಾಗಿ ಸಳೆಯುತ್ತಾರೆ. ಅಪ್ಪು ಕಟ್ಟಿ ಬೆಳೆಸಿದ ಶಕ್ತಿಧಾಮ, ಅಪ್ಪುವಿನ ಕೊನೆಯ ಸಿನಿಮಾ ಗಂಧದಗುಡಿಯ ಫ್ಲವರ್ ಸ್ಟಿಲ್ ಪೋಸ್ಟರ್ ಜನರು ಕೈಬೀಸಿ ಕರೆಯುತ್ತಿದೆ. ಇದರ ನಡುವೆ ಮೇಲಿಂದ ಮಂಜಿನಂತೆ ಚಿಮ್ಮಿ ಬೀಳುವ ನೀರಿನ ಹನಿಗಳು ಫ್ಲವರ್ ಶೋ ಕಟ್ಟಿ ಕೊಡಬಲ್ಲ ಅತ್ಯುತ್ತಮ ಭಾವನೆ ಜನರಲ್ಲಿ ಹುಟ್ಟಿಸುತ್ತದೆ. ಈ ಬಗ್ಗೆ ನಟ ಶಿವರಾಜ್ ಕುಮಾರ್ ಮಾತನಾಡಿದ ಸಣ್ಣ ವಯಸ್ಸಿಗೆ ಇಷ್ಟೆಲ್ಲಾ ಮಾಡಿದ್ದಾನೆ ನನ್ನ ತಮ್ಮ ಎನ್ನುವುದು ಅಣ್ಣನಾಗಿ ನಮಗೆ ಹೆಮ್ಮೆ ಎಂದರು.

ಈ ಬಾರಿಯ ಫ್ಲವರ್ ಶೋಗೆ 54 ದೇಶಗಳಿಂದ ವಿಶೇಷ ತಳಿಗಳನ್ನು ತರಿಸಲಾಗಿರುವುದು ವಿಶೇಷ. ದೇಶದ ವಿವಿಧ ಭಾಗದಲ್ಲಿ ಬೆಳೆಯಲಾಗಿರುವ ಸುಮಾರು 100ಕ್ಕೂ ಅಧಿಕ ತಳಿಯನ್ನು ಶೃಂಗಾರಕ್ಕಾಗಿ ಫ್ಲವರ್ ಶೋನಲ್ಲಿ ಬಳಸಲಾಗಿದೆ. ಅಲ್ಲದೆ ಒಂದು ಲಕ್ಷಕ್ಕೂ ಅಧಿಕ ಹೂವಿನ ಪಾಟ್ ಗಳನ್ನು ಬಳಸಿ ಹೂವಿನ ಲೋಕವನ್ನು ಸೃಷ್ಟಿಸಲಾಗಿದೆ. ಇಂದಿನಿಂದ ಮುಂದಿನ 10 ದಿನಗಳ ಕಾಲ ಈ ಪುಷ್ಪ ಪ್ರದರ್ಶನ ನಡೆಯಲಿದ್ದು, ಅಗಸ್ಟ್ 15 ಸ್ವಾತಂತ್ರ್ಯ ದಿನದ ಸಂಜೆಗೆ ಸಮಾಪ್ತಿಯಾಗಲಿದೆ. ತೋಟಗಾರಿಕೆ ಇಲಾಖೆ ಈ ಬಾರಿ ಫ್ಲವರ್ ಶೋನಲ್ಲಿ 15 ಲಕ್ಷ ಜನರು ಭಾಗಿಯಾಗುವ ಲೆಕ್ಕಾಚಾರ ಹಾಕಿಕೊಂಡಿದೆ. ವಾರದ ಕೊನೆಯಲ್ಲಿ ವಯಸ್ಕರಿಗೆ 100 ರೂಪಾಯಿ ಹಾಗೂ ವಾರದ ದಿನಗಳಲ್ಲಿ 80 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಜೊತೆಗೆ 1 ರಿಂದ 10ನೇ ತರಗತಿ ವರೆಗಿನ ಮಕ್ಕಳು ಗುಂಪಾಗಿ ಬಂದರೆ ಉಚಿತ ಪ್ರವೇಶ ನೀಡಿದ್ದು, ಸ್ವ ಇಚ್ಛೆಯಿಂದ ಶಾಲಾ ಸಮಸವಸ್ತ್ರ ಧರಿಸಿ ಬರುವ ಮಕ್ಕಳಿಗೆ 30 ರೂಪಾಯಿ ಪ್ರವೇಶ ದರವನ್ನು ತೋಟಗಾರಿಕೆ ಇಲಾಖೆ ನಿಗದಿಪಡಿಸಿದೆ.
ಹೀಗೆ ಅಗಲಿದ ನಟ, ಅಭಿಮಾನಿಗಳ ಅಪ್ಪುವಿಗೆ ತೋಟಗಾರಿಕೆ ಇಲಾಖೆ ಪುಷ್ಪ ನಮನ ಸಲ್ಲಿಸಿದೆ. ಕಳೆದ ಮೂರು ವರ್ಷಗಳಿಂದ ಕೊರೋನಾ ಇದ್ದ ಕಾರಣ ಫ್ಲವರ್ ಶೋ ನಡೆಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಬಾರಿ ಮುಂದಿನ 10 ದಿನಗಳ ಕಾಲ ಸಸ್ಯಕಾಶಿಯಲ್ಲಿ ಫ್ಲವರ್ ಶೋ ಜರುಗಲಿದ್ದು, ಜನರು ಹೆಚ್ಚೆಚ್ಚು ಸೇರುವ ನಿರೀಕ್ಷೆ ಇದೆ. ಮೊದಲ ದಿನವೇ ಜನರು ಸಮರೋಪಾದಿಯಲ್ಲಿ ಬಂದಿದ್ದು, ಹೂವಿನ ಲೋಕ ಕಣ್ತುಂಬಿಕೊಂಡು ಹೊರಡುತ್ತಿದ್ದಾರೆ. ಜೊತೆಗೆ, ಪುನೀತ್ ರಾಜ್‍ಕುಮಾರ್ ಥೀಮ್ ಬಳಸಿ ಫ್ಲವರ್ ಶೋ ನಡೆಸಿರುವುದರಿಂದ ಬಹುತೇಕ ಫ್ಲವರ್ ಶೋ ಗೆದ್ದಿದೆ.