ಶಿವಮೊಗ್ಗ: ಇತ್ತೀಚಿಗೆ ಹೃದಯಾಘಾತ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದ್ದು, ಇದೀಗ ಕೆಎಸ್ಆರ್ಟಿಸಿ ನೌಕರರೊಬ್ಬರು ಕೆಲಸ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕೆಎಸ್ಆರ್ಟಿಸಿ ಇಲಾಖೆಯ ಡಿಪೋದಲ್ಲಿ ಈ ಘಟನೆ ನಡೆದಿದೆ. ಸಂದೀಪ್ (41) ಮೃತ ದುರ್ದೈವಿ ಎಂದು ತಿಳಿದುಬಂದಿದೆ.

ಸಂದೀಪ್ ಇಂದು ಕರ್ತವ್ಯದಲ್ಲಿರುವಾಗಲೇ ಅವರಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದ್ದು, ನಿಂತ ಜಾಗದಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ತೀವ್ರ ಎದೆ ನೋವಿನಿಂದ ಒದ್ದಾಡುತ್ತಿದ್ದ ಸಂದೀಪ್ ಅವರನ್ನು ಕೂಡಲೇ ಸಹೋದ್ಯೋಗಿಗಳು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ದುರಾದೃಷ್ಟವಶಾತ್ ಸಂದೀಪ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಮನೆಯ ಯಜಮಾನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಕೆಎಸ್ಆರ್ಟಿಸಿ ನೌಕರರಾಗಿರುವ ಸಂದೀಪ್ ಕುಟುಂಬಕ್ಕೆ ರಾಜ್ಯ ಸರ್ಕಾರ ಸಹಾಯ ಧನ ನೀಡಬೇಕು ಎಂದು ಸಹೋದ್ಯೋಗಿಗಳು ಮನವಿ ಮಾಡಿದ್ದಾರೆ.








