ಮಾಜಿ ಸಿಎಂ ಸಿದ್ಧರಾಮಯ್ಯನ ಬಳಿಕ ಇದೀಗ ಜೆಡಿಎಸ್ ಹಿರಿಯ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಆರ್‌ಎಸ್ಎಸ್ ವಿರುದ್ಧದ ಅಖಾಡಕ್ಕೆ ರಂಗ ಪ್ರವೇಶ ಮಾಡುತ್ತಿದ್ದಾರೆ. ಸಿದ್ಧರಾಮಯ್ಯನವರು ನಿರಂತರವಾಗಿ ಬಿಜೆಪಿ ಹಾಗೂ ಆರ್‌ಎಸ್ಎಸ್ ಬಗ್ಗೆ ಕಟುವಾಗಿ ಟೀಕಿಸುತ್ತಲೇ ಬಂದಿದ್ದಾರೆ. ಇದೇ ಕಾರಣಕ್ಕೆ ಹಿಂದುತ್ವ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಎಂದರೆ ಸಿಡಿಮಿಡಿ. ಇದೀಗ ಅದೇ ಸಾಲಿಗೆ ಹೆಚ್ ಡಿ ಕುಮಾರಸ್ವಾಮಿ ಕೂಡ ಸೇರಿಕೊಳ್ಳುತ್ತಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಆರ್‌ಎಸ್ಎಸ್ಗೆ ಮತ್ತೊಂದು ಬಲವಾದ ಪ್ರತಿರೋಧ ಸೃಷ್ಟಿಯಾಗಿದೆ. ಸದಾ ಮುಸ್ಲಿಮರು, ಜಿಹಾದ್, ಭಯೋತ್ಪಾದನೆ, ನಕ್ಸಲ್ ಇತ್ಯಾದಿ.. ಇತ್ಯಾದಿ ಟೂಲ್ ಕಿಟ್‌ಗಳನ್ನು ಮುನ್ನೆಲೆಗೆ ತೇಲಿ ಬಿಟ್ಟು ಚರ್ಚಾವಸ್ತುಗಳ ಟ್ರೆಂಡ್ ಸೆಟ್ ಮಾಡುವ ಆರ್‌ಎಸ್ಎಸ್‌ನ ಎದುರಾಳಿ ಬಣ ವಿಸ್ತರಿಸಿಕೊಳ್ಳುತ್ತಿದೆ. ಪ್ರಾದೇಶಿಕ ಪಕ್ಷ ಎಂಬ ಬ್ಯ್ರಾಂಡ್ ಹೊತ್ತುಕೊಂಡಿರುವ ಜೆಡಿಎಸ್ ಕೂಡ ಆರ್‌ಎಸ್ಎಸ್ನ ಬೂಟಾಟಿಕೆ ಬಗ್ಗೆ ಈಗ ಬಹಿರಂಗವಾಗಿ ಟೀಕಿಸುತ್ತಿರುವುದು ಸಂಘಕ್ಕೆ ʻ ಮಗ್ಗುಲ ಮುಳ್ಳುʼ ಆಗ ತೊಡಗಿದೆ.
ನಿನ್ನೆ ರಾಮನಗರದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ RSS ವಿರುದ್ಧ ಕಿಡಿಕಾರಿದರು. ʻʻಬಿಜೆಪಿ RSSನ ಕೇಂದ್ರ ಬಿಂದುವಾಗಿ ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಮೋದಿಯವರು ಕೂಡ RSSನ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಆಡಳಿತವನ್ನು RSS ಮಾಡುತ್ತಿದೆ ಬಿಜೆಪಿಯಲ್ಲ ಎಂದು ಗಂಭೀರ ಆರೋಪ ಮಾಡಿದರು. ಈ ದೇಶದಲ್ಲಿ ನಮ್ಮ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. RSSಗೆ ಸಂಬಂಧ ಪಟ್ಟ ಪುಸ್ತಕ ಓದುತ್ತಿದ್ದೇನೆ. 1990ರಲ್ಲಿ ಬೆಳವಣಿಗೆ ಪ್ರಾರಂಭವಾಯ್ತು, ಅಡ್ವಾಣಿ ಬಿಜೆಪಿ ಪಕ್ಷ ಕಟ್ಟುವ ಸಮಯ ಅದು. ಜಿನ್ನಾ ಅವರ ಬಗ್ಗೆ ವಿನಾಃಕಾರಣ ಮಾತನಾಡಿದ್ದರಂತೆ, ಅಡ್ವಾಣಿ. ಹೀಗೆ ಅದನ್ನು ಓದುತ್ತಿದ್ದರೆ, ಆರ್‌ಎಸ್ಎಸ್‌ನ ಹಿಡನ್ ಅಜೆಂಡಾ ಏನು ಎಂದು ಗೊತ್ತಾಗುತ್ತಿದೆʼʼ ಎಂದು ಹೇಳಿದರು.
