
—–ನಾ ದಿವಾಕರ—-
ಬಂಡವಾಳ-ಮಾರುಕಟ್ಟೆಯ ದೃಷ್ಟಿಯಲ್ಲಿ ಶ್ರಮ-ಶ್ರಮಿಕ ಎರಡೂ ಬಳಕೆಯ ವಸ್ತುಗಳೇ ಆಗಿರುತ್ತವೆ
ಡಿಜಿಟಲ್ ತಂತ್ರಜ್ಞಾನದ ಯುಗದಲ್ಲಿ ಮಾನವನ ಶ್ರಮದ ಅವಕಾಶಗಳನ್ನು ಕೃತಕ ಬುದ್ಧಿಮತ್ತೆ (Artificial Intellengence- ಎಐ) ಅತಿ ವೇಗದಿಂದ ಆಕ್ರಮಿಸುತ್ತಿರುವ ಹೊತ್ತಿನಲ್ಲಿ ಕಾರ್ಪೋರೇಟ್ ಮಾರುಕಟ್ಟೆ ಮತ್ತೊಮ್ಮೆ ಕಾರ್ಮಿಕರ ದುಡಿಮೆಯ ಅವಧಿಯ ಬಗ್ಗೆ ಮಾತನಾಡುತ್ತಿದೆ. ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಅಂತಿಮವಾಗಿ ಸರಕುಗಳ ಉತ್ಪಾದನಾ ಪ್ರಕ್ರಿಯೆಯಲ್ಲಿ ದುಡಿಮೆಯ ಕೈಗಳನ್ನು ಸಂಪೂರ್ಣವಾಗಿ ಅಳಿಸಿಹಾಕಲಾಗುವುದಿಲ್ಲ ಎಂಬ ಚಾರಿತ್ರಿಕ ಸತ್ಯವನ್ನು ಮಾರುಕಟ್ಟೆಯೂ ಅರಿತಿದೆ. ಆದರೆ ಈ ಉತ್ಪಾದನೆಯ ನೆಲೆಗಳಲ್ಲಿ ಬೆವರು ಸುರಿಸಿ ಸಂಪತ್ತಿನ ವೃದ್ಧಿಗೆ ಕಾರಣರಾಗುವ ಶ್ರಮಜೀವಿಗಳನ್ನು ಮಾನವ ಸರಕುಗಳಂತೆ ಬಳಸುವ ತನ್ನ ತಂತ್ರಗಾರಿಕೆಯನ್ನು ಬಂಡವಾಳಶಾಹಿ ವ್ಯವಸ್ಥೆಯು ವ್ಯವಸ್ಥಿತವಾಗಿ ಅನುಸರಿಸುತ್ತಲೇ ಇರುತ್ತದೆ. ಇದು ಆಧುನಿಕ ಮಾನವ ಕೈಗಾರಿಕೀಕರಣ ಮತ್ತು ಉತ್ಪಾದನಾ ಪ್ರಕ್ರಿಯೆಗೆ ಒಳಗಾದ ಕಾಲದಿಂದಲೂ ಕಾಣಬಹುದಾದ ಒಂದು ವಿದ್ಯಮಾನ.
ಜಗತ್ತನ್ನು ಇಂದು ಪ್ರಬಲವಾಗಿ ಆವರಿಸಿಕೊಂಡಿರುವ ಹಾಗೂ ಇಡೀ ಜಗತ್ತಿನ ಅರ್ಥವ್ಯವಸ್ಥೆಗಳನ್ನು ನಿರ್ದೇಶಿಸಿ ನಿಯಂತ್ರಿಸುತ್ತಿರುವ ಡಿಜಿಟಲ್ ಕಾರ್ಪೋರೇಟ್ ಬಂಡವಾಳವು, ವಿಶ್ವ ಆರ್ಥಿಕತೆಯು ಔದ್ಯೋಗಿಕ ಹಂತವನ್ನು ಹಾದು ಡಿಜಿಟಲ್ ಯುಗವನ್ನು ತಲುಪಿದ್ದರೂ, ಈ ಹಾದಿಯಲ್ಲಿ ವಿಶ್ವದ ಶ್ರಮಿಕರ ಮೇಲಿನ ತನ್ನ ಹಿಡಿತವನ್ನು ಸಡಿಲಗೊಳಿಸದೆ ಕಾಪಾಡಿಕೊಂಡುಬಂದಿದೆ. ಡಿಜಿಟಲ್ ಯುಗದ ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲಿ ಉತ್ಪಾದಕ ನೆಲೆಗಿಂತಲೂ ಸೇವಾ ವಲಯವನ್ನೇ ಹೆಚ್ಚು ಅವಲಂಬಿಸುವುದು ಕಾಣುವುದಾದರೂ, ದೇಶಗಳ ಮೇಲ್‌ಸ್ತರ ಆರ್ಥಿಕಾಭಿವೃದ್ಧಿಗೆ (Macro Economic Development) ಕೆಳಸ್ತರದ ಸಮಾಜದಲ್ಲಿ ಉತ್ಪಾದನಾ ಪ್ರಕ್ರಿಯೆಯನ್ನು ತೀವ್ರಗೊಳಿಸುವುದು ಅನಿವಾರ್ಯವಾಗಿರುತ್ತದೆ. ಇಲ್ಲಿ ಲಭ್ಯವಾಗುವ ಅಸಂಖ್ಯಾತ ಶ್ರಮಜೀವಿಗಳು, ಕುಶಲಿಗಳಾಗಿರಲಿ ಅಥವಾ ಅರೆ ಕುಶಲಿಗಳಾಗಿರಲಿ, ಈ ಬಂಡವಾಳ ಮತ್ತು ಮಾರುಕಟ್ಟೆಯ ನಿಯಂತ್ರಣದಲ್ಲೇ ತಮ್ಮ ಬದುಕು ರೂಪಿಸಿಕೊಳ್ಳಬೇಕಾಗುತ್ತದೆ.

