ಕೋಲ್ಕತ್ತಾ :ಏ,೦7: ಐಪಿಎಲ್ನ 9ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 81 ರನ್‌ಗಳಿಂದ ಸೋಲಿಸಿತು. ಟಾಸ್ ಗೆದ್ದ RCB ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಇದಾದ ಬಳಿಕ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 204 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಆರ್‌ಸಿಬಿ, 123 ರನ್‌ಗಳಿಗೆ ಸರ್ವಪತನ ಕಂಡಿತು.
ಆರ್ಸಿಬಿಯನ್ನು ಸೋಲಿಸಿದ ಕೆಕೆಆರ್, ಈ ಟೂರ್ನಿಯಲ್ಲಿ ಚೊಚ್ಚಲ ಗೆಲುವು ದಾಖಲಿಸಿತು. ಶ್ರೇಯಸ್ ಅಯ್ಯರ್ ಅಲಭ್ಯತೆಯಲ್ಲಿ ನಾಯಕತ್ವ ಅಲಂಕರಿಸಿದ ನಿತೀಶ್ ರಾಣಾ ಅವರಿಗೂ ಇದು ಮೊದಲ ಗೆಲುವು ಆಗಿದೆ. ಅಲ್ಲದೆ ಈ ಪಂದ್ಯದಲ್ಲಿ ಪ್ರಮುಖ ದಾಖಲೆಗಳು ನಿರ್ಮಾಣವಾಗಿವೆ. IPLನ 9ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಕೆಕೆಆರ್ ತಂಡದ ಸ್ಪಿನ್ನರ್ ಸುನಿಲ್ ನರೈನ್ ವಿಶೇಷ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಆರ್‌ಸಿಬಿ ವಿರುದ್ಧದ ಕಣಕ್ಕಿಳಿಯುವ ಮೂಲಕ ಕೆಕೆಆರ್ ಪರ 150 ಪಂದ್ಯಗಳನ್ನಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ಈ ಪಂದ್ಯದಲ್ಲಿ 2 ವಿಕೆಟ್ ಪಡೆದು ಮಿಂಚಿದರು.
ಆರ್‌ಸಿಬಿ ವಿರುದ್ಧ ಕೆಕೆಆರ್ ಸ್ಪಿನ್ನರ್ಗಳು 9 ವಿಕೆಟ್ ಕಬಳಿಸಿ ವಿಶೇಷ ದಾಖಲೆ ಬರೆದಿದ್ದಾರೆ. ಆ ಮೂಲಕ ಐಪಿಎಲ್ನ ಇನ್ನಿಂಗ್ಸ್ವೊಂದರಲ್ಲಿ ಸ್ಪಿನ್ನರ್ಗಳು ಹೆಚ್ಚು ವಿಕೆಟ್ ಉರುಳಿಸಿದ ದಾಖಲೆ ನಿರ್ಮಾಣ ಮಾಡಿದ್ದಾರೆ. ಕೆಕೆಆರ್ ಈ ವಿಶೇಷ ದಾಖಲೆಗೆ ಪಾತ್ರವಾದ ಮೊದಲ ತಂಡ ಎನಿಸಿದೆ. ಕೆಕೆಆರ್ ಪರ ವರುಣ್ ಚಕ್ರವರ್ತಿ 4 ವಿಕೆಟ್, ಸುಯೇಶ್ ಶರ್ಮಾ 3 ವಿಕೆಟ್, ಸುನಿಲ್ ನರೈನ್ 2 ವಿಕೆಟ್, ಶಾರ್ದೂಲ್ ಠಾಕೂರ್ 1 ವಿಕೆಟ್ ಪಡೆದು ಮಿಂಚಿದರು. ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಪಿನ್ನರ್ಗಳು ಇನ್ನಿಂಗ್ಸ್ವೊಂದರಲ್ಲಿ ಒಟ್ಟು 3 ಬಾರಿ 8 ವಿಕೆಟ್ ಪಡೆದಿದ್ದು ಇದುವರೆಗಿನ ದಾಖಲೆಯಾಗಿತ್ತು.
7ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದು ಅದ್ಭುತ ಸೃಷ್ಟಿಸಿದ ಶಾರ್ದೂಲ್ ಠಾಕೂರ್, ಮಹತ್ವದ ದಾಖಲೆಯನ್ನು ಬರೆದರು. 2023ರ ಐಪಿಎಲ್ನಲ್ಲಿ ವೇಗದ ಅರ್ಧಶತಕ ದಾಖಲಿಸಿದರು, 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ, ಜೋಸ್ ಬಟ್ಲರ್ ದಾಖಲೆಯನ್ನು ಸರಿಗಟ್ಟಿದರು. KKR ಪರ 7ನೇ ಕ್ರಮಾಂಕದಲ್ಲಿ ಅರ್ಧಶತಕ ಸಿಡಿಸಿದ 4ನೇ ಆಟಗಾರ ಎಂಬ ದಾಖಲೆಯನ್ನೂ ಬರೆದರು. ಅಲ್ಲದೆ, 68 ರನ್ಗಳಿಸಿದ ಶಾರ್ದೂಲ್ 7ನೇ ಕ್ರಮಾಂಕದಲ್ಲಿ 2ನೇ ಗರಿಷ್ಠ ಸ್ಕೋರರ್ ಎನಿಸಿದರು. ಹಾಗೆಯೇ ರಿಂಕು ಸಿಂಗ್ ಜೊತೆಗೆ 103 ರನ್ ಜೊತೆಯಾಟ ಕಟ್ಟಿದ್ದು, ಐಪಿಎಲ್ ಇತಿಹಾಸದಲ್ಲಿ 6 ವಿಕೆಟ್ಗೆ ಶತಕ ಜೊತೆಯಾಟವಾಡಿದ 4ನೇ ಜೋಡಿ ಎನಿಸಿದೆ.
ಈ ಪಂದ್ಯದಲ್ಲಿ ಮತ್ತೊಂದು ದಾಖಲೆಯೂ ನಿರ್ಮಾಣವಾಗಿದೆ. ಉಭಯ ತಂಡಗಳ ಹೆಚ್ಚಿನ ಬ್ಯಾಟ್ಸ್ಮನ್ಗಳು ಸ್ಪಿನ್ನರ್ಗಳಿಗೆ ವಿಕೆಟ್ ಒಪ್ಪಿಸಿರುವುದು. ಒಟ್ಟು 12 ಆಟಗಾರರು ಸ್ಪಿನ್ ದಾಳಿಗೆ ಬಲಿಯಾಗಿದ್ದಾರೆ. ಪಂದ್ಯವೊಂದರಲ್ಲಿ 12 ಆಟಗಾರರು ಸ್ಪಿನ್ನರ್ಗಳಿಗೆ ಔಟಾಗಿರುವುದು ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲು. ಇದಕ್ಕೂ ಹಿಂದೆ ಕೆಕೆಆರ್ ಮತ್ತು ಸಿಎಸ್ಕೆ ತಂಡಗಳ ಸ್ಪಿನ್ನರ್ಗಳು ಪಂದ್ಯವೊಂದರಲ್ಲಿ 11 ವಿಕೆಟ್ ಉರುಳಿಸಿದ್ದರು