ಇತ್ತೀಚೆಗೆ ಮಂಡ್ಯದಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಕೆಆರ್ಎಸ್ ಡ್ಯಾಂಗೆ ಭಾರೀ ತೊಂದರೆಯಾಗುತ್ತಿದೆ ಎಂಬ ಕೂಗು ಕೇಳಿ ಬರುತ್ತಿದೆ. ಈ ಹೊತ್ತಲೇ ಕೆಆರ್ಎಸ್ ಡ್ಯಾಂ ಸಮೀಪ ಕಲ್ಲುಗಳು ಕುಸಿದಿವೆ. ಇದೀಗ ಕೆಆರ್ಎಸ್ ಡ್ಯಾಂ ಸಮೀಪ ಕಲ್ಲು ಕುಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ದೆಹಲಿಯಲ್ಲಿ ಮಾತಾಡಿದ ಸುಮಲತಾ ಅಂಬರೀಶ್ ಅವರು, ಕನ್ನಂಬಾಡಿ ತನ್ನನ್ನು ಕಾಪಾಡುವಂತೆ ಕೂಗಿ ಹೇಳುತ್ತಿದೆ ಎಂದಿದ್ದಾರೆ.
ಭಾನುವಾರ ರಾತ್ರಿ ಸ್ಥಳೀಯರು ಕರೆ ಮಾಡಿ ಕೆಆರ್ಎಸ್ ಡ್ಯಾಂ ಗೋಡೆ ಕುಸಿದಿರುವ ಬಗ್ಗೆ ಮಾಹಿತಿ ನೀಡಿದರು. ಬಳಿಕ ನಾನು ಅಧಿಕಾರಿಗೆ ಕರೆ ಮಾಡಿ ಮಾಹಿತಿ ಕೇಳಿದೆ. ಅದಕ್ಕೆ ಅಧಿಕಾರಿಗಳು ಎರಡು-ಮೂರು ಕಲ್ಲು ಬಿದ್ದಿವೆ ಎಂದು ಮಾಹಿತಿ ನೀಡಿದರು. ಡ್ಯಾಂ ಗೋಡೆ ಕುಸಿದಿರುವ ಬಗ್ಗೆ ಫೋಟೋ ಮತ್ತು ವಿಡಿಯೋಗಳ ಮಾಹಿತಿ ಕೇಳಿದ್ದೇನೆ ಎಂದು ಹೇಳಿದರು.
ಹೀಗೆ ಮುಂದುವರಿದ ಸುಮಲತಾ ಅಂಬರೀಶ್, ಸ್ಥಳದಲ್ಲಿರುವ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ನಿನ್ನೆ ಸಂಜೆ 5:15 ಗಂಟೆ ಸುಮಾರಿಗೆ ಗೋಡೆ ಕುಸಿದಿದೆ ಎಂದು ಸ್ಥಳೀಯ ಅಧಿಕಾರಗಳು ಹೇಳಿದ್ದಾರೆ. ಈ ಸಂಬಂಧ ಮಂಡ್ಯದ ಡಿಸಿ ಜೊತೆಗೂ ಮಾತಾಡಿದ್ದೇನೆ. ಇದು ಹಳೆಯ ಗೋಡೆ ಎಂದರು ಜಿಲ್ಲಾಧಿಕಾರಿ. ಅವರ ಪ್ರಕಾರ ರಾತ್ರಿ 9.30 ಸಮಯದಲ್ಲಿ ಈ ಘಟನೆ ನಡೆದಿದೆ. ಸಯಮ ಟೈಮ್ ವಿಚಾರದಲ್ಲಿ ಸುಳ್ಳು ಹೇಳುತ್ತಿದ್ದಾರೆ. ಕೆಆರ್ಎಸ್ ಗೋಡೆ ಕುಸಿದಿರುವ ವಿಚಾರ ಬೇಜವಬ್ದಾರಿಯಿಂದ ವರ್ತಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.
