ಕ್ರೀಡಾ ಕ್ಷೇತ್ರದಲ್ಲಿ ನೀಡಲಾಗುವ ಅತ್ಯುನ್ನತ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಖೇಲ್ ರತ್ನ ಪ್ರಶಸ್ತಿ ಎಂಬುದಾಗಿ ಮರುನಾಮಕರಣ ಮಾಡಲು ಮುಂದಾಗಿರುವ ನರೇಂದ್ರ ಮೋದಿ ಸರಕಾರದ ನಿರ್ಧಾರವು ರಾಜಕೀಯ ಪ್ರೇರಿತ ಎಂಬುದು ಮತ್ತೊಮ್ಮೆ ಸಾಭೀತಾಗಿದೆ.
ಕೇಂದ್ರ ಸರ್ಕಾರದಿಂದ ಕ್ರೀಡಾ ಸಾಧಕರಿಗೆ ಕೊಡುವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಅವಾರ್ಡ್ ಎಂದು ಬದಲಾಯಿಸಲಾಗುವುದು ಎಂದು ಆಗಸ್ಟ್ 6 ರಂದು ಸ್ವತಃ ಪ್ರಧಾನಿಯವರೇ ಟ್ವೀಟ್ ಮಾಡಿದ್ದರು. ಸಾರ್ವಜನಿಕರಿಂದ ಬಂದ ವಿನಂತಿಗಳ ಮೇರೆಗೆ ಹೆಸರನ್ನು ಮರುನಾಮಕರಣ ಮಾಡುವುಲಾಗಿದೆ ಎಂದು ಟ್ವೀಟ್ ಮಾಡಿದ್ದರು.
ಆದರೆ ದಿ ವೈರ್ ಸಂಸ್ಥೆ ಈ ಕುರಿತು ಸಾರ್ವಜನಿಕ ಮಾಹಿತಿ ಹಕ್ಕು ಕಾಯ್ದೆಯಡಿ ಮರುನಾಮಕರಣ ಸಂಭಂದ ಯಾರೆಲ್ಲ ವಿನಂತಿ ಮಾಡಿದ್ದಾರೆ? ಎಂದು ಪ್ರಶ್ನಿಸಿ ಮಾಹಿತಿ ಕೋರಿ ಆರ್ಟಿಐ ಅರ್ಜಿ ಹಾಕಿತ್ತು. ಇದಕ್ಕೆ ಸ್ಪಂದಿಸಿದ ಸಂಬಂದ ಪಟ್ಟ ಸಚಿವಾಲಯ ಈ ಕುರಿತು ಯಾವುದೇ ಅಧಿಕೃತ ಮಾಹಿತಿಯೇ ಇಲ್ಲ ಎಂದು ಹೇಳಿದೆ.
ಪ್ರಶಸ್ತಿಯನ್ನು ಮರುನಾಮಕರಣ ಮಾಡುವಂತೆ ಸಾರ್ವಜನಿಕರಿಂದ ಬಂದ ಮನವಿಗಳಿಗೆ ಸಂಬಂಧಿಸಿದಂತೆ ತಮ್ಮ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ಸಚಿವಾಲಯ ಅಧಿಕೃತವಾಗಿ ಒಪ್ಪಿಕೊಂಡಿದೆ.
ಆಗಸ್ಟ್ 8, 2021 ರಂದು ಆರ್ಟಿಐ ಅರ್ಜಿಯನ್ನು ಸಲ್ಲಿಸಿದ್ದ ದಿ ವೈರ್, ಪ್ರಶಸ್ತಿಯ ಮರುನಾಮಕರಣ ಕೋರಿ ಎಷ್ಟು ಜನರ ವಿನಂತಿಗಳನ್ನು ಪಿಎಂಒ ಸ್ವೀಕರಿಸಿದೆ ಎಂದು ತಿಳಿಯಲು ಕೋರಿದೆ. ಅಲ್ಲದೇ ಈ ಮನವಿ ಪತ್ರಗಳ ನಕಲು ಪ್ರತಿಗಳನ್ನೂ ಕೋರಲಾಗಿತ್ತು. ಆದರೆ ಈ ಮನವಿಗೆ ಸ್ಪಂದಿಸಿದ ಸಚಿವಾಲಯದ ಅಧೀನ ಕಾರ್ಯದರ್ಶಿ ಮತ್ತು ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (ಸಿಪಿಐಒ) ಶಾಂತಾ ಶರ್ಮಾ, “ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ” ಎಂದು ಒಪ್ಪಿಕೊಂಡಿದ್ದಾರೆ.
