ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆಯಿಂದ ಇಬ್ಬರು ಗ್ರಾಮ ರಕ್ಷಕರು ನಾಪತ್ತೆಯಾಗಿದ್ದಾರೆ.ಅವರು ನಾಪತ್ತೆಯಾಗಿರುವುದನ್ನು ಪೊಲೀಸ್ ಮೂಲಗಳು ಖಚಿತಪಡಿಸಿದ್ದು, ಕಿಶ್ತ್ವಾರ್ ಜಿಲ್ಲೆಯ ಕುಂತ್ವಾರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಜಂಟಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ.
ನಂತರ ಅರಣ್ಯ ಪ್ರದೇಶದಲ್ಲಿ ಇಬ್ಬರು ಮೃತಪಟ್ಟಿರುವ ಮಾಹಿತಿ ಸಿಕ್ಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದರ ಬೆನ್ನಲ್ಲೇ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಮೂಲಗಳ ಪ್ರಕಾರ ಓಹ್ಲಿ ಪ್ರದೇಶದ ನಿವಾಸಿಗಳಾದ ಮೊಹಮ್ಮದ್ ಖಲೀಲ್ ಅವರ ಪುತ್ರ ನಜೀರ್ ಅಹಮದ್ ಮತ್ತು ಅಮರ್ ಚಂದ್ ಅವರ ಪುತ್ರ ಕುಲದೀಪ್ ಕುಮಾರ್ ಬೆಳಗ್ಗೆಯಿಂದ ನಾಪತ್ತೆಯಾಗಿದ್ದಾರೆ.
ಏತನ್ಮಧ್ಯೆ, ನಿಷೇಧಿತ ಉಗ್ರಗಾಮಿ ಸಂಘಟನೆ ಕಾಶ್ಮೀರ ಟೈಗರ್ಸ್ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು, ನಜೀರ್ ಮತ್ತು ಕುಲದೀಪ್ ಎಂದು ಗುರುತಿಸಲಾದ ಇಬ್ಬರನ್ನೂ ಅಪಹರಿಸಿ ಕೊಂದಿರುವುದಾಗಿ ಹೇಳಿದೆ. ಇನ್ನೂ ಶೋಧ ಕಾರ್ಯ ಮುಂದುವರಿದಿದ್ದು, ಅವರ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ.
JKNC ಅಧ್ಯಕ್ಷ ಡಾ ಫಾರೂಕ್ ಅಬ್ದುಲ್ಲಾ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕಿಶ್ತ್ವಾರ್ನಲ್ಲಿ ಇಬ್ಬರು ಗ್ರಾಮ ರಕ್ಷಣಾ ಸಿಬ್ಬಂದಿಗಳಾದ ನಜೀರ್ ಅಹ್ಮದ್ ಮತ್ತು ಕುಲದೀಪ್ ಕುಮಾರ್ ಅವರನ್ನು ಅರಣ್ಯ ಪ್ರದೇಶದಲ್ಲಿ ಭೀಕರವಾಗಿ ಹತ್ಯೆಗೈದಿರುವುದನ್ನು ಖಂಡಿಸಿದರು.
ಇಂತಹ ಅನಾಗರಿಕ ಹಿಂಸಾಚಾರದ ಕೃತ್ಯಗಳು ಜೆ & ಕೆ ನಲ್ಲಿ ದೀರ್ಘಕಾಲೀನ ಶಾಂತಿಯನ್ನು ಸಾಧಿಸಲು ಗಮನಾರ್ಹ ಅಡಚಣೆಯಾಗಿವೆ ಎಂದು ಅವರು ಹೇಳಿದರು. ಈ ದುಃಖದ ಸಮಯದಲ್ಲಿ, ನಮ್ಮ ಪ್ರಾರ್ಥನೆಗಳು ಮೃತರ ಕುಟುಂಬಗಳೊಂದಿಗೆ ಇವೆ ಎಂದು ಹೇಳಿದರು.