ದುಡಿಮೆ ಶ್ರಮ ಮತ್ತು ಔದ್ಯೋಗೀಕರಣ
ಮಾಹಿತಿ ತಂತ್ರಜ್ಞಾನ ಮತ್ತು ತಂತ್ರಜ್ಞಾನಾಧಾರಿತ ಸೇವಾವಲಯದ ಪ್ರಾಧಾನ್ಯತೆ ಮತ್ತು ಪ್ರಾಬಲ್ಯದ ಹೊರತಾಗಿಯೂ ಇಂದು ಜಗತ್ತಿನ ಎಲ್ಲ ದೇಶಗಳಿಗೆ ತೀವ್ರಗತಿಯ ಕೈಗಾರಿಕೀಕರಣ (Rapid Industrialisation) ಅತ್ಯವಶ್ಯವಾಗಿದೆ. ಭಾರತ ಈ ಹಾದಿಯಲ್ಲಿ ಹಿಂದುಳಿದಿರುವುದರಿಂದಲೇ ರೂಪಾಯಿ ಮೌಲ್ಯ ಕುಸಿತ, ಶೇರು ಮಾರುಕಟ್ಟೆ ವ್ಯತ್ಯಯ ಇತ್ಯಾದಿ ಬಿಕ್ಕಟ್ಟುಗಳು ತಲೆದೋರುತ್ತಿವೆ. ಉತ್ಪಾದನಾ ವಲಯವನ್ನು ವಿಸ್ತರಿಸದೆ ಹೋದರೆ ಅರ್ಥವ್ಯವಸ್ಥೆಯಲ್ಲಿ ಉದ್ಯೋಗಗಳೂ ಸೃಷ್ಟಿಯಾಗುವುದಿಲ್ಲ, ತಳಸಮಾಜದಲ್ಲಿ ಖರೀದಿಯ ಸಾಮರ್ಥ್ಯವೂ ಹೆಚ್ಚಾಗುವುದಿಲ್ಲ ಎನ್ನುವುದು ಸಾರ್ವತ್ರಿಕ ಸತ್ಯ. ಆದರೆ ಭಾರತದ ಆರ್ಥಿಕತೆಯನ್ನು ನಿರ್ದೇಶಿಸುತ್ತಿರುವವರು ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸುತ್ತಿಲ್ಲ. ಆದಾಗ್ಯೂ ಈ ವಾಸ್ತವವನ್ನು ಔದ್ಯೋಗಿಕ-ಔದ್ಯಮಿಕ ಜಗತ್ತಿನ ವಾರಸುದಾರರು ಅರಿತಿದ್ದಾರೆ.
ಹಾಗಾಗಿಯೇ ಕಾರ್ಮಿಕರ ದುಡಿಮೆಯ ಅವಧಿ ಈಗ ಒಂದು ಸಾರ್ವಜನಿಕ ಚರ್ಚೆಯ ವಿಷಯವಾಗಿದೆ. ಕೃತಕ ಬುದ್ಧಿಮತ್ತೆ ಇತ್ಯಾದಿ ಅತ್ಯಾಧುನಿಕ ತಂತ್ರಜ್ಞಾನದ ಅವಿಷ್ಕಾರಗಳು ಆರ್ಥಿಕ ವ್ಯವಸ್ಥೆಯ ವಿವಿಧ ಸ್ತರಗಳನ್ನು ಆಕ್ರಮಿಸಿದರೂ ಉತ್ಪಾದಕ ವಲಯದಲ್ಲಿ ಮತ್ತು ಒಂದು ಹಂತದವರೆಗೆ ಸೇವಾ ವಲಯದಲ್ಲೂ ಸಹ, ಮಾನವ ಶ್ರಮವನ್ನು ಸಂಪೂರ್ಣವಾಗಿ ತೊಡೆದುಹಾಕಲಾಗುವುದಿಲ್ಲ. ಭಾರತ ಔದ್ಯೋಗಿಕ ಕ್ರಾಂತಿಯಿಂದ ಡಿಜಿಟಲ್ ಕ್ರಾಂತಿಗೆ ದಾಟಿ ಬಂದಿದ್ದರೂ ಸಹ ದೇಶದ ಅರ್ಥವ್ಯವಸ್ಥೆಯಲ್ಲಿ ಮಾನವ ಶ್ರಮವನ್ನು ನಿರ್ಲಕ್ಷಿಸಲಾಗುವುದಿಲ್ಲ. ಕೆಲವು ದಿನಗಳ ಹಿಂದೆ ಸೇವಾವಲಯವನ್ನೇ ಪ್ರತಿನಿಧಿಸುವ ಇನ್ಫೋಸಿಸ್ ನಾರಾಯಣ ಮೂರ್ತಿ ಕಾರ್ಮಿಕರು ವಾರಕ್ಕೆ ಕನಿಷ್ಠ 70 ಗಂಟೆಗಳ ದುಡಿಮೆ ಮಾಡಬೇಕು ಎಂದು ಹೇಳಿದ್ದನ್ನು ಈ ದೃಷ್ಟಿಯಿಂದಲೇ ಗಮನಿಸಬೇಕಿದೆ.
