ರಾಜ್ಯ ಸಾರಿಗೆ ನೌಕರರ ಮುಷ್ಕರ ದಿನದಿಂದ ದಿನಕ್ಕೆ ತನ್ನ ಸ್ಥಿಮಿತ ಕಳೆದುಕೊಳ್ಳುತ್ತಿದ್ದು ಸಂಘಟನಾ ಸಾಮರ್ಥ್ಯವಿಲ್ಲದ ನಾಯಕರು ಒಂದು ವಲಯದ ಕಾರ್ಮಿಕರನ್ನು ಹೇಗೆ ದಿಕ್ಕು ತಪ್ಪಿಸಬಹುದು ಎನ್ನುವುದಕ್ಕೆ ಪ್ರಾತ್ಯಕ್ಷಿಕೆಯಾಗಿ ಕಾಣುತ್ತಿದೆ. ತಮ್ಮ ಜೀವನೋಪಾಯಕ್ಕಾಗಿ ದುಡಿಮೆಯನ್ನೇ ಅವಲಂಬಿಸಿ ಬದುಕುವ ಬೃಹತ್ ಕಾರ್ಮಿಕ ಸಮೂಹವನ್ನು ಮುನ್ನಡೆಸಲು ಅಗತ್ಯವಾಗಿ ಇರಬೇಕಾದ ಶಿಸ್ತು, ಸಂಯಮ ಮತ್ತು ಚಾತುರ್ಯ ನಾಯಕರಲ್ಲಿ ಇಲ್ಲದೆ ಹೋದರೆ ಕಾರ್ಮಿಕರು ಅಬ್ಬೇಪಾರಿಗಳಾಗಿಬಿಡುತ್ತಾರೆ. ಭಾರತದಲ್ಲಿ ಇಂತಹ ಸನ್ನಿವೇಶಗಳು ಹೊಸತೇನಲ್ಲ. ಮುಂಬಯಿಯ ಗಿರಣಿ ಕಾರ್ಮಿಕರು, ಬೆಂಗಳೂರು, ಮೈಸೂರು, ದಾವಣಗೆರೆ, ಸೂರತ್, ಅಹಮದಾಬಾದ್ ಹೀಗೆ ಅನೇಕ ನಗರಗಳಲ್ಲಿ ಕಾರ್ಖಾನೆಗಳ ದುಡಿಯುತ್ತಿದ್ದ ಲಕ್ಷಾಂತರ ಕಾರ್ಮಿಕರು ತಮ್ಮ ನೆಲೆ ಕಳೆದುಕೊಂಡು ಅತಂತ್ರರಾಗಿರುವುದನ್ನು ಕಳೆದ ಐದಾರು ದಶಕಗಳ ಇತಿಹಾಸದಲ್ಲಿ ಕಾಣಬಹುದು.
ಈಗ ರಾಜ್ಯ ಸಾರಿಗೆ ನೌಕರರು ಇಂತಹುದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಒಂದು ಬೃಹತ್ ಸಂಸ್ಥೆಯ ಕಾರ್ಮಿಕರನ್ನು ಸಂಘಟಿಸಿ ವ್ಯವಸ್ಥಿತವಾದ ಹೋರಾಟ ರೂಪಿಸುವ ಮುನ್ನ ಕಾರ್ಮಿಕ ನಾಯಕರಿಗೆ (?) ಆ ಸಂಸ್ಥೆಯ ಮತ್ತು ಸಂಸ್ಥೆಯನ್ನು ಕಟ್ಟಿ ಬೆಳೆಸಿದ ದುಡಿಮೆಗಾರರ ಅನಿವಾರ್ಯತೆಗಳ ಅರಿವು ಇರಬೇಕಾಗುತ್ತದೆ. ಮುಷ್ಕರ, ಧರಣಿ, ಸತ್ಯಾಗ್ರಹ ಇವೆಲ್ಲವೂ ದುಡಿಯುವ ವರ್ಗಗಳ ಪ್ರಬಲ ಅಸ್ತ್ರಗಳು ಮತ್ತು ಆಡಳಿತ ವ್ಯವಸ್ಥೆಯ ವಿರುದ್ಧ ಬಳಸಬಹುದಾದ ಮಾರ್ಗಗಳು. ಆದರೆ ಈ ಅಸ್ತ್ರಗಳನ್ನು ಬಳಸುವ ಮುನ್ನ ಕಾರ್ಮಿಕ ನಾಯಕರಲ್ಲಿ ಪ್ರಜ್ಞಾವಂತಿಕೆ ಇಲ್ಲದೆ ಹೋದರೆ ಅರಾಜಕತೆ ಸೃಷ್ಟಿಯಾಗುತ್ತದೆ. ಒಂದು ನಾಮಫಲಕ, ಒಂದೆರಡು ಬ್ಯಾನರ್ ಮತ್ತು ಪದಾಧಿಕಾರಿಗಳ ಕೂಟ ಕಾರ್ಮಿಕರ ಭವಿಷ್ಯವನ್ನು ನಿರ್ಧರಿಸುವುದಿಲ್ಲ ಎನ್ನುವ ವಿವೇಕ ಮತ್ತು ವಿವೇಚನೆ ನಾಯಕತ್ವದಲ್ಲಿ ಇಲ್ಲದೆ ಹೋದರೆ ಕಾರ್ಮಿಕರು ನಮ್ಮ ಕಣ್ಣೆದುರಿನಲ್ಲೇ ಬೀದಿ ಪಾಲಾಗುತ್ತಾರೆ.
