‘ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು’ ಎಂಬ ಮಾತು ಸದ್ಯ ಸಾರಿಗೆ ನೌಕರರಿಗೆ ಅಕ್ಷರಶಃ ಅನ್ವಯವಾಗುವಂತೆ ತೋರುತ್ತಿದೆ.
ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿದ 12 ದಿನಗಳ ಹಿಂದೆ ರಾಜ್ಯಾದ್ಯಂತ ಮುಷ್ಕರ ಆರಂಭಿಸಿದ ಬೆಂಗಳೂರಿನ ನಗರ ಸಾರಿಗೆ ಬಿಎಂಟಿಸಿ ಸೇರಿದಂತೆ ವಿವಿಧ ಸಾರಿಗೆ ನಿಗಮಗಳ ನೌಕರರು, ಇದೀಗ ಒಂದು ಕಡೆ ಸರ್ಕಾರದ ಕಠಿಣ ಕ್ರಮಗಳು, ಮತ್ತೊಂದು ಕಡೆ ಸಂಘಟನೆಗಳ ನಾಯಕರ ನಡುವಿನ ಕೆಸರು ಎರಚಾಟದ ಬಲಿಪಶುಗಳಾಗುತ್ತಿದ್ದಾರೆ.

ನೌಕರರ ಬೇಡಿಕೆಗಳಿಗೆ ಸೊಪ್ಪು ಹಾಕದೆ ರಾಜ್ಯ ಬಿಜೆಪಿ ಸರ್ಕಾರ, ಮುಷ್ಕರನಿರತ ನೌಕರರ ವಿರುದ್ಧ ನೌಕರಿಯಿಂದ ವಜಾ, ಅಮಾನತು, ಗ್ರಾಚ್ಯುಟಿ ಮತ್ತಿತರ ಸೌಲಭ್ಯಗಳನ್ನು ಕಡಿತ ಮಾಡುತ್ತಿದೆ. ಶನಿವಾರ ಒಂದೇ ದಿನ ಸುಮಾರು 2500 ಬಿಎಂಟಿಸಿ ನೌಕರರನ್ನು ಅಮಾನತು ಮಾಡಿದ್ದು, ಈವರೆಗೆ ಒಟ್ಟು 3200 ಮಂದಿಯನ್ನು ವಜಾ ಮಾಡಲಾಗಿದೆ. ಹಾಗೇ 820ಕ್ಕೂ ಹೆಚ್ಚು ಮಂದಿ ಬಿಎಂಟಿಸಿ ನೌಕರರನ್ನು ವಜಾ ಮಾಡಲಾಗಿದೆ. ಅಲ್ಲದೆ, ವಜಾಗೊಂಡ ಮತ್ತು ಅಮಾನತುಗೊಂಡ ನೌಕರರ ವಿರುದ್ಧ ದೋಷಾರೋಪವನ್ನು ಕೂಡ ಸಿದ್ಧಪಡಿಸಲಾಗುತ್ತಿದೆ ಎನ್ನಲಾಗಿದೆ.
ಸರ್ಕಾರದ ಈ ದಮನ ಕ್ರಮಗಳ ಹಿನ್ನೆಲೆಯಲ್ಲಿ ನೌಕರರ ಒಗ್ಗಟ್ಟಿನಲ್ಲಿ ಬಿರುಕು ಮೂಡಿದ್ದು, ಹಲವು ನೌಕರರು ಈಗಾಗಲೇ ಕಠಿಣ ಕ್ರಮಕ್ಕೆ ಬೆದರಿ ಮತ್ತೆ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಹಾಗಾಗಿ, ಒಂದು ಕಡೆ ಮುಷ್ಕರದ ನೇತೃತ್ವ ವಹಿಸಿರುವ ನಾಯಕರು, ಸರ್ಕಾರದ ದಮನ ಕ್ರಮಗಳಿಗೆ ಜಗ್ಗುವುದಿಲ್ಲ, ಹೋರಾಟ ತೀವ್ರಗೊಳಿಸುವುದಾಗಿ ಹೇಳುತ್ತಿದ್ದರೆ, ದಿನದಿಂದ ದಿನಕ್ಕೆ ಕೆಲಸಕ್ಕೆ ಹಾಜರಾಗುತ್ತಿರುವ ನೌಕರರ ಸಂಖ್ಯೆ ಏರುಗತಿಯಲ್ಲಿದೆ. ಶನಿವಾರದ ಹೊತ್ತಿಗೆ ಸುಮಾರು ಏಳು ಸಾವಿರ ಬಸ್ ಗಳು ರಸ್ತೆಗಿಳಿದಿರುವುದಾಗಿ ಕೆಎಸ್ ಆರ್ ಟಿ ಸಿ ಹೇಳಿದೆ.
