ಮಹತ್ತರ ಬೆಳವಣಿಗೆಯೊಂದರಲ್ಲಿ ನಗರ ಪೊಲೀಸರಿಗೆ ಭಾರೀ ಹಿನ್ನಡೆಯಾಗಿದೆ. 2019ರಲ್ಲಿ ನಡೆದಿದ್ದ ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿಗಳ ಸಮಯದಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಭಾರತೀಯ ದಂಡ ಸಂಹಿತೆಯ section 420 ಪ್ರಕಾರ ಅಪರಾಧವಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪ್ರಕರಣದ ಸಂಬಂಧ ನಾಲ್ವರ ವಿರುದ್ದದ chargesheet ಹೈಕೋರ್ಟ್ ರದ್ದುಗೊಳಿಸಿದೆ.
ಕ್ರಿಕೆಟಿಗರಾದ ಅರ್ಬಾಜ್ ಖಾಜಿ, ಸಿ.ಎಂ.ಗೌತಮ್, ಬೆಳಗಾವಿ ಪ್ಯಾಂಥರ್ಸ್ ಮಾಲೀಕನಾದ ಅಲಿ ಅಶ್ವಾಕ್ ಘಾಜಿಯಾಭಾದ್ ಮೂಲದ ಬುಕ್ಕಿ ಎನ್ನಲಾದ ಅಮಿತ್ ಮಾವಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಅವರಿದ್ದ ಏಕಸದಸ್ಯ ಪೀಠ ಒಬ್ಬ ಆಟಗಾರ ಮ್ಯಾಚ್ ಫಿಕ್ಸಿಂಗ್ನಲ್ಲಿ ತೊಡಗಿದರೆ ಆತ ಆ ಕ್ರೀಡೆಯನ್ನು ಪ್ರೋತ್ಸಾಹಿಸುವವರಿಗೆ ಮೋಸ ಮಾಡಿದ್ದಾನೆಂಬ ಭಾವನೆ ಮೂಡುವುದು ಸಹಜ. ಆದರೆ ಈ ಸಾಮಾನ್ಯ ಭಾವನೆಯು ದಂಡ ಸಂಹಿತೆಯ ಅಡಿಯ ( 420) ಅಪರಾಧಕ್ಕೆ ಕಾರಣವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಮುಂದುವರೆದು, ಮ್ಯಾಚ್ ಫಿಕ್ಸಿಂಗ್ ಒಬ್ಬ ಆಟಗಾರನ ಅಪ್ರಾಮಾಣಿಕತೆ, ಅಶಿಸ್ತು ಹಾಗೂ ಆತನ ಮಾನಸಿಕ ದುರ್ಬಲತೆಯನ್ನು ಸೂಚಿಸುತ್ತದೆ. ಇದರ ವಿರುದ್ದ ಕ್ರಮ ಜರುಗಿಸಲು ಬಿಸಿಸಿಐಗೆ ಸಂಪೂರ್ಣ ಅಧಿಕಾರವಿರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಆದರೆ, ಐಪಿಸಿ ಸೆಕ್ಷನ್ 420ರ ಅಡಿಯಲ್ಲಿ ಶಿಕ್ಷರ್ಹಾ ಅಪರಾಧ ಎಂಬ ಆಧಾರದ ಮೇಲೆ ಏಫ್ಐಆರ್ಅನ್ನು ದಾಖಲಿಸಿರುವುದನ್ನು ಕೋರ್ಟ್ ಅನುಮತಿಸುವುದಿಲ್ಲ ಎಂದು ನ್ಯಾಯಾಲಯ ಸಿಸಿಬಿಗೆ ಚಾಟಿ ಬೀಸಿದೆ.
ಈ ಕುರಿತು ವಾದ ಮಂಡಿಸಿದ ಸಿಸಿಬಿ ಪರ ವಕೀಲರು ಮ್ಯಾಚ್ ಫಕ್ಸಿಂಗ್ ಮೋಸಕ್ಕೆ ಸಮಾನಾವಾಗಿದೆ ಆದ್ದರಿಂದ ಐಪಿಸಿ ಸೆಕ್ಷನ್ 420ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಮ್ಮ ವಾದವನ್ನು ಮಂಡಿಸಿದರು. ಐಪಿಸಿ ಸೆಕ್ಷನ್ 420ರ ಅಡಿಯಲ್ಲಿ ಪ್ರಕರಣ ದಾಖಲಿಸುವ ಮೊದಲು ಅಗತ್ಯ ಇರಬೇಕಾದ ಅಂಶಗಳೆಂದರೆ ವಂಚನೆ, ಯಾವುದೆ ವಸ್ತುವನ್ನು ತಲುಪಿಸುವ ಸಮಯದಲ್ಲಿ ವ್ಯಕ್ತಿ ತೋರುವ ಅಪ್ರಾಮಾಣಿಕತೆ ಅಥವಾ ಮೌಲ್ಯಯುತವಾದ ವಸ್ತುವಿಗೆ ಭದ್ರತೆ ಒದಗಿಸುವಲ್ಲಿ ವಿಫಲ ಅಥವಾ ಅದನ್ನು ಸಂಪೂರ್ಣವಾಗಿ ನಾಶ ಮಾಡುವುದು ಐಪಿಸಿ ಸೆಕ್ಷನ್ 420ರ ಅಡಿಯಲ್ಲಿ ಬರುತ್ತದೆ ಎಂದು ನ್ಯಾಯಮೂರ್ತಿಗಳು ಸಿಸಿಬಿ ಪರ ವಕೀಲರಿಗೆ ಮನವರಿಕೆ ಮಾಡಿದ್ದಾರೆ.
