ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ನಾಯಕರು ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಳ್ತಿದ್ದಾರಾ..? ಈ ರೀತಿಯ ಅನುಮಾನ ಕಾರ್ಯಕರ್ತರಲ್ಲಿ ಕಾಡುವುದಕ್ಕೆ ಶುರುವಾಗಿದೆ. ಅರಕಲಗೂಡು ಶಾಸಕ ಎ.ಟಿ ರಾಮಸ್ವಾಮಿ, ‘ತಮ್ಮ ಮನೆಗೆ ತಾವೇ ಬೆಂಕಿ ಹಾಕಿಕೊಂಡಿದ್ದಾರೆ, ಮುಂದಿನ ದಿನಗಳಲ್ಲಿ ಯಾರನ್ನು ಸುಡುತ್ತದೆ ನೋಡಿ’ ಎಂದು ಹೇಳಿದ್ರು. ಇದೀಗ ಎ.ಟಿ ರಾಮಸ್ವಾಮಿ ಮಾತಿನಂತೆಯೇ 2ನೇ ಹಂತದ ಮುಸುಕಿನ ಗುದ್ದಾಟ ಶುರುವಾಗಿದೆ. ಭವಾನಿ ರೇವಣ್ಣ ಹಾಸನದಿಂದ ಸ್ಪರ್ಧೆ ಮಾಡುವ ಅಗತ್ಯವಿಲ್ಲ ಎಂದಿದ್ದ ಕುಮಾರಸ್ವಾಮಿ ಮಾತಿಗೆ ರೇವಣ್ಣ ಪುತ್ರರು ತಿರುಗೇಟು ನೀಡಿದ್ದರು. ಇದೀಗ ಅರಕಲಗೂಡು ಹಾಗು ಅರಸೀಕೆರೆ ಕ್ಷೇತ್ರದ ಹಾಲಿ ಶಾಸಕರಾದ ಎ.ಟಿ ರಾಮಸ್ವಾಮಿ ಹಾಗು ಶಿವಲಿಂಗೇಗೌಡ ಈಗಾಗಲೇ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗದೆ ದೂರ ಉಳಿದಿದ್ದಾರೆ. ಹೀಗಾಗಿ ಅರಕಲಗೂಡಿನಿಂದ ಎ. ಮಂಜು ಜೊತೆಗೆ ಚರ್ಚೆ ಮಾಡಿದ್ದೇವೆ, ಟಿಕೆಟ್ ಕ್ಲಿಯರ್ ಮಾಡ್ತೇವೆ ಎಂದಿದ್ದರು. ಇನ್ನು ಅರಸೀಕೆರೆ ಕ್ಷೇತ್ರದಲ್ಲೂ ನಮಗೆ ಅಭ್ಯರ್ಥಿ ಇದ್ದಾರೆ ಎಂದಿದ್ದರು. ಇದೀಗ ಶಾಸಕ ರೇವಣ್ಣ ಹಾಗು ಸಂಸದ ಪ್ರಜ್ವಲ್ ರೇವಣ್ಣ ಉಲ್ಟಾ ಹೊಡೆದಿದ್ದಾರೆ.
ಅರಕಲಗೂಡು ಕಾರ್ಯಕರ್ತರ ಸಭೆ ಬಳಿಕ ಅಂತಿಮ..!
ಮಾಜಿ ಸಚಿವ ಎ.ಮಂಜು ಜೆಡಿಎಸ್ ಸೇರ್ಪಡೆಯಾಗುತ್ತಾರೆ ಎಂದು ಕುಮಾರಸ್ವಾಮಿ ಹೇಳಿಕೆ ಬಗ್ಗೆ ಮಾತನಾಡಿರುವ ರೇವಣ್ಣ, ಅರಕಲಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳ್ಳಿಮೈಸೂರು ಹೋಬಳಿ ಕಾರ್ಯಕರ್ತರ ಸಭೆ ಕರೆದಿದ್ದು ಚರ್ಚೆ ನಡೆಸುತ್ತೇವೆ. ಬರೋಬ್ಬರಿ ಇಪ್ಪತ್ತೈದು ಸಾವಿರ ಮತಗಳಿರುವ ಹಳ್ಳಿಮೈಸೂರು ಗ್ರಾಮ.
