ಕೇರಳ: ಮಹಿಳೆ ಮಾಡಿದ 26 ಸೆಕೆಂಡ್‌ಗಳ ವಿಡಿಯೋದಿಂದ(Viral Video) ವ್ಯಕ್ತಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಜವಳಿ ಗಿರಣಿ ಕಾರ್ಮಿಕ ದೀಪಕ್ (42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ(Social Media) ವೈರಲ್ ಆಗುಬೇಕು ಎಂದು ಸತ್ಯಾಸತ್ಯತೆ ಪರಿಶೀಲಿಸದೇ ವ್ಯಕ್ತಿಯ ಮಾನಹಾನಿ ಮಾಡುವ ಪ್ರವೃತ್ತಿಯೇ ಈ ಒಂದು ಅಮಾಯಕ ಜೀವವನ್ನು ಬಲಿ ತೆಗೆದುಕೊಂಡಿದೆ ಎನ್ನುವ ಆರೋಪ ಜೋರಾಗಿದೆ.
ಇದನ್ನೂ ಓದಿ: Gilli Nata:ಜೀರೋದಿಂದ ಹೀರೋ ಆದ್ರೂ ಗಿಲ್ಲಿಗೆ ʼಬಡವʼ ಟ್ಯಾಗ್ ಕೊಟ್ಟಿದ್ಯಾರು..? ಫ್ಯಾನ್ಸ್..? ಸೆಲೆಬ್ರಿಟಿಸ್..?
ಅಷ್ಟಕ್ಕೂ ಆಗಿದ್ದೇನು..?
ಇತ್ತೀಚಿಗೆ ದೀಪಕ್ ತಮ್ಮ ಕೆಲಸದ ನಿಮಿತ್ತ ಸಾರಿಗೆ ಬಸ್‌ನಲ್ಲಿ ಕೋಝಿಕ್ಕೋಡ್‌ನಿಂದ ಕಣ್ಣೂರಿಗೆ ಪ್ರಯಾಣಿಸುತ್ತಿದ್ದರು. ಬಸ್ ಜನರಿಂದ ತುಂಬಿ ತುಳುಕುತ್ತಿತ್ತು. ಈ ವೇಳೆ ಮಹಿಳೆ 26 ಸೆಕೆಂಡ್‌ಗಳ ಸೆಲ್ಫಿ ವಿಡಿಯೋ ಮಾಡಿದ್ದಾಳೆ. ಬಸ್ಸಿನ ಜನಸಂದಣಿಯಲ್ಲಿ ನನ್ನ ಪಕ್ಕದಲ್ಲಿ ನಿಂತಿರುವ ವ್ಯಕ್ತಿ ಅನುಚಿತವಾಗಿ ಸ್ಪರ್ಶಿಸಿದ್ದಾನೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾಳೆ.

ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೀಪಕ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಯಿತು. ನೆಟ್ಟಿಗರು ಟ್ರೋಲ್ ಮಾಡಿದಲ್ಲದೇ ನಿಂದನೆ, ಅವಮಾನ, ಆರೋಪಗಳನ್ನು ಮಾಡಿದ್ದರು. ಈ ಬಗ್ಗೆ ತಮ್ಮ ಕುಟುಂಬದ ಬಗ್ಗೆ ಹೇಳಿಕೊಂಡಿದ್ದ ದೀಪಕ್ ನಾನು ಯಾರನ್ನೂ ಉದ್ದೇಶಪೂರ್ವಕವಾಗಿ ಸ್ಪರ್ಶಿಸಿಲ್ಲ ಎಂದು ಹೇಳಿಕೊಂಡಿದ್ದರು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಮುಂದುವರಿದ ಮಾನಸಿಕ ಒತ್ತಡ, ಅವಮಾನ ಸಹಿಸಿಕೊಳ್ಳಲಾಗದೇ ದೀಪಕ್ ಜನವರಿ 18ರಂದು ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ದೀಪಕ್ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗ, ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಆದೇಶಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯ ಮಾನಹಾನಿಗೆ ಕಾರಣವಾದ ಅಂಶಗಳನ್ನೂ ತನಿಖೆಯ ಭಾಗವಾಗಿ ಪರಿಶೀಲಿಸಲಾಗುತ್ತಿದೆ.