ʻʻRSS ಪುಸ್ತಕದಲ್ಲಿ ಅವರ ಅಜೆಂಡ್ ಗೊತ್ತಾಗುತ್ತೆʼʼ : ಹೆಚ್ಡಿಕೆ ಕಿಡಿ
ಆರೇಳು ತಿಂಗಳಿಂದ ಪುಸ್ತಕವನ್ನು ಓದ್ತಾ ಇದ್ದೇನೆ. ಇವತ್ತು ಈ ನಾಡಿನಲ್ಲಿ ಯುವಕರು ಬುದ್ದಿವಂತರಾಗದೇ ಇದ್ದರೆ ಕಷ್ಟವಾಗಲಿದೆ. ವಾಸ್ತವಾಂಶದ ಅರಿವು ಬಂದ ಮೇಲೂ ಅದರ ಬಗ್ಗೆ ಜನತೆಯ ಮುಂದೆ ಇಡದೇ ಇದ್ದರೆ ಜನರಿಗೆ ಮಾಡುವ ದ್ರೋಹ ಅದು. ಕರ್ನಾಟಕದಲ್ಲಿ ಸರ್ವಧರ್ಮ ರಕ್ಷಣೆ ಮಾಡುವ ಸರ್ಕಾರ ತರಬೇಕು. ಮೂಲಭೂತ ಹಕ್ಕುಗಳು ಪ್ರತಿ ಕುಟುಂಬಕ್ಕೆ ಕೊಡಬೇಕಾಗಿದೆ. ದೇಶದ ಬಡತನದ ಸಮಸ್ಯೆಗಳ ಬಗ್ಗೆ RSS ಅವರ ಸಂಘದಲ್ಲಿ ಚರ್ಚೆ ಆಗಲ್ಲ. ದೇಶವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವುದು ಒಂದೇ ಅವರ ಅಜೆಂಡಾ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ʻʻನಾವು ಕೂಡ ಹಿಂದುಗಳೇ, ಹಿಂದುತ್ವ ಮೊದಲ ಅಜೆಂಡಾ ಅಲ್ಲʼʼ!
ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಕಾರು ಹರಿಸಿದ ಘಟನೆ ಬಗ್ಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಯಾಕೆ ಈ ಘಟನೆ ನಡೆಯಿತು. RSS ಸಂಘಟನೆಯಿಂದ ಬಿಜೆಪಿ ಸರ್ಕಾರ ರಚಿಸಿದ್ದಾರೆ, ಇಲ್ಲಿರುವುದು RSS ಸರ್ಕಾರ. ಮನುಸ್ಮೃತಿ ಯುಗಕ್ಕೆ ತೆಗೆದುಕೊಂಡು ಹೋಗುವುದೇ RSS ಅಜೆಂಡಾ. ನಾವು ಕೂಡ ಹಿಂದುಗಳೇ, ಹಿಂದುತ್ವ ಮೊದಲ ಅಜೆಂಡಾ ಅಲ್ಲ. ಮೊದಲು ದುಡಿಯುವ ಕೈಗೆ ದುಡಿಮೆ ಕೊಡಿ. ಸರ್ಕಾರ ಈ ರಾಜ್ಯದ, ದೇಶದ ಬಡವರ ಬಗ್ಗೆ ಗಮನ ಹರಿಸಲಿ ಎಂದು ಹರಿಹಾಯ್ದರು.
ʻʻಒಬ್ಬ ರೈತನನ್ನು ಕರೆದು ಮೋದಿ ಚರ್ಚೆ ಮಾಡಿಲ್ಲʼʼ!
ರೈತರ ಬಗ್ಗೆ ಗೌರವ ಇದ್ದರೆ ಕಾರು ಹತ್ತಿಸಿದವನನ್ನು ಅರೆಸ್ಟ್ ಮಾಡಬೇಕಿತ್ತು. ಯಾಕೆ ರಕ್ಷಣೆ ಕೊಟ್ಟಿದ್ದಾರೆ.? ಸಾಮಾನ್ಯರು ಈ ಕೆಲಸ ಮಾಡಿದ್ದರೆ ತಕ್ಷಣ ಅರೆಸ್ಟ್ ಮಾಡುತ್ತಿದ್ದರು. ಸಿಎಂ ಆದಿತ್ಯನಾಥ್ ಬಂದ ಮೇಲೆ ಶಾಂತಿಯುತ ಆಗಿದೆ ಉತ್ತರ ಪ್ರದೇಶ ಅಂತಾರೆ. ಇದೇನಾ ಶಾಂತಿಯುತ ಉತ್ತರ ಪ್ರದೇಶ.? ಅಧಿಕಾರಕ್ಕೆ ಅಮಾಯಕರನ್ನು ಬಲಿ ಪಡೆಯುವುದು, ರಕ್ತದೋಕುಳಿ ಮಾಡುತ್ತಿದ್ದಾರೆ.? ಎಷ್ಟು ದಿನ ಈ ಕೆಲಸ..? ಒಬ್ಬ ರೈತನನ್ನು ಕರೆದು ಚರ್ಚೆ ಮಾಡಿಲ್ಲ ಮೋದಿಯವರು, ಕರೆದು ಮಾತನಾಡಿದರೆ ಸಮಸ್ಯೆ ಬಗೆಹರಿಯುತ್ತೆ. ಆದರೆ ಆ ಕೆಲಸ ಯಾಕೆ ಮಾಡಿಲ್ಲ, ಇಲ್ಲಿನ ಸಿಎಂ ಹೇಳ್ತಾರೆ ರೈತರ ಹೋರಾಟ ಸ್ಪಾನ್ಸರ್ ಅಂತ. ಇವರು ಹೇಗೆ ಬಂದಿದ್ದು ಹೋರಾಟದಿಂದಲೇ ಅಲ್ವಾ..? ಕಾಂಗ್ರೆಸ್ ಸರಿಯಾಗಿದ್ದಿದ್ದರೆ ಈ ದೇಶ ಹೀಗೆ ಇರ್ತಾ ಇರಲಿಲ್ಲ. ಅವರ ಸ್ವೇಚ್ಛಾವರ್ತನೆಯೇ ಇಂತಹ ವಾತಾವರಣ ನಿರ್ಮಾಣ ಆಗಿರೋದು. ಸುದೀರ್ಘ ಅಧಿಕಾರ ಇದ್ದಾಗ ಯಾವ ರೀತಿ ನಡೆದುಕೊಂಡರು ಅಂತ ಗೊತ್ತಿದೆ ಎಂದು ಕುಟುಕಿದರು.
ಹೀಗೆ ಮಾಧ್ಯಮಗೋಷ್ಟಿ ನಡೆಸಿ ಸುದೀರ್ಘವಾಗಿ ಆರ್‌ಎಸ್ಎಸ್ ಮೇಲೆ ಹರಿಹಾಯ್ದರು. ಬಹುಶಃ ಇದು ಈ ಕಾಲದ ಅನಿವಾರ್ಯತೆ ಕೂಡ. ಆದರೆ ಅಧಿಕಾರಕ್ಕೆ ಬೇಕಾಗಿ ಮಾತ್ರ ಕಾಂಗ್ರೆಸ್ ಜೊತೆ ಹೆಜ್ಜೆ ಹಾಕುವ ಕುಮಾರಸ್ವಾಮಿ ಒಳಗಿಂದ ಬಹುಕಾಲಗಳಿಂದ ಬಿಜೆಪಿ ಜೊತೆ ಕೈ ಜೋಡಿಸಿಕೊಂಡು ಬಂದವರೇ. ಇದೀಗ ಏಕಾಏಕಿಯಾಗಿ ಆರ್‌ಎಸ್ಎಸ್ ವಿರುದ್ಧ ತಿರುಗಿ ಬಿದ್ದಿರುವ ಕುಮಾರಸ್ವಾಮಿ ಉದ್ದೇಶ ಏನೇ ಇದ್ದರೂ ಹೀಗೆ ರಾಜ್ಯದ ಓರ್ವ ಹಿರಿಯ ಹಾಗೂ ಮುಖ್ಯಮಂತ್ರಿ ಸ್ಥಾನಮಾನ ಅನುಭವಿಸಿದ ರಾಜಕಾರಣಿ ಆರ್‌ಎಸ್ಎಸ್ ವಿರುದ್ಧ ತೊಡೆ ತಟ್ಟಿರುವುದು ಆಶಾದಾಯಕ ಬೆಳವಣಿಗೆ.
ಇಷ್ಟೂ ದಿನ ಸಿದ್ದರಾಮಯ್ಯನವನ್ನು ಮಾತ್ರ ಸೈದ್ಧಾಂತಿಕವಾಗಿ ಎದುರಿಸುತ್ತಿದ್ದ ಆರ್‌ಎಸ್ಎಸ್ ಹಾಗೂ ಬಿಜೆಪಿಗೆ ಇದೀಗ ಮತ್ತೊಂದು ಬಲಾಢ್ಯ ಎದುರಾಳಿ ಹುಟ್ಟಿಕೊಂಡಂತೆ ಕಾಣಿಸುತ್ತದೆ. ಸಿದ್ಧರಾಮಯ್ಯನವರ ಮಾತಿನ ಚಾಟಿಗೆ ಮೈಪೂರ ಎಣ್ಣೆ ಸವರಿಕೊಳ್ಳುವ ಸಂಘಪರಿವಾರ ಇನ್ಮುಂದೆ ಮತ್ತೊಬ್ಬ ರಾಜಕಾರಣಿಯನ್ನು ಎದುರಿಸಲು ಸಿದ್ಧಗೊಳ್ಳುವ ಅವಶ್ಯಕತೆ ಇದೆ. ಆದರೆ, ಕುಮಾರಸ್ವಾಮಿಯವರ ಈ ಮನಪರಿವರ್ತನೆ ನಿಜಕ್ಕೂ ಕಾಳಜಿಯುತವೇ..? ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಿದೆ.