ರಾಜಕಾರಣಕ್ಕೆ ಪ್ರವೇಶ ಪಡೆಯಲು ಇನ್ನಿಲ್ಲದ ಕಸರತ್ತು ಮಾಡುತ್ತಿರುವ ನಿಖಿಲ್ ಕುಮಾರಸ್ವಾಮಿ ಅಂತಿಮವಾಗಿ ಈ ಬಾರಿಯ ವಿಧಾನಸಭೆಗೆ ಆಯ್ಕೆ ಆಗಲು ಸಕಲ ತಯಾರಿಗಳು ನಡೆಯುತ್ತಿವೆ ಎನ್ನಲಾಗಿದೆ. ಈ ಮೊದಲು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಹೋಗುವ ಪ್ರಯತ್ನ ಮಾಡಿದ್ದ ನಿಖಿಲ್ ಕುಮಾರಸ್ವಾಮಿ(nikhil kumaraswamy), ಸುಮಲತಾ ಅಂಬರೀಷ್ (sumalatha ambarish) ವಿರುದ್ಧ ಸೋಲುಂಡು ವಾಪಸ್ ಆಗಿದ್ದರು. ಎರಡನೇ ಬಾರಿಗೆ ರಾಮನಗರ(ramangara) ವಿಧಾನಸಭಾ ಕ್ಷೇತ್ರದಿಂದ ರಾಜ್ಯ ರಾಜಕಾರಣ ಪ್ರವೇಶ ಮಾಡುವ ಪ್ರಯತ್ನ ಮಾಡಿದ್ದರು. ಆಗ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋಲುಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ನಿಖಿಲ್ ಕುಮಾರಸ್ವಾಮಿ ವಿಧಾಸಭೆ ಪ್ರವೇಶ ಮಾಡಲು ತೆರೆಮರೆಯ ಕಸರತ್ತು ನಡೆಯುತ್ತಿವೆ ಎನ್ನುವುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ವಿಚಾರ.
ಚನ್ನಪಟ್ಟಣ ಕ್ಷೇತ್ರಕ್ಕೆ ಶೀಘ್ರದಲ್ಲೇ ಉಪಚುನಾವಣೆ..!
ರಾಮನಗರ ಕ್ಷೇತ್ರದಲ್ಲಿ ಸೋಲುಂಡಿರುವ ನಿಖಿಲ್ ಕುಮಾರಸ್ವಾಮಿ ಈ ಬಾರಿ ಪಕ್ಕದ ಚನ್ನಪಟ್ಟಣ ಕ್ಷೇತ್ರದಲ್ಲಿ ಅದೃಷ್ಟಪರೀಕ್ಷೆ ಮಾಡಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ಈಗಾಗಲೇ ಚನ್ನಪಟ್ಟಣ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಮಾಜಿ ಸಿಎಂ ಕುಮಾರಸ್ವಾಮಿ, ಶೀಘ್ರದಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯಸಭೆಗೆ ಆಯ್ಕೆ ಆಗಲಿದ್ದು, ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಲಿದ್ದಾರೆ. ಈ ಬಗ್ಗೆ ಈಗಾಗಲೇ ಬಿಜೆಪಿ ಜೊತೆಗೆ ರಾಜಕೀಯ ಚರ್ಚೆಗಳು ಆರಂಭವಾಗಿದ್ದು, ಮಾತುಕತೆ ಅಂತಿಮ ಆಗುತ್ತಿದ್ದಂತೆ ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ. ಆ ಬಳಿಕ ಉಪಚುನಾವಣೆ ಘೋಷಣೆ ಆಗಲಿದ್ದು, ಚನ್ನಪಟ್ಟಣ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸುಲಭವಾಗಿ ಜಯಗಳಿಸಿ ವಿಧಾನಸಭೆ ಪ್ರವೇಶ ಮಾಡಲು ಬೇಕಾದ ಎಲ್ಲಾ ತಯಾರಿಗಳು ನಡೆದಿವೆ ಅನ್ನೋದು ಸದ್ಯಕ್ಕಿರುವ ಮಾಹಿತಿ.
ಸತತವಾಗಿ ಸೋತು ಸುಣ್ಣವಾಗಿರುವ ಸೈನಿಕನ ಕಥೆ ಏನು..?
