ಸಿಂಧಗಿ ಉಪ ಚುನಾವಣೆ ಬಿಸಿ ದಿನದಿಂದ ದಿನಕ್ಕೆ ಕಾವೇರುವಂತಲೇ ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ವಾಗ್ದಾಳಿಯೂ ತರಕಕ್ಕೇರಿದೆ. ಇವತ್ತು ಮತ ಪ್ರಚಾರದ ವೇಳೆ ತಮ್ಮ ಅಭ್ಯರ್ಥಿಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಯ ಗತಿ ಇಲ್ಲದೆ ಮನಗೂಳಿ ಕಾಕಾ ಅವರ ಪುತ್ರನನ್ನು ಹೈಜಾಕ್ ಮಾಡಿ ಅಭ್ಯರ್ಥಿ ಮಾಡಿರಬಹುದು. ಆದರೆ, ಕಾಕಾ ಅವರ ಜನಪ್ರಿಯತೆ, ಅವರು ಮಾಡಿದ ಸೇವೆ ಹಾಗೂ ಸಿಂಧಗಿ ಕ್ಷೇತ್ರಕ್ಕೆ ಜೆಡಿಎಸ್ ಕೊಟ್ಟಿರುವ ಕೊಡುಗೆಯನ್ನು ಹೈಜಾಕ್ ಮಾಡಲಾಗದು ಎಂದು ಕಾಂಗ್ರೆಸ್ ಪಕ್ಷಕ್ಕೆ ಕುಟುಕಿದ್ದಾರೆ.
ಸಿಂಧಗಿ ಕ್ಷೇತ್ರದ ಹೊಲಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸೋಮವಾರ ಚುನಾವಣಾ ಪ್ರಚಾರ ಮಾಡುವ ವೇಳೆ ಮಾತನಾಡಿದ ಅವರು, ಸುಮಾರು ಮೂವತ್ತು ವರ್ಷಗಳ ಕಾಲ ದಿವಂಗತ ಮನಗೂಳಿ ಕಾಕಾ ಅವರು ದೇವೇಗೌಡರ ಕುಟುಂಬದ ಸದಸ್ಯರಂತೆ ಇದ್ದರು. ಅವರನ್ನು ದೇವೇಗೌಡರು ಸ್ವಂತ ಸಹೋದರನಂತೆ ನೋಡುತ್ತಿದ್ದರು. ಏಳು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡು ಸಲ ಗೆದ್ದ ಅವರನ್ನು ಎರಡೂ ಸಲವೂ ಪಕ್ಷ ಮಂತ್ರಿ ಮಾಡಿತ್ತು ಎಂದು ಕುಮಾರಸ್ವಾಮಿ ಅವರು ನೆನಪು ಮಾಡಿಕೊಂಡರು.
ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ ಆಗಿದ್ದಾಗ ದೇವೇಗೌಡರು ಸಿಂಧಗಿ ಕ್ಷೇತ್ರಕ್ಕೆ ಅನೇಕ ಯೋಜನೆಗಳನ್ನು ನೀಡಿದ್ದರು. ನೀರಾವರಿ ಯೋಜನೆಗಳನ್ನು ಜಾರಿ ಮಾಡಿದ್ದರು. ಅದಕ್ಕೆ ಕುರುಹಾಗಿ ದೇವೇಗೌಡರು ಮತ್ತು ಮನಗೂಳಿ ಅವರಿಬ್ಬರ ಪ್ರತಿಮೆಗಳನ್ನು ಜನರು ಕೃತಜ್ಞತಾಪೂರ್ವಕವಾಗಿ ಇಲ್ಲಿ ಸ್ಥಾಪನೆ ಮಾಡಿದ್ದಾರೆ. ಇಂಥ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳುವ ಅದೃಷ್ಟ ನನ್ನದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಯ ಗತಿ ಇಲ್ಲದೆ ಮನಗೂಳಿ ಕಾಕಾ ಅವರ ಪುತ್ರನನ್ನು ಹೈಜಾಕ್ ಮಾಡಿ ಅಭ್ಯರ್ಥಿ ಮಾಡಿರಬಹುದು. ಆದರೆ, ಕಾಕಾ ಅವರ ಜನಪ್ರಿಯತೆ, ಅವರು ಮಾಡಿದ ಸೇವೆ ಹಾಗೂ ಸಿಂಧಗಿ ಕ್ಷೇತ್ರಕ್ಕೆ ಜೆಡಿಎಸ್ ಕೊಟ್ಟಿರುವ ಕೊಡುಗೆಯನ್ನು ಹೈಜಾಕ್ ಮಾಡಲಾಗದು ಎಂದು ಮಾಜಿ ಮುಖ್ಯಮಂತ್ರಿಗಳು ಕಾಂಗ್ರೆಸ್ ಪಕ್ಷಕ್ಕೆ ಕುಟುಕಿದರು.
ಮನಗೂಳಿ ಕಾಕಾ ಮಾಡಿರುವ ಸಾಧನೆಗಳನ್ನು ಕಾಂಗ್ರೆಸ್ ಅಭ್ಯರ್ಥಿ ಈಗ ಹೈಜಾಕ್ ಮಾಡಲು ಹೊರಟಿದ್ದಾರೆ. ಅದಕ್ಕಾಗಿ ಸಾಧನೆಗಳ ಪುಸ್ತಕ ಮಾಡಿ ಹಂಚುತ್ತಿದ್ದಾರೆ. ಆದರೆ, ಸಿಂಧಗಿ ಜನತೆಗೆ ನಮ್ಮ ಪಕ್ಷದ ಮೇಲೆ ಅಪಾರ ಪ್ರೀತಿ, ನಂಬಿಕೆ ಇದೆ. ಮಾಡಿದ ಸೇವೆಯ ನೆನಪಿದೆ. ಅದನ್ನು ಕಸಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಎಂದು ಅವರು ಹೇಳಿದರು.