ಭಾರತದಂತಹ ಅರೆ ಊಳಿಗಮಾನ್ಯ ವ್ಯವಸ್ಥೆಯಲ್ಲಿ ಪ್ರಜಾತಂತ್ರ ಎನ್ನುವುದು ಇಂದಿಗೂ ದುಡಿಮೆಗಾರರ ಪಾಲಿಗೆ ಮರೀಚಿಕೆಯಾಗಿಯೇ ಉಳಿದಿರುವುದನ್ನೂ ಈ ಸಂದರ್ಭದಲ್ಲಿ ಗಮನಿಸಬೇಕಿದೆ. ಲಕ್ಷಾಂತರ ಜನರು ಕೋವಿಡ್19 ಸೋಂಕಿಗೆ ಒಳಗಾಗಿ ಇಡೀ ದೇಶದಲ್ಲಿ ಆತಂಕ ಸೃಷ್ಟಿಯಾಗಿದ್ದರೂ ಚುನಾವಣಾ ಸಭೆಗಳಲ್ಲಿ ನಿರತರಾಗಿರುವ ದೇಶದ ಪ್ರಧಾನಮಂತ್ರಿ ಮತ್ತು ಗೃಹ ಸಚಿವರು ಈ ಊಳಿಗಮಾನ್ಯ ಧೋರಣೆಯ ಸಂಕೇತವಾಗಿ ಕಾಣುತ್ತಾರೆ. ಕರ್ನಾಟಕದಲ್ಲಿ ಇದರ ಪ್ರತಿಬಿಂಬವನ್ನು ಯಡಿಯೂರಪ್ಪ ಸರ್ಕಾರದಲ್ಲಿ ಕಾಣಬಹುದು. ದೆಹಲಿಯಲ್ಲಿ ಕೇಂದ್ರ ಸರ್ಕಾರ ತೋರುತ್ತಿರುವ ಕ್ರೌರ್ಯ ಮತ್ತು ನಿರ್ದಯಿ ಧೋರಣೆಯನ್ನೇ ರಾಜ್ಯ ಸರ್ಕಾರ ತೋರುತ್ತಿದ್ದು, ಮುಷ್ಕರ ನಿರತ ಸಾರಿಗೆ ಕಾರ್ಮಿಕರು ತಾಳ್ಮೆ, ಸಂಯಮ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ.
