ರಾಜ್ಯದಲ್ಲಿ ದಕ್ಷ ಐಎಎಸ್ ಅಧಿಕಾರಿಯೆಂದು ಹೆಸರು ಪಡೆದುಕೊಂಡಿದ್ದ ಪೊನ್ನುರಾಜ್ ಅವರ ಮೇಲೆ ಈಗ ಭ್ರಷ್ಟಾಚಾರದ ಆರೋಪ ಮಾಡಲಾಗಿದೆ. ಬಳ್ಳಾರಿ ರಾಯಚೂರು ಹಾಗೂ ಯರಮರಸ್ ವಿದ್ಯುತ್ ಸ್ಥಾವರಗಳಲ್ಲಿ ಗ್ಯಾಸ್ ಡಿಸಲ್ಫರೈಸೇಷನ್ ಘಟಕವನ್ನು ತೆರೆಯುವ ವಿಚಾರದಲ್ಲಿ, ಖಾಸಗೀ ಕಂಪೆನಿಗಳಿಗೆ ಟೆಂಡರ್ ನೀಡಲು 150 ಕೋಟಿ ರೂ. ಅವ್ಯವಹಾರ ನಡೆಸಿದ ಆರೋಪವನ್ನು ಈಗ ಪೊನ್ನುರಾಜ್ ಅವರು ಎದುರಿಸುತ್ತಿದ್ದಾರೆ.
2,400 ಕೋಟಿ ರೂ. ಮೊತ್ತದ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ಒಟ್ಟು ನಾಲ್ಕು ಕಂಪೆನಿಗಳು ಭಾಗವಹಿಸಿದ್ದು, ಅವುಗಳಲ್ಲಿ ಎರಡು ಸರಕಾರಿ ಸ್ವಾಮ್ಯದ ಕಂಪೆನಿಗಳಾದರೆ ಎರಡು ಖಾಸಗಿ ಕಂಪೆನಿಗಳು. ಸರ್ಕಾರಿ ಸ್ವಾಮ್ಯದ Bharat Heavy Electricals Ltd (BHEL) ಹಾಗೂ Bridge and Roof Co. Ltd (BRCL) ಕಂಪೆನಿಗಳು, ಟೆಂಡರ್ ಪಡೆಯಲು ಅರ್ಹರಾಗಿದ್ದರೂ ಕ್ಷುಲ್ಲಕ ಕಾರಣ ನೀಡಿ ಅವುಗಳಿಗೆ ಟೆಂಡರ್ ನಿರಾಕರಿಸಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳಕ್ಕೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಖಾಸಗೀ ಕಂಪೆನಿಯಾದ ಶಾಪುರ್ಜೀ & ಪಲ್ಲೋನ್‌ಜೀಗೆ ರಾಜ್ಯ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಪೊನ್ನುರಾಜ್ ಅವರು ಕಮಿಷನ್‌ನ ಆಸೆಯಿಂದ ಟೆಂಡರ್ ನೀಡಿದ್ದಾರೆ. ಹಾಗೂ ಆ ಟೆಂಡರ್‌ಗೆ ಮಾನ್ಯ ಮುಖ್ಯಮಂತ್ರಿಗಳ ಸಹಿಯನ್ನು ಪಡೆಯಲು ಶತ ಪ್ರಯತ್ನ ನಡೆಸಲಾಗುತ್ತಿದೆ.
ಏನಿದು ಗ್ಯಾಸ್ ಡಿಸಲ್ಫರೈಸೇಷನ್ ಘಟಕ?