ಈ ಗ್ರಾಮದ ಮತದಾರರೇ ಗೆಲುವು, ಸೋಲಿಗೆ ನಿರ್ಣಾಯಕ. ಸಭೆ ಬಳಿಕ ಮಾತನಾಡಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, ನಾವೆಲ್ಲ ಒಂದೂವರೆ ಸಾವಿರ ಜನ ಸೇರಿ ಸಭೆಯಲ್ಲಿ ಒಂದು ತೀರ್ಮಾನ ಮಾಡಿದ್ದೀವಿ. ಅಲ್ಲಿ ಏನ್ಮಾಡಬೇಕು ಅಂತ ಹದಿನಾಲ್ಕು ಜನರ ಕಮಿಟಿ ಮಾಡಿದ್ದೀವಿ. ದೇವೇಗೌಡರಿಗೆ ಅರವತ್ತು ವರ್ಷ ರಾಜಕೀಯ ಶಕ್ತಿ ಕೊಟ್ಟಂತಹ ಹೋಬಳಿ ಇದು. ಅವರಿಗೆ ಯಾವುದೇ ತರಹದ ಧಕ್ಕೆ ಬಾರದಂತೆ ನಡೆದುಕೊಳ್ಳುವುದು ನಮ್ಮ ಮೊದಲ ಆದ್ಯತೆ. ಕೆಲ ಮುಖಂಡರ ಮತ್ತೊಂದು ಸಭೆ ಮಾಡಿದ ಬಳಿಕ ನಿರ್ಧಾರ ಮಾಡ್ತೇವೆ ಎಂದಿದ್ದಾರೆ. ಎ. ಮಂಜು ಪಕ್ಷಕ್ಕೆ ಸೇರ್ತಿವಿ ಅಂತ ಕುಮಾರಣ್ಣನ ಹತ್ರ ಹೋಗವ್ರೆ. ಹಾಸನ ಜಿಲ್ಲೆದು ಕೂತ್ಕಂಡು ಮಾತನಾಡೋಣ ಅಂತ ಕುಮಾರಣ್ಣ ಹೇಳವ್ರೆ. ಜನಾಭಿಪ್ರಾಯ ತಗೊಂಡು ನಾವು ತೀರ್ಮಾನ ಮಾಡ್ತಿವಿ ಎಂದಿದ್ದಾರೆ.

ಅರಸೀಕೆರೆ ಬಗ್ಗೆಯೂ ಹೆಚ್ಡಿಕೆಗೆ ಪ್ರಜ್ವಲ್ ಟಾಂಗ್..!
ಅರಸೀಕೆರೆ ಟಿಕೆಟ್ ಗೊಂದಲದ ಬಗ್ಗೆ ಪ್ರಜ್ವಲ್ ರೇವಣ್ಣ ಮಾತನಾಡಿದ್ದು, ಮೊನ್ನೆ ನಡೆದ ದಿಶಾ ಸಭೆಯಲ್ಲೂ ಶಿವಲಿಂಗೇಗೌಡರಿಗೆ ಹೇಳಿದ್ದೇನೆ. ಕಾಲ ಮಿಂಚಿ ಹೋಗುವ ಮೊದಲು ನಿರ್ಧಾರ ಮಾಡಲು ತಿಳಿಸಿದ್ದೇವೆ. ಫೆವ್ರವರಿ 12ರಂದು ನಮ್ಮ ಪಕ್ಷದ ಸಭೆ ಕರೆದಿದ್ದೇವೆ. ಆ ಸಭೆಗೆ ಶಿವಲಿಂಗೇಗೌಡರೇ ಬಂದು ಮಾತನಾಡಬಹುದು. ಒಂದು ವೇಳೆ ಶಿವಲಿಂಗೇಗೌಡರು ಸಭೆಗೆ ಬಾರದಿದ್ದರೆ ನಾವು ಬೇರೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಫೆಬ್ರವರಿ 12ರಂದು ಕುಮಾರಸ್ವಾಮಿ ಸೇರಿದಂತೆ ಪ್ರಮುಖರು ಆ ಸಭೆಯಲ್ಲಿ ಭಾಗಿಯಾಗ್ತಾರೆ. ನಾವು ನಮ್ಮ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಿದೆ. ಕ್ಷೇತ್ರವನ್ನು ಖಾಲಿ ಬಿಡುವುದಕ್ಕೆ ಸಾಧ್ಯವಿಲ್ಲ. ಅದಕ್ಕೂ ಮೊದಲು ಶಿವಲಿಂಗೇಗೌಡರನ್ನೇ ಉಳಿಸಿಕೊಳ್ಳುವ ಪ್ರಯತ್ನ ಮಾಡ್ತೇವೆ ಎಂದಿದ್ದಾರೆ. ಅಂದರೆ ಕುಮಾರಸ್ವಾಮಿ ಹೇಳಿದ ಎರಡೂ ಹೇಳಿಕೆಗಳಿಗೂ ರೇವಣ್ಣ ಹಾಗು ಪ್ರಜ್ವಲ್ ರೇವಣ್ಣ ಫುಲ್ಸ್ಟಾಪ್ ಇಟ್ಟಿದ್ದಾರೆ.