ಸಂಘಟಿತ ಕಾರ್ಮಿಕರ ಐಕ್ಯತೆಯನ್ನು ಭಂಗಗೊಳಿಸಿ ಅವರ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟಗಳನ್ನು ರೂಪಿಸುವ ಉದ್ಭವಮೂರ್ತಿಗಳು ಕಾರ್ಮಿಕರನ್ನು ಹತಾಶೆಯ ಅಂಚಿಗೆ ದೂಡಿ ಅರಾಜಕತೆಯನ್ನು ಸೃಷ್ಟಿಸುವ ಮೂಲಕ ಆಡಳಿತ ವ್ಯವಸ್ಥೆಯ ಕ್ರೌರ್ಯಕ್ಕೆ ಮತ್ತಷ್ಟು ಪುಷ್ಟಿ ನೀಡುವ ಸಾಧ್ಯತೆಗಳೇ ಹೆಚ್ಚು. ರಾಜ್ಯ ಸಾರಿಗೆ ನೌಕರರ ಮುಷ್ಕರ ಈಗ ಈ ಹಂತ ತಲುಪಿದೆ. ದಶಕಗಳಿಂದ ಸಂಸ್ಥೆಯ ಉಳಿವಿಗಾಗಿ ಶ್ರಮಿಸಿರುವ ಬೃಹತ್ ಕಾರ್ಮಿಕ ವರ್ಗವನ್ನು ಆಡಳಿತ ವ್ಯವಸ್ಥೆಯ ಕೈಗೊಂಬೆಗಳನ್ನಾಗಿ ಮಾಡುವ ಕಲೆ ರಾಜಕಾರಣಿಗಳಲ್ಲಿ ಮಾತ್ರ ಇರಲು ಸಾಧ್ಯ. ಸಾರಿಗೆ ನೌಕರರ ಮುಷ್ಕರದ ಸಂದರ್ಭದಲ್ಲಿ ಈ ಕಲೆ ನಮ್ಮಲ್ಲೂ ಇದೆ ಎಂದು ರೈತ ನಾಯಕರೊಬ್ಬರು ಪ್ರದರ್ಶಿಸಿದ್ದಾರೆ. ಅವರೊಂದಿಗೆ ಕಾರ್ಮಿಕ ನಾಯಕರೂ ಇರುವುದು ದುರಂತ.
ಸಾರಿಗೆ ನೌಕರರ ಬೇಡಿಕೆಗಳು ನ್ಯಾಯಯುತವಾದುದು. ಮುಷ್ಕರವೂ ಸಹ ನ್ಯಾಯೋಚಿತವಾದುದು. ಇದೇ ಬೇಡಿಕೆಗಳನ್ನು ಮುಂದಿಟ್ಟು ಹಲವು ವರ್ಷಗಳಿಂದ ಹೋರಾಟಗಳು ನಡೆಯುತ್ತಲೇ ಇವೆ. ಅಧಿಕೃತ ಮಾನ್ಯತೆ ಪಡೆದಿರುವ ಕಾರ್ಮಿಕ ಸಂಘಟನೆಗಳು ನೌಕರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಸಂಸ್ಥೆಯ ಆರ್ಥಿಕ ಸ್ಥಿತಿಗತಿಗಳ ಹಿನ್ನೆಲೆಯಲ್ಲಿ ಹೋರಾಟಗಳನ್ನು ರೂಪಿಸುತ್ತಲೇ ಬಂದಿವೆ. ಸಾರಿಗೆ ನೌಕರರಿಗೆ ಆರನೆ ವೇತನ ಆಯೋಗದ ವೇತನಶ್ರೇಣಿಯನ್ನು ಅನ್ವಯಿಸುವ ಬೇಡಿಕೆಯನ್ನು ಮುಂದಿಟ್ಟು ಹೋರಾಟ ರೂಪಿಸುವ ಮುನ್ನ, ನೂತನ ಕಾರ್ಮಿಕ ನಾಯಕರು ಮಾನ್ಯತೆ ಪಡೆದಿರುವ ಸಂಘಟನೆಯೊಂದಿಗೆ ಮಾತುಕತೆ ನಡೆಸಿ ಮುಂದುವರೆಯಬಹುದಿತ್ತಲ್ಲವೇ ?
ಕಾರ್ಮಿಕ ಸಂಘಟನೆಯನ್ನು ಸಮೂಹ ಸಂಘಟನೆಯಂತೆ ನಿರ್ವಹಿಸಲಾಗುವುದಿಲ್ಲ. ಇಲ್ಲಿ ಕಾನೂನು ಕಟ್ಟಲೆಗಳು ಅನ್ವಯಿಸುತ್ತವೆ. ಕಾರ್ಮಿಕರ ಬದುಕು ಸಹ ಕೆಲವು ಕಾನೂನು ನಿಯಮಗಳ ಚೌಕಟ್ಟಿನಲ್ಲೇ ರೂಪುಗೊಳ್ಳುತ್ತದೆ. ವೇತನ ಕಡಿತ, ಅಮಾನತು, ವಜಾ, ವರ್ಗಾವಣೆ ಮುಂತಾದ ಕಠಿಣ ಅಸ್ತ್ರಗಳು ಆಡಳಿತ ಮಂಡಲಿಯ ಬತ್ತಳಿಕೆಯಲ್ಲಿರುತ್ತವೆ. ಈ ಅಸ್ತ್ರಗಳ ವಿರುದ್ಧ ಹೋರಾಡಲು ಕಾರ್ಮಿಕರಲ್ಲಿ ಕೇವಲ ಹೋರಾಟದ ಛಲ ಇದ್ದರೆ ಸಾಲದು, ಸಾಕಷ್ಟು ರಕ್ಷಣಾತ್ಮಕ ಸಾಧನಗಳೂ ಇರಬೇಕಾಗುತ್ತದೆ. ರೈತ ಮುಷ್ಕರದ ರೀತಿಯಲ್ಲೇ ಒಂದು ಸಂಸ್ಥೆಯ ನೌಕರರನ್ನು ಸಂಘಟಿಸಿ ಹೋರಾಡಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಕಾರ್ಮಿಕ ನಾಯಕರಾಗಿ ರೂಪುಗೊಳ್ಳುತ್ತಿರುವ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಅರ್ಥಮಾಡಿಕೊಳ್ಳಬೇಕು.