ಈಗ ಸೇವಾ ಮತ್ತು ಉತ್ಪಾದನಾ ವಲಯ ಎರಡನ್ನೂ ಪ್ರತಿನಿಧಿಸುವ ಎಲ್ ಅಂಡ್ ಟಿ ಸಂಸ್ಥೆಯ ಮುಖ್ಯಸ್ಥರಾದ ಎಸ್.ಆರ್. ಸುಬ್ರಮಣ್ಯಂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಾರ್ಮಿಕರು ವಾರಕ್ಕೆ 90 ಗಂಟೆಗಳ ದುಡಿಮೆ ಮಾಡಬೇಕು ಎಂದು ಹೇಳಿದ್ದಾರೆ. ಈ ವಿವಾದಾಸ್ಪದ ಹೇಳಿಕೆಗೆ ಮಾರುಕಟ್ಟೆಯ ಆವರಣದಲ್ಲೇ ವಿರೋಧ, ಆಕ್ಷೇಪಗಳು ಕೇಳಿಬರುತ್ತಿವೆ. ಆದರೆ ಭಾರತದ ಶ್ರಮಿಕ ವರ್ಗ ಗುರುತಿಸಬೇಕಿರುವುದು ಈ ಹೇಳಿಕೆಗಳ ಹಿಂದೆ ಅಡಗಿರುವ ಮಾರುಕಟ್ಟೆಯ ಭಾಷೆ ಮತ್ತು ಬಂಡವಾಳಶಾಹಿಯ ಪರಿಭಾಷೆಯನ್ನು. ಈ ಇಬ್ಬರು ಉದ್ಯಮಿಗಳ ಆಶಯ ಹೊಸತೇನೂ ಅಲ್ಲ ಅಥವಾ ಭಾರತದ ಔದ್ಯೋಗಿಕ-ಔದ್ಯಮಿಕ ಪ್ರಗತಿಯ ಹಾದಿಯಲ್ಲಿ ಗೋಚರಿಸದಂತಹ ವಿದ್ಯಮಾನವೇನಲ್ಲ. ಬಂಡವಾಳ ಹೂಡಿಕೆದಾರರಿಗೆ ಮತ್ತು ಮಾರುಕಟ್ಟೆ ನಿರ್ವಾಹಕರಿಗೆ ದುಡಿಮೆ ಎನ್ನುವುದು ಕಚ್ಚಾವಸ್ತುವಾಗಿ ಕಂಡರೆ, ದುಡಿಮೆಗಾರರು ಇದನ್ನು ಪ್ರವಹಿಸುವ ಸರಕುಗಳಾಗಿ ಕಾಣುವುದು ಬಂಡವಾಳಶಾಹಿಯ ಮೂಲ ಲಕ್ಷಣ.
ದುಡಿಮೆಯ ಅವಧಿ ಮತ್ತು ಬದುಕು
ಔದ್ಯೋಗಿಕ ವಲಯದಲ್ಲಿ ಕಾರ್ಮಿಕರು ಹೆಚ್ಚು ಅವಧಿ ದುಡಿಮೆ ಮಾಡುವುದರಿಂದ ಉತ್ಪಾದನೆ ಹೆಚ್ಚಾಗುತ್ತದೆ ಎಂಬ ನಂಬಿಕೆ ಮೊದಲಿನಿಂದಲೂ ಇದೆ, ಹಾಗೆಯೇ ಉತ್ಪಾದನೇತರ ವಲಯಗಳಲ್ಲಿ ಅಂದರೆ ಬ್ಯಾಂಕಿಂಗ್, ವಿಮೆ ಮೊದಲಾದ ಸೇವಾ ವಲಯಗಳಲ್ಲಿ ದುಡಿಮೆಯ ಅವಧಿ ಹೆಚ್ಚಾದಷ್ಟು ಕಾರ್ಮಿಕರ ಬೌದ್ಧಿಕ ಉತ್ಪಾದಕೀಯತೆ ಮತ್ತು ಅದರ ಫಲ ಹೆಚ್ಚಾಗುತ್ತದೆ ಎಂಬ ಭಾವನೆಯೂ ಇದೆ. ದಿನಕ್ಕೆ ಎಂಟು ಗಂಟೆಗಳ ದುಡಿಮೆಯ ಕಲ್ಪನೆಯ ಹಿಂದಿರುವ ವೈಜ್ಞಾನಿಕ ಕಲ್ಪನೆಗಳನ್ನು ಮಾರುಕಟ್ಟೆ ಒಪ್ಪುವುದೂ ಇಲ್ಲ. ಭೌತಿಕವಾಗಲೀ ಮಾನಸಿಕವಾಗಲೀ ತನ್ನ ಸಮಯ ವ್ಯಯಿಸಿ ದುಡಿಯುವ ಕಾರ್ಮಿಕನಿಗೆ ತನ್ನ ಬೆವರಿನ ದುಡಿಮೆಯಿಂದ ಹೊರತಾದ ಒಂದು ಬದುಕು ಇದೆ, ಅಲ್ಲಿ ಆತನ/ಆಕೆಯ ಸಾಂಸ್ಕೃತಿಕ-ಬೌದ್ಧಿಕ-ಶೈಕ್ಷಣಿಕ ಹಾಗೂ ಕೌಟುಂಬಿಕ ವಿಕಾಸದ ಅವಕಾಶಗಳಿರುತ್ತವೆ ಎಂಬ ಸರಳ ವಾಸ್ತವವನ್ನು ಮಾರುಕಟ್ಟೆ ನಿರಾಕರಿಸುತ್ತಲೇ ಬಂದಿದೆ.

ಉದಾಹರಣೆಗೆ ವೈಟ್ ಕಾಲರ್ ಕಾರ್ಮಿಕರನ್ನು ಪ್ರತಿನಿಧಿಸುವ ಬ್ಯಾಂಕಿಂಗ್ ಮತ್ತು ವಿಮಾ ವಲಯದಲ್ಲೂ ಸಹ ಕಾರ್ಮಿಕ ಸಂಘಟನೆಗಳು ದಿನಕ್ಕೆ ಏಳು ಅಥವಾ ಎಂಟು ಗಂಟೆಗಳ ದುಡಿಮೆಯ ಅವಧಿಯನ್ನು ಕಾಪಾಡಿಕೊಂಡು ಬಂದಿದ್ದರೂ, ಇಲ್ಲಿನ ಕಾರ್ಮಿಕರೆಲ್ಲರೂ ಕಟ್ಟುನಿಟ್ಟಾಗಿ ಇದನ್ನು ಪಾಲಿಸಿಕೊಂಡು ಬಂದಿಲ್ಲ ಎನ್ನುವುದು ಚಾರಿತ್ರಿಕ ವಾಸ್ತವ. ಸಂಸ್ಥೆಯ ಆಡಳಿತವು ಬಯಸುವ ಕಾರ್ಮಿಕರ ಉತ್ಪಾದಕೀಯ ಫಲಿತಾಂಶಗಳು (Productive Output) ಫಲಿತವಾಗಬೇಕಾದರೆ, ಈ ವೈಟ್ ಕಾಲರ್ ಉದ್ಯೋಗಿಗಳಿಂದಲೂ ಹೆಚ್ಚಿನ ಅವಧಿಯ ದುಡಿಮೆಯನ್ನು ಬಯಸುತ್ತದೆ. ಬ್ಯಾಂಕಿಂಗ್ ವಲಯದಲ್ಲಿ ಅಧಿಕಾರಿ ವರ್ಗಗಳಿಗೆ ನಿರ್ದಿಷ್ಟ ದುಡಿಮೆಯ ಅವಧಿಯೇ ಇಲ್ಲ ಎಂಬ ಅಭಿಪ್ರಾಯ ಜನಜನಿತವಾಗಿರುವುದಷ್ಟೇ ಅಲ್ಲ, ಸ್ವೀಕೃತವೂ ಆಗಿದೆ. ಬ್ಯಾಂಕ್ ಮತ್ತಿತರ ಕ್ಷೇತ್ರಗಳ ಅಧಿಕಾರಿಗಳೂ ಇದನ್ನು ಒಪ್ಪಿಕೊಂಡೇ ಹಗಲು ರಾತ್ರಿ ಎನ್ನದೆ ದುಡಿಯುವ ನಿದರ್ಶನಗಳು ಸಾಕಷ್ಟಿವೆ. ಸಂಘಟನಾತ್ಮಕವಾಗಿ ಇದನ್ನು ನಿಯಂತ್ರಿಸುವ ಪ್ರಾಮಾಣಿಕ ಪ್ರಯತ್ನಗಳು ಕಾರ್ಮಿಕ ಸಂಘಟನೆಗಳಿಂದ ಹೆಚ್ಚಾಗಿ ನಡೆದಿಲ್ಲ ಎನ್ನುವುದೂ ಕಟು ವಾಸ್ತವ.
ಆದರೆ ವ್ಯಕ್ತಿಗತ ನೆಲೆಯಲ್ಲಿ ಕಾರ್ಮಿಕ ವರ್ಗ ಕಳೆದುಕೊಳ್ಳುವುದೇನನ್ನು ? ತನ್ನ ಕೌಟುಂಬಿಕ ಪರಿಸರವನ್ನು, ಆ ಕುಟುಂಬ ಸದಸ್ಯರ ಸಾಮೀಪ್ಯವನ್ನು ಮತ್ತು ಮನುಜ ಸಹಜವಾಗಿ ಅಪೇಕ್ಷಣೀಯವಾದ ಮನರಂಜನೆ ಇತ್ಯಾದಿಗಳನ್ನು. ಬ್ಯಾಂಕಿಂಗ್/ವಿಮಾ ವಲಯ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಅಧಿಕಾರಿಗಳು, ಬಹುತೇಕ ಕಾರಕೂನರೂ ಸಹ (Clerks) ತಡವಾಗಿ ಮನೆಗೆ ಬರುವುದೇ ಒಂದು ಹಿರಿಮೆಯ ಸಂಗತಿಯಾಗಿದ್ದುದನ್ನು ಸ್ಮರಿಸಬಹುದು. ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಡಿಜಿಟಲೀಕರಣದ ಪ್ರಭಾವದಿಂದ ಇಂದು ಇದಕ್ಕೆ ಅವಕಾಶ ಇರುವುದಿಲ್ಲ. ಆದರೂ ಇಲ್ಲಿ ಗಮನಿಸಬೇಕಿರುವುದು ಸೇವಾ ವಲಯದಲ್ಲಿ ಕಾರ್ಯನಿರ್ವಹಿಸುವ ದುಡಿಮೆಗಾರರ ಸಾಮಾಜಿಕ ಬದುಕು ಮತ್ತು ಅದರ ಸುತ್ತಲಿನ ಅವಶ್ಯಕತೆಗಳು.
ಎಲ್ ಅಂಡ್ ಟಿ ಮುಖ್ಯಸ್ಥ ಸುಬ್ರಮಣ್ಯಂ ಅವರು ಕಾರ್ಮಿಕರನ್ನು ಉದ್ದೇಶಿಸಿ “ ನಿಮ್ಮ ಹೆಂಡತಿಯ ಮುಖವನ್ನು ಎಷ್ಟು ಹೊತ್ತು ನೋಡುತ್ತೀರಿ,,,,,,” ಎಂದು ಹೇಳಿರುವುದು ಮಾರುಕಟ್ಟೆಯ ಮನದಾಳದ ಮಾತು ಎನ್ನುವುದನ್ನು ಗಮನಿಸಬೇಕು. ಈ ಅನಗತ್ಯ ಹೇಳಿಕೆಯ ಹಿಂದೆ ಹೆಂಡತಿ ಎನ್ನುವ ವ್ಯಕ್ತಿಯನ್ನೂ ಸಹ ಮಾರುಕಟ್ಟೆ ಸರಕಿನ ಒಂದು ಭಾಗವಾಗಿ ಪರಿಭಾವಿಸುವ ಆಲೋಚನೆ ಇದೆಯಲ್ಲವೇ ? ಇದು ಈ ಹಿಂದೆಯೂ ಇತ್ತು. ಮಹಿಳಾ ಉದ್ಯೋಗಿಗಳ ಕೌಟುಂಬಿಕ ಜವಾಬ್ದಾರಿಗಳನ್ನೂ ಲೆಕ್ಕಿಸದೆ ಹೆಚ್ಚಿನ ಅವಧಿಗೆ ದುಡಿಸಿಕೊಳ್ಳುವ ಸಾರ್ವಜನಿಕ ಔದ್ಯೋಗಿಕ ಸಂಸ್ಥೆಗಳ ಇತಿಹಾಸವನ್ನು ಒಳಹೊಕ್ಕು ನೋಡಿದರೆ ಇದು ಸ್ಪಷ್ಟವಾಗುತ್ತದೆ. “ ಮನೆಗೆ ಹೋಗಿ ಏನ್ರೀ ಮಾಡ್ತೀರಿ ” ಎಂಬ ಮಾತುಗಳು ಕಾರ್ಮಿಕರ ಕಿವಿಯಲ್ಲಿ ಧ್ವನಿಸುತ್ತಲೇ ಇರುತ್ತವೆ.

ಮಾರುಕಟ್ಟೆ ಬಂಡವಾಳ ಮತ್ತು ಲಾಭ
ಈ ಧ್ವನಿಯ ಹಿಂದೆ ಮಾರುಕಟ್ಟೆಯ ಲಾಭ ಮತ್ತು ಬಂಡವಾಳದ ವಿಸ್ತರಣೆಯ ಮಹತ್ವಾಕಾಂಕ್ಷೆ ಇರುವುದನ್ನು ಗಮನಿಸಬೇಕಿದೆ. “ ಅತಿ ಕಡಿಮೆ ಕೂಲಿ-ಅತಿ ಹೆಚ್ಚು ದುಡಿಮೆ ” ಎಂಬ ಮಾರುಕಟ್ಟೆ ಸೂತ್ರ ಇತ್ತೀಚಿನ ಅವಿಷ್ಕಾರವಲ್ಲ. ದುಡಿಮೆಯ ಮಾದರಿಗಳು ರೂಪಾಂತರವಾಗಿದ್ದರೂ, ದುಡಿಯುವ ಕೈಗಳು ಯಥಾಸ್ಥಿತಿಯಲ್ಲಿವೆ. ಸಾಫ್ಟ್ ವೇರ್ ಉದ್ಯಮದಲ್ಲಿ ಕಚೇರಿಯ ಅವಧಿಯೇ ಇಲ್ಲದೆ, ಹಗಲಿರುಳು ದುಡಿಯುವ ಇಂಜಿನಿಯರ್‌ಗಳನ್ನು ನೋಡುತ್ತಲೇ ಇದ್ದೇವೆ. ಈ ಬಿಡುವಿಲ್ಲದ ದುಡಿಮೆಯನ್ನು ಅಧಿಕೃತಗೊಳಿಸುವುದು ಆಧುನಿಕ ಬಂಡವಾಳಶಾಹಿ ಮಾರುಕಟ್ಟೆಗೆ ಅನಿವಾರ್ಯವಾಗಿದೆ. ಏಕೆಂದರೆ ಶ್ರಮಕ್ಕೆ ನೀಡಲಾಗುವ ವೇತನ ಅಥವಾ ಕೂಲಿ ಮಾರುಕಟ್ಟೆಯ ಬಂಡವಾಳದ ಹೆಚ್ಚುವರಿ ಲಾಭವನ್ನು ಕಸಿದುಕೊಳ್ಳುವುದನ್ನು ನವ ಉದಾರವಾದಿ ಆರ್ಥಿಕತೆ ಸಹಿಸಿಕೊಳ್ಳುವುದಿಲ್ಲ.
