ಮಕ್ಕಳ ಯೋಗ ಕ್ಷೇಮ ವಿಚಾರಿಸಿದ ಸಚಿವರು

ಬೀದರ್ ಪ್ರವಾಸದಲ್ಲಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಇಂದು ದಿಢೀರ್ ಅಂಗನವಾಡಿ ಹಾಗೂ ಬಾಲಕಿಯರ ಬಾಲಮಂದಿರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಚಿಟ್ಟಾವಾಡಿಯಲ್ಲಿರುವ ಅಂಗನವಾಡಿ ಕೇಂದ್ರದ ಪುಟ್ಟ ಮಕ್ಕಳೊಂದಿಗೆ ಕೆಲಕಾಲ ಬೆರೆತು, ಅವರ ಆರೋಗ್ಯ ಹಾಗೂ ದೈನಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ ಮಕ್ಕಳಿಗೆ ಪೂರೈಕೆ ಮಾಡುವ ಆಹಾರ ಪದಾರ್ಥಗಳ ಗುಣಮಟ್ಟವನ್ನು ಸಚಿವರು ಪರೀಕ್ಷಿಸಿದರು. ಜೊತೆಗೆ ಮಕ್ಕಳ ಕಲಿಕಾ ಆಸಕ್ತಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಮೊಟ್ಟೆ ಗಳನ್ನು ಕೊಟ್ಟಿದ್ದಾರಾ? ಪಾಯಸ ತಿಂದಿದ್ದೀರಾ? ಎಂದು ಮಕ್ಕಳಲ್ಲಿ ವಿಚಾರಿಸಿ ಮಾಹಿತಿ ಪಡೆದ ಸಚಿವರು, ಅಂಗನವಾಡಿ ಕೇಂದ್ರದಲ್ಲಿ ತಯಾರಿಸಿದ ಚಿಕ್ಕಿಯನ್ನು ಸೇವಿಸಿ ಗುಣಮಟ್ಟ ಪರಿಶೀಲಿಸಿದರು.

ಬಳಿಕ ಮೈಲೂರದಲ್ಲಿರುವ ಬಾಲಕಿಯರ ಬಾಲಮಂದಿರಕ್ಕೂ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಭೀಮರಾವ್ ಬಸವರಾಜ್ ಪಾಟೀಲ್, ಸರ್ಕಾರದ ಇಲಾಖೆಯ ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್, ಇಲಾಖೆಯ ನಿರ್ದೇಶಕರಾದ ರಾಘವೇಂದ್ರ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್. ನಿಶ್ಚಲ್, ಇಲಾಖೆಯ ಉಪ ನಿರ್ದೇಶಕ ಶ್ರೀಧರ್, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.