ಅಂದರೆ; ಒಂದು ಕಡೆ ನೌಕರರ ಬೇಡಿಕೆಗಳ ವಿಷಯದಲ್ಲಿ ಸರ್ಕಾರ ದಿನದಿಂದ ದಿನಕ್ಕೆ ತನ್ನ ನಿಲುವನ್ನು ಕಠಿಣಗೊಳಿಸುತ್ತಿದ್ದರೆ, ಮತ್ತೊಂದು ಕಡೆ ನೌಕರರು ಹೋರಾಟದ ಮೇಲೆಯೇ ನಂಬಿಕೆ ಕಳೆದುಕೊಂಡು, ಸರ್ಕಾರದ ದಮನ ಕ್ರಮಕ್ಕೆ ಮಣಿದು ವಾಪಸು ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ವಿಪರ್ಯಾಸಕರ ಸಂಗತಿಯೆಂದರೆ; ಹೀಗೆ ನೌಕರರು ಅರ್ಧದಲ್ಲೇ ಹೋರಾಟವನ್ನು ಬಿಟ್ಟು ಕೆಲಸಕ್ಕೆ ವಾಪಸ್ಸಾಗುತ್ತಿರುವುದರ ಹಿಂದೆ ಸರ್ಕಾರದ ದಮನ ಕ್ರಮಗಳು ಮಾತ್ರವಲ್ಲ; ಬದಲಾಗಿ ಹೋರಾಟದ ವಿಷಯದಲ್ಲಿ ಬೀದಿಗೆ ಬಂದಿರುವ ನೌಕರರ ಸಂಘಟನೆಗಳ ಪ್ರಮುಖರ ನಡುವಿನ ಭಿನ್ನಮತದ ಕಾರಣವೂ ಇದೆ ಎಂಬುದು ತೋರುತ್ತದೆ.
ಮುಷ್ಕರನಿರತ ನೌಕರರನ್ನು ಮಾತುಕತೆಗೆ ಕರೆಯುವ ಯಾವ ಸೂಚನೆಯೂ ಸರ್ಕಾರದ ಕಡೆಯಿಂದ ಕಾಣಿಸುತ್ತಿಲ್ಲ. ಆದರೆ, ಸರ್ಕಾರದ ಇಂತಹ ಬಿಗಿ ನಿಲುವಿನ ಹೊತ್ತಲ್ಲಿ ಒಗ್ಗಟ್ಟಿನ ಹೋರಾಟದ ಮೂಲಕ ನೌಕರರ ನ್ಯಾಯಯುತ ಬೇಡಿಕೆಗಳ ಪರ ಕಟಿಬದ್ಧರಾಗಿ ನಿಲ್ಲಬೇಕಿದ್ದ ಕಾರ್ಮಿಕ ಮುಖಂಡರು, ಸ್ವತಃ ಕೆಸರೆರಚಾಟದಲ್ಲಿ ಮುಳುಗಿದ್ದಾರೆ. ನೌಕರರ ಕೂಟ ಮತ್ತು ಕೆಎಸ್ ಆರ್ ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ನಡುವೆ ಮುಷ್ಕರದ ವಿಷಯದಲ್ಲಿ ಆರಂಭದಿಂದಲೂ ಇದ್ದ ಭಿನ್ನಮತ ಇದೀಗ ಬೀದಿಗೆ ಬಿದ್ದಿದೆ.