ರಾಜ್ಯ ಸರ್ಕಾರ ತನ್ನ ಕ್ರೌರ್ಯ ಮತ್ತು ನಿರ್ದಯಿ ಮನೋಭಾವ ಪ್ರದರ್ಶಿಸುವಲ್ಲಿ ಕೇಂದ್ರ ಸರ್ಕಾರದೊಡನೆ ಪ್ರತಿಸ್ಪರ್ಧೆ ನಡೆಸುತ್ತಿದೆ. ಹತ್ತಾರು ಸಾರಿಗೆ ನೌಕರರನ್ನು ವಜಾ ಮಾಡಲಾಗಿದೆ. ನೂರಾರು ನೌಕರರ ವರ್ಗಾವಣೆಯಾಗಿದೆ. ಮುಷ್ಕರದಲ್ಲಿ ಪಾಲ್ಗೊಂಡಿದ್ದ ನೌಕರರು ತಮ್ಮ ನೌಕರಿಯ ಭದ್ರತೆಯ ದೃಷ್ಟಿಯಿಂದ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಮುಷ್ಕರ ನಿರತ ನೌಕರರ ಬೇಡಿಕೆಗಳನ್ನು ಈಡೇರಿಸುವ ಯಾವುದೇ ಸೂಚನೆಯನ್ನು ಸರ್ಕಾರ ನೀಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೋರಾಟದ ಮುಂಚೂಣಿಯಲ್ಲಿರುವ ನಾಯಕರಿಗೆ ಸಂಯಮ, ಸಂವೇದನೆ ಮತ್ತು ದೂರದೃಷ್ಟಿ ಇಲ್ಲದೆ ಹೋದರೆ ಅರಾಜಕತೆ ಸೃಷ್ಟಿಯಾಗುತ್ತದೆ. ನೌಕರರ ಹತಾಶೆ ಮತ್ತು ಆತಂಕಗಳು ಆಕ್ರೋಶಕ್ಕೆ ತಿರುಗುವ ಮುನ್ನ ನಾಯಕತ್ವ ಎಚ್ಚರಗೊಳ್ಳದಿದ್ದರೆ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆಗಳೂ ಇವೆ.
ಇಲ್ಲಿ ಕಾರ್ಮಿಕ ಸಂಘಟನೆಗಳ ಮತ್ತು ನಾಯಕರ ಒಣ ಪ್ರತಿಷ್ಠೆಗಿಂತಲೂ ಸಾರಿಗೆ ನೌಕರರ ಬದುಕು ಮುಖ್ಯವಾಗುತ್ತದೆ. ಮುಷ್ಕರ ಮತ್ತು ನೌಕರರ ಬೇಡಿಕೆಗಳು ನ್ಯಾಯಯುತವಾದುದು ಎಂದ ಮಾತ್ರಕ್ಕೆ ಹೋರಾಟದ ಸ್ವರೂಪವೂ ಸಹನೀಯವಾಗಬೇಕಿಲ್ಲ. ಸಾರ್ವಜನಿಕ ಸಂಸ್ಥೆಯಲ್ಲಿ ದುಡಿಯುವ ನೌಕರರಿಗೆ ತಮ್ಮ ಬದುಕು ಕಟ್ಟಿಕೊಳ್ಳುವುದರೊಂದಿಗೇ ಸಾರ್ವಜನಿಕ ಹೊಣೆಗಾರಿಕೆಯೂ ಇರುತ್ತದೆ. ತಾವು ದುಡಿಯುವ ಸಂಸ್ಥೆಯ ಅಳಿವು ಉಳಿವು ತಮ್ಮ ಬದುಕನ್ನು ನಿರ್ಧರಿಸುತ್ತದೆ ಎಂಬ ಪರಿವೆಯೂ ಇರಬೇಕಾಗುತ್ತದೆ. ಈ ಪರಿಜ್ಞಾನ ಮೂಡಿಸುವ ನೈತಿಕ ಹೊಣೆ ಕಾರ್ಮಿಕ ಸಂಘಟನೆಯ ಮೇಲಿರುತ್ತದೆ. ರಾಜ್ಯ ಎದುರಿಸುತ್ತಿರುವ ಕೋವಿಡ್ 19 ಬಿಕ್ಕಟ್ಟು ಮತ್ತು ಸಂಸ್ಥೆಯ ಹಣಕಾಸು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಷ್ಕರದ ಸ್ವರೂಪ ಬದಲಿಸುವ ನಿಟ್ಟಿನಲ್ಲಿ ಯೋಚಿಸುವುದು ವಿವೇಕಯುತ ಕ್ರಮ ಅಲ್ಲವೇ ?
