ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷ ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಕೋಲಾರದ ಮಾಜಿ ಸಂಸದ ಎಸ್ ಮುನಿಸ್ವಾಮಿ ಅರೋಪಿಸಿದ್ದಾರೆ. ಕೋಲಾರ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿ ಮಾಡಿ ಮಾತನಾಡಿದ ಮುನಿಸ್ವಾಮಿ, ಕೋಲಾರ ಜಿಲ್ಲೆಯ ಸರ್ಕಾರಿ ಆಸ್ತಿಗಳನ್ನ ವಕ್ಪ್ ಬೋರ್ಡ್‌ಗೆ ವರ್ಗಾಯಿಸುವ ಕೆಲಸದಲ್ಲಿ ಜಿಲ್ಲಾಧಿಕಾರಿ ನಿರತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಮುದುವಾಡಿ ಗ್ರಾಮದ ಸರ್ಕಾರಿ ಶಾಲೆಯನ್ನೇ ವಕ್ಪ್ ಬೋರ್ಡ್‌ಗೆ ವರ್ಗಾವಣೆ ಮಾಡುತ್ತಿದ್ದಾರೆ ಎಂದು ನೇರ ಆರೋಪ ಮಾಡಿದ್ದಾರೆ. ಈ ಹಿಂದೆ ಕೋಲಾರ ಜಿಲ್ಲಾಧಿಕಾರಿಯಾಗಿದ್ದ ಜಮೀರ್ ಪಾಷಾ, ಕೋಲಾರ ವಿಧಾನಸಭಾ ಚುನಾವಣೆಗೆ ನಿಲ್ಲಲು ಒಂದು ಧರ್ಮದ ಒಲೈಕೆ ಮಾಡಿದ್ರು. ಅದೇ ಹಾದಿಯಲ್ಲಿ ಅಕ್ರಂ ಪಾಷ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಅಕ್ರಂ ಪಾಷಾ ಕೂಡ ಮುಂದಿನ ದಿನಗಳಲ್ಲಿ ಚುನಾವಣೆಗೆ ನಿಲ್ಲುವ ದೃಷ್ಟಿಯಿಂದ ಒಂದು ಧರ್ಮದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಜಿಲ್ಲಾಧಿಕಾರಿ ಅಕ್ರಂ ಪಾಷ ಅವರನ್ನು ಕೂಡಲೇ ಬದಲಾವಣೆ ಮಾಡಲು ಸಿಎಂ ಸಿದ್ದರಾಮಯ್ಯ ಹಾಗು ರಾಜ್ಯಪಾಲರು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.