ಹಾಸನದ ಮೂರು ಕ್ಷೇತ್ರಗಳಲ್ಲಿ ಟಿಕೆಟ್ ಗೊಂದಲ..!
ಹಾಸನ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ಉಂಟಾಗಿರುವ ಬಗ್ಗೆ ಮಾತನಾಡಿರುವ ರೇವಣ್ಣ, ಎಲ್ಲವನ್ನೂ ಬಗೆಹರಿಸುತ್ತೇವೆ. ಕುಮಾರಣ್ಣ ಅವರು ಹಗಲು ರಾತ್ರಿ ಹೋರಾಟ ನಡೆಸುತ್ತಿದ್ದಾರೆ. ಎರಡು ಸಾರಿ ಆಪರೇಷನ್ ಆಗಿದ್ದು, ಆರೋಗ್ಯ ಲೆಕ್ಕಿಸದೆ ಹೋರಾಟ ಮಾಡ್ತವ್ರೆ. ಅವರಿಗೆ ಯಾವುದೇ ನೋವಾಗದಂಗೆ ಎಲ್ಲಾ ಬಗೆಹರಿಸುತ್ತೇವೆ. ನಮ್ಮ ನಾಯಕರು ಕುಮಾರಣ್ಣ. ಕುಮಾರಣ್ಣ ನಾನು ಬದುಕಿರುವವರೆಗರ ಹೊಡೆದಾಡುವ ಪ್ರಶ್ನೆಯೇ ಇಲ್ಲಾ. ದೇವೇಗೌಡರಿಗೆ ದೇವರು ಆರೋಗ್ಯ ಕೊಡಲಿ . ದೇವೇಗೌಡರ ಮುಂದೆ 123 ಸೀಟ್ ಗೆದ್ದು ಕುಮಾರಣ್ಣನ್ನ ಮುಖ್ಯಮಂತ್ರಿ ವಿಧಾನಸೌಧಲ್ಲಿ ಜೆಡಿಎಸ್ ಬಾವುಟ ಹಾರಿಸಬೇಕು. ಕುಮಾರಣ್ಣ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ರಾಜ್ಯದ ಮುಖ್ಯಮಂತ್ರಿ. ಅವರು ಈಗಾಗಲೇ 28 ಸಾವಿರ ಕೋಟಿ ಸಾಲಮನ್ನಾ ಮಾಡವ್ರೆ. ನಮ್ಮ ಜಿಲ್ಲೆಯ ಕೆಲವು ಹಿರಿಯ ಮುಖಂಡರಿದ್ದಾರೆ. ಅವರಿಗೆ ಯಾವ ರೀತಿ ಶಕ್ತಿ ತುಂಬಬೇಕು ಅನ್ನೋ ಬಗ್ಗೆ ಕೂತ್ಕಂಡು ಮಾತಾಡ್ತಿವಿ ಎಂದಿದ್ದಾರೆ.