ವಾಸ್ತವವಾಗಿ, ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಸಚಿವಾಲಯವು ಸಂಬಂಧಪಟ್ಟವರನ್ನು ಸಮಾಲೋಚಿಸಲಿಲ್ಲ. ಮತ್ತು ಪ್ರಧಾನ ಮಂತ್ರಿಯ ಟ್ವೀಟ್ ಆಧಾರದ ಮೇಲೆ ಈ ಪ್ರಶಸ್ತಿಯನ್ನು ಮರುನಾಮಕರಣ ಮಾಡಲಾಗಿದೆ. ಪ್ರಮುಖ ವಿಚಾರವೆಂದರೆ ಮೋದಿಯವರು ಟ್ವೀಟ್ನಲ್ಲಿ ಉಲ್ಲೇಖಿಸಿರುವ ಪದಗಳನ್ನೇ ಈ ಆಧೇಶದ ಪ್ರತಿಯಲ್ಲಿ ಲಗತ್ತಿಸಲಾಗಿದೆ. ಅಲ್ಲದೇ ಈ ಆದೇಶಕ್ಕೆ ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರ ಅನುಮೋದನೆ ಕೂಡಾ ದಾಖಲಾಗಿದೆ.
ಇನ್ನು ಪ್ರಶಸ್ತಿಯ ಮರುನಾಮಕರಣದ ನಿರ್ಧರಿಸಿದ ಸಂದರ್ಭದಲ್ಲಿ ಸಚಿವಾಲಯದ ಅಧಿಕಾರಿಗಳಿಗೆ ಹೊಸ ತಲೆನೋವು ಎದುರಾಗಿತ್ತು. ಅದೇನೆಂದರೆ ಈಗಾಗಲೇ ಚಾಲ್ತಿಯಲ್ಲಿರುವ ಪ್ರಶಸ್ತಿಗೂ ಮೇಜರ್ ಧ್ಯಾನ್ ಚಂದ್ ಹೆಸರಿದೆ. ಹಾಗಾಗೀ ಈ ಹೆಸರುಗಳಿಗೂ ಮರುನಾಮಕರಣ ಮಾಡುವ ನಿರ್ಧಾರವನ್ನು ಸಚಿವಾಲಯದ ಅಧಿಕಾರಿಗಳೇ ತೀರ್ಮಾನಿಸುತ್ತಾರೆ.
ಈ ಕುರಿತು ಮುಖ್ಯ ಕಾರ್ಯದರ್ಶಿಗಳಿಗೆ ಪ್ರಸ್ತಾವನೆಯ ಪ್ರತಿಯನ್ನು ಸಲ್ಲಿಸಿರುವ ಸೆಕ್ಷನ್ ಆಫೀಸರ್ (SP-IV) ಸುರೇಂದ್ರ ಅವರು ಪ್ರಸ್ತಾವನೆಯನ್ನು ಸಿದ್ಧಪಡಿಸುವಾಗ “1991-92 ರಲ್ಲಿ ಸ್ಥಾಪಿಸಲಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಅವಾರ್ಡ್ ಎಂದು ಮರುನಾಮಕರಣ ಮಾಡಬೇಕು, ಈ ಪ್ರಕ್ರಿಯೆಗೆ ಸ್ವತಃ ಪ್ರಧಾನಿ ಮೋದಿಯವರ ಟ್ವೀಟ್ನಲ್ಲಿ ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ಕ್ರೀಡೆ ಕ್ಷೇತ್ರದಲ್ಲಿ ಜೀವಮಾನದ ಸಾಧನೆ ಮಾಡಿದವರಿಗೆ ನೀಡುವ 2002ರಲ್ಲಿ ಸ್ಥಾಪಿಸಲಾಗಿರುವ ಮೇಜರ್ ಧ್ಯಾನ್ ಚಂದ್ ಪ್ರಶಸ್ತಿಯ ಮರುನಾಮಕರಣ ಮಾಡಬೇಕಿದೆʼ ಎಂದು ಉಲ್ಲೇಖಿಸಿದ್ದಾರೆ.
ಈ ಪ್ರಸ್ತಾವನೆಗೆ ಅನುಮೋದನೆ ನೀಡಿದ, ಜಂಟಿ ಕಾರ್ಯದರ್ಶಿ ಅತುಲ್ ಸಿಂಗ್ ಮತ್ತು ಸಚಿವಾಲಯದ ಅಂದಿನ ಕಾರ್ಯದರ್ಶಿ ರವಿ ಮಿತ್ತಲ್ ಅವರು ಟಿಪ್ಪಣಿಗೆ ಸಹಿ ಹಾಕಿದ್ದಾರೆ. ಹೀಗಾಗಿ ಈಗಿರುವ ಧ್ಯಾನ್ ಚಂದ್ ಪ್ರಶಸ್ತಿಯನ್ನು ಮರುನಾಮಕರಣ ಮಾಡಬೇಕೆಂದು ಇಬ್ಬರೂ ಹಿರಿಯ ಅಧಿಕಾರಿಗಳು ಒಪ್ಪಿಕೊಂಡಂತಾಯಿತು.