ಯಾವುದೇ ಪ್ರಚೋದನೆ ಇಲ್ಲ
ಮುಂದುವರೆದು ವಾದ ಮಂಡಿಸಿದ ಸಿಸಿಬಿ ಪರ ವಕೀಲರು ಕ್ರಿಕೆಟ್ ಪ್ರೇಮಿಗಳು ತಮ್ಮ ಬಳಿ ಇರುವ ದುಡ್ಡನ್ನು ಕೊಟ್ಟು ಟಿಕೆಟ್ ಖರೀದಿಸಿ ಪಂದ್ಯವನ್ನ ವೀಕ್ಷಿಸುತ್ತಾರೆ ಈ ಮೂಲಕ ಜನರಿಗೆ ಟಿಕೆಟ್ ಖರೀದಿಸಲು ಸ್ಪೂರ್ತಿ ನೀಡಿದಂತಾಗುತ್ತದೆ ಎಂಬ ವಾದವನ್ನು ಒಪ್ಪದ ಪೀಠ, ಪ್ರೇಕ್ಷಕರು ನೀಡುವ ಹಣವು ಒಂದು ಮೌಲ್ಯಯುತವಾದ ವಸ್ತು ಆದರೂ, ಜನ ಟಿಕೆಟ್ ಖರೀದಿಸಲು ಪ್ರೇರೆಪಿಸಲ್ಪಟ್ಟಿರುತ್ತಾರೆ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದೆ.
ಜನರು ಅಲ್ಲಿ ನ್ಯಾಯಯೋಜಿತ ಆಟಕ್ಕೆ ಸಾಕ್ಷಿಯಾಗಲಿದ್ದೇವೆ ಎಂಬ ಭಾವನೆಯಿಂದ ಟಿಕೆಟ್ ಖರೀದಿಸಿ ಪಂದ್ಯವನ್ನ ವೀಕ್ಷಿಸುತ್ತಾರೆ. ಆದ್ದರಿಂದ ಇಲ್ಲಿ ಪ್ರಚೋದನೆಯ ಪ್ರಶ್ನೆ ಉದ್ಬವಿಸುವುದಿಲ್ಲ ಎಂದು ಹೇಳಿದೆ.
ಕೆಪಿಎಲ್ ಪಂದ್ಯಾವಳಿಗಳು ನಡೆದ ಸಂದರ್ಭದಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ಪ್ರಕಾರ ಗೇಮಿಂಗ್ ಮೇಲೆ ಬೆಟ್ಟಿಂಗ್ ಅಪರಾಧವೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ನಿರಾಕರಿಸಿದೆ. ಕರ್ನಾಟಕ ಪೊಲೀಸ್ ಕಾಯ್ದೆ 27 ಹೇಳುವ ಪ್ರಕಾರ ಅವಕಾಶದ ಆಟವು ಯಾವುದೇ ಅಥ್ಲೆಟಿಕ್ ಹಾಗು ಕ್ರೀಡೆಯನ್ನು ಒಳಗೊಂಡಿಲ್ಲ. ಒಂದು ವೇಳೆ ಅದು ಕಂಡು ಬಂದರೂ ಪೊಲೀಸ್ ಕಾಯ್ದೆ 27ರ ಅಡಿಯಲ್ಲಿ ತರಲು ಸಾಧ್ಯವಿಲ್ಲ ಎಂದು ಹೇಳಿದೆ.
ಒಂದು ವೇಳೆ ಸಲ್ಲಿಸಿರುವ ದೋಷಾರೋಪ ಪಟ್ಟಿಯನ್ನು ನಿಜವೆಂದೂ ಪರಿಗಣಿಸದರೂ ಸಹ ಅದು ಅಪರಾಧವಾಗುವುದಿಲ್ಲ ಎಂದು ಹೇಳುತ್ತಾ ಅರ್ಜಿದಾರರ ವಿರುದ್ದ ಸಲ್ಲಿಸಿದ್ದ ಮೊಕದ್ದಮೆಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಅವರಿದ್ದ ಏಕಸದಸ್ಯ ಪೀಠ ಪ್ರಕರಣವನ್ನು ರದ್ದುಗೊಳಿಸುತ್ತಿರುವುದಾಗಿ ಬೆಂಗಳೂರು ನಗರ ಪೊಲೀಸರಿಗೆ ಸ್ಪಷ್ಟಪಡಿಸಿದೆ.