ಈ ಹೆಚ್ಚುವರಿ ದುಡಿಮೆಯಿಂದ ಬೌದ್ಧಿಕವಾಗಿ-ಭೌತಿಕವಾಗಿ ಬಂಡವಾಳಿಗರು ಪಡೆಯುವ ಲಾಭಕ್ಕೆ ಕಾರ್ಮಿಕರ ಹೆಚ್ಚಿನ ಪರಿಶ್ರಮವೇ ಕಾರಣವಾದರೂ, ಇದನ್ನು ಮಾರುಕಟ್ಟೆಯು ಆರ್ಥಿಕ ಸ್ತರದಲ್ಲಿ ಪರಿಗಣಿಸುವುದಿಲ್ಲ. ಗ್ರೀಕ್ ಅರ್ಥಶಾಸ್ತ್ರಜ್ಞ ಯಾನಿಸ್ ವರೋಫಾಕಿಸ್ ಸೇವಾ ವಲಯದ ಶ್ರಮಿಕರ ಈ ಹೆಚ್ಚಿನ ದುಡಿಮೆಯಿಂದ ಹೆಚ್ಚಾಗುವ ಉತ್ಪನ್ನವನ್ನು ದಕ್ಷತೆ ಅಥವಾ ಕಾರ್ಯಕ್ಷಮತೆಯ ಮೌಲ್ಯ (Efficiency Value) ಎಂದು ಗುರುತಿಸುತ್ತಾರೆ. ಈ ಮೌಲ್ಯ ವಿನಿಯಮ ಮೌಲ್ಯವಾಗಿ ಪರಿವರ್ತನೆಯಾಗುವುದಿಲ್ಲ. ಹಾಗಾಗಿ ದುಡಿಮೆಗಾರರಿಗೆ ಇದರಿಂದ ಯಾವುದೇ ಪ್ರಯೋಜನವೂ ಆಗುವುದಿಲ್ಲ. ಆದರೆ ಅವರು ಕಳೆದುಕೊಳ್ಳುವುದೇನನ್ನು ? ದೈಹಿಕ ಆರೋಗ್ಯ, ಕೌಟುಂಬಿಕ ಸಾಮೀಪ್ಯ ಮತ್ತು ಜೀವನಕ್ಕೆ ಅತ್ಯಂತ ಅವಶ್ಯ ಎನಿಸುವ ಸಾಮಾಜಿಕ-ಸಾಂಸ್ಕೃತಿಕ ಬದುಕು. ಈಗ ಎಲ್ ಅಂಡ್ ಟಿ ಮುಖ್ಯಸ್ಥರು ಕೌಟುಂಬಿಕ ಹಿತವನ್ನೂ ಕಡೆಗಣಿಸಲು ಹೇಳಿದ್ದಾರೆ.

ಈ ಜೀವನಾವಶ್ಯ ಅಗತ್ಯಗಳನ್ನು ಕಸಿದುಕೊಂಡು, ಮಾರುಕಟ್ಟೆಯ ಲಾಭಕ್ಕಾಗಿ ದುಡಿಮೆಗಾರರನ್ನು ಭೌತಿಕ ಸರಕುಗಳಂತೆ ಬಳಸಿಕೊಳ್ಳುವ ಒಂದು ವಿಧಾನವನ್ನು ನವ ಉದಾರವಾದಿ ಮಾರುಕಟ್ಟೆ ಅನುಸರಿಸುತ್ತಿದೆ. ಇದರ ಒಂದು ಧ್ವನಿಯನ್ನು ಇಬ್ಬರು ಔದ್ಯಮಿಕ ದಿಗ್ಗಜರು ಹೊರಗೆಡಹಿದ್ದಾರೆ. ಈಗ ಇದರ ವಿಕೃತ ಸ್ವರೂಪವನ್ನು ಉತ್ತರ ಪ್ರದೇಶದ ಮಥುರಾದಲ್ಲಿರುವ ಕೃಷ್ಣ ಮೋಹನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತ ಮಂಡಲಿ ಹೊರಹಾಕಿದೆ. 850 ಹಾಸಿಗೆಗಳಿರುವ ಈ ವೈದ್ಯಕೀಯ ವಿದ್ಯಾಲಯ-ಆಸ್ಪತ್ರೆಯಲ್ಲಿ 102 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ಈ ವೈದ್ಯಕೀಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಸ್ನಾತಕೋತ್ತರ ನಿವಾಸಿ ವೈದ್ಯರಿಗೆ (Post Graduate Resident Doctors) ಆದೇಶವೊಂದನ್ನು ಹೊರಡಿಸಲಾಗಿದ್ದು, ಗ್ರಾಮೀಣ ಪರದೇಶಗಳಲ್ಲಿ ಕ್ಯಾಂಪ್‌ಗಳನ್ನು ನಡೆಸುವ ಪ್ರತಿಯೊಬ್ಬ ನಿವಾಸಿ ವೈದ್ಯರೂ, ಕ್ಯಾಂಪ್ ಮುಗಿದ ಹದಿನೈದು ದಿನಗಳೊಳಗಾಗಿ ಕನಿಷ್ಠ 100 ಒಳರೋಗಿಗಳನ್ನು ಆಸ್ಪತ್ರೆಗೆ ಕರೆತರುವಂತೆ ಹೇಳಲಾಗಿದೆ. ( The print – 15th Jan 2025)
