ಕೋಲಾರ ಟಿಕೆಟ್ ವಿಚಾರದಲ್ಲಿ ಭಾರೀ ಸಂಘರ್ಷವೇ ಏರ್ಪಟ್ಟಿದ್ದು, ಕೆ.ಹೆಚ್ ಮುನಿಯಪ್ಪ ಬಣದಿಂದ ಅಳಿಯ ಚಿಕ್ಕಪೆದ್ದಣ್ಣ ಹಾಗು ರಮೇಶ್ ಕುಮಾರ್ ಬಣದಿಂದ ಹಿರಿಯ ಸಾಹಿತಿ ಎಲ್ ಹನುಮಂತಯ್ಯ ನಡುವೆ ಹಗ್ಗಾಜಗ್ಗಾಟ ನಡೆಯುತ್ತಿತ್ತು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇನ್ನೂ ಕೂಡ ಸಭೆ ನಡೆಯುತ್ತಿದ್ದು, ಕೋಲಾರದಲ್ಲಿ ಗೆಲುವಿನ ನಗೆ ಬೀರಲು ಬಣ ರಾಜಕೀಯ ಹೇಗೆ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ನಡುವೆ ಟಿಕೆಟ್ ಸಂಘರ್ಷ ಅಂತ್ಯವಾಗುವ ಸುಳಿವು AICC ಇಂದ ಸಿಕ್ಕಿದೆ.

ಎಲ್ ಹನುಮಂತಯ್ಯ ಅವರ ಪರ ಬ್ಯಾಟಿಂಗ್ ಮಾಡ್ತಿದ್ದ ರಮೇಶ್ ಕುಮಾರ್ ಹಾಗು ಕೆ.ಹೆಚ್ ಮುನಿಯಪ್ಪ ಅವರ ಜೊತೆಗೆ ಜಂಟಿ ಸಭೆ ಮಾಡುತ್ತಿರುವ ಸಿದ್ದರಾಮಯ್ಯ, ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ಮಾಡಿದ್ದಾರೆ. ಜೊತೆಗೆ ರಮೇಶ್ ಕುಮಾರ್ ಬಣದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಎಲ್ ಹನುಂತಯ್ಯ ಅವರನ್ನು ಪ್ರಚಾರ ಸಮಿತಿ ಸಹ ಅಧ್ಯಕ್ಷರನ್ನಾಗಿ ಎಐಸಿಸಿ ನಿಯೋಜನೆ ಮಾಡಿದೆ. ಅಧ್ಯಕ್ಷರಾಗಿ ವಿನಯ್ ಕುಮಾರ್ ಸೊರಕೆ ಇದ್ದರೆ, ಸಹ ಅಧ್ಯಕ್ಷರಾಗಿ ಎಲ್ ಹನುಮಂತಯ್ಯ ಅವರನ್ನು ನೇಮಕ ಮಾಡಲಾಗಿದೆ. ಇನ್ನು ಶಾಸಕ ರಿಜ್ವಾನ್ ಅರ್ಷದ್ ಉಪಾಧ್ಯಕ್ಷರಾಗಿದ್ದಾರೆ.

ಪರಿಸ್ಥಿತಿ ಹೀಗಿರುವಾಗ ಎಲ್ ಹನುಮಂತಯ್ಯ ಅವರಿಗೆ ಕೋಲಾರ ಟಿಕೆಟ್ ಇಲ್ಲ ಎನ್ನುವುದು ಬಹುತೇಕ ಖಚಿತವಾಗಿದ್ದು, ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ಕನ್ಫರ್ಮ್ ಆಗಿದೆ ಎನ್ನಲಾಗ್ತಿದೆ.