ಕುಮಾರಸ್ವಾಮಿ ರಾಜ್ಯಸಭೆ ಪ್ರವೇಶ ಜೊತೆಗೆ ಚನ್ನಪಟ್ಟಣದಿಂದ ವಿಧಾನಸಭೆಗೆ ನಿಖಿಲ್ ಕುಮಾರಸ್ವಾಮಿ ಆಯ್ಕೆ ಬಗ್ಗೆ ಚರ್ಚೆಗಳು ಒಂದು ಕಡೆಯಾದರೆ, ಕುಮಾರಸ್ವಾಮಿಯನ್ನು ರಾಜಕೀಯ ಎದುರಾಳಿಯಾಗಿ ಸ್ವೀಕರಿಸಿ ಕುಮಾರಸ್ವಾಮಿಯನ್ನು ಸೋಲಿಸಲು ಸಾಧ್ಯವಾಗದೆ ಕಂಗಾಲಾಗಿರುವ ವಿಧಾನಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ರಾಜಕೀಯ ನಡೆ ಏನು..? ಅನ್ನೋ ಚರ್ಚೆ ಕೂಡ ಶುರುವಾಗಿದೆ. ಆದರೆ ಎಲ್ಲದ್ದಕ್ಕೂ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಸಿ.ಪಿ ಯೋಗೇಶ್ವರ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿಯೇ ಕಣಕ್ಕಿಳಿಸಿ ಬೆಂಬಲಿಸುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಸಿಪಿ ಯೋಗೇಶ್ವರ್ ಅವರನ್ನು ಕಳುಹಿಸುವ ಚಿಂತನೆ ನಡೆದಿದೆ ಅನ್ನೋದು ರಾಜಕೀಯ ಬೆಳವಣಿಗೆ.
ಕ್ಷೇತ್ರವನ್ನು ಸಲಭವಾಗಿ ಬಿಟ್ಟು ಕೊಡ್ತಾರಾ ಬಂಡೆ ಬ್ರದರ್ಸ್..?
ರಾಮನಗರ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಸತತ ಎರಡು ಬಾರಿ ಗೆಲುವು ಸಾಧಿಸಿರುವ ಡಿ.ಕೆ ಶಿವಕುಮಾರ್ ಸಹೋದರ, ಡಿ.ಕೆ ಸುರೇಶ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸಿ.ಪಿ ಯೋಗೇಶ್ವರ್ಗೆ ಸುಲಭ ತುತ್ತಾಗುತ್ತಾರಾ..? ಯೋಗೇಶ್ವರ್ ಲೋಕಸಭೆಗೆ ಪ್ರವೇಶ ಪಡೆಯಲು ಅನುಕೂಲ ಮಾಡಿಕೊಡ್ತಾರಾ..? ಅನ್ನೋದು ಕೂಡ ಮಹತ್ವದ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಸ್ವತಃ ಡಿ.ಕೆ ಸುರೇಶ್ ಕುಣಿಗಲ್ನಲ್ಲಿ ಉತ್ತರ ನೀಡಿದ್ದು, ನಾನು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೋ..? ಇಲ್ಲವೋ ಅನ್ನೋದು ಇನ್ನೂ ಖಚಿತವಿಲ್ಲ. ನನಗೆ ರಾಜಕಾರಣ ಬೇಕೋ..? ಬೇಡ್ವೋ ಅನ್ನೋ ಗೊಂದಲದಲ್ಲಿ ನಾನಿದ್ದೇನೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಾನು ನಿಮ್ಮ ಅಭಿಪ್ರಾಯ ಪಡೆಯುತ್ತೇನೆ. ಆದರೆ ಕುಣಿಗಲ್ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕು ಎನ್ನುವುದು ನನ್ನ ಆಶಯ ಎನ್ನುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎನ್ನುವ ಸುಳಿವು ಬಿಟ್ಟುಕೊಟ್ಟಿದ್ದಾರೆ. ಅಂದರೆ ಕುಮಾರಸ್ವಾಮಿ ರಾಜ್ಯಸಭೆಗೆ ಸಿ.ಪಿ ಯೋಗೇಶ್ವರ್ ಲೋಕಸಭೆಗೆ ನಿಖಿಲ್ ಕುಮಾರಸ್ವಾಮಿ ವಿಧಾನಸಭೆಗೆ ಅನ್ನೋದು ಕನ್ಫರ್ಮ್..
ಕೃಷ್ಣಮಣಿ