ಬೆಂಗಳೂರು: ದೇಶ ವಿದೇಶದಲ್ಲೂ ವ್ಯಾಪಕ ಪ್ರಶಂಸೆ ಕಂಡುಕೊಳ್ಳುತ್ತಿರುವ ಶಾರುಖ್ ಖಾನ್, ದೀಪಿಕಾ, ಜಾನ್ ಅಬ್ರಹಾಂ ಅಭಿನಯದ ಪಠಾಣ್ ಚಿತ್ರವನ್ನು ಹೊಗಳಿದ ನಟಿ ರಮ್ಯಾ ವಿರುದ್ಧ ದರ್ಶನ್ ತೂಗುದೀಪ ಅಭಿಮಾನಿಗಳು ಅಶ್ಲೀಲ ದಾಳಿ ಮಾಡುತ್ತಿದ್ದಾರೆ.
ಪಠಾಣ್ ಚಿತ್ರದ ಒಂದು ದಿನದ ನಂತರ ದರ್ಶನ್ ಅಭಿನಯದ ಕ್ರಾಂತಿ ಚಿತ್ರವೂ ತೆರೆಗೆ ಬಂದಿದ್ದು, ದರ್ಶನ್ ವಿರೋಧಿಗಳು ಪಠಾಣ್ ಚಿತ್ರಕ್ಕೆ ಪ್ರಚಾರ ಮಾಡುತ್ತಿದ್ದಾರೆ ಎಂದು ಹಲವು ದರ್ಶನ್ ಅಭಿಮಾನಿಗಳು ಆರೋಪಿಸುತ್ತಿದ್ದಾರೆ.
ಅದಕ್ಕೆ ಪೂರಕವಾಗಿ ಅಪ್ಪು ಅಭಿಮಾನಿಗಳು ಪಠಾಣ್ ಚಿತ್ರ ಪ್ರದರ್ಶನಗೊಳ್ಳುತ್ತಿರುವ ಚಿತ್ರಮಂದಿರವೊಂದರ ಎದುರುಗಡೆ ಅನ್ನದಾನ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದರು. ಕ್ರಾಂತಿ ಚಿತ್ರದಲ್ಲಿ ಅಪ್ಪುವನ್ನು ನೆನಪು ಮಾಡಿಕೊಂಡಿಲ್ಲ ಎನ್ನುವುದು ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾದರೆ, ಈ ಹಿಂದೆ ನಟ ದರ್ಶನ್ ನೀಡಿದ್ದ ಹಲವು ಹೇಳಿಕೆಗಳು ರಾಜ್ ಕುಟುಂಬದ ಅಭಿಮಾನಿಗಳು ಕೆರಳಲು ಕಾರಣವಾಗಿದ್ದವು. ನಂತರ ಹೊಸಪೇಟೆಯಲ್ಲಿ ನಡೆದ ಚಪ್ಪಲಿ ಎಸೆತ ಪ್ರಕರಣವು ವಿವಾದವನ್ನು ಇನ್ನಷ್ಟು ತೀವ್ರ ರೂಪಕ್ಕೆ ಕೊಂಡೊಯ್ದಿತ್ತು.
ಇದೀಗ, ಪಠಾಣ್ ಮತ್ತು ಕ್ರಾಂತಿ ಒಟ್ಟೊಟ್ಟಿಗೆ ಬಿಡುಗಡೆ ಆಗಿರೋದರಿಂದ ಪಠಾಣ್ ಗೆ ಬೆಂಬಲ ನೀಡುವವರ ಮೇಲೆ ದರ್ಶನ್ ಅಭಿಮಾನಿಗಳ ಒಂದು ಗುಂಪು ಕಿಡಿ ಕಾರುತ್ತಿದೆ. ಅದರಂತೆ ನಟಿ ರಮ್ಯಾ ಪಠಾಣ್ ವೀಕ್ಷಿಸಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಇದು ಡಿಬಾಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ರಮ್ಯಾ ಅವರಿಗೆ ಅಶ್ಲೀಲವಾದ ಪ್ರತಿಕ್ರಿಯೆಗಳು ಹಲವರು ಮಾಡಿದ್ದು, ದರ್ಶನ್ ಅಭಿಮಾನಿಗಳು ಎನ್ನಲಾದ ಕೆಲವರು ಅಶ್ಲೀಲವಾಗಿ ಪ್ರತಿಕ್ರಿಯಿಸಿದ್ದಾರೆ.