ರೈತ ಪ್ರತಿಭಟನೆಕಾರರನ್ನು ಕಾರು ಹತ್ತಿಸಿ ಕೊಲೆಗೈಯಲಾಗಿದೆ ಎಂದು ಆರೋಪಿಸಲಾಗಿರುವ ಲಖಿಂಪುರ ಖೇರಿ ಘಟನೆಯ ಪ್ರಮುಖ ಸಾಕ್ಷಿಯ ಮೇಲೆ ಬಿಜೆಪಿ ಬೆಂಬಲಿಗರು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಲಖಿಂಪುರದ ಎಂಟೂ ಕ್ಷೇತ್ರಗಳನ್ನೂ ಗೆದ್ದು ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಬಹುಮತ ಪಡೆದ ವಿಜಯೋತ್ಸವ ಆಚರಣೆ ನಡೆಸುವ ವೇಳೆ ಬಿಜೆಪಿ ಬೆಂಬಳಿಗರು ಈ ದಾಳಿ ಸಂಘಟಿಸಿದ್ದಾರೆ ಎಂದು ಆರೋಪಿಸಲಾಗಿದೆ.
ವರದಿಗಳ ಪ್ರಕಾರ, ಪ್ರಕರಣದ ಪ್ರಮುಖ ಸಾಕ್ಷಿ ದಿವ್ಜೋತ್ ಸಿಂಗ್ ಮೇಲೆ ವಿಜಯೋತ್ಸವ ಆಚರಿಸುತ್ತಿದ್ದ ಬಿಜೆಪಿ ಬೆಂಬಲಿಗರು ಗುರುವಾರ ರಾತ್ರಿ ದಾರುಣ ದಾಳಿ ನಡೆಸಿದ್ದಾರೆ.
Also Read : ಲಖೀಂಪುರದ ಸಂದೇಶ ಸ್ಪಷ್ಟ- ಪ್ರಜಾಸತ್ತೆ ಶಿಥಿಲವಾಗುತ್ತಿದೆ
ಈ ವಿಷಯವನ್ನು ವಕೀಲ ಪ್ರಶಾಂತ್ ಭೂಷಣ್ ಶುಕ್ರವಾರ ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿದ್ದಾರೆ. ಲಖಿಂಪುರ-ಖೇರಿ ಪ್ರಕರಣದ ಪ್ರಧಾನ ಆರೋಪಿ ಆಶಿಶ್ ಮಿಶ್ರಾ ಅವರಿಗೆ ನೀಡಲಾದ ಜಾಮೀನಿನ ವಿರುದ್ಧದ ಮನವಿಯ ವಿಚಾರಣೆಯನ್ನು ಸಿಜೆಐ ರಮಣ ಅವರು ಮಾರ್ಚ್ 15 ಕ್ಕೆ ಮುಂದೂಡುವುದಕ್ಕೂ ಮುನ್ನ ಭೂಷಣ್ ಈ ವಿಷಯವನ್ನು ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದಾರೆ. ಅದಾಗ್ಯೂ, ಆಶಿಶ್ ಮಿಶ್ರಾ ಜಮೀನಿನ ವಿರುದ್ಧದ ಮನವಿಯ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.
ದಿವಜೋತ್ ಸಿಂಗ್ ಅವರಿಗೆ ಬಿಜೆಪಿ ಕಾರ್ಯಕರ್ತರು ಅಮಾನುಷವಾಗಿ ಥಳಿಸಿದ್ದಾರೆ ಎಂದು ಆರೋಪಿಸಿರುವ ಟ್ವೀಟ್ ಒಂದಕ್ಕೆ ಖೇರಿ ಪೊಲೀಸರು ಪ್ರತಿಕ್ರಿಯಿಸಿದ್ದು, ಈ ಘಟನೆಯ ಬಗ್ಗೆ ತಿನ್ಸುಕಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ.
ದಾಳಿಕೋರರ ವಿರುದ್ಧ ಐಪಿಸಿ ಸೆಕ್ಷನ್ 147 (ಗಲಭೆ), 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ದಿ.ಕ್ವಿಂಟ್ ಸುದ್ದಿ ವೆಬ್ ಪೋರ್ಟಲ್ ವರದಿ ಮಾಡಿದೆ.
ಅದಾಗ್ಯೂ, ಶುಕ್ರವಾರ ಬೆಳಗಿನ ಜಾವದವರೆಗೆ, ಪ್ರಕರಣಕ್ಕೆ ಸಂಬಂಧಿಸಿ ಯಾರನ್ನೂ ಬಂಧಿಸಲಾಗಿಲ್ಲ ಎಂದು ಮೂಲಗಳು ತಿಳಿಸಿರುವುದಾಗಿ ದಿ. ಕ್ವಿಂಟ್ ವರದಿಯಲ್ಲಿ ಹೇಳಿದೆ.
ಕಳೆದ ವರ್ಷದ ಅಕ್ಟೋಬರ್ 3 ರಂದು ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕಾರು ಹರಿಸಿ ಭೀಕರ ಮಾರಣಹೋಮ ನಡೆಸಲಾಗಿತ್ತು. ಕೇಂದ್ರ ಸಚಿವರ ಪುತ್ರನ ಬೆಂಗಾವಲು ಕಾರನ್ನು ಹರಿಸಲಾಗಿದ್ದು, ಆ ವೇಳೆ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಕಾರಿನಲ್ಲೇ ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದರು.
Also Read : ಉತ್ತರಪ್ರದೇಶ ಫಲಿತಾಂಶ: ದಲಿತರು, ಮುಸ್ಲಿಮರು, ರೈತರು ಮತಗಳು ಎಲ್ಲಿ ಹೋದವು?
ಈ ಘಟನೆಯಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು ಎಂಟು ಜನರು ಕಾರಿನಡಿಗೆ ಸಿಲುಕಿ ಸಾವನ್ನಪ್ಪಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪ ಹೊರಿಸಲಾಗಿತ್ತು. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಈ ಘಟನೆ ರೈತ ಹೋರಾಟಗಾರರ ತೀವ್ರ ಆಕ್ರೋಶ ಹುಟ್ಟು ಹಾಕಿತ್ತು. ಈ ಘಟನೆಯು ಬಿಜೆಪಿಗೆ ನಕರಾತ್ಮಕ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಎಲ್ಲಾ ಅಂದಾಜನ್ನು ಚುನಾವಣಾ ಫಲಿತಾಂಶ ಬುಡಮೇಲುಗೊಳಿಸಿದ್ದು, ಲಖಿಂಪುರ ಖೇರಿಯ ಎಲ್ಲಾ ಎಂಟು ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಈ ವಿಜಯೋತ್ಸವವನ್ನು ಆಚರಿಸುತ್ತಾ ಬಿಜೆಪಿ ಬೆಂಬಲಿಗರು ಪ್ರಕರಣದ ಪ್ರಮುಖ ಸಾಕ್ಷಿಯ ಮೇಲೆ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.