ಆದರೆ ಈಗಿನ ಸಾರಿಗೆ ಮುಷ್ಕರವನ್ನು ಗಮನಿಸಿದಾಗ ಈ ವಿವೇಕ ಮತ್ತು ವಿವೇಚನೆ ಕಂಡುಬರುತ್ತಿಲ್ಲ. ಒಂದೇ ದಿನದಲ್ಲಿ ಸಾರಿಗೆ ಸಂಸ್ಥೆ 2443 ಸಿಬ್ಬಂದಿಯನ್ನು ಅಮಾನತುಗೊಳಿಸಿರುವುದು ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ತೋರುತ್ತದೆ. ಮತ್ತೊಂದೆಡೆ ವಾಯುವ್ಯ ಸಾರಿಗೆ ಸಂಸ್ಥೆಯ ಚಾಲಕ ರಸೂಲ್ ಆವಟಿಯನ್ನು ವ್ಯವಸ್ಥಿತ ಸಂಚು ನಡೆಸಿ ಕಲ್ಲು ಹೊಡೆದು ಕೊಲೆ ಮಾಡಿರುವುದು ನೌಕರರ ನಡುವಿನ ಅರಾಜಕತೆಯ ಸಂಕೇತವಾಗಿ ಕಾಣುತ್ತದೆ. ಮುಷ್ಕರ ನಿರತರೊಡನೆ ಮಾತುಕತೆಯನ್ನೇ ನಡೆಸದ ಒಂದು ನಿರ್ದಯಿ ಧೋರಣೆಗೆ ಪ್ರಧಾನಿ ನರೇಂದ್ರ ಮೋದಿ ಅಡಿಗಲ್ಲು ಹಾಕಿದ್ದಾರೆ. #ಆತ್ಮನಿರ್ಭರ ಭಾರತದಲ್ಲಿ ದುಡಿಯುವ ವರ್ಗಗಳ ದನಿ ಅರಣ್ಯರೋದನವಾಗಿಯೇ ಅಂತ್ಯವಾಗುತ್ತದೆ ಎಂಬ ಸೂಚನೆ ದೆಹಲಿಯಿಂದ ಬೆಂಗಳೂರಿನವರೆಗೂ ಕಂಡುಬರುತ್ತಿದೆ.
ಈ ಸಂದರ್ಭದಲ್ಲಿ ನಮ್ಮ ಮುಂದಿರುವ ಪ್ರಶ್ನೆಯಾದರೂ ಏನು ? ಸಾರಿಗೆ ನೌಕರರ ಬದುಕೋ ಅಥವಾ ಸಂಘಟನೆಗಳ, ನಾಯಕರ ಪ್ರತಿಷ್ಠೆಯೋ ? 1 ಲಕ್ಷ 35 ಸಾವಿರ ನೌಕರರನ್ನು ನಂಬಿ ಕನಿಷ್ಟ ಐದಾರು ಲಕ್ಷ ಜನ ತಮ್ಮ ಬದುಕು ಕಟ್ಟಿಕೊಂಡಿರುತ್ತಾರೆ. ಸಾರಿಗೆ ಸಂಸ್ಥೆಯ ನೌಕರರು ಕಪ್ಪೆಗಳಂತೆ ಬೇಕೆಂದಾಗ ಮತ್ತೊಂದು ನೌಕರಿಗೆ ನೆಗೆಯುವ ಸಾಫ್ಟ್ವೇರ್ ಕೂಲಿಗಳಂತೆ ಅಲ್ಲ. ಇದು ಕೌಶಲ್ಯವನ್ನಾಧರಿಸಿದ ಉದ್ಯೋಗ. ಕಾರ್ಖಾನೆ ನೌಕರರಂತೆಯೇ ಸಾರಿಗೆ ನೌಕರರೂ ಸಹ ತಮ್ಮ ಸೀಮಿತ ಕೌಶಲ್ಯದೊಡನೆಯೇ ಬದುಕು ನಿರ್ವಹಿಸಬೇಕಾಗುತ್ತದೆ. ಒಂದು ವೇಳೆ ಸಂಸ್ಥೆ ಇಲ್ಲವಾದರೆ ಲಕ್ಷಾಂತರ ಜನರ ಬದುಕು ಮೂರಾಬಟ್ಟೆಯಾಗುತ್ತದೆ. ನೌಕರರು ಮತ್ತು ಅವರ ಕುಟುಂಬದವರು ಬೀದಿಪಾಲಾಗುತ್ತಾರೆ.
