![](https://pratidhvani.com/wp-content/uploads/2024/07/WhatsApp-Image-2024-07-04-at-07.51.48-1-1024x512.jpeg)
ಮಡಿಕೇರಿ, ;ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿರುವ ಮಾಂದಲ್ಪಟ್ಟಿ ಹಾಗೂ ಅಬ್ಬಿ ಜಲಪಾತಕ್ಕೆ ಯಾವುದೇ ಅನುಮತಿಯಿಲ್ಲದೆ ನಿಯಮ ಬಾಹಿರವಾಗಿ ಬಾಡಿಗೆ ಜೀಪುಗಳು ಸಂಚರಿಸುತ್ತಿದ್ದು, ಸಂಚರಿಸುತ್ತಿರುವ ನಂದಿಮೊಟ್ಟೆ ಮತ್ತು ಅಬ್ಬಿಪಾಲ್ಸ್ ಬಳಿ ಜೀಪುಗಳ ನಿಲುಗಡೆಯನ್ನು ಕೂಡ ನಿಷೇಧಿಸಿ ಕೆ.ನಿಡುಗಣೆ ಗ್ರಾಮ ಪಂಚಾಯಿತಿ ತೀರ್ಮಾನ ಕೈಗೊಂಡಿದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪಂಚಾಯಿತಿಯಿಂದ ಜಿಲ್ಲಾಧಿಕಾರಿಗಳಿಗೆ ಪತ್ರ ರವಾನಿಸಲಾಗಿದೆ.
ಜೀಪು ಸಂಚಾರದ ವಿಚಾರಕ್ಕೆ ಸಂಬಂದಿಸಿದಂತೆ ಕಳೆದ ಜುಲೈ 1 ರಂದು ನಡೆದ ಗ್ರಾಮ ಪಂಚಾಯಿತಿ ತುರ್ತು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಹೆಬ್ಬೆಟ್ಟಗೇರಿ-ನಂದಿಮೊಟ್ಟೆ ಜಂಕ್ಷನ್ನಿಂದ ಮಾಂದಲ್ ಪಟ್ಟಿಗೆ ಮತ್ತು ಅಬ್ಬಿ ಫಾಲ್ಸ್ ಪಾರ್ಕಿಂಗ್ ಬಳಿಯಿಂದ ಅನುಮತಿಯಿಲ್ಲದೆ ಜೀಪ್ ಸಂಚಾರ ಮಾಡುತ್ತಿರುವದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸಾರ್ವಜನಿಕ ರಸ್ತೆ ಬದಿಯಲ್ಲಿ ಹಳದಿ ಫಲಕ ಹೊಂದಿರುವ ಜೀಪುಗಳು ಮಾಂದಲ್ ಪಟ್ಟಿಗೆ ಅನುಮತಿಯಿಲ್ಲದೆ ಪ್ರವಾಸಿಗರಿಂದ ಹೆಚ್ಚಿಗೆ ಹಣ ವಸೂಲಿ ಮಾಡುತ್ತಿರುವುದಲ್ಲದೆ, ಗ್ರಾಮಸ್ಥರಿಗೂ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ, ಬಸ್ ತಂಗುದಾಣದಲ್ಲಿ ಕುಳಿತು ಅನುಚಿತವಾಗಿ ವರ್ತನೆ ಮಾಡುತ್ತಿದ್ದು, ಮಹಿಳೆಯರು ಮತ್ತು ಮಕ್ಕಳಿಗೆ ತೊಂದರೆಯಾಗುತ್ತಿದೆ. ಜೀಪ್ಗಳನ್ನು ಅತಿ ವೇಗವಾಗಿ ಓಡಿಸುತ್ತಿದ್ದು, ಜೀಪ್ ಮಗುಚಿ ಬಿದ್ದಿರುತ್ತದೆ. ಜೀಪು ನಿಲುಗಡೆ ಪ್ರದೇಶ ಮದ್ಯಪಾನ ಹಾಗೂ ಜೂಜಿನ ತಾಣವಾಗಿ ಮಾರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಾಂದಲ್ ಪಟ್ಟಿ ಹಾಗೂ ಅಬ್ಬಿಫಾಲ್ಸ್ಗೆ ಹೋಗುವ ಜೀಪುಗಳನ್ನು ನಿರ್ಬಂಧಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಗಿದೆ. ಅಲ್ಲದೆ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪಂಚಾಯಿತಿಯ ನಿರ್ಣಯ ಸಹಿತ ಮನವಿ ಸಲ್ಲಿಸಲಾಗಿದೆ.
![](https://pratidhvani.com/wp-content/uploads/2024/07/47068905-1024x766.webp)
ಜೀಪುಗಳ ಸಂಚಾರ ಹಾಗೂ ನಿಲುಗಡೆ ನಿಷೇಧ ಕುರಿತಂತೆ ನಿರ್ಣಯ ಕೈಗೊಂಡ ಬಳಿಕ ಇದೀಗ ಪಂಚಾಯಿತಿ ವತಿಯಿಂದ ನಂದಿಮೊಟ್ಟೆಯಲ್ಲಿರುವ ಬಸ್ ತಂಗುದಾಣದ ಗೋಡೆಯಲ್ಲಿ ಜೀಪ್ಗಳನ್ನು ನಿಲುಗಡೆಗೊಳಿಸದಂತೆ ಸೂಚನಾ ಫಲಕವನ್ನು ಕೂಡ ಅಳವಡಿಸಲಾಗಿದೆ. ‘ನಂದಿಮೊಟ್ಟೆಯಿಂದ ಮಾಂದಲ್ ಪಟ್ಟಿಗೆ ಜೀಪ್ ಟ್ರಿಪ್ ಹೋಗುವುದನ್ನು ಮತ್ತು ಟ್ರಿಪ್ ಹೋಗುವ ಜೀಪ್ ನಿಲ್ಲಿಸುವುದನ್ನು ನಿರ್ಬಂಧಿಸಲಾಗಿದೆ’ ಎಂದು ಫಲಕದಲ್ಲಿ ಸೂಚಿಸಲಾಗಿದೆ. ಅದೇ ರೀತಿ ಅಬ್ಬಿಫಾಲ್ಸ್ ಬಳಿಯೂ ಫಲಕ ಅಳವಡಿಸಲಾಗಿದೆ.
ಬಿಳಿ ನೋಂದಣಿ ಫಲಕ ಹೊಂದಿರುವ ಖಾಸಗಿ ಜೀಪುಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಹಿನ್ನೆಲೆಯಲ್ಲಿ ಜೀಪ್ ಸಂಚಾರವನ್ನು ಹಿಂದೆ ನಿಷೇಧಿಸಿದ್ದ ಹಿಂದಿನ ಜಿಲ್ಲಾಧಿಕಾರಿ ಬಿ.ಸಿ. ಸತೀಶ್ ಅವರು ಹಳದಿ ಫಲಕ ಅಳವಡಿಸಿಕೊಂಡು ಅನುಮತಿ ಪಡೆದುಕೊಂಡು ಸಂಚರಿಸುವಂತೆ ಆದೇಶ ಹೊರಡಿಸಿದ್ದರು. ಆ ಬಳಿಕ ಹೆಚ್ಚಿನ ಜೀಪು ಮಾಲೀಕರು ತಮ್ಮ ವಾಹನಗಳನ್ನು ಹಳದಿ ನಾಮಫಲಕಕ್ಕೆ ಬದಲಾಯಿಸಿಕೊಂಡಿದ್ದರು.
![](https://pratidhvani.com/wp-content/uploads/2024/07/Jeep_Ride_Safari-3_YCqe45Z.jpg)