ಕೇರಳದಲ್ಲಿ ಮಳೆಯ ಅಬ್ಬರ ಜೋರಾಗಿದೆ. ೨೦೧8 ರಲ್ಲಿ ನಡೆದ ಪ್ರವಾಹದ ಕಹಿ ಘಟನೆಯು ಜನರ ಮನಸ್ಸಿನಿಂದ ಮಾಸಿ ಹೋಗದ ಸಮಯದಲ್ಲಿ ಇದೀಗ ಪುನಃ ಪ್ರವಾಹದ ಭೀತಿ ಎದುರಾಗಿದೆ. ಕೇರಳದಲ್ಲಿ ಪ್ರವಾಹ ಭೀತಿಯಿಂದ ಹಲವಾರು ಮನಕಲುಕುವ ಘಟನೆಗಳು ಕಣ್ಣಮುಂದಿವೆ.
ವಾಯುಭಾರ ಕುಸಿತದಿಂದಾಗಿ ಸಂಭವಿಸುತ್ತಿರುವ ಭೀಕರ ಮಳೆಗೆ, ಕೇರಳದ ಇಡುಕ್ಕಿ ಜಿಲ್ಲೆಯ ಕೊಕಗಕಯಾರ್ ಗ್ರಾಮದಲ್ಲಿ ಜಲ ಪ್ರಳಯ ಉಂಟಾಗಿದೆ. ಈ ಘಟನೆಯಲ್ಲಿ ತಾಯಿ ಹಾಗೂ ಮಗ ಇಬ್ಬರೂ ನಾಪತ್ತೆಯಾಗಿದ್ದರು. ಭೂಕುಸಿತದಿಂದ ಮಣ್ಣುಪಾಲಾದ ಇಬ್ಬರನ್ನು ಹುಡುಕಿದರೂ ಸಿಕ್ಕಿರಲಿಲ್ಲ, ಆದರೆ, ಸೋಮವಾರದಂದು ತಾಯಿ ಹಾಗೂ ಮಗ ಪರಸ್ಪರ ಅಪ್ಪಿಕೊಂಡಂತೆ ಮಣ್ಣಿನಡಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ತಾಯಿ ತನ್ನ ಮಗನನ್ನು ಬಿಗಿದಪ್ಪುವಂತ ಸ್ಥಿತಿಯಲ್ಲಿ ಕಂಡುಬಂದಿದೆ. ಮೃತಪಟ್ಟವರನ್ನು ಪೌಸಿಯಾ ಮತ್ತು ಅಮೀನ್ ಎಂದು ಗುರುತಿಸಲಾಗಿದೆ. ಈ ದೃಶ್ಯ ದೇವರ ನಾಡಿನಲ್ಲಿ ಘನಘೋರ ಸ್ಥಿತಿಯನ್ನು ಬಿಂಬಿಸುತ್ತಿದೆ. ಇಂತಹ ಪ್ರಕೃತಿಯ ಮುನಿಸಿನಿಂದ ಕೇರಳದ ಜನರನ್ನು ಕಂಗಾಲಾಗಿಸಿದೆ.

ಕೇರಳದ ಕೂಟ್ಟಿಕಲ್ ನಲ್ಲಿ ಮನೆಯೊಂದು ಕೊಚ್ಚಿಹೋಗಿದ್ದು, ಮೂವರು ಬಾಲಕಿಯರು ಸೇರಿದಂತೆ ಒಂದೇ ಕುಟುಂಬದ ಆರು ಜನರು ಮೃತಪಟ್ಟಿದ್ದಾರೆ. ಆ ಪೈಕಿ ಮೂವರ ಮೃತದೇಹಗಳು ಶನಿವಾರ ಸಿಕ್ಕಿದ್ದರೆ, ಉಳಿದವರ ಮೃತದೇಹಗಳು ಭಾನುವಾರ ಪತ್ತೆಯಾಗಿವೆ. ಕೆಸರಿನಲ್ಲಿ ಹೂತು ಹೋದ ಮೂರು ಮಕ್ಕಳ ಮೃತದೇಹಗಳು ಪರಸ್ಪರ ಕೈ ಹಿಡಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.
ಭಾರೀ ಮಳೆಗೆ ಕಾರಣವೇನು?
ಅರಬ್ಬಿ ಸಮುದ್ರದಲ್ಲಿಯೂ ವಾಯುಭಾರ ಕುಸಿತವುಂಟಾಗಿತ್ತು, ಈ ಹಿನ್ನಲೆ ಕೇರಳದಲ್ಲಿ ಭಾರಿ ಮಳೆಯಾಗಿತ್ತು. ಇದರಿಂದಾಗಿ ಅಪಾರ ಪ್ರಮಾಣದ ಆಸ್ತಿ,ಪಾಸ್ತಿ ನಾಶವಾಗಿದೆ.
ಮೊದಲ ಬಾರಿಗೆ 2018 ರಲ್ಲಿ ಕೇರಳದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ೪೦೮೩೦ ಜನ ಮೃತಪಟ್ಟಿದ್ದಾರೆ, ೧೪೯೦ ಜನರು ಕಾಣೆಯಾಗಿದಾರೆ. ನಲ್ವತ್ತು ಸಾವಿರ ಕೋಟಿ ರುಪಾಯಿ ಆಸ್ತಿಪಾಸ್ತಿ ನಷ್ಟವಾಗಿತ್ತು.

ರಾಜ್ಯದಲ್ಲಿ ಒಟ್ಟು ಹದಿನಾಲ್ಕು ಜಿಲ್ಲೆಗಳಿದ್ದು, ಐದು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಟ್ಟಾಯಾಂ, ಪಥನಮ್ತಿಿಟ್ಟಾ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶ್ಯೂರ್ ನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹವಾಮಾನ ಇಲಾಖೆ ಹನ್ನೊಂದು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಿದೆ. ಬಹುತೇಕ ಕೇರಳ ರಾಜ್ಯದಾದ್ಯಂತ ಪ್ರವಾಹ ಸೃಷ್ಟಿಯಾಗಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಪ್ರವಾಹದ ತೀವ್ರತೆಯನ್ನು ಅನಾವರಣಗೊಳಿಸುತ್ತಿದೆ. ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯುತ್ತಿದ್ದು, ವಾಹನ ಸವಾರರು ರಸ್ತೆ ದಾಟಲು ಪರದಾಡುತ್ತಿದ್ದಾರೆ. KSRTC (ಕೇರಳ ಸಾರಿಗೆ) ಬಸ್ಗಳು ನೆರೆಯಲ್ಲಿ ಸಿಲುಕಿದ್ದು, ಪ್ರಯಾಣಿಕರು ಹರಸಾಹಸಪಟ್ಟು ಹೊರ ಬರುತ್ತಿರುವುದು ವಿಡಿಯೋಗಳಲ್ಲಿ ಚಿತ್ರಣಗೊಂಡಿವೆ.
ಪ್ರಧಾನಿ ನರೇಂದ್ರ ಮೋದಿ ಟ್ವೀಟ್
ಪ್ರಧಾನಿ ನರೇಂದ್ರ ಮೋದಿಯವರೂ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆ ಪ್ರಾಕೃತಿಕ ವಿಕೋಪದ ಕುರಿತಾಗಿ ಅವಲೋಕನವನ್ನು ಮಾಡಿದ್ದಾರೆ. ಭೂಕುಸಿತದಿಂದ ಹಲವಾರು ಜನರು ಪ್ರಾಣವನ್ನು ಕಳೆದುಕೊಂಡಿರುವುದು ಬೇಸರ ಸಂಗತಿಯಾಗಿದೆ. ಗಾಯಾಳುಗಳು ಮತ್ತು ಮಳೆ ಪ್ರವಾಹದಿಂದ ಸಂಕಷ್ಟಕ್ಕೀಡಾದವರಿಗೆ ನೆರವಾಗಲು ಅಧಿಕಾರಿಗಳು ತಳಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲರ ಸುರಕ್ಷತೆ ಹಾಗೂ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಪ್ರತೀ ಬಾರಿಯೂ ಮಳೆಗಾಲದ ಸಂದರ್ಭದಲ್ಲಿ ನೆರೆ ಬಂದು ಜನರು ಮನೆ ಮಠಗಳನ್ನು ಕಳೆದುಕೊಳ್ಳುವ ಘಟನೆಗಳು ಪುನರಾವರ್ತನೆಯಾಗುತ್ತಿದೆ. ಕಳೆದ ವರ್ಷಗಳ ಹಿಂದೆಯೂ ಕೇರಳದಲ್ಲಿ ಉಂಟಾದ ಪ್ರವಾಹದಿಂದ ಅಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿತ್ತು. ಅದೆಲ್ಲಿ ನೋಡಿದರೂ ಗುಡ್ಡ ಕುಸಿತ, ಪಶು, ಪಕ್ಷಿಗಳ ಮಾರಣ ಹೋಮವೇ ನಡೆದು ಹೋದಂತಹ ಪರಿಸ್ಥಿತಿ ಕಂಡುಬಂದಿತ್ತು.
ಸರ್ಕಾರವು ನೆರೆಪ್ರದೇಶಗಳಿಗೆ ವಾಸಿಸಲು ಯೋಗ್ಯವಾದ ವಾಸಸ್ಥಳ ಹಾಗೂ ದಿನಸಿ ಸಾಮಾಗ್ರಿಗಳನ್ನು ನೀಡಿತ್ತು. ಆದರೂ ಕಲವು ನಿರಾಶ್ರಿತರಾಗಿಯೇ ಉಳಿದುಕೊಂಡಿದ್ದರು. ಈ ಭಾರಿಯೂ ಕೇರಳದಲ್ಲಿ ಪ್ರವಾಹ ಉಂಟಾಗಿದ್ದು, ಜನರ ಪರದಾಡುವ ಸ್ಥಿತಿ ಉಂಟಾಗಿದೆ. ಇಂತಹ ಪ್ರವಾಹ ಪರಿಸ್ಥಿತಿಯಿಂದ ಕೇರಳದದ ಜನರು ಆತಂಕದಿಂದ ದಿನಕಳೆಯುತ್ತಿದ್ದಾರೆ.