ಬೆಂಗಳೂರು : ನಟಿಯರ ವೀಡಿಯೊ ಹಾಗೂ ಫೋಟೋಗಳನ್ನು ಅಸಭ್ಯವಾಗಿ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ.ಅಂತಹವರ ವಿರುದ್ಧ ʼಕಾಂತಾರʼ ಸಿನಿಮಾದ ನಟಿ ಸಪ್ತಮಿ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಹಾಗೂ ಫೋಟೋಗಳನ್ನು ಅಸಭ್ಯವಾಗಿ ಚಿತ್ರೀಕರಿಸುವುದರ ವಿರುದ್ಧ ನಟಿ ಸಪ್ತಮಿ ಗೌಡ ಹೋರಾಟಕ್ಕೆ ಸ್ಯಾಂಡಲ್ ವುಡ್ ನಟ-ನಟಿಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ನಟಿಯರ ಅಸಭ್ಯ ವೀಡಿಯೊಗಳನ್ನು ಮಾಡಿ ಅದನ್ನು ಝೂಮ್ ಮಾಡಿ ಪ್ರಸಾರ ಮಾಡುವುದು ತಪ್ಪೆಂದು ಸಪ್ತಮಿ ಗೌಡ ಅಭಿಯಾನವನ್ನು ಆರಂಭಿಸಿದ್ದಾರೆ.

ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಸಪ್ತಮಿ ಗೌಡ, “ಚಿತ್ರರಂಗದಲ್ಲಿರುವ ಮಹಿಳೆಯರಿಗಾಗಿ ನಿರಂತರವಾಗಿ ನಡೆಯುತ್ತಿರುವ ಒಂದು ಗಂಭೀರ ಸಮಸ್ಯೆಯನ್ನು ಎದುರಿಸಲು ಒಟ್ಟಾಗಿ ನಿಂತಿದ್ದೇವೆ” ಎಂದು ಹೇಳಿದ್ದಾರೆ. ಸಪ್ತಮಿಗೌಡ ಅವರ ಅಭಿಯಾನಕ್ಕೆ ಕನ್ನಡ ಚಿತ್ರರಂಗದ ನಟ-ನಟಿಯರು ಸಾಥ್ ಕೊಡುತ್ತಿದ್ದಾರೆ.

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳಾ ಕಲಾವಿದರ ವೀಡಿಯೊಗಳು ಮತ್ತು ಫೋಟೋಗಳನ್ನು ಅಸಭ್ಯ ಕೋನಗಳಿಂದ ಚಿತ್ರೀಕರಿಸಿ, ನಮ್ಮ ಕಲೆಗಿಂತ ನಮ್ಮ ದೇಹದ ಮೇಲೆ ಅನವಶ್ಯಕವಾಗಿ ಜೂಮ್ ಮಾಡಿ ಪ್ರಸಾರ ಮಾಡುವ ಘಟನೆಗಳು ಮತ್ತೆ ಮತ್ತೆ ನಡೆಯುತ್ತಿದೆ. ಇಂತಹ ವರ್ತನೆ ಕೆಲವರಿಂದ ನಡೆಯುತ್ತಿರುವುದಾದರೂ ಅದು ಅಸಭ್ಯ, ಅವಮಾನಕಾರಿ ಮತ್ತು ಸಂಪೂರ್ಣವಾಗಿ ಅಸ್ವೀಕಾರಾರ್ಹವಾಗಿದೆ ಎಂದು ಫೋಸ್ಟ್ನಲ್ಲಿ ಅವರು ಬರೆದಿದ್ದಾರೆ.

ನಾವು ಇಲ್ಲಿ ಕಲೆಗಾಗಿ ಬಂದಿದ್ದೇವೆ. ನಾವು ಇಲ್ಲಿ ನಮ್ಮ ಸಿನಿಮಾಗಾಗಿ ಬಂದಿದ್ದೇವೆ. ಉದ್ದೇಶಪೂರ್ವಕವಾಗಿ ಜೂಮ್ ಮಾಡುವುದು ಮತ್ತು ಅಸಭ್ಯ ಕೋನಗಳಿಂದ ಬಳಸುವುದು ನಮ್ಮ ಗೌರವಕ್ಕೆ ಸ್ಪಷ್ಟ ಧಕ್ಕೆ. ಇದನ್ನು ಸಾಮಾನ್ಯವೆಂದು ಸ್ವೀಕರಿಸುವುದಿಲ್ಲ ಮತ್ತು ಸಹಿಸುವುದಿಲ್ಲ. ಕಾರ್ಯಕ್ರಮಗಳನ್ನು ವರದಿ ಮಾಡುವವರು ವೃತ್ತಿಪರತೆ, ಮೂಲಭೂತ ಗೌರವ ಮತ್ತು ಶಿಸ್ತನ್ನು ಕಾಪಾಡಬೇಕು ಎಂದು ನಾವು ನಿರೀಕ್ಷಿಸುತ್ತೇವೆ. ಈ ಗಡಿರೇಖೆಯನ್ನು ಸ್ಪಷ್ಟವಾಗಿ ಎಳೆದು, ನಾವು ಒಟ್ಟಾಗಿ ನಿಂತಿದ್ದೇವೆ. ಇಂತಹ ಅನುಭವವನ್ನು ಎದುರಿಸಿದ ಪ್ರತಿಯೊಬ್ಬ ಮಹಿಳೆಯೊಂದಿಗೂ ನಾವು ಐಕ್ಯತೆಯಲ್ಲಿ ನಿಂತಿದ್ದೇವೆ. ಗೌರವವನ್ನು ಬೇಡುವ ನಮ್ಮ ಧ್ವನಿ ಮುಂದುವರೆಯುತ್ತದೆ ಎಂದು ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.

ಅಭಿಯಾನ ಆರಂಭಿಸಿರುವ ಸಪ್ತಮಿ ಗೌಡ ಅವರ ಜೊತೆಗೆ ಚಿತ್ರರಂಗದ ನಟಿಯರೆಲ್ಲಾ ಒಂದಾಗಿ ಪ್ರತಿಭಟಿಸುವ ನಿರ್ಧಾರ ಮಾಡಿದ್ದಾರೆ. ನಟಿಯರಾದ ರಮ್ಯಾ, ರಕ್ಷಿತಾ ಪ್ರೇಮ್, ನಟ ಯುವ ರಾಜ್‌ಕುಮಾರ್ ಸೇರಿ ಹಲವರು ಪೋಸ್ಟ್ ಹಂಚಿಕೊಂಡು ಸಪ್ತಮಿ ಗೌಡ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ನಟಿ ಸಪ್ತಮಿ ಗೌಡ ಹಂಚಿಕೊಂಡ ಪೋಸ್ಟ್ ಅನ್ನು ನಟಿಯರಾದ ಬೃಂದಾ ಆಚಾರ್ಯ, ಆಶಿಕಾ ರಂಗನಾಥ್, ರಿತನ್ಯಾ ವಿಜಯ್, ರಮ್ಯಾ, ರಕ್ಷಿತಾ ಪ್ರೇಮ್, ಸಂಜನಾ ಆನಂದ್, ಚೈತ್ರಾ ಜೈ ಆಚಾರ್, ವಾಸುಕಿ ವೈಭವ್, ನಟಿ ಅನುಪಮಾ ಗೌಡ, ನಟ ಯುವರಾಜ್ ಕುಮಾರ್ ಅವರು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡು ಅಂಥವರ ವಿರುದ್ಧ ಕಿಡಿ ಕಾರುತ್ತಿದ್ದಾರೆ.





