ಲಖಿಂಪುರ ಖೇರಿ ಘಟನೆ ಯೋಜಿತ ಪಿತೂರಿ ಎಂದು ವಿಶೇಷ ತನಿಖಾ ತಂಡ (SIT) ವರದಿ ತಿಳಿಸಿದೆ. ಮೂರು ತಿಂಗಳ ಹಿಂದೆ ಲಖೀಂಪುರ ಖೇರಿ ಟಿಕುನಿಯಾ ಪ್ರದೇಶದಲ್ಲಿ ರೈತರು ಪ್ರತಿಭಟನೆ ಮಾಡುವ ವೇಳೆ ಕೇಂದ್ರ ಸಚಿವ ಅಜಯ್ ಮಿಶ್ರ ಅವರ ಪುತ್ರ ಆಶಿಶ್ ಮಿಶ್ರ ರೈತರ ಮೇಲೆ ಮಹೀಂದ್ರ ಎಸ್ಯುವಿ ಕಾರು ಹತ್ತಿಸಿ ರೈತರ ಸಾವಿಗೆ ಕಾರಣರಾಗಿದ್ದರು. ಈ ಪ್ರಕರಣದ ಸಂಭಂದ ತನಿಖೆ ನಡೆಸಿದ ಎಸ್ ಐ ಟಿ ಈಗ ವರದಿಯನ್ನು ಬಹಿರಂಗ ಪಡಿಸಿದ್ದು, “ಈ ಒಂದು ಘಟನೆ ಆಕಸ್ಮಿಕವಲ್ಲ, ಯೋಜಿತ ಪಿತೂರಿ”ಎಂದು ತಿಳಿಸಿದೆ.
ಸೋಮವಾರ ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, ಈ ಘಟನೆ ಆಕಸ್ಮಿಕವಾಗಿ ಸಂಭವಿಸಿದೆ ಎಂಬುದನ್ನು ಎಸ್ಐಟಿ ಸಂಪೂರ್ಣವಾಗಿ ನಿರಾಕರಿಸಿದ್ದು,ಕೊಲ್ಲುವ ಉದ್ದೇಶದಿಂದಲೇ ಉದ್ದೇಶಪೂರ್ವಕ ಕೃತ್ಯ ಎಸಗಲಾಗಿದೆ ಎಂದು ಹೇಳಿದೆ.
12 ಮಂದಿ ಅಪರಾಧಿಗಳ ವಿರುದ್ಧ ಹಲವು ಸೆಕ್ಷನ್ಗಳನ್ನು ಮಾರ್ಪಡಿಸುವಂತೆ ಕೋರ್ಟ್ ಗೆ SIT ಅರ್ಜಿ
ಆರೋಪಿಗಳ ವಿರುದ್ಧ ಸೆಕ್ಷನ್ಗಳಲ್ಲಿ 307 (ಕೊಲೆಗೆ ಯತ್ನ), 326 (ಅಪಾಯಕಾರಿ ಆಯುಧಗಳು ಗಂಭೀರವಾದ ಗಾಯವನ್ನು ಉಂಟುಮಾಡುವುದು) ಮತ್ತು 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಸೇರಿವೆ. ಇದರೊಂದಿಗೆ ಹೆಚ್ಚಿದ ಸೆಕ್ಷನ್ಗಳಡಿ ಆರೋಪಿಯನ್ನು ವಶಕ್ಕೆ ನೀಡುವಂತೆ ಕೋರಿ ತನಿಖಾ ತಂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ಲಖೀಂಪುರ ಖೇರಿಯ ಟಿಕುನಿಯಾ ಘಟನೆಯಲ್ಲಿ 4 ರೈತರು ಮತ್ತು ಒರ್ವ ಪತ್ರಕರ್ತನ ಹತ್ಯೆಗೆ ಕಾರಣವಾಗಿದ್ದ ಆಶಿಶ್ ಮಿಶ್ರಾ ,ಅಂಕಿತ್ ದಾಸ್ ಮತ್ತು ಸುಮಿತ್ ಜೈಸ್ವಾಲ್ ಸೇರಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಲಖೀಂಪುರ ಖೇರಿಯ ಜೈಲಿಗೆ ಕಳುಹಿಸಿದೆ.

ಲಂಖೀಪುರದಲ್ಲಿ ನಡೆದ ಘಟನೆ ನಿರ್ಲಕ್ಷ್ಯದ ಚಾಲನೆಯಿಂದ ಸಂಭವಿಸಿದ ಅಪಘಾತವಲ್ಲ ಎಂದು ಎಸ್‌ಐಟಿ ಮುಖ್ಯ ತನಿಖಾಧಿಕಾರಿ ವಿದ್ಯಾರಾಮ್ ದಿವಾಕರ್ ಸ್ಪಷ್ಟಪಡಿಸಿದ್ದಾರೆ. ಪ್ರತಿಭಟನೆ ವೇಳೆ ಜನಸಮೂಹವನ್ನು ಹತ್ತಿಕ್ಕಲು ಸಂಚು, ಚೆನ್ನಾಗಿ ಯೋಚಿಸಿದ ಪಿತೂರಿಯಂತೆ ಕೊಲೆಯ ಯತ್ನದ ಪ್ರಕರಣವಿದೆ ಎಂದು ತಿಳಿಸಿದೆ. ಆರೋಪಿಗಳ ಬಂಧನಕ್ಕೆ ಕೋರಿ ಎಸ್‌ಐಟಿ ಸೋಮವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಮಂಗಳವಾರ ಆರೋಪಿಗಳಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಏನಿದು ಪ್ರಕರಣ?
ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ರೈತರ ಪ್ರತಿಭಟನೆ ವೇಳೆ ನಾಲ್ವರು ರೈತರು ಮತ್ತು ಒರ್ವ ಪತ್ರಕರ್ತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದರು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರಿಗೆ ಸೇರಿದ ಎಸ್ಯುವಿ ವಾಹನ ರೈತರ ಮೇಲೆ ಹರಿದಿತ್ತು. ಈ ಹಿನ್ನೆಲೆಯಲ್ಲಿ ಅವರ ಮಗ ಆಶಿಶ್ ಮಿಶ್ರಾ ಸೇರಿದಂತೆ 12 ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ.