ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ಗರಂ ಆಗಿರುವ ಸಂಸದ ಕರಡಿ ಸಂಗಣ್ಣ ಬಿಜೆಪಿಗೆ ಗುಡ್ ಬೈ ಹೇಳೋದು ಪಕ್ಕಾ ಎನ್ನಲಾಗ್ತಿದೆ. 2011ರಲ್ಲಿ ಬಿಜೆಪಿ ಸೇರಿದ್ದ ಸಂಗಣ್ಣ ಶಾಸಕರಾಗಿ ಆಯ್ಕೆಯಾಗಿದ್ದರು. ಆ ಬಳಿಕ 2014, 2019ರಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು. ಈ ಬಾರಿ ಟಿಕೆಟ್ ಸಿಗದ ಕಾರಣಕ್ಕೆ ಸಂಗಣ್ಣ, ಕೆ.ಎಸ್ ಈಶ್ವರಪ್ಪ ಹಾದಿ ಹಿಡಿಯುತ್ತಾರಾ ಅನ್ನೋ ಶಂಕೆ ವ್ಯಕ್ತವಾಗ್ತಿದೆ. ಇಂದು ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ನಿರ್ಧಾರ ಘೋಷಣೆ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ ಕರಡಿ ಸಂಗಣ್ಣ.

ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಕರಡಿ ಸಂಗಣ್ಣ ತಯಾರಿ ನಡೆಸಿದ್ದು, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ರೆ, ಬಿಜೆಪಿಗೆ ಹೊಡೆತ ಬೀಳುವ ಸಾಧ್ಯತೆಗಳು ಹೆಚ್ಚಾಗಿವೆ. ಕೊಪ್ಪಳದ ಹಾಲಿ ಸಂಸದರಾದ ಕರಡಿ ಸಂಗಣ್ಣ, ಕೊಪ್ಪಳದ ಖಾಸಗಿ ಕಲ್ಯಾಣಮಂಟಪದಲ್ಲಿ ಕಾರ್ಯಕರ್ತರ ಸಭೆ ಕರೆದಿದ್ದಾರೆ. ಸ್ವಾಭಿಮಾನದ ಹೆಸರಿನಲ್ಲಿ ಸಭೆ ಕರೆದಿದ್ದು, ಕೊಪ್ಪಳ ಲೋಕಸಭಾ ಕ್ಷೇತ್ರದ ಅಭಿಮಾನಿಗಳ ಸಭೆ ಬಳಿಕ ನಿರ್ಧಾರ ಪ್ರಕಟ ಮಾಡಲಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಲೋಕಸಭಾ ಕ್ಷೇತ್ರದ ಟಿಕೆಟ್ ರಾಜಶೇಖರ ಹಿಟ್ನಾಳರಿಗೆ ಫೈನಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಈಗ ಕಾಂಗ್ರೆಸ್ಸಿಗೆ ಹೋಗುವ ಸಾಧ್ಯತೆಯೂ ಕ್ಷೀಣಿಸಿದೆ. ಹೀಗಾಗಿ ಬಿಜೆಪಿ ಹೈಕಮಾಂಡಿಗೆ ಸಡ್ಡು ಹೊಡೆದು ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದಾರೆ ಸಂಸದ ಸಂಗಣ್ಣ ಕರಡಿ. ಇಂದು ಪ್ರಕಟವಾಗುವ ನಿರ್ಧಾರ ಬಿಜೆಪಿಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದ್ದು, ಒಂದು ವೇಳೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ರೆ, ಮನವೊಲಿಸುವ ಬಗ್ಗೆ ಬಿಜೆಪಿಯಲ್ಲಿ ಚರ್ಚೆಗಳು ಶುರುವಾಗಿದೆ.