ಉಷ್ಣ ವಿದ್ಯುತ್ ಸ್ಥಾವರಗಳಿಂದ ಹೊರಸೂಸುವ ರಾಸಾಯನಿಕಗಳ ಕುರಿತು ಕೇಂದ್ರ ಸರ್ಕಾರ ನಡೆಸಿದ ಅಧ್ಯಯನದಲ್ಲಿ, ಕರ್ನಾಟಕದಲ್ಲಿರುವ ಮೂರು ವಿದ್ಯುತ್ ಸ್ಥಾವರಗಳು ಅತೀ ಹೆಚ್ಚು ಮಾಲಿನ್ಯಕಾರಿ ರಾಸಾಯನಿಕಗಳನ್ನು ಹೊರಸೂಸುತ್ತಿವೆ ಎಂಬ ಅಂಶ ಬೆಳಕಿಗೆ ಬಂತು. ಈ ನಿಟ್ಟಿನಲ್ಲಿ 2015ರಲ್ಲಿ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದ ಕೇಂದ್ರ, 2020ರ ಡಿಸೆಂಬರ್ ಒಳಗಾಗಿ ರಾಸಾಯನಿಕಗಳನ್ನು ವಿಲೀನಗೊಳಿಸುವ ಘಟಕವನ್ನು ಸ್ಥಾಪಿಸಿ, ಅದರಿಂದ ಮಾಲಿನ್ಯವನ್ನು ತಡೆಗಟ್ಟುವಂತೆ ಹೇಳಿತು.
ಈ ನಿಟ್ಟಿನಲ್ಲಿ ಶೀಘ್ರವೇ ಕಾರ್ಯಪ್ರವೃತ್ತರಾಗಬೇಕಿದ್ದ ರಾಜ್ಯ ಸರ್ಕಾರ ಮತ್ತು ರಾಜ್ಯ ವಿದ್ಯುತ್ ನಿಗಮ, ತಲೆ ಕೆಡಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಈ ಮಧ್ಯೆ ರಾಜ್ಯ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಐಎಎಸ್ ಅಧಿಕಾರಿ ಪೊನ್ನುರಾಜ್ ಅಧಿಕಾರ ವಹಿಸಿಕೊಂಡರು. ಯಾವಾಗ 2018ರಲ್ಲಿ ಕೇಂದ್ರವು ರಾಜ್ಯ ಸರ್ಕಾರದಿಂದ ವರದಿ ಕೇಳಿತೋ, ಆ ಕ್ಷಣ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ರಾಜ್ಯ ವಿದ್ಯುತ್ ನಿಗಮಕ್ಕೆ ಟೆಂಡರ್ ಅನ್ನು ಜಾರಿ ಮಾಡಲು ಹೇಳಿತು.
2020ರ ಒಳಗಾಗಿ ಅನಿಲ ಹೊರಸೂಸುವ ಚಿಮಿಣಿಗಳನ್ನು ಆಧುನೀಕರಣಗೊಳಿಸುವ ಯೋಜನೆಯನ್ನು ಸಂಪೂರ್ಣಗೊಳಿಸಬೇಕಿತ್ತಾದರೂ, ಇದರ ಟೆಂಡರ್ ಕರೆದದ್ದು ಮಾತ್ರ ಮಾರ್ಚ್ 9, 2019ರಂದು. ಬಹಳ ಕಠಿಣವಾದ ನಿಯಮಗಳನ್ನು ರೂಪಿಸಿ ಟೆಂಡರ್ ಕರೆದ ಕಾರಣ, ಬಹಳಷ್ಟು ಕಂಪೆನಿಗಳು ಟೆಂಡರ್ ಪ್ರಕ್ರಿಯೆನಲ್ಲಿ ಭಾಗಿಯಾಗಲು ಹಿಂದೇಟು ಹಾಕಿದವು. ಇನ್ನು ತುರಾತುರಿಯಲ್ಲಿ ಟೆಂಡರ್ ಕರೆದ ಕಾರಣ ಬಹಳಷ್ಟು ಕಂಪೆನಿಗಳನ್ನು ತಲುಪಲು ಕೆಪಿಸಿಎಲ್‌ನಿಂದ ಸಾಧ್ಯವಾಗಲೂ ಇಲ್ಲ.
ಈ ಸಮಯದಲ್ಲಿ ಕೆಪಿಸಿಎಲ್ ಅಧಿಕಾರಗಳ ಮೇಲೆ ಹರಿಹಾಯ್ದ ಪೊನ್ನುರಾಜ್ ʼಬಿಡ್ಡಿಂಗ್‌ನಲ್ಲಿ ಎರಡು ಕಂಪೆನಿಗಳು ಇದ್ರೆ ಸಾಕು ರೀ… ಅವುಗಳನ್ನು ಹೇಗೆ ರೆಡಿ ಮಾಡಬೇಕೆಂದು ನನಗೆ ಗೊತ್ತುʼ ಎಂದು ಹೇಳಿದ್ದಾರೆಂದು ಕೆಪಿಸಿಎಲ್ ಮೂಲಗಳು ತಿಳಿಸಿವೆ.
ಇನ್ನು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಇನ್ನೊಂದು ಖಾಸಗಿ ಕಂಪೆನಿಯಾದ Edacನ ತಾಂತ್ರಿಕ ಪಾಲುದಾರರಾಗಿರುವ Mitsubishi ಕಂಪೆನಿಯು ಕೂಡಾ, Edacನ ಪರ ನಿಲ್ಲದೇ, BHEL ಈ ಟೆಂಡರ್ ಪಡೆಯಲು ಅರ್ಹವಾದ ಕಂಪೆನಿ ಎಂದ ಕಾರಣಕ್ಕೆ Edac ಅನ್ನು ಕೈಬಿಡಲಾಗಿತ್ತು. ಆದರೆ, ಶಾಪುರ್ಜೀ & ಪಲ್ಲೋನ್‌ಜೀ ಕಂಪೆನಿಯು ಅನರ್ಹವೆಂದು ಕಂಡು ಬಂದರೂ, ಅದೇ ಕಂಪೆನಿಗೆ ಟೆಂಡರ್ ನೀಡಿರುವುದು, ಅವ್ಯವಹಾರದ ಅನುಮಾನವನ್ನು ದಟ್ಟವಾಗಿಸಿದೆ.
ಯಾವುದೇ ಅನುಭವವಿಲ್ಲದ, ಹಾಗೂ ಈಗಾಗಲೇ ಬಿಬಿಎಂಪಿಯಿಂದ ಪಡೆದ ಟೆಂಡರ್ ಒಂದನ್ನು ರದ್ದುಗೊಳಿಸುವಷ್ಟರ ಮಟ್ಟಿಗೆ ʼಪರಿಣಾಮಕಾರಿʼ(?)ಯಾಗಿ ಕಾರ್ಯ ನಿರ್ವಹಿಸಿದ ಶಾಪುರ್ಜೀ & ಪಲ್ಲೋನ್‌ಜೀಗೆ ಈ ಟೆಂಡರ್ ನೀಡಿರುವುದು ನಿಜಕ್ಕೂ ಆಶ್ಚರ್ಯ ಹುಟ್ಟಿಸಿದೆ.
ಲಾಭ – ನಷ್ಟದ ಲೆಕ್ಕಾಚಾರ:
ಒಂದು ವೇಳೆ, ಡಿಸೆಂಬರ್ 2020ರ ಒಳಗಾಗಿ ಆಧುನಿಕ ಚಿಮಿಣಿಗಳನ್ನು ಅಳವಡಿಸದೇ ಇದ್ದಲ್ಲಿ, ಪ್ರತೀ ವರ್ಷ ರಾಜ್ಯದ ಬೊಕ್ಕಸಕ್ಕೆ 1500 ಕೋಟಿ ರೂ. ನಷ್ಟವಾಗುವ ಅಂದಾಜಿದೆ. ಇಷ್ಟು ಮಾತ್ರವಲ್ಲದೇ, ಪರಿಸರಕ್ಕೆ ಹಾನಿಯುಂಟಾಗುವ ರಾಸಾಯನಿಕಗಳನ್ನು ಹೊರಸೂಸಿದಲ್ಲಿ, ರಾಜ್ಯದ ಅತೀದೊಡ್ಡ ಮೂರು ಉಷ್ಣ ವಿದ್ಯುತ್ ಸ್ಥಾವರಗಳು ಮುಚ್ಚಬೇಕಾಗುವ ಪರಿಸ್ಥಿತಿಯೂ ಎದುರಾಗಬಹುದು. ಹೀಗಾದಲ್ಲಿ, ರಾಜ್ಯದಲ್ಲಿ ವಿದ್ಯುತ್ ಪೂರೈಕೆಯನ್ನು ನಿಭಾಯಿಸಲು ನೆರೆ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡಬೇಕಾಗುತ್ತದೆ. ಇದು ಇನ್ನೂ ಹೆಚ್ಚಿನ ಹೊರೆಯನ್ನು ಬೊಕ್ಕಸದ ಮೇಲೆ ಬೀಳುವಂತೆ ಮಾಡುತ್ತದೆ.