ಇದಾದ ಬಳಿಕ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಮತ್ತು ಧ್ಯಾನ್ ಚಂದ್ ಪ್ರಶಸ್ತಿ ಎರಡನ್ನೂ ಮರುನಾಮಕರಣ ಮಾಡುವಂತೆ ಅನುಮೋದನೆ ಕೋರಿ ಕ್ರೀಡಾ ಸಚಿವರಿಗೆ ಕಳುಹಿಸಲು ಮತ್ತೊಂದು ಟಿಪ್ಪಣಿಯನ್ನು ಸಿದ್ಧಪಡಿಸಿ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಈ ಪ್ರಸ್ತಾವನೆಯಲ್ಲಿ, ಧ್ಯಾನ್ ಚಂದ್ ಪ್ರಶಸ್ತಿಯ ಹೊಸ ಹೆಸರಿಗೆ ಸಂಬಂಧಿಸಿದಂತೆ ಮೂರು ಸಲಹೆಗಳನ್ನು ನೀಡಲಾಯಿಗಿತ್ತು. ಅವುಗಳೆಂದರೆ ‘ಕ್ರೀಡೆ ಮತ್ತು ಆಟಗಳಲ್ಲಿ ಜೀವಮಾನ ಸಾಧನೆ ಪ್ರಶಸ್ತಿ’ ಅಥವಾ ‘ಕ್ರೀಡೆ ಮತ್ತು ಆಟಗಳಲ್ಲಿ ಜೀವಮಾನದ ಸಾಧನೆಗಾಗಿ ಮಿಲ್ಕಾ ಸಿಂಗ್ ಪ್ರಶಸ್ತಿ’ ಅಥವಾ ಈ ಪ್ರಕ್ರಿಯೆನ್ನು ಮುಂದಿನ ದಿನಗಳಲ್ಲಿ ನಿರ್ಧರಿಸುವ ಕುರಿತು ಚಿಂತನೆ ಎಂದು ಉಲ್ಲೇಖಿಸಲಾಗಿತ್ತು.
ಹೀಗಾಗಿ ಕೇಂದ್ರ ಕ್ರೀಡಾ ಸಚಿವ ಠಾಕೂರ್ ಅವರು ರಾಜೀವ್ ಗಾಂಧಿ ಪ್ರಶಸ್ತಿಯನ್ನು ಮರುನಾಮಕರಣ ಮಾಡಲು ಅನುಮೋದನೆ ನೀಡಿದ್ದಾರೆ. ಆದರೆ ಧ್ಯಾನ್ ಚಂದ್ ಪ್ರಶಸ್ತಿಯ ನಿರ್ಧಾರವನ್ನು ಇನ್ನೊಂದು ದಿನಕ್ಕೆ ಮುಂದೂಡಿದ್ದಾರೆ.
ಪರಿಷ್ಕೃತ ಯೋಜನೆಯ ಪ್ರಕಾರ, ನಾಲ್ಕು ವರ್ಷಗಳ ಅವಧಿಯಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಅದ್ಭುತ ಮತ್ತು ಅತ್ಯುತ್ತಮ ಪ್ರದರ್ಶನವನ್ನು ಗುರುತಿ ಅವರಿಗೆ ಈ ಪ್ರಶಸ್ತಿಯನ್ನು ನೀಡುವುದೇ ಉದ್ದೇಶವಾಗಿದೆ. ಪ್ರತಿ ವರ್ಷ ಒಂದು ಪ್ರಶಸ್ತಿಯನ್ನು, ವೈಯಕ್ತಿಕ ಕ್ರೀಡಾಪಟುಗಳಿಗೆ ನೀಡಲಾಗುತ್ತದೆ. ಕೇಂದ್ರ ಕ್ರೀಡಾ ಸಚಿವರಿಗೆ ಇಚ್ಛೆಯಂತೆ ಯೋಜನೆಗೆ ಬದಲಾವಣೆ ಅಥವಾ ವಿನಾಯಿತಿಗಳನ್ನು ಪರಿಚಯಿಸಲು ಸಹ ಒಂದು ನಿಬಂಧನೆಯನ್ನು ಮಾಡಲಾಗಿದೆ.
ರಾಜಕೀಯ ಪ್ರೇರಿತ ನಿರ್ಧಾರ?