ಒಂದು ಕಡೆ ಮುಷ್ಕರ ಹಾದಿ ತಪ್ಪುತ್ತಿದೆ. ಸರ್ಕಾರ ಮುಷ್ಕರವನ್ನು ಕಾನೂನುಬಾಹಿರ ಎಂದು ಹೇಳಿರುವುದರಿಂದ, ಪ್ರತಿಭಟನಾನಿರತ ನೌಕರರು ಸಂಕಷ್ಟಕ್ಕೆ ಈಡಾಗಲಿದ್ದಾರೆ. ಈಗಾಗಲೇ ನೌಕರಿ ಕಳೆದುಕೊಂಡವರ ಸಂಕಷ್ಟ ಒಂದು ಕಡೆಯಾದರೆ, ಮುಷ್ಕರನಿರತರು ಗ್ರಾಚ್ಯುಟಿಯಂತಹ ಸೌಲಭ್ಯದಿಂದ ವಂಚಿತರಾಗಲಿರುವುದು ಮತ್ತೊಂದು ಕಡೆ. ನೌಕರರ ಬೇಡಿಕೆಗಳು ನ್ಯಾಯಯುತವಾಗಿದ್ದರೂ, ಹೋರಾಟದ ರೀತಿಯ ವಿಷಯದಲ್ಲಿ ಸಹಮತವಿಲ್ಲ. ಕೆಲವರು ನೌಕರರು ಮತ್ತು ಕೆಲಸಗಾರರ ಸಂಘಟನೆಗಳನ್ನು ವಿಶ್ವಾಸಕ್ಕೆ ಪಡೆಯದೇ ಸ್ವಪ್ರತಿಷ್ಠೆಯಾಗಿ ಏಕಾಏಕಿ ಮುಷ್ಕರಕ್ಕೆ ಕರೆ ಕೊಟ್ಟಿದ್ದೇ ಎಲ್ಲಾ ಸಮಸ್ಯೆಗೆ ಮೂಲ ಕಾರಣ. ನೌಕರರನ್ನು ದಿಕ್ಕುತಪ್ಪಿಸಿ ಬೀದಿಗೆ ತಳ್ಳಲಾಗುತ್ತಿದೆ. ಇದು ನಿಜವಾಗಿಯೂ ನೌಕರರ ಸಂಕಷ್ಟ ಪರಿಹರಿಸುವ ಬದಲು ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಅವರ ನೌಕರರ ಕೂಟದ ವಿರುದ್ಧ ಇತರೆ ಸಂಘಟನೆಗಳು ಕಿಡಿಕಾರಿವೆ.
ಆದರೆ, ಕೋಡಿಹಳ್ಳಿ ಅವರು, “ನೌಕರರ ಹೋರಾಟವನ್ನು ಮುರಿಯಲು ಕಾರ್ಮಿಕ ನಾಯಕರೇ ಕುಮ್ಮಕ್ಕು ನೀಡುತ್ತಿದ್ದಾರೆ. ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಅನಂತಸುಬ್ಬರಾವ್ ಮತ್ತು ಸಾರಿಗೆ ನೌಕರರ ಮಹಾಮಂಡಳ ಅಧ್ಯಕ್ಷ ಡಾ ಕೆ ಎಸ್ ಶರ್ಮಾ ಅವರೇ ಇದರ ಹಿಂದಿದ್ದಾರೆ. ಸಂಘಟನೆಯ ನಾಯಕತ್ವ ಬದಲಾವಣೆಯನ್ನು ಸಹಿಸಿಕೊಳ್ಳದೆ ಆ ಇಬ್ಬರು ಮುಷ್ಕರಕ್ಕೆ ಪ್ರತಿಯಾಗಿ ಬಸ್ ಕಾರ್ಯಾಚರಣೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಹಾಗಾಗಿ ನೌಕರರಿಗೆ ನಾಳೆ ಏನೇ ಅನ್ಯಾಯವಾದರೂ ಅವರಿಬ್ಬರೇ ಹೊಣೆ” ಎಂದು ಹೇಳಿದ್ದಾರೆ.