ಸದ್ಯ ಕೆಆರ್ಎಸ್ ಡ್ಯಾಂ ಸೇಫ್ ಆಗಿದೆ. ಅದು ಹಾಗೆಯೇ ಇರಲಿ ಎನ್ನುವುದು ನಮ್ಮ ಬಯಕೆ. ಆದರೀಗ ಗೋಡೆ ಕುಸಿದಿರುವುದು ರೆಡ್ ಅಲರ್ಟ್ ಇದ್ದಂತೆ. ಕನ್ನಂಬಾಡಿ ತನ್ನನ್ನು ಕಾಪಾಡುವಂತೆ ಕೂಗಿ ಹೇಳುತ್ತಿದೆ. ಯಾರೊಬ್ಬರು ಗೋಡೆ ಕುಸಿತಕ್ಕೆ ಸರಿಯಾದ ಕಾರಣ ಹೇಳ್ತಿಲ್ಲ. ರಾಜ್ಯ ಸರ್ಕಾರ ಈಗ ಮೌನವಾಗಿ ಕೂರಲು ಸಾಧ್ಯವಿಲ್ಲ. ಸರ್ಕಾರ ಉತ್ತರ ನೀಡಬೇಕು. ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಹೇಳಿದರು.
ಸಂಸತ್ನಲ್ಲಿ ಅಕ್ರಮ ಗಣಿಗಾರಿಕೆಯಿಂದ ಕೆಆರ್ಎಸ್ ಅಣೆಕಟ್ಟಿಗೆ ಆಗಲಿರುವ ಅಪಾಯದ ಬಗ್ಗೆ ಧ್ವನಿ ಎತ್ತುತ್ತೇನೆ. ಈ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವರ ಬಳಿ ಚರ್ಚೆ ಮಾಡುತ್ತೇನೆ. ಕೆಆರ್ಎಸ್ ಅಣೆಕಟ್ಟಿಗೆ ಏನು ರಿಸ್ಕ್ ಇಲ್ಲ ಎಂದು ಕೈಕಟ್ಟಿ ಕೂರಲು ಸಾಧ್ಯವಾ? ಎಂದರು ಸುಮಲತಾ.
ರಾಜಕಾರಣ ಜೊತೆಗೂಡಿಸಿ ಮಾತನಾಡುವವರು ಏನು ಬೇಕಾದರೂ ಹೇಳಲಿ. ಮುಂದೆ ಇಂಥದ್ದೊಂದು ಡ್ಯಾಂ ಯಾರಿಂದಲೂ ನಿರ್ಮಿಸಲು ಸಾಧ್ಯವಿಲ್ಲ. ಇರುವುದನ್ನು ಉಳಿಸಿಕೊಂಡು ಹೋಗುವ ಜವಬ್ದಾರಿ ನಮ್ಮದು. ಕಿಡ್ನಿಗೆ ಇನ್ಷೇಕ್ಷನ್ ಆದರೆ ಲಿವರ್ಗೆ ಏನು ಸಮಸ್ಯೆ ಇಲ್ಲವಾ? ಇದು ಕೂಡ ಅದೇ ರೀತಿ ಎಂದು ತಿಳಿಸಿದರು.
ಕೆಆರ್ಎಸ್ ಸಮೀಪ ಕಲ್ಲು ಕುಸಿದ ಕಾರಣ ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಇಂದು ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿರುವ ಅವರು, ಡ್ಯಾಂಗೂ, ಕಲ್ಲು ಕುಸಿದಿದ್ದಕ್ಕೂ ಸಂಬಂಧವಿಲ್ಲ. ಗಾರ್ಡನ್ಗೆ ಹೋಗುವ ದಾರಿಯಲ್ಲಿ ಹತ್ತು ಹದಿನೈದು ಕಲ್ಲುಗಳು ಬಿದ್ದಿವೆ. ಮಳೆಯಿಂದ ಈ ಘಟನೆಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾದವರ ಪಟ್ಟಿಯಲ್ಲಿ ರವೀಂದ್ರ ಶ್ರೀಂಕಠಯ್ಯ ಅವರ ಮೇಲೂ ಕೆಲ ಆರೋಪ ಕೇಳಿ ಇವೆ. ಇದೀಗ ಅವಘಡ ಸಂಭವಿಸಿದ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ಇದಕ್ಕೂ ಡ್ಯಾಂಗೂ ಸಂಬಂಧವಿಲ್ಲ ಎಂದಿದ್ದಾರೆ.