ಯಾವುದೇ ಪೂರ್ವಾನುಭವ ಇಲ್ಲದ ಕಂಪೆನಿಯೊಂದಕ್ಕೆ 2400 ಕೋಟಿ ರೂ.ನಂತಹ ದೊಡ್ಡ ಮಟ್ಟದ ಯೋಜನೆಯನ್ನು ನೀಡುವುದು ಎಷ್ಟು ಸರಿ ಎಂಬ ಕುರಿತು ಕೂಡಾ ಪ್ರಶ್ನೆ ಎದ್ದಿದೆ. ಈವರೆಗೆ, ವಿದ್ಯುತ್ ಸ್ಥಾವರಗಳ ಸ್ಥಳ ಪರಿಶೀಲನೆ ಮಾಡದ ಶಾಪುರ್ಜೀ & ಪಲ್ಲೋನ್‌ಜೀ ಕಂಪೆನಿಯು, ನಿಗದಿತ ಸಮಯದೊಳಗೆ ಯೋಜನೆಯನ್ನು ಪೂರ್ಣಗೊಳಿಸುತ್ತದೆಯೇ? ಎಂಬ ಪ್ರಶ್ನೆಯೂ ಎದ್ದಿದೆ.
ಇನ್ನೂ, ಈ ಟೆಂಡರ್ ಪ್ರಕ್ರಿಯೆಯು ಪಾರದರ್ಶಕವಾಗಿಲ್ಲ ಎಂಬುದನ್ನು ಉಲ್ಲೇಖಿಸಿ ಹಾಗೂ ಟೆಂಡರ್ ಪ್ರಕ್ರಿಯೆಯಿಂದ ಸರ್ಕಾರಿ ಸ್ವಾಮ್ಯದ ಹಾಗೂ ಅನುಭವಿ ಕಂಪೆನಿಗಳನ್ನು ಕೈಬಿಟ್ಟದ್ದನ್ನು ಮರುಪರಿಶೀಲಿಸಬೇಕೆಂದು BHEL ಹಾಗೂ BRCL ಈಗಾಗಲೇ, ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದೆ.
ಶಾಪುರ್ಜೀ & ಪಲ್ಲೋನ್‌ಜೀ ಕಂಪೆನಿಗೆ ಯಾವುದೇ ರೀತಿಯ ಅರ್ಹತೆ ಇಲ್ಲದಿದ್ದರೂ, ಯಾವ ಕಾರಣಕ್ಕಾಗಿ ಟೆಂಡರ್ ನೀಡಲಾಗಿದೆ ಎಂಬ ಪ್ರಶ್ನೆಯ ಹಿಂದೆ ಕಮಿಷನ್ ಹಣದ ವಾಸನೆಯಿದೆ. ಸುಮಾರು 8% ಕಮಿಷನ್‌ಗೆ ಈ ʼಡೀಲ್ʼ ಕುದುರಿಸಲಾಗಿತ್ತಾದರೂ, ಕೊನೆಗೂ ಎರಡೂ ಕಡೆಯವರು ಸೇರಿ 150 ಕೋಟಿ ರೂ. ಗೆ ಒಪ್ಪಿಕೊಂಡಿದ್ದಾರೆ, ಎಂಬ ಅಂಶವನ್ನು ಮೂಲಗಳು ಬಹಿರಂಗ ಪಡಿಸಿವೆ.