ಈ ನಿಯಮವನ್ನು ಉಲ್ಲಂಘಿಸಿದರೆ ಸಂಬಂಧಪಟ್ಟ ನಿವಾಸಿ ವೈದ್ಯರಿಗೆ ಅವರ ತರಬೇತಿ ಅವಧಿಯನ್ನು ದಿನದ ಲೆಕ್ಕದಲ್ಲಿ ಮುಂದೂಡಲಾಗುತ್ತದೆ, ತತ್ಪರಿಣಾಮವಾಗಿ ಅವರ ಒಟ್ಟು ವ್ಯಾಸಂಗದ ಅವಧಿ 2-3 ವರ್ಷಕ್ಕಿಂತಲೂ ಮೀರಿ ಹೋಗುತ್ತದೆ ಎಂದೂ ಹೇಳಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ, ಅದರಲ್ಲೂ ಕಾರ್ಪೋರೇಟ್ ಆಸ್ಪತ್ರೆಗಳಲ್ಲಿ ನಿವಾಸಿ ವೈದ್ಯರ ಮೇಲೆ ಮತ್ತು ಸಲಹೆಗಾರ ವೈದ್ಯರ (Consultants) ಮೇಲೆ ಹೆಚ್ಚಿನ ಒಳರೋಗಿಗಳನ್ನು ಕರೆತರುವಂತೆ ಒತ್ತಡ ಹೇರುವುದು ಸಾಮಾನ್ಯ ಸಂಗತಿಯಾಗಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗ (National Medical Commission) ಇಂತಹ ಆದೇಶಗಳನ್ನು ನಿರ್ಬಂಧಿಸುವುದಾದರೂ ಇದು ಎಲ್ಲ ಆಸ್ಪತ್ರೆಗಳಲ್ಲಿ ನಡೆಯುತ್ತಲೇ ಬಂದಿದೆ.
ಎನ್‌ಎಮ್‌ಸಿ ವಿಧಿಸಿರುವ ಮಾನದಂಡಗಳ ಅನುಸಾರ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ನೀಡುವ ಕಾಲೇಜು-ಆಸ್ಪತ್ರೆಗಳಲ್ಲಿ ಕನಿಷ್ಠ 200 ಹಾಸಿಗೆಗಳು ನಿವಾಸಿ ವೈದ್ಯರು ತರುವ ರೋಗಿಗಳಿಗಾಗಿ ಮೀಸಲಿಡಬೇಕಾಗುತ್ತದೆ. ಇದರಲ್ಲಿ ಶೇಕಡಾ 75ರಷ್ಟು ವರ್ಷವಿಡೀ ಒಳರೋಗಿಗಳಿಗೆ ಮೀಸಲಿಡಬೇಕಾಗುತ್ತದೆ. ಗ್ರಾಮೀಣ ಜನತೆಯನ್ನು ಅವರ ಆರೋಗ್ಯ ರಕ್ಷಣೆಯ ಬಗ್ಗೆ ಜಾಗೃತಗೊಳಿಸುವ ಸಲುವಾಗಿ ಮತ್ತು ಅವರ ಯೋಗಕ್ಷೇಮದ ದೃಷ್ಟಿಯಿಂದ ಈ ರೀತಿಯ ಆದೇಶ ನೀಡಲಾಗಿದೆ ಎಂದು ಮಹಾವಿದ್ಯಾಲಯದ ಆಡಳಿತ ಮಂಡಲಿ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ಈ ಆದೇಶದ ವಿರುದ್ಧ ವೈದ್ಯಕೀಯ ವಲಯದಲ್ಲಿ ವ್ಯಾಪಕ ವಿರೋಧವೂ ವ್ಯಕ್ತವಾಗಿದ್ದು United Doctors Front Association ನ ರಾಷ್ಟ್ರೀಯ ಕಾರ್ಯದರ್ಶಿ ಡಾ. ಅರುಣ್ ಕುಮಾರ್ ಈ ಕುರಿತು ರಾಜ್ಯ ಸರ್ಕಾರಕ್ಕೆ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

