ಯಶ್ ಅಭಿನಯಿಸಿ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2 ನಿರೀಕ್ಷೆಗೂ ಮೀರಿ ಭರ್ಜರಿ ಪ್ರದರ್ಶನ ಕಾಣುವ ಮೂಲಕ ಮೊದಲ ದಿನ ಬಾಕ್ಸ್ ಆಫೀಸ್ ಅನ್ನು ಧೂಳೀಪಟ ಮಾಡಿದೆ.
ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗಿದ್ದ ಕೆಜಿಎಫ್-2 ಚಿತ್ರ ಎಲ್ಲಾ ಭಾಷೆಯಲ್ಲೂ ದಾಖಲೆ ಓಪನಿಂಗ್ ಪಡೆದಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೇ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಮಧ್ಯರಾತ್ರಿಯೇ ಸಿನಿಮಾ ಬಿಡುಗಡೆ ಆಗಿದೆ.
ದಕ್ಷಿಣ ಭಾರತ ಅಲ್ಲದೇ ಹಿಂದಿಯಲ್ಲೂ ಮೊದಲ ದಿನದ ಗಳಿಕೆಯಲ್ಲಿ ಕೆಜಿಎಫ್-2 ದಾಖಲೆ ಬರೆದಿದ್ದು, ಹೃತಿಕ್ ರೋಷನ್ ಅಭಿನಯದ ವಾರ್ ಚಿತ್ರದ ದಾಖಲೆಯನ್ನು ಯಶ್ ಟೀಂ ಮುರಿದಿದೆ.

ಮೂಲಗಳ ಪ್ರಕಾರ ಕೆಜಿಎಫ್-2 ಮೊದಲ ದಿನದ ಗಳಿಕೆ 200 ಕೋಟಿ ರೂ. ಸಂಗ್ರಹವಾಗಿದೆ ಎನ್ನಲಾಗಿದೆ. ಹಿಂದಿಯಲ್ಲಿ ಮೊದಲ ದಿನದ ಬುಕ್ಕಿಂಗ್ ನಿಂದ ಬಂದ ಮೊತ್ತ 50ಕೋಟಿ ರೂ. ದಾಟಿದೆ. ಕೇರಳದಲ್ಲಿ ಮೊದಲ ದಿನವೇ 7.5 ಕೋಟಿ ರೂ. ಸಂಗ್ರಹವಾಗಿ ಯಾವುದೇ ಸಿನಿಮಾಗೂ ದೊರೆಯದ ಭರ್ಜರಿ ಆರಂಭ ದೊರೆತಿದೆ.
ಅಮೆರಿಕದಲ್ಲಿ ಮೊದಲ ದಿನವೇ 1 ದಶಲಕ್ಷ ಡಾಲರ್ ಗಳಿಕೆ ಮಾಡಿ ಕೆಜಿಎಫ್ ವಿದೇಶದಲ್ಲೂ ದಾಖಲೆ ಬರೆದಿದೆ. ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಕೂಡ ಮೊದಲ ದಿನ 20ರಿಂದ 25 ಕೋಟಿ ರೂ. ಸಂಗ್ರಹವಾಗಿದೆ ಎಂದು ಹೇಳಲಾಗಿದ್ದು, ಇದರ ಅಧಿಕೃತ ಅಂಕಿ-ಅಂಶ ಇನ್ನೂ ಹೊರಗೆ ಬಂದಿಲ್ಲ. ಒಟ್ಟಾರೆ ಲೆಕ್ಕಾಚಾರದಲ್ಲಿ 200 ಕೋಟಿ ದಾಟಿದೆ ಎನ್ನಲಾಗಿದೆ.