ಹೀಗೆ ನೌಕರರ ಸಂಘಟನೆಗಳ ನಾಯಕರ ನಡುವೆ ಮುಷ್ಕರದ ವಿಷಯದಲ್ಲಿ ಪರಸ್ಪರ ಕೆಸರೆರಚಾಟ ಮುಂದುವರಿದಿದೆ. ಈ ನಡುವೆ, ಇದೀಗ ಒಂದು ಕಡೆ ನೌಕರರು ಮಷ್ಕರದಿಂದ ಹಿಂದೆ ಸರಿದು ಒಬ್ಬೊಬ್ಬರಾಗಿ ಕೆಲಸಕ್ಕೆ ಹಾಜರಾಗುತ್ತಿದ್ದರೆ, ಮತ್ತೊಂದು ಕಡೆ ನೌಕರರ ಕೂಟ ಮತ್ತು ಫೆಡರೇಷನ್ ನಡುವೆ ಆಫ್ ಲೈನ್ ಮತ್ತು ಆನ್ ಲೈನ್ ಆರೋಪ ಪ್ರತ್ಯಾರೋಪಗಳು ಮುಗಿಲುಮುಟ್ಟಿವೆ. ಫೆಡರೇಷನ್ ಪ್ರಮುಖರ ವಿರುದ್ಧ ಆರೋಪ ಮಾಡಿ ಕೂಟದ ಪ್ರಮುಖರು ವೀಡಿಯೋ ಹರಿಬಿಡುವುದು, ಅದಕ್ಕೆ ಪ್ರತಿಯಾಗಿ ಫೆಡರೇಷನ್ ಪ್ರಮುಖರು ಪ್ರತಿ ವೀಡಿಯೋ ಮಾಡಿ ಪ್ರತಿ ಆರೋಪ ಮಾಡಿ ಹರಿಬಿಡುವುದು ಮುಂದುವರಿದಿದೆ. ಆ ಮೂಲಕ ಸಾರಿಗೆ ನೌಕರರ ಮುಷ್ಕರ, ಒಂದು ಕಡೆ ಒಂದು ಕಡೆ ನೌಕರರಿಗೇ ಸಂಕಷ್ಟ ತಂದಿದ್ದರೆ, ಮತ್ತೊಂದು ಕಡೆ ಕಾರ್ಮಿಕ ಸಂಘಟನೆಗಳ ನಾಯಕರ ಪ್ರತಿಷ್ಠೆಯ ಕಣವಾಗಿ ಬದಲಾಗಿದೆ.
ಸಹಜವಾಗೇ ನೌಕರರು ಮತ್ತು ಕಾರ್ಮಿಕರ ಸಂಘಟನೆಗಳ ನಡುವಿನ ಈ ಒಡಕನ್ನೇ, ಕಚ್ಚಾಟವನ್ನೇ ಬಳಸಿಕೊಂಡು ರಾಜ್ಯ ಸರ್ಕಾರ, ಮುಷ್ಕರನಿರತರ ಮೇಲೆ ಗಧಾ ಪ್ರಹಾರ ಮುಂದುವರಿಸಿದೆ. ಸದ್ಯದ ಸ್ಥಿತಿಗತಿಗಳನ್ನು ಗಮನಿಸಿದರೆ; ಇದು ಇಷ್ಟಕ್ಕೇ ನಿಲ್ಲುವಂತೆ ತೋರುತ್ತಿಲ್ಲ. ನೌಕರರ ಕೂಟ ಹಮ್ಮಿಕೊಂಡಿರುವ ಮುಷ್ಕರದ ಬಗ್ಗೆಯೇ ಇತರ ಕಾರ್ಮಿಕ ಸಂಘಟನೆಗಳು ಗಂಭೀರ ಅನುಮಾನಗಳನ್ನು ವ್ಯಕ್ತಪಡಿಸಿವೆ.

ಒಂದು ಕಡೆ ತಮ್ಮ ಹೋರಾಟಕ್ಕೆ ಕೆಎಸ್ ಆರ್ ಟಿಸಿ ಆಡಳಿತ ಮಂಡಳಿಯ ಬೆಂಬಲವಿದೆ ಎಂದು ಮುಷ್ಕರನಿರತರು ಹೇಳುತ್ತಿದ್ದರೆ, ಅದೇ ಮಾತನ್ನು ಮುಂದುವರಿಸಿ, “ಮುಷ್ಕರದ ನೇತೃತ್ವ ವಹಿಸಿರುವ ನೌಕರರ ಕೂಟವೇ ಒಂದು ಷಢ್ಯಂತ್ರದ ಕೂಟ. ವಿಮಾನ, ರೈಲ್ವೆ ಮುಂತಾದ ಸಾರ್ವಜನಿಕ ಸಾರಿಗೆ ಉದ್ಯಮಗಳನ್ನು ಈಗಾಗಲೇ ಬಹುತೇಕ ಖಾಸಗೀಕರಣಗೊಳಿಸಿರುವ ಬಿಜೆಪಿ ಸರ್ಕಾರಗಳು, ಇದೀಗ ಈ ಕೂಟದ ಮೂಲಕ ರಾಜ್ಯ ಸಾರಿಗೆ ನಿಗಮಗಳನ್ನು ನಷ್ಟಕ್ಕೆ ತಳ್ಳಿ, ಕಾರ್ಮಿಕ ಸಂಘಟನೆಗಳು ನಡುವೆ ಒಡಕು ಮೂಡಿಸಿ, ಕ್ರಮೇಣ ಇಡೀ ಸಾರಿಗೆ ವ್ಯವಸ್ಥೆಯನ್ನು ಖಾಸಗಿಯವರಿಗೆ ಪರಭಾರೆ ಮಾಡಲು ಷಢ್ಯಂತ್ರ ಹೂಡಿವೆ. ಅಂತಹ ಷಢ್ಯಂತ್ರದ ಭಾಗವಾಗಿಯೇ ಕೆಎಸ್ ಆರ್ ಟಿಸಿ ನೌಕರರನ್ನು ಕೂಟದ ಹೆಸರಿನಲ್ಲಿ ದಿಕ್ಕುತಪ್ಪಿಸಲಾಗುತ್ತಿದೆ” ಎಂಬುದು ಫೆಡರೇಷನ್ ಮತ್ತು ಇತರ ಕಾರ್ಮಿಕ ಸಂಘಟನೆಗಳ ನಾಯಕರ ಗಂಭೀರ ಆರೋಪ.