ಈ ಹತಾಶೆ ಮತ್ತು ಆತಂಕವೇ ಅರಾಜಕತೆಗೂ ಕಾರಣವಾಗುತ್ತದೆ. ತಮ್ಮ ಸಹೋದ್ಯೋಗಿಯನ್ನೇ ಕೊಲ್ಲುವ ಮಟ್ಟಿಗೆ ನೌಕರರರಲ್ಲಿ ಹತಾಶೆ ಮೂಡಿದ್ದರೆ ಅದರ ಹೊಣೆಯನ್ನು ಈ ನೌಕರರನ್ನು ಹುರಿದುಂಬಿಸಿದ ನಾಯಕರೇ ಹೊರಬೇಕಾಗುತ್ತದೆ. ಸ್ಥಾಪಿತ, ಮಾನ್ಯತೆ ಪಡೆದ ಸಂಘಟನೆಗಳೊಡನೆ ಕುಳಿತು ಮಾತನಾಡಿ ಮುಷ್ಕರ ನಡೆಸಿದ್ದಲ್ಲಿ ಈ ಅವಾಂತರಗಳು ನಡೆಯುತ್ತಿರಲಿಲ್ಲ. ಕಾರ್ಮಿಕರ ಐಕ್ಯತೆಯನ್ನು ಭಂಗಗೊಳಿಸಿ ಅವರ ಬೇಡಿಕೆಗಳನ್ನು ಈಡೇರಿಸಲಾಗುವುದಿಲ್ಲ ಎನ್ನುವ ಪರಿಜ್ಞಾನ ಕೋಡಿಹಳ್ಳಿ ಮತ್ತು ಅವರ ಸಹಚರರಲ್ಲಿ ಇರಬೇಕಿತ್ತಲ್ಲವೇ ? ಈಗ ಸರ್ಕಾರ ತನ್ನ ನಿಲುವಿಗೆ ಬದ್ಧವಾಗಿದೆ. ತನ್ನ ನಿರ್ದಯಿ ಕ್ರೌರ್ಯಕ್ಕೆ ಬದ್ಧವಾಗಿದೆ. ಇದು ಆತ್ಮನಿರ್ಭರ ಭಾರತದ ಲಕ್ಷಣ.
