ತೀವ್ರ ಜಿದ್ದಾಜಿನಿಂದ ಕೂಡಿದ ಪಂದ್ಯದಲ್ಲಿ ಬ್ಯಾಟ್ಸ್ ಮನ್ ಗಳು ರನ್ ಹೊಳೆ ಹರಿಸಿದರೂ ಲಕ್ನೋ ಸೂಪರ್ ಗೈಂಟ್ಸ್ ಕೇವಲ 2 ರನ್ ನಿಂದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ.
ಅಹಮದಾಬಾದ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಗೈಂಟ್ಸ್ ಒಡ್ಡಿದ 211 ರನ್ ಗಳ ಗುರಿಯನ್ನು ಕೆಕೆಆರ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 208 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಕೆಕೆಆರ್ ಪ್ಲೇಆಫ್ ರೇಸ್ ನಿಂದ ಹೊರಬಿದ್ದಿತು.
ಕೆಕೆಆರ್ ಕೊನೆಯ ಓವರ್ ನಲ್ಲಿ 21 ರನ್ ಗಳಿಸಬೇಕಿತ್ತು. ಸ್ಟೋನಿಸಿಸ್ ಎಸೆದ ಮೊದಲ ಮೂರು ಎಸೆತಗಳಲ್ಲಿ ರಿಂಕು ಸಿಂಗ್ 1 ಬೌಂಡರಿ ಹಾಗೂ 2 ಸತತ ಸಿಕ್ಸರ್ ಸಿಡಿಸಿದ್ದೂ ಅಲ್ಲದೇ ನಂತರ 2 ರನ್ ಗಳಿಸಿದರು. ಇದರಿಂದ ಕೆಕೆಆರ್ ಗೆ ಗೆಲ್ಲಲು ಕೊನೆಯ 2 ಎಸೆತದಲ್ಲಿ 3 ರನ್ ಬೇಕಿತ್ತು. ಈ ಸಂದರ್ಭದಲ್ಲಿ ಕೊನೆಯ 2 ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು.
ರಿಂಕು ಸಿಂಗ್ 15 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್ ಸೇರಿದ 40 ರನ್ ಬಾರಿಸಿ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಆದರೆ ಕೊನೆಯ ಹಂತದಲ್ಲಿ ಔಟಾಗಿ ತಂಡ ಸೋಲಿನ ಆಘಾತಕ್ಕೆ ಒಳಗಾಯಿತು.
ಸುನೀಲ್ ನಾರಾಯಣ್ 7 ಎಸೆತಗಳಲ್ಲಿ 3 ಸಿಕ್ಸರ್ ಸಹಾಯದಿಂದ ಅಜೇಯ 21 ರನ್ ಬಾರಿಸಿದ್ದೂ ಅಲ್ಲದೇ ರಿಂಕು ಸಿಂಗ್ ಜೊತೆ 14 ಎಸೆತದಲ್ಲಿ 58 ರನ್ ಜೊತೆಯಾಟ ನಿಭಾಯಿಸಿದರು.
ಇದಕ್ಕೂ ಮುನ್ನ ನಾಯಕ ಶ್ರೇಯಸ್ ಅಯ್ಯರ್ 29 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 50 ರನ್ ಬಾರಿಸಿ ಔಟಾದರೆ, ನಿತಿನ್ ರಾಣಾ 42, ಸ್ಯಾಮ್ ಬಿಲ್ಲಿಂಗ್ಸ್ 36 ರನ್ ಗಳಿಸಿದರು.
ಮೊಹಸಿನ್ ಖಾನ್ ಮತ್ತು ಮಾರ್ಕೂಸ್ ಸ್ಟೊನಿಸ್ ತಲಾ 3 ವಿಕೆಟ್ ಪಡೆದು ಕೆಕೆಆರ್ ಹೋರಾಟಕ್ಕೆ ಬ್ರೇಕ್ ಹಾಕಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಲಕ್ನೋ ತಂಡ ಶತಕ ಸಿಡಿಸಿದ ಕ್ವಿಂಟನ್ ಡಿ ಕಾಕ್ ಮತ್ತು ಅರ್ಧಶತಕ ಸಿಡಿಸಿದ ನಾಯಕ ಕೆಎಲ್ ರಾಹುಲ್ ಅಜೇಯ ಜೊತೆಯಾಟದಿಂದ ಬೃಹತ್ ಮೊತ್ತ ಕಲೆ ಹಾಕಿತು.
ಕ್ವಿಂಟನ್ ಡಿಕಾಕ್ 59 ಎಸೆತದಲ್ಲಿ 6 ಬೌಂಡರಿ ಮತ್ತು 7 ಸಿಕ್ಸರ್ ಸೇರಿದಂತೆ ಶತಕ ಪೂರೈಸಿದರು. ಅಲ್ಲದೇ 70 ಎಸೆತದಲ್ಲಿ 10 ಬೌಂಡರಿ ಮತ್ತು 10 ಸಿಕ್ಸರ್ ಸೇರಿದ 140 ರನ್ ಸಿಡಿಸಿ ಔಟಾಗದೇ ಉಳಿದರೆ, ಮತ್ತೊಂದು ತುದಿಯಲ್ಲಿದ್ದ ನಾಯಕ ಕೆಎಲ್ ರಾಹುಲ್ 51 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 68 ರನ್ ಬಾರಿಸಿ ಅಜೇಯರಾಗಿ ಉಳಿದರು.
ಕ್ವಿಂಟನ್ ಡಿ ಕಾಕ್ ಗೆ ಇದು 2ನೇ ಐಪಿಎಲ್ ಶತಕವಾಗಿದೆ. ಇದಕ್ಕೂ ಮುನ್ನ 2016ರಲ್ಲಿ ಆರ್ ಸಿಬಿ ವಿರುದ್ಧ ಶತಕ ಗಳಿಸಿದ್ದು ಅದನ್ನು ಮೀರಿಸುವಂತೆ ಇಂದು ವೃತ್ತಿಜೀವನದ ಗರಿಷ್ಠ ಮೊತ್ತ ದಾಖಲಿಸಿದರು.