ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡಿದ ಬಳಿಕ ಬಿಜೆಪಿ ಪಕ್ಷದಿಂದ ಹೊರಬಿದ್ದಿರುವ ಕೆ.ಎಸ್ ಈಶ್ವರಪ್ಪ, ಬಿ.ವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಯಡಿಯೂರಪ್ಪ ಮೋಡಿ ಮಾಡಿ ಮಗನನ್ನು ರಾಜ್ಯಾಧ್ಯಕ್ಷ ಮಾಡಿದ್ದಾರೆ. ಈ ರಾಜ್ಯಧ್ಯಕ್ಷ ಸ್ಥಾನ ಬಹಳ ದಿನ ಉಳಿಯಲ್ಲ ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಭವಿಷ್ಯ ಹೇಳಿದ್ದಾರೆ.
ಯಡಿಯೂರಪ್ಪ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿರುವ ಈಶ್ವರಪ್ಪ, ನಾನು ಒಂದಲ್ಲ ಒಂದು ಬಾರಿ ತವರು ಮನೆಗೆ ಬಂದೇ ಬರ್ತೇನೆ. ಬಿಜೆಪಿ ಪಕ್ಷಕ್ಕೆ ಮರಳುತ್ತೇನೆ. ಯಡಿಯೂರಪ್ಪ ಅಂದ್ರೆ ಬಿಜೆಪಿ, ಬಿಜೆಪಿ ಅಂದ್ರೆ ಯಡಿಯೂರಪ್ಪ ಅನ್ನೋ ಸ್ಥಿತಿ ಇದೆ. ಈ ಸ್ಥಿತಿಗೆ ಕೊನೆ ಹಾಡಬೇಕೆಂಬುದೇ ನನ್ನ ಉದ್ದೇಶ. ಆರು ತಿಂಗಳ ಕಾಲ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇತ್ತು. ಇಂತಹ ಪರಿಸ್ಥಿತಿ ಯಾವ ಪಕ್ಷಕ್ಕೂ ಬಂದಿರಲಿಲ್ಲ. ಕೊನೆಗೆ ಯಡಿಯೂರಪ್ಪ ಮೋಡಿ ಮಾಡಿ ತಮ್ಮ ಪುತ್ರನಿಗೆ ರಾಜ್ಯಧ್ಯಕ್ಷ ಸ್ಥಾನ ತಂದುಕೊಂಡರು ಎಂದು ಟೀಕಿಸಿದ್ದಾರೆ.
ಕುಟುಂಬ ರಾಜಕಾರಣ ಬೇಡ ಅನ್ನೋದು ಪ್ರಧಾನಿ ನರೇಂದ್ರ ಮೋದಿ ಅಪೇಕ್ಷೆ ಆಗಿದೆ. ಆದರೆ ಮೋದಿ ಅಪೇಕ್ಷೆಗೆ ವಿರುದ್ಧವಾಗಿ ಕರ್ನಾಟಕ ಬಿಜೆಪಿಯಲ್ಲಿ ಒಂದು ಕುಟುಂಬದ ಹಿಡಿತವಿದೆ. ಯಡಿಯೂರಪ್ಪ ಮತ್ತು ಅವರ ಪುತ್ರರು ಒಳ ಒಪ್ಪಂದ ರಾಜಕಾರಣ ಮಾಡ್ತಿದಾರೆ. ಇದನ್ನು ಖುದ್ದು ಡಿಕೆ ಶಿವಕುಮಾರ್ ಹೇಳಿದ್ದಾರೆ. ವಿಜಯೇಂದ್ರ ಶಾಸಕರಾಗಿರೋದು ಕಾಂಗ್ರೆಸ್ ಪಕ್ಷದ ಭಿಕ್ಷೆ ಅಂತ ಅಂದಿದ್ದಾರೆ. ಒಳ ಒಪ್ಪಂದ ಮಾಡಿಕೊಳ್ಳುವ ಮೂಲಕ ಯಡಿಯೂರಪ್ಪ ಬಿಜೆಪಿಗೆ ದ್ರೋಹ ಮಾಡಿದ್ದಾರೆ. ಯಡಿಯೂರಪ್ಪಗೆ ಬೆಂಬಲ ನೀಡುವ ಮೂಲಕ ಡಿಕೆಶಿ ಕಾಂಗ್ರೆಸ್ ಕಾರ್ಯಕರ್ತರಿಗೆ ದ್ರೋಹ ಬಗೆದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಡಿಕೆ ಶಿವಕುಮಾರ್ ಆರೋಪದ ಬಗ್ಗೆ ವಿಜಯೇಂದ್ರ ಸೌಜನ್ಯಕ್ಕಾದ್ರೂ ಪ್ರತಿಕ್ರಿಯೆ ನೀಡಿಲ್ಲ. ಡಿಕೆ ಶಿವಕುಮಾರ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಹಿಂದುತ್ವವಾದಿಗಳು ಇವರಿಗೆ ಬೇಡ, ಇದರಿಂದ ನನಗೂ ತೊಂದ್ರೆ ಆಗಿದೆ. ದೇಶದ ನಾಯಕರಿಗೆ ಅರ್ಥ ಆಗಲಿ ಅಂತಾನೇ ನಾನು ಚುನಾವಣೆ ಸ್ಪರ್ಧೆ ಮಾಡಿದ್ದು ಎಂದು ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ. ರಾಯಣ್ಣ ಬ್ರಿಗೇಡ್‌ಗೆ ಮರು ಚಾಲನೆ ನೀಡುವ ಕುರಿತು ಬೆಂಬಲಿಗರ ಜೊತೆ ಚರ್ಚೆ ನಡೆಸಿದ ಬಳಿಕ ನಿರ್ಧಾರ ಮಾಡ್ತೇನೆ. ರಾಯಣ್ಣ ಬ್ರಿಗೇಡ್ ಮತ್ತೆ ಆರಂಭ ಮಾಡಿ ಅಂತಾ ಹೇಳ್ತಾ ಇದ್ದಾರೆ. ಇನ್ನು ಯಾವುದೇ ತೀರ್ಮಾನ ಆಗಿಲ್ಲ ಎಂದಿದ್ದಾರೆ.