ಆದರೆ ಪರಸ್ಪರ ಆರೋಪ ಪ್ರತ್ಯಾರೋಪಗಳ ಮೂಲಕ ವಿಘಟನೆಯಾಗಿರುವುದು ಸಾರಿಗೆ ನೌಕರರ ಸಂಘಟನೆ. ನೌಕರರಲ್ಲಿನ ಒಗ್ಗಟ್ಟು ಒಮ್ಮೆಲೆ ಇಲ್ಲವಾದಂತೆ ತೋರುತ್ತಿದೆ. ಕೂಟದ ಅಧ್ಯಕ್ಷ ಮತ್ತು ಹೊಸ ಸಂಘಟನೆಯನ್ನು ನಂಬಿ ಅಮಾಯಕ ನೌಕರರು ಬಲಿಪಶುಗಳಾಗುತ್ತಿರುವುದು ಸತ್ಯ. ಆದರೆ ಈ ಬಲಿಪಶುಗಳನ್ನು ರಕ್ಷಿಸುವುದು ಯಾರು ? ಇದು ಸಾರಿಗೆ ನೌಕರರ ಫೆಡರೇಷನ್ ಮತ್ತಿತರ ಮಾನ್ಯತೆ ಪಡೆದ ಸಂಘಟನೆಗಳನ್ನು ಕಾಡಬೇಕಿರುವ ಪ್ರಶ್ನೆ. ಸಾರಿಗೆ ನೌಕರರು ತಮ್ಮ ನೌಕರಿಯನ್ನು ಉಳಿಸಿಕೊಳ್ಳಲು ಹೆಣಗಾಡಬೇಕಾದ ಪರಿಸ್ಥಿತಿ ಉಂಟಾದರೆ ಮಾನಸಿಕ ಕ್ಷೋಭೆಗೆ ಒಳಗಾಗುತ್ತಾರೆ. ಒಮ್ಮೆ ವಜಾ ಆದರೆ ನಿವೃತ್ತಿಯ ನಂತರ ಕುಟುಂಬಕ್ಕೆ ಸಿಗುವ ಸೌಲಭ್ಯಗಳೂ ಸಿಗುವುದಿಲ್ಲ ಎಂಬ ಆತಂಕ ನೌಕರರಲ್ಲಿರುತ್ತದೆ. ಹಾಗಾಗಿಯೇ ಹೆಚ್ಚು ಹೆಚ್ಚು ನೌಕರರು ಕೆಲಸಕ್ಕೆ ಹಾಜರಾಗುತ್ತಿದ್ದಾರೆ.
ಉದ್ಭವ ಮೂರ್ತಿ ನಾಯಕರಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿ ಕಾಣುತ್ತಿದೆ. ಇದರ ಪರಿಣಾಮ ಒಬ್ಬ ಅಮಾಯಕ ಚಾಲಕನ ಕೊಲೆ. ಕಾರ್ಮಿಕರನ್ನು ಹತಾಶೆಗೆ ದೂಡಿ ಅರಾಜಕತೆ ಸೃಷ್ಟಿಸುವುದಕ್ಕಿಂತಲೂ ಮುಷ್ಕರ ಹಿಂಪಡೆದು ವ್ಯವಸ್ಥಿತವಾಗಿ ಕಾನೂನು ಬದ್ಧ ಹೋರಾಟ ನಡೆಸುವುದು ಈ ಸಂದರ್ಭದ ಅನಿವಾರ್ಯತೆ ಎನ್ನುವುದನ್ನು ಈ ನಾಯಕರು ಅರ್ಥಮಾಡಿಕೊಳ್ಳಬೇಕಿದೆ. ಎಐಟಿಯುಸಿ ಮತ್ತು ಕೆ ಎಸ್ ಶರ್ಮ ಅವರ ಸಂಘಟನೆಗಳನ್ನು ದೂಷಿಸುವ ಮುನ್ನ ಹೊಸ ಕೂಟದ ನಾಯಕರು ತಮ್ಮ ಹೊಣೆಗೇಡಿ ನಿರ್ಧಾರಗಳತ್ತ ಗಮನಹರಿಸುವುದು ಒಳಿತಲ್ಲವೇ ? ಒಂದು ಕಾರ್ಮಿಕ ಮುಷ್ಕರ ಅಥವಾ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದೆಂದರೆ ನಿರಂತರ ಮುಷ್ಕರ ನಡೆಸಿ ಅರಾಜಕತೆ ಸೃಷ್ಟಿಸುವುದಲ್ಲ. ವಿವೇಕ ಮತ್ತು ವಿವೇಚನೆ ಬಳಸಿ ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡಿ, ಬೇಡಿಕೆಗಳನ್ನು ಈಡೇರಿಸುವುದು ಆದ್ಯತೆಯಾಗಬೇಕು.