ಈ ನಡುವೆ, ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ, ಸಚಿವ ಆರ್ ಅಶೋಕ್ ಸೇರಿದಂತೆ ಹಲವು ಪ್ರಮುಖರು, ಮುಷ್ಕರದ ಆರಂಭದ ದಿನಗಳಲ್ಲಿ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿಯ ಖಾಸಗೀಕರಣದ ಕುರಿತ ಮಾತುಗಳು ಕೂಡ ಈಗ ಬೇರೆ ಅರ್ಥಪಡೆದುಕೊಂಡಿವೆ. ಬಿಜೆಪಿ ಸರ್ಕಾರ, ಸಾರಿಗೆ ನಿಗಮಗಳ ಖಾಸಗೀಕರಣಕ್ಕೆ ಯೋಚಿಸುತ್ತಿದೆ. ಆ ಮೂಲಕ, ದೇಶದ ವಿಮಾನ, ರೈಲ್ವೆ ಸೇರಿದಂತೆ ಸಾರಿಗೆ ಮತ್ತು ಸಂಪರ್ಕ ವಲಯವನ್ನು ಇಡಿಯಾಗಿ ಖಾಸಗೀಕರಣ ಮಾಡುವ ಪ್ರಧಾನಿ ಮೋದಿಯವರ ಹಾದಿಯಲ್ಲೇ ಕರ್ನಾಟಕದ ಸಾರಿಗೆ ವಲಯವನ್ನೂ ತರುವುದು ಬಿಜೆಪಿಯ ಉದ್ದೇಶ. ಇದೀಗ ಕೋಡಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದ ನೌಕರರ ಕೂಟ ನಡೆಸುತ್ತಿರುವ ಮುಷ್ಕರ, ಬಿಜೆಪಿಯ ಅಂತಹ ಹುನ್ನಾರಕ್ಕೆ ಪೂರಕವಾಗಿ ಒದಗಿಬಂದಿದೆ. ಮೊದಲೇ ನಷ್ಟದಲ್ಲಿರುವ ಸಾರಿಗೆ ನಿಗಮಗಳು, ಈ ಮುಷ್ಕರದಿಂದ ಮತ್ತಷ್ಟು ನಷ್ಟಕ್ಕೆ ಕುಸಿದಿವೆ. ಜೊತೆಗೆ ನೌಕರರ ಸಂಘಟನೆಗಳೂ ಒಡೆದು ಪರಸ್ಪರ ಬೀದಿ ಕಾಳಗದಲ್ಲಿ ಮುಳುಗಿವೆ. ಹಾಗಾಗಿ, ಸರ್ಕಾರದ ಪಾಲಿಗೆ ಈ ಪರಿಸ್ಥಿತಿ, ಒಂದು ರೀತಿಯಲ್ಲಿ ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ಎಂಬಂತಾಗಿದೆ.
ಆದರೆ, ಹೀಗೆ ಒಂದು ಕಡೆ ಸರ್ಕಾರದ ಹುನ್ನಾರ, ಮತ್ತೊಂದು ಕಡೆ ಕಾರ್ಮಿಕ ನಾಯಕರ ಸ್ವಪ್ರತಿಷ್ಠೆಯ ಕಿತ್ತಾಟಗಳ ನಡುವೆ, ನಿಜಕ್ಕೂ ಬಡವಾಗುತ್ತಿರುವುದು ನೌಕರರೆಂಬ ಕೂಸು! ಇದನ್ನು ಕಾರ್ಮಿಕರು ಖಂಡಿತಾ ನಿರೀಕ್ಷಿಸಿರಲಿಲ್ಲ!