ರೂಪಾಂತರವಾಗಬೇಕಾದ ಹೋರಾಟಗಳು
ನವ ಉದಾರವಾದ ಮತ್ತು ಕಾರ್ಪೋರೇಟ್ ಮಾರುಕಟ್ಟೆ ಪೋಷಿಸುತ್ತಿರುವ ಆರ್ಥಿಕತೆಯಲ್ಲಿ ಔದ್ಯೋಗಿಕ ಮತ್ತು ಸೇವಾ ವಲಯವಷ್ಟೇ ಅಲ್ಲದೆ ಜನಸಾಮಾನ್ಯರ ಆರೋಗ್ಯ ಮತ್ತು ಯೋಗಕ್ಷೇಮದ ಜವಾಬ್ದಾರಿ ಹೊತ್ತ ವೈದ್ಯಕೀಯ ಸಂಸ್ಥೆಗಳೂ ಸಹ, ದುಡಿಮೆಗಾರರಿಂದ ಕಡಿಮೆ ವೇತನದಲ್ಲಿ ಹೆಚ್ಚಿನ ಶ್ರಮ ಪಡೆಯುವ ನಿಟ್ಟಿನಲ್ಲಿ ಯೋಚಿಸುತ್ತಿವೆ. ಹೆಚ್ಚಿನ ಅವಧಿಯ ದುಡಿಮೆಯಿಂದ ಯಾವುದೇ ರೀತಿಯ ಕಾರ್ಮಿಕರ ಮೇಲೆ ಉಂಟಾಗುವ ದೈಹಿಕ ಮತ್ತು ಮಾನಸಿಕ ಒತ್ತಡ ಮತ್ತು ಅದರಿಂದ ಅವರ ಕೌಟುಂಬಿಕ ಬದುಕಿನಲ್ಲಿ ಎದುರಾಗುವ ಆತಂಕಗಳನ್ನು ಮಾರುಕಟ್ಟೆ ಲೆಕ್ಕಿಸುವುದಿಲ್ಲ. ಕೊಲ್ಕತ್ತಾದ ಆರ್‌ಜಿ ಕಾರ್ ಆಸ್ಪತ್ರೆಯ ಪ್ರಕರಣದಲ್ಲಿ ಇದರ ಒಂದು ಆಯಾಮವನ್ನು ನೋಡಿದ್ದೇವೆ. ಶ್ರಮ ಮತ್ತು ಶ್ರಮಿಕ ಆರ್ಥಿಕವಾಗಿ ಯಾವುದೇ ಸ್ತರದಲ್ಲಿದ್ದರೂ ಎರಡೂ ಸಹ ಮಾರುಕಟ್ಟೆ ವ್ಯವಸ್ಥೆಯಲ್ಲಿ ಬಂಡವಾಳ ಮತ್ತು ಲಾಭ ವೃದ್ಧಿಯ ಸರಕುಗಳಾಗಿಯೇ ಪರಿಣಮಿಸುವುದನ್ನು ಈ ಪ್ರಸಂಗಗಳು ನಿರೂಪಿಸುತ್ತವೆ.
ಈ ದೃಷ್ಟಿಯಿಂದ ನೋಡಿದಾಗ ಇನ್ಫೋಸಿಸ್ ನಾರಾಯಣಮೂರ್ತಿ ಮತ್ತು ಎಲ್ ಅಂಡ್ ಟಿ ಸುಬ್ರಮಣ್ಯಂ ಅವರ ಹೇಳಿಕೆಗಳ ಹಿಂದಿನ ವಿಶಾಲ ಭೂಮಿಕೆ ಅರ್ಥವಾಗುತ್ತದೆ . ಇದನ್ನು ವ್ಯಕ್ತಿಗತ ನೆಲೆಯಲ್ಲಿ ಪರಾಮರ್ಶಿಸುವುದರ ಬದಲು, ನವ ಉದಾರವಾದಿ-ಬಂಡವಾಳಶಾಹಿ-ಕಾರ್ಪೋರೇಟ್ ಮಾರುಕಟ್ಟೆಯ ಒಂದು ಸೂತ್ರ ಎಂದೇ ಪರಿಗಣಿಸಬೇಕಿದೆ. ಭಾರತದ ಕಾರ್ಮಿಕ ಚಳುವಳಿ ಈ ನಿಟ್ಟಿನಲ್ಲಿ ಹೋರಾಟದ ಹೊಸ ರೂಪಗಳನ್ನು ಧರಿಸುವ ಅವಶ್ಯಕತೆ ಇಲ್ಲಿ ಎದ್ದುಕಾಣುತ್ತದೆ. ಕೆಳಸ್ತರದ ಕಾರ್ಮಿಕರಿಂದ ಹಿಡಿದು ಉನ್ನತ ಹುದ್ದೆಗಳವರೆಗೂ ಮಾರುಕಟ್ಟೆ ಇದೇ ಸೂತ್ರವನ್ನೇ ಬಳಸಲು ಇಚ್ಛಿಸುತ್ತದೆ. ದುಡಿಮೆಯ ಅವಧಿ ಕಾರ್ಮಿಕರ ಬದುಕಿಗೆ ಪೂರಕವಾದ ವರಮಾನ ಒದಗಿಸುವುದರ ಜೊತೆಗೇ ಕಾರ್ಮಿಕರು ತಮ್ಮ ಖಾಸಗಿ ಬದುಕಿನ ಸಾಮಾಜಿಕ ಜವಾಬ್ದಾರಿ ಮತ್ತು ಚಟುವಟಿಕೆಗಳನ್ನು ಪೂರೈಸುವುದೂ ಅಷ್ಟೇ ಅಗತ್ಯ. ಆದರೆ ಇದು ಬಂಡವಾಳಶಾಹಿಗೆ ಅರ್ಥವಾಗದ ಭಾಷೆ.

-೦-೦-೦-೦-೦