ವೇತನ ಪರಿಷ್ಕರಣೆ ಮತ್ತಿತರ ಬೇಡಿಕೆಗಳು ನೌಕರರ ಬದುಕಿಗೆ ಪೂರಕವಾದ ಅಂಶಗಳು. ಸಂಸ್ಥೆಯ ಉಳಿವು ಮತ್ತು ನೌಕರಿಯ ರಕ್ಷಣೆ ಬದುಕನ್ನು ಕಟ್ಟಿಕೊಡುವ ಅಂಶಗಳು. ಈ ವ್ಯತ್ಯಾಸವನ್ನು ಅರಿತಾಗಲೇ ಕಾರ್ಮಿಕ ಸಂಘಟನೆಗಳು ನೌಕರರಿಗೆ ನ್ಯಾಯ ಒದಗಿಸಲು ಸಾಧ್ಯ. ಸಾರಿಗೆ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸಲು ತುದಿಗಾಲಲ್ಲಿ ನಿಂತಿರುವ ಸರ್ಕಾರಕ್ಕೆ ಈ ಪ್ರಕ್ರಿಯೆಗೆ ಸುಲಭ ಮಾರ್ಗಗಳನ್ನು ನಿರ್ಮಿಸುವುದು ಅವಿವೇಕಿ ಕ್ರಮವಾಗುತ್ತದೆ. ಸಾರಿಗೆ ನೌಕರರ ಮುಷ್ಕರ ಅರಾಜಕತೆಯನ್ನು ಸೃಷ್ಟಿಸಿದೆ. ಇದರ ಹೊಣೆ ಯಾರದು, ಯಾರು ಸರಿಪಡಿಸಬೇಕು ಎನ್ನುವ ವಾದ ಪ್ರತಿವಾದಗಳಲ್ಲಿ ಸಾರಿಗೆ ನೌಕರರ ಬದುಕು ಅನಿಶ್ಚಿತತೆಯತ್ತ ಸಾಗುವುದು ತರವಲ್ಲ. ಸಿಐಟಿಯು, ಎಐಟಿಯುಸಿ ಮತ್ತು ಇತರ ಸಂಘಟನೆಗಳು ಈ ಸಂದರ್ಭದಲ್ಲಿ ತಮ್ಮ ನೈತಿಕೆ ಹೊಣೆಗಾರಿಕೆಯನ್ನು ನಿಭಾಯಿಸಬೇಕಿದೆ.
ಇಲ್ಲಿ ಸೋಲು ಗೆಲುವಿನ ಪ್ರಶ್ನೆ ಇದ್ದರೆ ಅದು ಸಾರಿಗೆ ನೌಕರರ ಬದುಕಿನ ಸೋಲು ಮತ್ತು ಗೆಲುವು ಮಾತ್ರ. ಪ್ರತಿಷ್ಠೆಯ ಪ್ರಶ್ನೆ ಇದ್ದರೆ ಅದು ನೌಕರರ ಮತ್ತು ಅವರ ಕುಟುಂಬಗಳ ಜೀವನೋಪಾಯದ ಪ್ರತಿಷ್ಠೆ ಮಾತ್ರ. ಸಾರಿಗೆ ನೌಕರರಲ್ಲಿ ತಮ್ಮ ಬೇಡಿಕೆಗಳು ಈಡೇರುತ್ತವೆ ಎಂಬ ಒಂದು ಸಣ್ಣ ಭರವಸೆ ಮೂಡಿಸಿದರೆ ಮುಷ್ಕರ ತಂತಾನೇ ಅಂತ್ಯವಾಗುತ್ತದೆ. ಈ ಭರವಸೆ ಮೂಡಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ಕಾಣುತ್ತಿಲ್ಲ. ಹಮ್ಮು ಬಿಮ್ಮುಗಳು ಅಡ್ಡಿಯಾಗುತ್ತಿವೆ. ಪ್ರತಿಷ್ಠೆ ಸಮ್ಮಾನಗಳು ಅಡ್ಡಿಯಾಗುತ್ತಿವೆ. ದಶಕಗಳ ಇತಿಹಾಸವಿರುವ ಎಡಪಂಥೀಯ ಕಾರ್ಮಿಕ ಸಂಘಟನೆಗಳು ಇಂತಹ ಅನೇಕ ಸನ್ನಿವೇಶಗಳನ್ನು ಯಶಸ್ವಿಯಾಗಿ ಎದುರಿಸಿವೆ. ಇದು ಮತ್ತೊಂದು ಸವಾಲು. ಸಾರಿಗೆ ನೌಕರರ ಬದುಕಿನೊಡನೆ ಚೆಲ್ಲಾಟವಾಡುತ್ತಿರುವ ಸಾರಿಗೆ ಸಂಸ್ಥೆ, ನಿರ್ಲಜ್ಜ ಸರ್ಕಾರ ಮತ್ತು ಹೊಣೆಗೇಡಿ ಕೂಟಗಳನ್ನು ಬದಿಗಿಟ್ಟು ನೌಕರರ ಬದುಕಿನ ರಕ್ಷಣೆಗಾಗಿ ನಿಲ್ಲುವುದು ಈ ಸಂಘಟನೆಗಳ ನೈತಿಕ ಜವಾಬ್ದಾರಿಯೂ ಆಗಿದೆ.