ಅವ್ಯವಹಾರದಲ್ಲಿ ನೆರವು ನೀಡದವರಿಗೆ ಟ್ರಾನ್ಸ್‌ಫರ್ ಶಿಕ್ಷೆ:
ಎಲ್ಲದಕ್ಕಿಂತಲೂ ಮುಖ್ಯವಾಗಿ ಶಾಪುರ್ಜೀ & ಪಲ್ಲೋನ್‌ಜೀ ಕಂಪೆನಿಗೆ ಟೆಂಡರ್ ಮಂಜೂರು ಮಾಡಲು ಸಹಿ ಹಾಕುವುದಿಲ್ಲ ಎಂದು ಹೇಳಿದ ನಿವೃತ್ತಿ ಅಂಚಿನಲ್ಲಿರುವ ಕೆಪಿಸಿಎಲ್ ಇಂಜಿನಿಯರ್ ಕೆ ಶ್ರೀನಿವಾಸ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವ್ಯವಹಾರದಲ್ಲಿ ಭಾಗಿಯಾಗಲು ಇಚ್ಚಿಸದೇ ಇರುವುದಕ್ಕೆ ಹಾಗೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದಕ್ಕೆ ಸಿಕ್ಕ ಬಹುಮಾನವಿದು.
ಈ ವರ್ಗಾವಣೆಯ ವಿರುದ್ದ ಕೋರ್ಟ್ ಮೆಟ್ಟಿಲೇರಿದ್ದ ಶ್ರೀನಿವಾಸ್, ವರ್ಗಾವಣೆ ಆದೇಶಕ್ಕೆ ತಡೆಯನ್ನು ತರುವಲ್ಲಿ ಸಫಲರಾಗಿದ್ದಾರೆ. ಆದರೆ, ಕೆಪಿಸಿಎಲ್‌ನ ತಾಂತ್ರಿಕ ಸಮಿತಿಯಿಂದ ಇವರನ್ನು ದೂರವೇ ಉಳಿಸಿ, ವಾಹನ ನಿರ್ವಹಣಾ ವಿಭಾಗದಲ್ಲಿ ಕೆಲಸ ಮಾಡುವಂತೆ ತಿಳಿಸಲಾಗಿದೆ.
ಇನ್ನೂ ಆಶ್ಚರ್ಯಕರ ವಿಷಯವೆಂದರೆ, ಸಂಪೂರ್ಣ ದೇಶವೇ ಲಾಕ್‌ಡೌನ್‌ನಿಂದ ಕಂಗೆಟ್ಟಿದ್ದರೆ, ಇದೇ ಸದಾವಕಾಶವೆಂದು ತಿಳಿದ ಕೆಪಿಸಿಎಲ್, ತಾಂತ್ರಿಕ ಸಮಿತಿಯ ಸಭೆಯನ್ನು ಕರೆದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದೆ.
ಈ ಕುರಿತು ʼಪ್ರತಿಧ್ವನಿʼಯು ಪೊನ್ನುರಾಜ್ ಅವರನ್ನು ಸಂಪರ್ಕಿಸಿದಾಗ, “ಎಸಿಬಿಯಲ್ಲಿ ದೂರು ದಾಖಲಾಗಿರುವ ಕುರಿತು ಯಾವುದೇ ಮಾಹಿತಿಯಿಲ್ಲ” ಎಂದಿದ್ದಾರೆ.
ಒಟ್ಟಿನಲ್ಲಿ, ಕಮಿಷನ್ ಆಸೆಗೆ ಬಲಿಬಿದ್ದು ರಾಜ್ಯ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ.ಗಳ ನಷ್ಟ ಉಂಟಾಗುವ ಸಂದರ್ಭ ಎದುರಾಗಿರುವುದಂತೂ ಸತ್ಯ. ಈ ನಿಟ್ಟಿನಲ್ಲಿ, ಮುಖ್ಯಮಂತ್ರಿಗಳು ಹಾಗೂ ಎಸಿಬಿ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾದಲ್ಲಿ ಮುಂಬರುವ ಆರ್ಥಿಕ ಅಪಾಯವನ್ನು ತಪ್ಪಿಸಬಹುದಾಗಿದೆ.