ಖೇಲ್ ರತ್ನ ಪ್ರಶಸ್ತಿಯನ್ನು ಮರುನಾಮಕರಣ ಮಾಡುವ ಯೋಜನೆಯು ಕಳೆದ ಎರಡು ವರ್ಷಗಳಿಂದಲೇ ಪರಿಗಣನೆಯಲ್ಲಿರುವುದು ಈ ವರದಿಯ ವಿಶೇಷ. ಫೆಬ್ರವರಿ 2019 ರಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯವು, ಕ್ರೀಡಾ ಪ್ರಶಸ್ತಿಗಳು ಮತ್ತು ವಿಶೇಷ (ನಗದು) ಪ್ರಶಸ್ತಿ ಯೋಜನೆಯ ಪರಿಶೀಲನೆಗಾಗಿ ಸಮಿತಿಯೋಂದನ್ನು ರಚಿಸಿತ್ತು.
ನ್ಯಾಯಮೂರ್ತಿ (ನಿವೃತ್ತ) ಇಂದಋಮಿತ್ ಕೌರ್ ಕೊಚಾರ್ ಅವರ ನೇತೃತ್ವದಲ್ಲಿ ರಚನೆಯಾದ ಈ ಸಮಿತಿಯಲ್ಲಿ ಶಿವ ಕೇಶವನ್, ಅಶ್ವಿನಿ ನಾಚಪ್ಪ, ಮೋಹನ್ ದಾಸ್ ಪೈ, ರಾಜೇಶ್ ಕಲ್ರಾ ಮತ್ತು ಎಸ್.ಪಿ.ಎಸ್. ತೋಮರ್ (ಕ್ರೀಡಾ ಸಚಿವಾಲಯದ ಉಪ ಕಾರ್ಯದರ್ಶಿ ಮತ್ತು ಕ್ರೀಡಾ ಪ್ರಶಸ್ತಿಗಳ ಉಸ್ತುವಾರಿ)ಗಳಿದ್ದರು.
ಕಳೆದ 26 ವರ್ಷಗಳಿಂದ ಖೇಲ್ ರತ್ನ ಪ್ರಶಸ್ತಿಯನ್ನು ರಾಜೀವ್ ಗಾಂಧಿ ಹೆಸರಿನಲ್ಲಿ ನೀಡಲಾಗುತ್ತಿದೆ, ಆದರೆ ಮಾಜೀ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ಕ್ರೀಡೆಯೊಂದಿಗೆ ಯಾವುದೇ ನೇರವಾಗಿ ಸಂಬಂಧ ಹೊಂದಿಲ್ಲ, ಹೀಗಾಗಿ ಭಾರತೀಯ ಖೇಲ್ ರತ್ನ ಪ್ರಶಸ್ತಿಯನ್ನು ಆ ಕ್ಷೇತ್ರದಲ್ಲೇ ಅತ್ಯುನ್ನತ ಮಟ್ಟದಲ್ಲಿ ಸಾಧನೆ ಮಾಡಿರುವ ವ್ಯಕ್ತಿಯ ಹೆಸರನ್ನೇ ಇಡುವುದು ಸೂಕ್ತ ಎಂಬುದಾಗಿ ಸಮಿತಿ ಅಭಿಪ್ರಾಯ ಪಟ್ಟಿರುವ ಕುರಿತು ದಿ ಹಿಂದು ಈ ಹಿಂದೆ ವರದಿ ಮಾಡಿತ್ತು.
ಮರುನಾಮಕರಣದ ಕುರಿತು ಯಾರೊಂದಿಗೂ ಚರ್ಚಿಸಲೇ ಇಲ್ಲ!
ಇನ್ನು ಪ್ರಶಸ್ತಿಯ ಮರುನಾಮಕರಣದ ಕುರಿತು, ಭಾರತೀಯ ರಾಷ್ಟ್ರೀಯ ಕ್ರೀಡಾ ಒಕ್ಕೂಟದೊಂದಿಗಾಗಲೀ ಅಥವಾ ಭಾರತೀಯ ಕ್ರೀಡಾ ಪ್ರಾಧಿಕಾರ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮುಂತಾದ ಸಂಬಂಧಪಟ್ಟ ಅಧಿಕಾರಿಗಳೊಂದಿಗಾಗಲೀ ಯಾವುದೇ ಸಮಾಲೋಚನೆ ನಡೆಸಿಲ್ಲ ಎಂಬುದು ದಾಖಲೆಗಳಿಂದ ಸ್ಪಷ್ಟವಾಗಿದೆ. ಹೀಗಾಗಿ ಈ ನಿರ್ಧಾರ ಸ್ವತಃ ಮೋದಿ ಸರಕಾರದ್ದೇ ಆಗಿದೆ ಎಂದು ತಿಳಿಯಬಹುದು.