ಒಬ್ಬ ದೊಡ್ಡ ಹೀರೋ, ಒಂದು ದೊಡ್ಡ ಪ್ರೊಡಕ್ಷನ್ ಹೌಸ್ , ದೊಡ್ಡ ಬಜೆಟ್ಟಿನಲ್ಲಿ ಒಂದು ಸಾಮಾಜಿಕ ಕಳಕಳಿಯ ಸಿನಿಮಾ ಮಾಡಿದಾಗ ಬೆಂಬಲಿಸದಿದ್ದರೆ ಮುಂದಿನ ದಿನಗಳಲ್ಲಿ ಆ ಬಗೆಯ ಚಿತ್ರಗಳ ಕಡೆ ನಿರ್ಮಾಪಕರು , ದೊಡ್ಡ ನಾಯಕ ನಟರು ತಲೆ ಹಾಕಿಯೂ ಮಲಗುವುದಿಲ್ಲ ಎಂದು ಕ್ರಾಂತಿ ಚಿತ್ರದ ಕುರಿತಂತೆ ಚಿತ್ರ ನಿರ್ದೇಶಕ, ಗೀಗೆ ರಚನೆಕಾರ ಕವಿರಾಜ್ ಹೇಳಿದ್ದಾರೆ.
ಈ ಕುರಿತು ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಿರುವ ಕವಿರಾಜ್, “ಎಲ್ಲಾ ವಿಚಾರ/ವಿವಾದಗಳಾಚೆ ‘ಕ್ರಾಂತಿ’ ಅದರ ಆಶಯ ಮತ್ತು ಸಂದೇಶಗಳಿಗಾಗಿ ಸಮಾಜ ಬೆಂಬಲಿಸಬೇಕಾದ ಚಿತ್ರ ಎನ್ನುವುದು ನನ್ನ ನಿಲುವು” ಎಂದಿದ್ದಾರೆ.
ಕವಿರಾಜ್ ಅವರ ಪೋಸ್ಟ್‌ನ ಪೂರ್ಣ ಪಠ್ಯ
‘ಕ್ರಾಂತಿ’ ಸಿನಿಮಾದಲ್ಲಿ ನಾಡಿನ ಎಲ್ಲಾ ಖಾಸಗಿ ಶಾಲೆಗಳನ್ನು ಕೊಂಡುಕೊಳ್ಳುವ ಅಪಾರ ಸಿರಿವಂತ ನಾಯಕ ಒಂದು ದಿನ ಇದ್ದಕ್ಕಿದ್ದಂತೆ ಎಲ್ಲಾ ಶಾಲೆಗಳನ್ನು ಮುಚ್ಚಿ ಬಿಡುತ್ತಾನೆ. ನಾಯಕ ಹೀಗೇಕೆ ತಪ್ಪು ಮಾಡಿದ ಎಂದು ನೋಡುಗರು ಗೊಂದಲಕ್ಕೊಳಗಾಗುತ್ತಾರೆ.
ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುವ ಸಿರಿವಂತರೆಲ್ಲ ಆಕ್ರೋಶಗೊಂಡು ಕೋಲಾಹಲ ಎಬ್ಬಿಸುತ್ತಾರೆ. ಶಾಲೆಗಳನ್ನು ಮುಚ್ಚಿದರೆ ನಮ್ಮ ಮಕ್ಕಳ ಭವಿಷ್ಯವೇನು ?? ಎಂದು ರೊಚ್ಚಿನಿಂದ ಪ್ರಶ್ನಿಸುತ್ತಾರೆ.
ಆಗ ಹೀರೋ ಒಂದೇ ಒಂದು ಪ್ರಶ್ನೆ ಕೇಳುತ್ತಾನೆ. “ದಿನೇ ದಿನೇ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ತಾನೆ ಇದಾರೆ , ಅಲ್ಲಿ ಓದುತ್ತಿದ್ದ, ಓದಬೇಕಿದ್ದ ಬಡ ಮಕ್ಕಳ ಭವಿಷ್ಯ ಏನು ಅಂತಾ ಯಾಕೆ ಯಾರಿಗೂ ಅನ್ನಿಸ್ತಾ ಇಲ್ಲ ??? ಆಗ್ಯಾಕೇ ಯಾರು ರೊಚ್ಚಿಗೇಳಲ್ಲ ???
ನೋಡುಗ ಸಹೃದಯಿಗಳ ಕರುಳು ಚುರುಕೆನ್ನುತ್ತೆ. ಆತ್ಮಸಾಕ್ಷಿ ಅಲ್ಲಾಡುತ್ತದೆ. ಒಂದು ಅಪರಾಧಿ ಪ್ರಜ್ಞೆ ಕಪಾಳಕ್ಕೆ ಭಾರಿಸುತ್ತದೆ.
ಶ್ರೀಮಂತರ ಮಕ್ಕಳ ಭವಿಷ್ಯ ಮಾತ್ರ ಚೆನ್ನಾಗಿರಬೇಕಾ? ಬಡವರದ್ದಲ್ವಾ?
ಇದೊಂದು ಸೀನ್ ಸಾಕು ‘ಕ್ರಾಂತಿ_ ಸಿನಿಮಾ ನೋಡಲು , ಆ ಸಿನಿಮಾವನ್ನು ಬೆಂಬಲಿಸಲು..
ಇನ್ನು ಘರ್ಷಣೆಯಲ್ಲಿ ಕನ್ನಡದ ದ್ವಜ ಸ್ತಂಭ ನೆಲಕ್ಕೆ ಬೀಳದಂತೆ ಓಡಿ ಬಂದು ನಾಯಕ ಹಿಡಿಯುವಾಗ ನಮ್ಮಂತ ಕನ್ನಡ ಮಕ್ಕಳ ಗಂಟಲು ಉಬ್ಬಿಬರುತ್ತದೆ.
ಒಬ್ಬ ದೊಡ್ಡ ಹೀರೋ, ಒಂದು ದೊಡ್ಡ ಪ್ರೊಡಕ್ಷನ್ ಹೌಸ್ , ದೊಡ್ಡ ಬಜೆಟ್ಟಿನಲ್ಲಿ ಒಂದು ಸಾಮಾಜಿಕ ಕಳಕಳಿಯ ಸಿನಿಮಾ ಮಾಡಿದಾಗ ಬೆಂಬಲಿಸದಿದ್ದರೆ ಮುಂದಿನ ದಿನಗಳಲ್ಲಿ ಆ ಬಗೆಯ ಚಿತ್ರಗಳ ಕಡೆ ನಿರ್ಮಾಪಕರು , ದೊಡ್ಡ ನಾಯಕ ನಟರು ತಲೆ ಹಾಕಿಯೂ ಮಲಗುವುದಿಲ್ಲ. ನನ್ನ ನಿರ್ದೇಶನದ ‘ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾ ಕೂಡಾ ಇದೇ ಆಶಯ ಹೊಂದಿತ್ತು.
ಎಲ್ಲಾ ವಿಚಾರ/ವಿವಾದಗಳಾಚೆ ‘ಕ್ರಾಂತಿ’ ಅದರ ಆಶಯ ಮತ್ತು ಸಂದೇಶಗಳಿಗಾಗಿ ಸಮಾಜ ಬೆಂಬಲಿಸಬೇಕಾದ ಚಿತ್ರ ಎನ್ನುವುದು ನನ್ನ ನಿಲುವು